ರಾಯಚೂರು ಜಿಲ್ಲಾಧಿಕಾರಿ ನಿತೀಶ್ ಕೆ ಅವರ ಭಾವಚಿತ್ರ ಹಾಗೂ ಹೆಸರನ್ನು ಬಳಸಿಕೊಂಡು ನಕಲಿ ಫೇಸ್‌ಬುಕ್ ಐಡಿ ಸೃಷ್ಟಿಸಿ ಸಾರ್ವಜನಿಕರಿಗೆ ವಂಚನೆ ನಡೆಸಿದ ಆರೋಪಿಯನ್ನು ರಾಯಚೂರು ಸೈಬರ್ ಅಪರಾಧ ಪೊಲೀಸ್ ಠಾಣೆ ಪೊಲೀಸರು ಬಂಧಿಸಿದ್ದಾರೆ.
ನಗರದ ಸೈಬರ್ ಠಾಣೆಗೆ ಜೂ.30ರಂದು ಹೇಮನೂರು ಗ್ರಾಮದ ನಿವಾಸಿ ರಮೇಶ ಎನ್ನುವವರು ದೂರು ಸಲ್ಲಿಸಿದ್ದರು. ಜಿಲ್ಲಾಧಿಕಾರಿಗಳ ಹೆಸರಿನ ನಕಲಿ ಫೇಸ್‌ಬುಕ್ ಐಡಿಯಿಂದ ಫ್ರೆಂಡ್ ರಿಕ್ವೆಸ್ಟ್ ಬಂದಿದ್ದು, ಅದರ ಮೂಲಕ ಜಿಲ್ಲಾಧಿಕಾರಿಗಳ ಸ್ನೇಹಿತನಾಗಿ ಪರಿಚಯಿಸಿಕೊಂಡ ಅಜಿತ್ ಸಿಂಗ್ ಎಂಬ ವ್ಯಕ್ತಿ ಗುಲ್ಬರ್ಗಾ ಏರ್‌ಪೋರ್ಟ್ನಲ್ಲಿ ಸಬ್ ಇನ್ಸ್ಪೆಕ್ಟರ್ ಆಗಿದ್ದು ವರ್ಗಾವಣೆಯ ಹಿನ್ನೆಲೆ ಮನೆ ಬಳಕೆಯ ಸಾಮಾನುಗಳನ್ನು ಕಡಿಮೆ ಬೆಲೆಗೆ ಮಾರಾಟ ಮಾಡುತ್ತಿದ್ದಾನೆ ಎಂದು ನಂಬಿಸಿ ಹಣ ಪಡೆದುಕೊಂಡಿರುವುದಾಗಿ ದೂರಿನಲ್ಲಿ ಉಲ್ಲೇಖಿಸಲಾಗಿತ್ತು.
ಜೂ.27ರಿಂದ ಜೂ.29ರ ಅವಧಿಯಲ್ಲಿ ಹಂತ ಹಂತವಾಗಿ ಒಟ್ಟು 85,೦೦೦ ರೂ.ಹಣವನ್ನು ಬ್ಯಾಂಕ್ ಖಾತೆಗೆ ಜಮಾ ಮಾಡಿಸಿಕೊಂಡು ಆರೋಪಿತನು ವಂಚನೆ ಎಸಗಿರುವುದು ತನಿಖೆಯಲ್ಲಿ ದೃಢಪಟ್ಟಿತ್ತು.
ಇದನ್ನೂ ಓದಿ: ರಾಯಚೂರು | ಅರಕೇರಾ ತಾಲ್ಲೂಕಿಗೆ ಎನ್ ಗಣೇಕಲ್ ಗ್ರಾಮ ಸೇರ್ಪಡೆ ಹಿಂಪಡೆಯಬೇಕು; ಗ್ರಾಮಸ್ಥರ ಒತ್ತಾಯ
ರಾಯಚೂರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪುಟ್ಟಮಾದಯ್ಯ ಮಾರ್ಗದರ್ಶನದಲ್ಲಿ, ಸೈಬರ್ ಅಪರಾಧ ಠಾಣೆಯ ಡಿವೈಎಸ್‌ಪಿ ವೆಂಕಟೇಶ ಹೊಗಿಬಂಡಿ ಅವರು ತನಿಖೆ ನಡೆಸಿ, ರಾಜಸ್ಥಾನ ರಾಜ್ಯದ ಆಳ್ವಾರ್ ಜಿಲ್ಲೆಯ ನಿವಾಸಿ ಶಕೀಲ್ ಎಂಬ ಆರೋಪಿಯನ್ನು ಪತ್ತೆಹಚ್ಚಿ ಬಂಧಿಸಿದ್ದಾರೆ.





