ಜಿಲ್ಲಾ ಪಂಚಾಯತ ಲೆಕ್ಕಶಾಖೆಯ ಲೆಕ್ಕ ಸಹಾಯಕರಾಗಿ (ಓಓಡಿ) ಕರ್ತವ್ಯ ನಿರ್ವಹಿಸುತ್ತಿರುವ ನರಸಿಂಗ್ ರಾವ್ ಗುಜ್ಜರ್ ಅವರ ನಿವಾಸದ ಮೇಲೆ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿದ್ದು, ಅಕ್ರಮವಾಗಿ ಗಳಿಸಿರುವುದು ಕಂಡುಬಂದಿದ್ದು ತಕ್ಷಣವೇ ಕೆಲಸದಿಂದ ಅಮಾನತುಗೊಳಿಸಿ ಎಂದು ದಲಿತ ಸೇನೆ ಸಂಘಟನೆಯವರು ಒತ್ತಾಯಿಸಿದರು.
ಆದಾಯಕ್ಕಿಂತ ಶೇ.89.41 ರಷ್ಟು ಅಕ್ರಮ ಆಸ್ತಿ ಪತ್ತೆಯಾಗಿದೆ. ಸುಮಾರು 55 ಲಕ್ಷ ರೂ.ಗಳ ಚರ-ಸ್ಥಿರ ಆಸ್ತಿ ಅಕ್ರಮವಾಗಿ ಗಳಿಸಿರುವುದು ಬೆಳಕಿಗೆ ಬಂದಿರುವ ಹಿನ್ನೆಲೆಯಲ್ಲಿ, ಅವರನ್ನು ತಕ್ಷಣ ಕರ್ತವ್ಯದಿಂದ ಅಮಾನತ್ತುಗೊಳಿಸುವಂತೆ ಸರ್ಕಾರದ ಸುತ್ತೋಲೆ ಸಂಖ್ಯೆ 40, ಜೂನ್ 2014, ದಿನಾಂಕ 20-10-2014ರ ನಿಯಮಾನುಸಾರ ಕ್ರಮ ಕೈಗೊಳ್ಳಬೇಕು ಎಂದು ದಲಿತ ಸೇನೆಯ ರಾಜ್ಯ ಸಂಘಟನಾ ಕಾರ್ಯದರ್ಶಿ ಜಾವೀದ್ ಖಾನ್ ಹೇಳಿದರು.
ಲೋಕಾಯುಕ್ತ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಸಂಬಂಧಿತ ದಾಖಲೆಗಳ ಪ್ರಕಾರ ನರಸಿಂಗ್ ರಾವ್ ಗುಜ್ಜರ್ ಅವರು ಆದಾಯಕ್ಕಿಂತ ಹೆಚ್ಚಾಗಿ ಆಸ್ತಿ ಸಂಪಾದಿಸಿರುವುದು ಸ್ಪಷ್ಟವಾಗಿದೆ. ಆದ್ದರಿಂದ ಲೋಕಾಯುಕ್ತ ಸಂಸ್ಥೆಯಿಂದ ದಾಳಿಗೆ ಒಳಗಾದ ಸರ್ಕಾರಿ ನೌಕರರನ್ನು ಲೋಕಾಯುಕ್ತರ ಶಿಫಾರಸ್ಸಿನ ಮೇರೆಗೆ ಸೇವೆಯಿಂದ ಅಮಾನತ್ತುಗೊಳಿಸುವ ಕುರಿತು ಸರ್ಕಾರದ ಸುತ್ತೋಲೆಯನ್ನು ಕಟ್ಟುನಿಟ್ಟಾಗಿ ಜಾರಿಗೆ ತರಬೇಕು ಎಂದು ಆಗ್ರಹಿಸಿದರು.
ನರಸಿಂಗ್ ರಾವ್ ಗುಜ್ಜರ್ ಅವರು ಜಿಲ್ಲಾ ಪಂಚಾಯತ ಕಛೇರಿಯಲ್ಲಿ ಮುಂದುವರಿದು ಕರ್ತವ್ಯ ನಿರ್ವಹಿಸಿದರೆ ಪ್ರಭಾವಶಾಲಿ ಹುದ್ದೆಯಲ್ಲಿ ಇರುವುದರಿಂದ ಸಾಕ್ಷಿಗಳನ್ನು ತಿರುಚುವ ಹಾಗೂ ಲೋಕಾಯುಕ್ತ ತನಿಖೆಗೆ ಅಡ್ಡಿಯಾಗುವ ಸಂಭವವಿದೆ. ಪಾರದರ್ಶಕ ತನಿಖೆಯ ದೃಷ್ಟಿಯಿಂದ ಅವರನ್ನು ತಕ್ಷಣ ಅಮಾನತ್ತುಗೊಳಿಸಿ, ಅವರ ಹುದ್ದೆಯ ಹೆಚ್ಚುವರಿ ಪ್ರಭಾರವನ್ನು ಬೇರೆ ಅಧಿಕಾರಿಗೆ ವಹಿಸುವಂತೆ ಉನ್ನತ ಪ್ರಾಧಿಕಾರ ಕ್ರಮ ಕೈಗೊಳ್ಳಬೇಕು ಎಂದು ಕರ್ನಾಟಕ ಲೋಕಾಯುಕ್ತ ರಾಯಚೂರು ಜಿಲ್ಲಾ ಪೊಲೀಸ್ ಅಧೀಕ್ಷಕರಿಗೆ ಹಾಗೂ ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳ ಮೂಲಕ ಮನವಿ ಸಲ್ಲಿಸಿದರು.
ಈ ಸುದ್ದಿ ಓದಿದ್ದೀರಾ? ರಾಯಚೂರು | ಮೂಲಸೌಕರ್ಯ ಮರೀಚಿಕೆ : ಮರಾಠ ಗ್ರಾಮಸ್ಥರ ಶೌಚಕ್ಕೆ ಬಯಲೇ ಗತಿ!
ಈ ಸಂದರ್ಭದಲ್ಲಿ ದಲಿತ ಸೇನೆ ಜಿಲ್ಲಾಧ್ಯಕ್ಷ ಮಾರುತಿ ಚಿಕ್ಕಸುಗೂರು, ಮಧುಕಾಂತ, ಕೃಷ್ಣ, ಬಾಬು ಸೇರಿದಂತೆ ಇನ್ನಿತರರು ಇದ್ದರು





