ರಾಯಚೂರು ಜಿಲ್ಲೆಯ ಅರಕೇರಾ ತಾಲೂಕಿನ ಹೆಗ್ಗಡದಿನ್ನಿ ಗ್ರಾಮದ ಸಮೀಪ ವಿಷಪೂರಿತ ನೀರು ಸೇವಿಸಿದ ಪರಿಣಾಮ 50ಕ್ಕೂ ಹೆಚ್ಚು ಕುರಿಗಳು ಸಾವನ್ನಪ್ಪಿರುವ ದುರ್ಘಟನೆ ಸಂಭವಿಸಿದೆ.
ಸಂಚಾರಿ ಕುರಿಗಾಯಿ ಭೀಮಪ್ಪ ಮಲ್ಲಿನಾಯಕನದೊಡ್ಡಿ ಅವರಿಗೆ ಸೇರಿದ ಕುರಿಗಳು ಎನ್ನಲಾಗಿದೆ.
ಗ್ರಾಮದ ಬಳಿ ಇರುವ ಗುಂಡಿಯಲ್ಲಿ ಶೇಖರಿಸಿಕೊಂಡಿದ್ದ ನೀರನ್ನು ಸುಮಾರು 100 ಕ್ಕೂ ಹೆಚ್ಚು ಕುರಿಗಳು ಕುಡಿದಿದ್ದು, ಈ ಪೈಕಿ ಹೊಟ್ಟೆ ಉಬ್ಬಸದಿಂದ ಏಕಾಏಕಿ 50ಕ್ಕೂ ಹೆಚ್ಚು ಕುರಿಗಳು ಸಾವನ್ನಪ್ಪಿವೆ. ಬದುಕುಳಿದ ಕುರಿಗಳಿಗೆ ಪಶು ವೈದ್ಯರಿಂದ ಚಿಕಿತ್ಸೆ ನೀಡಲಾಗುತ್ತಿದ್ದು, ಇನ್ನು ಕೆಲವು ಗಂಭೀರ ಸ್ಥಿತಿಯಿರುವುದರಿಂದ ಸಾವುಗಳ ಸಂಖ್ಯೆ ಹೆಚ್ಚಾಗುವ ಸಾಧ್ಯತೆ ಇದೆ ಎಂದು ಪಶು ವೈದ್ಯಾಧಿಕಾರಿಗಳು ತಿಳಿಸಿದ್ದಾರೆ.
ಈ ಸುದ್ದಿ ಓದಿದ್ದೀರಾ? ಸಿಂಧನೂರು | ಸರಕಾರಿ ಯೋಜನೆಗಳ ಯಶಸ್ಸಿನ ಪಾತ್ರ ಅಂಗನವಾಡಿ ಕಾರ್ಯಕರ್ತೆಯರು; ಡಿಎಚ್ ಕಂಬಳಿ
ಘಟನೆಯಲ್ಲಿ ಕುರಿಗಾಯಿಗೆ ಸುಮಾರು 5 ಲಕ್ಷ ರೂಪಾಯಿಗೂ ಅಧಿಕ ನಷ್ಟ ಉಂಟಾಗಿದ್ದು, ಜೀವನಾಧಾರವಾಗಿದ್ದ ಕುರಿಗಳನ್ನು ಕಳೆದುಕೊಂಡ ಭೀಮಪ್ಪ ಕಣ್ಣೀರು ಹಾಕುತ್ತಿದ್ದಾರೆ. ನೀರಿನಲ್ಲಿ ವಿಷಕಾರಿ ಕ್ರಿಮಿನಾಶಕ ಮಿಶ್ರಣಗೊಂಡಿರುವ ಶಂಕೆ ವ್ಯಕ್ತವಾಗಿದ್ದು, ಸ್ಥಳಕ್ಕೆ ಗಬ್ಬೂರು ಠಾಣೆ ಪೊಲೀಸರು, ಪಶು ವೈದ್ಯಾಧಿಕಾರಿಗಳು ಹಾಗೂ ಗ್ರಾಮ ಪಂಚಾಯಿತಿ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.





