ಕಲ್ಯಾಣ ಕರ್ನಾಟಕ ಭಾಗದ ಜಿಲ್ಲೆಗಳಲ್ಲಿ ಬರುವ ಸ್ಲಂಗಳ ಮೂಲ ಸೌಲಭ್ಯ ಮತ್ತು ಮನೆಗಳ ಕಾಮಗಾರಿಗೆ ಕೆಕೆಆರ್‌ಡಿಬಿಯಲ್ಲಿ ₹1000 ಕೋಟಿ ಅನುದಾನ ಮಂಜೂರು ಮಾಡಲು ಸರ್ಕಾರಕ್ಕೆ ಸ್ಲಂ ನಿವಾಸಿಗಳ ಕ್ರಿಯಾ ವೇದಿಕೆ
ಒತ್ತಾಯಿಸಿದೆ.
ರಾಯಚೂರು ಸ್ಲಂ ನಿವಾಸಿಗಳ ಕ್ರಿಯಾ ವೇದಿಕೆ ಮುಖಂಡರು ಸ್ಲಂ ಬೋರ್ಡ್ ಅಧ್ಯಕ್ಷರಿಗೆ ಮನವಿ ಸಲ್ಲಿಸಿ ಮಾತನಾಡಿ, “ಪಿಎಂಎವೈ ಯೋಜನೆ ಫಲಾನುಭವಿಗಳಿಗೆ ವಂತಿಕೆ ಹಣ ಒಂದು ಲಕ್ಷ ರೂ. ಸರ್ಕಾರವೇ ಭರಿಸಬೇಕು. ಸರ್ವೇ ನಂ.581,726/727, 929/2 ಭೂಮಿಯನ್ನು ನಗರಸಭೆಯಿಂದ ಸ್ಲಂ ಬೋರ್ಡ್‌ಗೆ ಹಸ್ತಾಂತರಿಸಿ ನಿವೇಶನ ರಹಿತರಿಗೆ 1050 ಮನೆಗಳನ್ನು ಮಂಜೂರು ಮಾಡಬೇಕು” ಎಂದು ಆಗ್ರಹಿಸಿದರು.
“ಪಿಎಂಎವೈ ಯೋಜನೆಯ 2770 ಮನೆಗಳ ಮಂಜೂರಿಯಲ್ಲಿ 1000 ಮನೆಗಳ ಕಾಮಗಾರಿಯಲ್ಲಿ ಕೇವಲ 400 ರಿಂದ 450 ಮನೆಗಳು ಪೂರ್ಣಗೊಂಡಿವೆ. ಉಳಿದ ಮನೆಗಳ ಕಾಮಗಾರಿ ಅಪೂರ್ಣಗೊಂಡಿದ್ದರಿಂದ ಸ್ಲಂ ಜನರು ಬೀದಿಯಲ್ಲಿ ಮಳೆಗಾಳಿಯಲ್ಲಿ ವಾಸ ಮಾಡುತ್ತಿದ್ದಾರೆ” ಎಂದರು.
“ಕಾಮಗಾರಿಯನ್ನು ತ್ವರಿತವಾಗಿ ಪೂರ್ಣಗೊಳಿಸಬೇಕು. ನಿರ್ಲಕ್ಷ್ಯ ವಹಿಸಿದ ಗುತ್ತಿಗೆದಾರರ ವಿರುದ್ದ ಕ್ರಮಕ್ಕೆ ಮುಂದಾಗಬೇಕು. ಸ್ಲಂಗಳಲ್ಲಿ ವಾಸಿಸುವ ಸ್ಲಂ ನಿವಾಸಿಗಳ ಮನೆಗಳಿಗೆ ದಾಖಲೆಗಳು ಇಲ್ಲದೆ ಅಭದ್ರತೆ ಜೀವನ ಸಾಗಿಸುತ್ತಿದ್ದಾರೆ. ಸ್ಲಂ ಜನರು ವಾಸಿಸುವ ಮನೆಗಳಿಗೆ ಹಕ್ಕುಪತ್ರ ನೀಡಬೇಕು” ಎಂದು ಒತ್ತಾಯಿಸಿದರು.
ಈ ಸುದ್ದಿ ಓದಿದ್ದೀರಾ? ರಾಯಚೂರು | ವಸತಿ ಯೋಜನೆಯ ಹೆಸರಿನಲ್ಲಿ ಹಣ ವಸೂಲಿ: ಪಿಡಿಒ ಶಂಶುದ್ದೀನ್ ವಿರುದ್ಧ ಆರೋಪ
“ಸರ್ವೇ ನಂ.1403ರಲ್ಲಿ ಆರು ಎಕರೆ ಭೂಮಿಯನ್ನು ರಾಯಚೂರು ಜಿಲ್ಲಾಡಳಿತ ಸ್ಲಂ ಬೋರ್ಡ್‌ಗೆ ಮಂಜೂರು ಮಾಡಿ ಸುಮಾರು ಹತ್ತು ವರ್ಷ ಕಳೆದರೂ ಈವರೆಗೂ ಡಿಪಿಆರ್ ಮಾಡಿಲ್ಲ. ಕೆಲವು ಭೂಗಳ್ಳರು ಕಬ್ಜ ಮಾಡಲು ಮುಂದಾಗಿದ್ದಾರೆ. ಕೂಡಲೇ ಡಿಪಿಆರ್ ಮಾಡಿ ನಿವೇಶನ ಇಲ್ಲದ ಸ್ಲಂ ಜನರಿಗೆ ನಿವೇಶನ ಹಂಚಿಕೆ ಮಾಡಬೇಕು” ಎಂದು ಆಗ್ರಹಿಸಿದರು.
ಈ ಸಂದರ್ಭದಲ್ಲಿ ಸಂಘಟನೆ ಅಧ್ಯಕ್ಷ ಜನಾರ್ಧನ ಹಳ್ಳಿಬೆಂಚಿ, ಮುಖಂಡರಾದ ಮಹೇಶ, ರಾಜಶೇಖರ್, ಬಸವರಾಜ ಹೊಸೂರು, ಜೆ ರಾಜು, ಶರಣಬಸವರೆಡ್ಡಿ, ಪವನ್, ಮಾಧವರೆಡ್ಡಿ, ಆರ್ ಜಂಬಣ್ಣ ಇದ್ದರು.
ವರದಿ: ಹಫೀಜುಲ್ಲ





