ರಾಯಚೂರು ಜಿಲ್ಲೆಯಲ್ಲಿ ಮಳೆಯಾಗದೇ ಬರದ ಪರಿಸ್ಥಿತಿ ಎದುರಾಗಿದೆ. ರೈತರು ಬೆಳೆ ಕಳೆದುಕೊಂಡಿದ್ದಾರೆ. ರಾಯಚೂರು ಜಿಲ್ಲೆಯನ್ನು ಬರಗಾಲ ಪೀಡಿತ ಜಿಲ್ಲೆಯೆಂದು ಘೋಷಿಸಬೇಕು ಎಂದು ಕರ್ನಾಟಕ ರೈತ ಸಂಘದ ರಾಜ್ಯ ಉಪಾಧ್ಯಕ್ಷ ಅಮರೇಶ ಚಾಗಭಾವಿ ಆಗ್ರಹಿಸಿದ್ದಾರೆ.
ರಾಯಚೂರಿನಲ್ಲಿ ಸುದ್ಧಿಗೋಷ್ಠಿ ನಡೆಸಿ ಮಾತನಾಡಿದ ಅವರು, “ಜಿಲ್ಲೆಯಲ್ಲಿ ಬೆಳೆದ ಭತ್ತ, ಹತ್ತಿ, ತೊಗರಿ ಸೇರಿದಂತೆ ಹಲವು ಬೆಳೆಗಳು ಮಳೆಯಿಲ್ಲದೇ ಬೆಳೆ ಇಲ್ಲದಂತಾಗಿದೆ. ಬಿತ್ತನೆ ಮಾಡಲಾಗಿದ್ದ ಬೆಳೆ ಒಣಗುತ್ತಿವೆ. ಬಿತ್ತನೆ ಮಾಡದೇ ಇರುವವರು ಆತಂಕದಲ್ಲಿದ್ದಾರೆ. ಕೃಷಿ ಇಲಾಖೆ ನೀಡಿರುವ ಮಾಹಿತಿಯಂತೆ 1.7 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಹತ್ತಿ, 1.5 ಲಕ್ಷ ಹೆಕ್ಟೇರ್‌ನಲ್ಲಿ ಭತ್ತ, 87 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ತೊಗರಿ ಬಿತ್ತನೆಯಾಗಿದೆ. ಆದರೆ, ಮಳೆಯಿಲ್ಲದೆ ನಿರೀಕ್ಷಿತ ಬೆಳೆ ಇಳುವರಿಯಾಗಲು ಸಾಧ್ಯವಿಲ್ಲ” ಎಂದು ಹೇಳಿದ್ದಾರೆ.
ಮಹಿಳಾ ಘಟಕದ ಜಿಲ್ಲಾಧ್ಯಕ್ಷ ಅನಿತಾ ಬಸವರಾಜ ಮಾತನಾಡಿ, “ತುಂಗಭದ್ರ ಎಡದಂಡೆ ಹಾಗೂ ನಾರಾಯಣಪುರ ಬಲದಂಡೆ ಕಾಲುವೆಗಳ ಕೊನೆಭಾಗಕ್ಕೆ ನೀರು ತಲುಪದೇ ರೈತರು ಬೆಳೆ ನಷ್ಟ ಎದುರಿಸುತ್ತಿದ್ದಾರೆ. ಸರ್ಕಾರಗಳು ಮಳೆ ಪ್ರಮಾಣದ ಮೇಲೆ ಬರಗಾಲ ಘೊಷಿಸುವುದಾಗಿ ಹೇಳುತ್ತಿವೆ. ಮಳೆಯಾದರೂ ಸಕಾಲಕ್ಕೆ ಮಳೆ ಬಿಳದೇ ಬೆಳೆ ಒಣಗುವ ಸ್ಥಿತಿಯಿದೆ. ಜಂಟಿ ಸಮೀಕ್ಷೆ ನಡೆಸಿ ರೈತರಿಗೆ ಪರಿಹಾರ ಒದಗಿಸಬೇಕು” ಎಂದು ಹೇಳಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ನಿರುಪಾದಿ ಗೋಮರ್ಸಿ, ಶರಣಬಸವ ಅಲಬನೂರು, ಚನ್ನಬಸವ ಉಪಸ್ಥಿತರಿದ್ದರು.




