ರೈತರ ಪಂಪ್‌ಸೆಟ್‌ಗಳಿಗೆ ಈ ಹಿಂದೆ ನಿರಂತರವಾಗಿ 12 ಗಂಟೆಗಳ ಕಾಲ ವಿದ್ಯುತ್ ಸರಬರಾಜು ಮಾಡುತ್ತಿದ್ದು, ಇದೀಗ ಕಳೆದ ಒಂದು ವಾರದಿಂದ ಸಮರ್ಪಕವಾಗಿ ವಿದ್ಯುತ್ ಸರಬರಾಜು ಮಾಡದ ಪರಿಣಾಮ ಬೆಳೆಗಳು ಒಣಗುತ್ತಿವೆ. ಕೂಡಲೇ ನಿರತಂತರವಾಗಿ 12 ಗಂಟೆ ವಿದ್ಯುತ್ ಸರಬರಾಜು ಮಾಡಬೇಕು ಎಂದು ಸಿಂಗನೋಡಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗ್ರಾಮಸ್ಥರು ಜೆಸ್ಕಾಂ ಇಲಾಖೆ ಎದುರು ಪ್ರತಿಭಟನೆ ನಡೆಸಿದರು.
“ರಾಯಚೂರು ತಾಲೂಕಿನ ಸಿಂಗನೋಡಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸಿಂಗನೋಡಿ ತಾಂಡ, ಬಾಪೂರು, ಮಂಡ್ಲಗೇರಾ, ಬಾಪೂರು ತಾಂಡ, ವಡ್ಲಂದೊಡ್ಡಿ ಸೇರಿದಂತೆ ಇತರೆ ಗ್ರಾಮಗಳಲ್ಲಿ ರೈತರ ಪಂಪ್‌ಸೆಟ್‌ಗಳಿಗೆ ವಿದ್ಯುತ್ ಪೂರೈಕೆಯಾಗದೆ ಇರುವುದರಿಂದ ಭತ್ತ, ಮೆಣಸಿನಕಾಯಿ ಸೇರಿದಂತೆ ಇತರೆ ಬೆಳೆಗಳು ಒಣಗಿ ನಾಶವಾಗುತ್ತಿವೆ” ಎಂದು ಪಂಪ್‌ಸೆಟ್‌ಗೆ ಸಮರ್ಪಕ ವಿದ್ಯುತ್ ನೀಡದ ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
“ಈ ಹಿಂದೆ ನಿರಂತರವಾಗಿ 12 ಗಂಟೆ ವಿದ್ಯುತ್ ಸರಬರಾಜು ಮಾಡುತ್ತಿದ್ದರೂ ಯಾವುದೇ ಸಮಸ್ಯೆ ಆಗುತ್ತಿರಲಿಲ್ಲ. ಇದೀಗ 7 ರಿಂದ 8 ಗಂಟೆ ವಿದ್ಯುತ್ ನೀಡುತ್ತಿದ್ದು, ಅದೂ ಕೂಡ ಸಮರ್ಪಕವಾಗಿ ಸರಬರಾಜು ಮಾಡದೇ ಇರುವುದರಿಂದ ಬೆಳೆಗೆ ನೀರು ಹರಿಸಲು ಸಾಧ್ಯವಾಗುತ್ತಿಲ್ಲ. ಹಾಗಾಗಿ ಕೂಡಲೇ 12 ಗಂಟೆಗಳ ಕಾಲ ನಿರಂತರವಾಗಿ ವಿದ್ಯುತ್ ನೀಡದಿದ್ದರೆ ವಿದ್ಯುತ್ ಕೇಂದ್ರಕ್ಕೆ ಮುತ್ತಿಗೆ ಹಾಕಲಾಗುತ್ತದೆ” ಎಂದು ಎಚ್ಚರಿಕೆ ನೀಡಿದರು.
ಈ ಸುದ್ದಿ ಓದಿದ್ದೀರಾ? ಗದಗ | ಸಮರ್ಪಕ ವಿದ್ಯುತ್ ಸರಬರಾಜು ನಿರ್ವಹಣೆಗೆ ಸಚಿವ ಎಚ್.ಕೆ ಪಾಟೀಲ ಸೂಚನೆ
ಈ ಸಂದರ್ಭದಲ್ಲಿ ರೈತರುಗಳಾದ ಭೀಮೇಶ, ಮಲ್ಲೇಶ, ನಾಗರಾಜ, ಚಂದ್ರಶೇಖರ ಪಾಟೀಲ, ಜಾನಪ್ಪ, ಸ್ವಾಮಿ ಉರುಕುಂದ, ಶಾಂತಪ್ಪ, ಯಂಕಪ್ಪ, ನರಸಿಂಹಲು, ಬಜ್ಜಪ್ಪ, ನರಸಪ್ಪ, ಈರೇಶ ಸೇರಿದಂತೆ ಇತರರು ಇದ್ದರು.
ವರದಿ : ಹಫೀಜುಲ್ಲ





