ಬಿಜೆಪಿ ಶಾಸಕ ಮಾನಪ್ಪ ವಜ್ಜಲ್ ಅವರು ತಮ್ಮ ಆಪ್ತ ಸಹಾಯಕ ಹಾಗೂ ಪಿಡಿಒ ಪ್ರವೀಣ ಕುಮಾರ ಸಮರ್ಥನೆ ಮಾಡುವ ಭರದಲ್ಲಿ ನನ್ನ ಮೇಲೆ ಆರೋಪಿಸುತ್ತಿರುವುದು ಖಂಡನೀಯ ಎಂದು ಲಿಂಗಸುಗೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಗೋವಿಂದ ನಾಯಕ ತಿರುಗೇಟು ನೀಡಿದರು.
ʼಈ ಹಿಂದೆ ನಾನು ಬಿಜೆಪಿಯಲ್ಲಿದ್ದಾಗ ಆರ್ ಎಸ್ಎಸ್ ಗಣವೇಶಧಾರಿಯಲ್ಲಿನ ಫೋಟೋಗಳನ್ನು ಅವರು ಪತ್ರಿಕಾಗೋಷ್ಠಿಯಲ್ಲಿ ಪ್ರದರ್ಶಿಸಿ ಸಣ್ಣತನ ಪ್ರದರ್ಶಿಸಿರುವುದು ತೀವ್ರ ಖಂಡನೀಯ. ನಾನು ರಾಜಕಾರಣಿ, ಸರ್ಕಾರಿ ನೌಕರನಲ್ಲ ಎಂದು ಗೋವಿಂದ ನಾಯಕ ಹೇಳಿದರು.
ಲಿಂಗಸುಗೂರುನಲ್ಲಿ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ʼಸರ್ಕಾರಿ ನೌಕರನಾಗಿ ಆರ್ ಎಸ್ಎಸ್ ಪಥ ಸಂಚಲನದಲ್ಲಿ ಭಾಗವಹಿಸಿರುವುದು ನಿಯಮಬಾಹೀರ. ಇದಕ್ಕೆ ರಾಜ್ಯ ಸರ್ಕಾರ ಪಿಡಿಒ ಪ್ರವೀಣ ಕುಮಾರ ಅವರನ್ನು ಅಮಾನತು ಮಾಡಿದ್ದು ಸ್ವಾಗತಾರ್ಹ. ಆದರೆ ಶಾಸಕ ಮಾನಪ್ಪ ವಜ್ಜಲ್ ಅವರಿಗೆ ಪಿಡಿಒ ಅವರನ್ನು ಅಮಾನತು ಮಾಡಿದ್ದನ್ನು ಸಹಿಸಿಕೊಳ್ಳಲಾಗದೆ ನನ್ನ ಮೇಲೆ ಆರೋಪಿಸಿ ನನ್ನ ಫೋಟೋ ವೈರಲ್ ಮಾಡಿ ‘ನಾಲ್ಕು ಓಟು ಪಡೆಯಲು ಆರ್‌ಎಸ್ಎಸ್ ಕಾರ್ಯಕರ್ತನನ್ನು ಕಾಂಗ್ರೆಸ್ ಪಕ್ಷಕ್ಕೆ ಸೇರಿಸಿಕೊಂಡು ಮಂಡಲ ಅಧ್ಯಕ್ಷರಾಗಿ ಮಾಡಿದ್ದಾರೆ’ ಎಂದು ಸುಳ್ಳು ಹೇಳಿಕೆ ನೀಡಿರುವ ಶಾಸಕ ವಜ್ಜಲರ್ ರ ಮತಿಭ್ರಮಣೆಯಾಗಿದೆʼ ಎಂದರು ಲೇವಡಿ ಮಾಡಿದರು.
ಮಾನಪ್ಪ ವಜ್ಜಲ್ ರಾಜಕೀಯ ಜೀವನ ಕಾಂಗ್ರೆಸ್ ನಿಂದ ಆರಂಭ ಮಾಡಿ ಬಳಿಕ ಬಿಜೆಪಿ, ಜೆಡಿಎಸ್ ಗೆ ಹೋಗಿ ಈಗ ಪುನಃ ಬಿಜೆಪಿ ಸೇರಿ ಶಾಸಕರಾಗಿದ್ದಾರೆ. ಅಧಿಕಾರದ ಆಸೆಗಾಗಿ ಮತ್ತೆ ಯಾವ ಪಕ್ಷಕ್ಕೆ ಹೋಗುತ್ತಾರೋ ಗೊತ್ತಿಲ್ಲ ಎಂದು ಟೀಕಿಸಿದರು.
ʼನಾನು ಬಿಜೆಪಿಯಲ್ಲಿದ್ದಾಗ ಮಾನಪ್ಪ ವಜ್ಜಲ್ ಅವರ ವರ್ತನೆ, ಪಕ್ಷದಲ್ಲಿ ಸಾಮಾಜಿಕ ಅಸಮಾನತೆಯಿಂದ ಬೇಸತ್ತು ಕಾಂಗ್ರೆಸ್ ಪಕ್ಷಕ್ಕೆ ಬಂದಿದ್ದೇನೆ. ನನ್ನ ಪಕ್ಷ ಸಂಘಟನೆಯ ಕೆಲಸ ನೋಡಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸ್ಥಾನ ನೀಡಿದ್ದಾರೆ. ಇದನ್ನು ಸಹಿಸದೇ ಹಳೆಯ ಫೋಟೊ ಮಾಧ್ಯಮಗಳಲ್ಲಿ ಪ್ರದರ್ಶಿಸಿ ಏನು ಸಂದೇಶ ನೀಡಲು ಹೊರಟಿದ್ದಾರೆ. ಇದರಿಂದ ತಮ್ಮ ಆಪ್ತ ಸಹಾಯಕನ ರಕ್ಷಣೆ ಮಾಡಲು ಅಸಾಧ್ಯʼ ಎಂದು ಹೇಳಿದರು.
ಶಾಸಕ ಮಾನಪ್ಪ ವಜ್ಜಲ್ ಅಭಿವೃದ್ಧಿಯನ್ನು ಮರೆತು ರಾಜಕೀಯದಲ್ಲಿ ತೊಡಗಿರುವುದು ಶೋಭೆ ತರುವುದಿಲ್ಲ. ಶಾಸಕರ ಒಡೆತನದ ಗುತ್ತಿಗೆ ಸಂಸ್ಥೆ ಕೆಲಸ ಮಾಡಿಕೊಂಡು ಗುತ್ತಿಗೆದಾರರಿಗೆ ಹಣ ಪಾವತಿಸಿಲ್ಲ ಎಂದು ಸಹಾಯಕ ಆಯುಕ್ತರ ಕಚೇರಿಯ ಮುಂದೆ ಇತ್ತಿಚಿಗೆ ಪ್ರತಿಭಟನೆ ಮಾಡಿದ್ದರು. ಮೊದಲು ಅವರಿಗೆ ನ್ಯಾಯ ಒದಗಿಸಲಿ ಹಾಗೂ ಕ್ಷೇತ್ರದ ಅಭಿವೃದ್ಧಿಗೆ ಶ್ರಮಿಸಲಿ ಎಂದು ಒತ್ತಾಯಿಸಿದರು.
ಈ ಸುದ್ದಿ ಓದಿದ್ದೀರಾ? ರಾಯಚೂರು |RSS ಪಥಸಂಚಲನದಲ್ಲಿ ಭಾಗಿಯಾದ ಪಿಡಿಒ ಅಮಾನತು : ಶಾಸಕ ಮಾನಪ್ಪ ವಜ್ಜಲ್ ಆಕ್ರೋಶ
ಪತ್ರಿಕಾಗೋಷ್ಠಿಯಲ್ಲಿ ಎಪಿಎಂಸಿ ಅಧ್ಯಕ್ಷ ಅಮರೇಶ ಹಿರೆಹೆಸರೂರು, ಕಾಂಗ್ರೆಸ್ ಮುಖಂಡರಾದ ಹೆಚ್ ಮುದುಕಪ್ಪ ವಕೀಲ, ಸಂಜೀವಪ್ಪ ಛಲವಾದಿ, ಸಂತೋಷ ಸೊಪ್ಪಿಮಠ, ಉಮೇಶ ಹುನಕುಂಟಿ, ನೀಲಪ್ಪ ಪವಾರ್, ಜೀವನಕುಮಾರ ಉಪಸ್ಥಿತರಿದ್ದರು.





