ಮತಗಳ್ಳತನವನ್ನು ವಿರೋಧಿಸಿ ಜಿಲ್ಲಾ ಕಾಂಗ್ರೆಸ್ ಘಟಕ ವತಿಯಿಂದ ಸಹ ಸಹಿ ಸಂಗ್ರಹ ಅಭಿಯಾನವನ್ನು ನಗರದ ಅಂಬೇಡ್ಕರ್ ವೃತ್ತದಲ್ಲಿ ನಡೆಯಿತು. ಮತಗಳ್ಳತನ ಬಿಜೆಪಿ ವಿರುದ್ದ ವೋಟ್ ಚೋರ್ ಗದ್ದಿ ಚೋಡ್ ಎಂದು ಕಾಂಗ್ರೆಸ್ ಮುಖಂಡರು, ಕಾರ್ಯಕರ್ತರು ಘೋಷಣೆಗಳನ್ನು ಕೂಗಿದರು.
ಅಭಿಯಾನ ಉದ್ದೇಶಿಸಿ ಮಾತನಾಡಿದ ವಿಧಾನ ಪರಿಷತ್ ಸದಸ್ಯ ಹಾಗೂ ಕೆಪಿಸಿಸಿ ಕಾರ್ಯಾಧ್ಯಕ್ಷ ಎ.ವಸಂತ ಕುಮಾರ ಅವರು, ದೇಶಾದ್ಯಂತ ಬಿಜೆಪಿ ಮತ್ತು ಆರ್‌ಎಸ್‌ಎಸ್ ಸಂಘಪರಿವಾರ ಮತಗಳ್ಳತನ ಕೆಲಸ ಮಾಡುತ್ತಿದೆ. ಮತಗಳ್ಳತನದ ವಿರುದ್ಧ ರಾಹುಲ್ ಗಾಂಧಿ ಅವರು ಹೋರಾಟ ನಡೆಸಿ ಚುನಾವಣಾ ಆಯೋಗದ ಗಮನಕ್ಕೆ ತಂದಿದ್ದಾರೆ. ಈ ಬಗ್ಗೆ ಚುನಾವಣಾ ಆಯೋಗ ಪರಿಶೀಲನೆ ನಡೆಸದೇ ಯಾವುದೇ ಮತಗಳ್ಳತನ ನಡೆದಿಲ್ಲವೆಂದು ಹೇಳಿದ್ದರಿಂದ ರಾಹುಲ್ ಗಾಂಧಿ ಅವರು ದೇಶದಲ್ಲಿ ವಿವಿಧ ವಿಧಾನಸಭಾವಾರು ಮತಗಳ್ಳತನ ಬಗ್ಗೆ ದಾಖಲೆ ಸಮೇತ ದೂರು ನೀಡಿದ್ದರಿಂದ ಚುನಾವಣಾ ಆಯೋಗ ಎಚ್ಚೆತ್ತುಕೊಂಡಿದೆ ಎಂದರು.
ದೇಶದಲ್ಲಿ ಕಾಂಗ್ರೆಸ್ ಗೆಲ್ಲಬಹುದಾದ ಕಡೆಗಳಲ್ಲಿ ಕಾಂಗ್ರೆಸ್‌ನ ಮತದಾರರ ಹೆಸರನ್ನು ಡಿಲೀಟ್ ಮಾಡಿಸಿದ್ದು ಜೊತೆಗೆ ಅಕ್ರಮವಾಗಿ ಮತದಾರರ ಹೆಸರನ್ನು ಸೇರ್ಪಡೆ ಮಾಡುವ ಕುತಂತ್ರ ಕೆಲಸ ಮಾಡಿದ್ದಾರೆ. ದೇಶದ ವಿವಿಧ ವಿಧಾನಸಭಾ ಕ್ಷೇತ್ರವಾರು ಲಕ್ಷಾಂತರ ಸಂಖ್ಯೆಯಲ್ಲಿ ಮತದಾರರ ಹೆಸರು ಡೀಲೀಟ್ ಆಗಿದ್ದ ಕುರಿತು ಮತ್ತು ಅಕ್ರಮವಾಗಿ ಮತದಾರರ ಹೆಸರು ಸೇರ್ಪಡೆ ಮಾಡಿದ್ದರ ಕುರಿತು ಮಾಹಿತಿ ನೀಡಲು ಚುನಾವಣಾ ಆಯೋಗ ವರದಿ ಕೇಳಿದೆ ಈ ಬಗ್ಗೆ ಸೂಕ್ತ ರೀತಿಯಲ್ಲಿ ಚುನಾವಣೆ ನಡೆಸಲು ಆಯೋಗ ಕಟ್ಟು ನಿಟ್ಟಿನ ಕ್ರಮಗಳನ್ನು ಕೈಗೊಳ್ಳಬೇಕಾಗಿದೆ ಎಂದರು.
ಅಕ್ರಮವಾಗಿ ಸೇರ್ಪಡೆ ಮಾಡಿದ್ದರ ಕುರಿತು ದಾಖಲೆ ನೀಡಬೇಕು ಮತ್ತು ಮತದಾರರ ಹೆಸರು ಪಟ್ಟಿಯಿಂದ ಕೈಬಿಡಲು ದಾಖಲೆ ಕೊಡಬೇಕು ಎಂದು ಆಯೋಗ ಅದೇಶಿಸಿದೆ. ದೇಶದಲ್ಲಿ ನಡೆಯುತ್ತಿರುವ ಅಕ್ರಮ ಮತಗಳ್ಳತನವನ್ನು ಬಯಲಿಗೆ ತಂದು ರಾಹುಲ್ ಗಾಂಧಿ ಅವರು ದೇಶಾದ್ಯಂತ ಅಭಿಯಾನ ನಡೆಸುತ್ತಿದ್ದಾರೆ ಸಹಿ ಸಂಗ್ರಹ ಅಬಿಯಾನದ ಮೂಲಕ ಆಯೋಗಕ್ಕೆ ಸಲ್ಲಿಸುವ ಕೆಲಸ ಮಾಡಲಾಗುವುದು ಎಂದರು.
ಶಾಸಕ ದದ್ದಲ್ ಬಸನಗೌಡ ಮಾತನಾಡಿ, ಬಿಜೆಪಿ ಮತ್ತು ಆರ್‌ಎಸ್‌ಎಸ್ ಮತಗಳ್ಳತನ ಕೆಲಸ ಮಾಡಿ, ಕಾಂಗ್ರೆಸ್ ಅಧಿಕಾರಕ್ಕೆ ಬಾರದಂತೆ ಕುತಂತ್ರ ನಡೆಸಿದೆ. ಮತಗಳ್ಳತನ ಕುರಿತು ರಾಹುಲ್ ಗಾಂಧಿ ದಾಖಲೆ ಸಮೇತ ಚುನಾವಣಾ ಆಯೋಗಕ್ಕೆ ನೀಡಿದ್ದು ಇದೀಗ ಎಚ್ಚೆತ್ತುಕೊಂಡಿದೆ. ವಿಧಾನಸಭಾವಾರು ಅಕ್ರಮವಾಗಿ ಸೇರ್ಪಡೆ ಮಾಡಿದ ಮತದಾರರ ಹೆಸರನ್ನು ಡಿಲೀಟ್ ಮಾಡಬೇಕು, ಮತದಾರರ ಪಟ್ಟಿಯಿಂದ ಕೈಬಿಟ್ಟ ಹೆಸರನ್ನು ಸೇರ್ಪಡೆ ಮಾಡುವ ಕೆಲಸ ಬಿಎಲ್‌ಒಗಳು ಮಾಡಬೇಕು ಎಂದು ತಿಳಿಸಿದರು.
ಈ ಸುದ್ದಿ ಓದಿದ್ದೀರಾ? ರಾಯಚೂರು | ಖಾಲಿ ಹುದ್ದೆಗಳನ್ನು ಭರ್ತಿಗಾಗಿ ಆಗ್ರಹಿಸಿ ಉದ್ಯೋಗ ಆಕಾಂಕ್ಷಿಗಳಿಂದ ಪ್ರತಿಭಟನೆ
ಈ ಸಂದರ್ಭದಲ್ಲಿ ಎಐಸಿಸಿ ರಾಷ್ಟ್ರೀಯ ಕಾರ್ಯದರ್ಶಿ ಗೋಪಿನಾಥ ಪಳನಿಯಪ್ಪನ್, ಜಿಲ್ಲಾಧ್ಯಕ್ಷ ಬಸವರಾಜ ಪಾಟೀಲ ಇಟಗಿ, ಶರಣಪ್ಪ ಮಟ್ಟೂರು, ಕೆ.ಶಾಂತಪ್ಪ, ರಾಜಶೇಖರ ರಾಮಸ್ವಾಮಿ, ಪಾಮಯ್ಯ ಮುರಾರಿ, ಡಾ.ರಝಾಕ ಉಸ್ತಾದ, ಕೆ.ಅಸ್ಲಂ ಪಾಶಾ, ಅಬ್ದುಲ್ ಕರೀಂ, ಆಂಜನೇಯ ಕುರುಬದೊಡ್ಡಿ, ಡಿ.ಕೆ.ಮುರಳಿ ಯಾದವ, ನಿರ್ಮಲಾ ಬೆಣ್ಣೆ, ಅಸ್ಲಾಂ ಪಾಷಾ,ಅಮರೇಗೌಡ ಹಂಚಿನಾಳ, ಶಂಶುದ್ದೀನ್, ಅಬ್ದುಲ್ ಅಜೀಜ್ ದೇವದುರ್ಗ, ಗೋವಿಂದ ನಾಯಕ ಗುರುಗುಂಟಾ, ಅನಿಲ್‌ಕುಮಾರ, ಮಲ್ಲಿಕಾರ್ಜುನ ಮಟಮಾರಿ, ನಾಗೇಂದ್ರಪ್ಪ ಮಟಮಾರಿ, ಮಾರೆಪ್ಪ ಸೇರಿದಂತೆ ಕಾರ್ಯಕರ್ತರು ಭಾಗವಹಿಸಿದ್ದರು.





