ಜೆಡಿಎಸ್ ಪಕ್ಷದ ಮುಖಂಡರ ಮೇಲೆ ಸುಳ್ಳು ಹಾಗೂ ರಾಜಕೀಯ ಪ್ರೇರಿತ ಪ್ರಕರಣವನ್ನು ದಾಖಲು ಮಾಡುತ್ತಿರುವ ಕಾಂಗ್ರೆಸ್ ಮುಖಂಡರ ತಂಡದ ವಿರುದ್ಧ ಹಾಗೂ ಪೋಲಿಸ್ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿ ಜಿಲ್ಲಾ ಜೆಡಿಎಸ್ ಪಕ್ಷದ ವತಿಯಿಂದ ಪ್ರತಿಭಟನೆ ನಡೆಸಲಾಯಿತು.
ನಗರದ ಗಂಜ್ ವೃತ್ತದಲ್ಲಿ ಕನಕದಾಸರ ಪುತ್ಥಳಿಗೆ ಮಾಲಾರ್ಪಣೆ ಮಾಡಿ ಗಂಜ್ ವೃತ್ತದಿಂದ ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ಕಚೇರಿವರೆಗೆ ಮೆರವಣಿಗೆ ನಡೆಸಿ ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ಅವರಿಗೆ ಮನವಿ ಪತ್ರ ಸಲ್ಲಿಸಿದರು.
ಜಿಲ್ಲೆಯಲ್ಲಿ ಜೆಡಿಎಸ್ ಮುಖಂಡರು ಮತ್ತು ಶಾಸಕರ ವಿರುದ್ಧ ಸುಳ್ಳು ದೂರುಗಳನ್ನು ದಾಖಲು ಮಾಡುತ್ತಿದ್ದು ಹಾಗೂ ಸುಳ್ಳು ದೂರುಗಳನ್ನು ದಾಖಲಿಸಲು ಕಾಂಗ್ರೆಸ್ ಮುಖಂಡರ ತಂಡ ಪೋಲಿಸರ ಮೇಲೆ ಒತ್ತಡ ಹಾಕುತ್ತಿದ್ದಾರೆ. ಸುಳ್ಳು ಪ್ರಕರಣ ದಾಖಲು ಮಾಡಲು ಪ್ರಭಾವ ಬೀರುತ್ತಿರುವ ಕಾಂಗ್ರೆಸ್ ಮುಖಂಡರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿ, ಸುಳ್ಳು ದೂರುಗಳನ್ನು ದಾಖಲು ಮಾಡುವವರನ್ನು ಬಂಧಿಸಲು ಒತ್ತಾಯಿಸಿದರು.
ನಗರಸಭೆ ಮಾಜಿ ಸದಸ್ಯ ಬಿ.ತಿಮ್ಮಾರೆಡ್ಡಿ ವಿರುದ್ಧ ಸುಳ್ಳು ಪ್ರಕರಣವನ್ನು ಜಿ.ತಿಮ್ಮಾರೆಡ್ಡಿ ಪೋಲಿಸರ ಜೊತೆಗೆ ವ್ಯವಹರಿಸಿ ಪ್ರಕರಣ ದಾಖಲಿಸುತ್ತಿದ್ದಾರೆ, ಮುಂದಿನ ಮಹಾ ನಗರ ಪಾಲಿಕೆ ಚುನಾವಣೆ ಸ್ಪರ್ಧಿಸದಂತೆ ಭಯ ಉಂಟು ಮಾಡುತ್ತಿದ್ದಾರೆ ಎಂದು ದೂರಿದರು.
ಯುವಕರನ್ನು ಬಳಸಿಕೊಂಡು ಸುಳ್ಳು ದೂರುಗಳು ದಾಖಲಿಸುತ್ತಿರುವವರ ವಿರುದ್ಧ ಕ್ರಮ ಕೈಗೊಳ್ಳಲು ಆಗ್ರಹಿಸಿದರು. ಜೆಡಿಎಸ್ ಮುಖಂಡರ ಮೇಲೆ ನಿರಂತರವಾಗಿ ಸುಳ್ಳು ದೂರುಗಳು ದಾಖಲಿಸುತ್ತಿದ್ದು, ಮುಂದಿನ ಮಹಾ ನಗರ ಪಾಲಿಕೆ ಚುನಾವಣೆ ಸ್ಪರ್ಧಿಸುವ ಅಭ್ಯರ್ಥಿಗಳ ವಿರುದ್ಧ ವ್ಯವಸ್ಥಿತ ಸಂಚು ರೂಪಿಸಿ, ಮಾನಸಿಕವಾಗಿ ಚುನಾವಣೆಯಲ್ಲಿ ಸ್ಪರ್ಧೆ ಮಾಡದಂತೆ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.
ಜಿಲ್ಲೆಯಲ್ಲಿ ಮಟಕಾ, ಅಕ್ರಮ ಮರಳು, ಗಾಂಜಾ ನಡೆಯುತ್ತಿದ್ದು ತಡೆಗೆ ಪೋಲಿಸರ ವಿಫಲರಾಗಿದ್ದಾರೆ. ಇಂತಹವುಗಳಿಗೆ ಕಡಿವಾಣ ಹಾಕದೇ ಸುಳ್ಳು ಪ್ರಕರಣ ದಾಖಲಿಸುವಲ್ಲಿ ನಿರತರಾಗಿದ್ದ ಪೋಲಿಸ್ ಅಧಿಕಾರಿಗಳ ವಿರುದ್ಧ ಕ್ರಮ ಜರುಗಿಸಬೇಕು. ಜೆಡಿಎಸ್ ಮುಖಂಡರ ಮೇಲೆ ದಾಖಲಾದ ಸುಳ್ಳು ಪ್ರಕರಣ ರದ್ದುಗೊಳಿಸಬೇಕು, ಕುಮ್ಮಕ್ಕು ನೀಡುವ ವಾರ್ಡ್.ನಂ.7ರ ಕಾಂಗ್ರೆಸ್ ಮುಖಂಡ ಜಿ.ತಿಮ್ಮಾರೆಡ್ಡಿ ಮೇಲೆ ಸೂಕ್ತ ಕ್ರಮ ವಹಿಸಬೇಕು, ಸುಳ್ಳು ಪ್ರಕರಣ ದಾಖಲು ಮಾಡುತ್ತಿರುವ ಕಾಂಗ್ರೆಸ್ ಮುಖಂಡರ ಮೇಲೆ ಕ್ರಮ ಕೈಗೊಳ್ಳಬೇಕು, ಅಟ್ರಾಸಿಟಿ ಕಾಯ್ದೆ ದುರ್ಬಳಕೆ ಮಾಡಿಕೊಳ್ಳುತ್ತಿರುವವ ವಿರುದ್ಧ ಕ್ರಮ ವಹಿಸಬೇಕು, ಒತ್ತಡಕ್ಕೆ ಮಣಿದು ಸುಳ್ಳು ದೂರು ದಾಖಲಿಸುವ ಠಾಣಾಧಿಕಾರಿ ಮೇಲೆ ಕ್ರಮ ವಹಿಸಬೇಕು ಎಂದು ಆಗ್ರಹಿಸಿದರು.
ಈ ಸುದ್ದಿ ಓದಿದ್ದೀರಾ? ಮಸ್ಕಿ | ಅಕ್ರಮ ಮರಳು ಟಿಪ್ಪರ್ ಜಪ್ತಿ; ಇಬ್ಬರ ವಿರುದ್ದ ಪ್ರಕರಣ ದಾಖಲು
ಈ ಸಂದರ್ಭದಲ್ಲಿ ಜೆಡಿಎಸ್ ಜಿಲ್ಲಾಧ್ಯಕ್ಷ ಎಂ.ವಿರುಪಾಕ್ಷಿ, ಮಾಜಿ ಶಾಸಕ ರಾಜಾ ವೆಂಕಟಪ್ಪ ನಾಯಕ, ಜೆಡಿಎಸ್ ರಾಜ್ಯ ಉಪಾಧ್ಯಕ್ಷ ಮಹಾಂತೇಶ ಪಾಟೀಲ್ ಅತ್ತನೂರು, ಜಿಲ್ಲಾ ಕಾರ್ಯಾಧ್ಯಕ್ಷ ಎನ್. ಶಿವಶಂಕರ ವಕೀಲ, ರಾಮನಗೌಡ ಏಗನೂರು, ಸಣ್ಣ ನರಸಿಂಹ ನಾಯಕ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ರಾಮಕೃಷ್ಣ, ನರಸಪ್ಪ, ಜಂಬುನಾಥ ಯಾದವ್, ಎಸ್ ರಾಜು, ಈರಣ್ಣ ಯಾದವ್ ಸೇರಿದಂತೆ ಅನೇಕರು ಇದ್ದರು.





