ಕೇಂದ್ರ ಸರ್ಕಾರ ಜಾರಿಗೊಳಿಸಿರುವ 4 ಕಾರ್ಮಿಕ ಕೋಡ್‌ಗಳ ವಿರೋಧಿಸಿ ಕಾರ್ಮಿಕರು, ರೈತರು, ಕೃಷಿ ಕೂಲಿ ಕಾರ್ಮಿಕರು ಅಖಿಲ ಭಾರತ ಸಾರ್ವತ್ರಿಕ ಮುಷ್ಕರಕ್ಕೆ ಕರೆ ನೀಡಿದ ಹಿನ್ನೆಲೆಯಲ್ಲಿ ನಗರದ ಅಂಬೇಡ್ಕರ್ ವೃತ್ತದಲ್ಲಿ ಕಾರ್ಮಿಕ ಸಂಘಗಳ ಜಂಟಿ ಸಮಿತಿ, ಸಂಯುಕ್ತ ಹೋರಾಟ ಕರ್ನಾಟಕ ವತಿಯಿಂದ ಬೃಹತ್ ಪ್ರತಿಭಟನೆ ಧರಣಿ ನಡಸಿ ಅಂಬೇಡ್ಕರ್ ವೃತ್ತದಿಂದ ಟಿಪ್ಪು ಸುಲ್ತಾನ್ ಉದ್ಯಾನವರೆಗೆ ಬೃಹತ್ ಮೆರವಣಿಗೆ ನಡೆಸಲಾಯಿತು.
4 ಕಾರ್ಮಿಕ ಕೋಡ್‌ಗಳನ್ನು ಜಾರಿಗೊಳಿಸಿರುವುದಕ್ಕೆ ಆಕ್ರೋಶ ವ್ಯಕ್ತಪಡಿಸಿ ಕೇಂದ್ರ ಸರ್ಕಾರದ ವಿರುದ್ಧ ಘೋಷಣೆ ಹಾಕಿದರು. ಕಾರ್ಮಿಕ ನೋಡ್‌ಗಳನ್ನು ಹಿಂಪಡೆದುಕೊಳ್ಳಬೇಕು, ರಾಜ್ಯ ಸರ್ಕಾರ 4 ಕಾರ್ಮಿಕ ಕೋಡ್‌ಗಳಿಗೆ ನಿಯಮಗಳನ್ನು ರೂಪಿಸದೇ ಜಾರಿ ಮಾಡಬಾರದು ಎಂದು ಆಗ್ರಹಿಸಿದರು. 29 ಕಾರ್ಮಿಕ ಕಾಯ್ದೆಗಳನ್ನು 4 ಕಾರ್ಮಿಕ ಕೋಡ್‌ಗಳಾಗಿ ಜಾರಿಗೊಳಿಸಿ ಆರ್ಥಿಕ ಮತ್ತು ರಾಜಕೀಯ ದಾಳಿಯಾಗಿದೆ ಎಂದು ಕೇಂದ್ರ ಮತ್ತು ರಾಜ್ಯ ಸರ್ಕಾರದ ವಿರುದ್ಧ ಕಿಡಿಕಾರಿದರು.
ಕಾರ್ಮಿಕರು ಮುಷ್ಕರ ನಡೆಸಿದರೆ ದಂಡ, ಜೈಲು ಶಿಕ್ಷೆ, ವೇತನ ಕಡಿತಗೊಳಿಸಲಾಗುತ್ತದೆ ಎಂದು ಕಾರ್ಮಿಕರಿಗೆ ಬೆದರಿಕೆ ಹಾಕಿದಕ್ಕೆ ಆಕ್ರೋಶ ಹೊರ ಹಾಕಿದರು. ನರೇಗಾದಡಿ ಕೆಲಸದ ಹಕ್ಕನ್ನು ಕಸೆದುಕೊಂಡು ಗ್ರಾಮೀಣ ಜನರ ದುಡಿಯುವ ಹಕ್ಕನ್ನು ನಿಯಂತ್ರಣ ಮಾಡುವ ಮೂಲಕ ಗ್ರಾಮೀಣ ಜನರ ಜೀವನ ಕಸೆದುಕೊಂಡು ಬೀದಿ ಪಾಲಾಗುವಂತೆ ಮಾಡುತ್ತಿರುವ ಕೇಂದ್ರ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ವಿದ್ಯುಚ್ಛಕ್ತಿ ಖಾಸಗೀಕರಣ, ಪ್ರಸರಣ ಮತ್ತು ಅನುಷ್ಠಾನ ನಿರ್ವಹಣೆ ಖಾಸಗಿ ಬಂಡವಾಳಗಾರರಿಗೆ ನೀಡುವ ಮೂಲಕ ರೈತರು, ಜನ ಸಾಮಾನ್ಯರ ಸಬ್ಸಿಡಿಗೆ ಕಲ್ಲು ಹಾಕಿದೆ ಎಂದು ಕಿಡಿ ಕಾರಿದರು. ರೈತರ ಉತ್ಪನ್ನಗಳಿಗೆ ಬೆಂಬಲ ಬೆಲೆ ನೀಡದೇ ಕೃಷಿಯನ್ನು ಉತ್ತೇಜಿಸದೇ ಭೂ ಸ್ವಾದೀನ ಕಾಯ್ದೆ ಮೂಲಕ ರೈತ ಜಮೀನು ಕಸಿದುಕೊಳ್ಳುವ ಹುನ್ನಾರ ನಡೆದನ್ನು ಖಂಡಿಸಿದರು.
4 ಲೇಬರ್ ಕೋಡ್ ರದ್ದುಗೊಳಿಸಬೇಕು, ನರೇಗಾ ಯೋಜನೆಯನ್ನು ಪುನರ್ ಸ್ಥಾಪಿಸಿ, ವಿ.ಜಿ ಗ್ರಾಮ್ ಜಿ ಕಾಯ್ದೆ ರದ್ದುಗೊಳಿಸಬೇಕು, ಭೂ ಸ್ವಾಧೀನ ಕಾಯ್ದೆಯನ್ನು ಹಿಂಪಡೆಯಲು ಒತ್ತಾಯಿಸಿದರು. ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ತಂದಿರುವ ಭೂಸುಧಾರಣಾ, ಎಪಿಎಂಸಿ, ಜಾನುವಾರು ಸಂರಕ್ಷಣಾ ತಿದ್ದುಪಡಿ ಕಾಯ್ದೆಗಳನ್ನು ಹಿಂಪಡೆಯಬೇಕು, ವಿದ್ಯುಚ್ಛಕ್ತಿ ಖಾಸಗೀಕರಣ ಮಾಡುವುದನ್ನು ನಿಲ್ಲಿಸಬೇಕು. ಬೀಜ ಮಸೂದೆ ಕಾಯ್ದೆಯನ್ನ ಹಿಂಪಡೆಯಬೇಕು ಎಂದು ಮನವಿ ಮಾಡಿದರು.
ವಿಮಾ ತಿದ್ದುಪಡಿ ಕಾಯ್ದೆ., ಶಾಂತಿ ಕಾಯ್ದೆರದ್ದುಗೊಳಿಸಬೇಕು, ಕರ್ನಾಟಕ ಸರ್ಕಾರ ಕಾರ್ಮಿಕ ಸಂಹಿತೆಗಳಿಗೆ ಈಗ ತಂದಿರುವ ಗೆಜೆಟ್ ನೋಟಿಫಿಕೇಷನ್‌ನ್ನು ವಾಪಸ್ಸು ಪಡೆಯಬೇಕು. ಮತ್ತು ಒಕ್ಕೂಟ ಸರ್ಕಾರ ತಂದಿರುವ ಜನವಿರೋಧಿ ಮಸೂದೆಗಳನ್ನು ವಿರೋಧಿಸಬೇಕು. 2025 ಆಗಸ್ಟ್ ತಿಂಗಳಲ್ಲಿ ಕನಿಷ್ಠ ವೇತನ ಹೆಚ್ಚಳದ ಕುರಿತು ಕನಿಷ್ಠ ವೇತನ ಸಲಹಾ ಮಂಡಳಿ ನೀಡಿರುವ ಶಿಫಾರಸ್ಸುನ್ನು ಅಂತಿಮ ಅಧಿಸೂಚನೆಯಾಗಿ ಹೊರಡಿಸಬೇಕು ಎಂದು ಒತ್ತಾಯಿಸಿದರು.
ಈ ಸುದ್ದಿ ಓದಿದ್ದೀರಾ? ರಾಯಚೂರು | ಕೆಎಸ್‌ಆರ್‌ಪಿ ಸ್ಥಾಪನೆಗೆ ಒತ್ತಾಯ; ಸಿಎಂಗೆ ಬಹಿರಂಗ ಪತ್ರ
ಈ ಸಂದರ್ಭದಲ್ಲಿ ಕಾರ್ಮಿಕ ಸಂಘಗಳು ಜಂಟಿ ಸಮಿತಿ, ಸಂಯುಕ್ತ ಹೋರಾಟ ಕರ್ನಾಟಕ ಮುಖಂಡರಾದ ಡಿಎಸ್ ಶರಣಬಸವ, ಎನ್‌ಎಸ್ ವೀರೇಶ, ಮಹೇಶ ಚೀಕಲಪರ್ವಿ, ಹೆಚ್.ಪದ್ಮಾ, ಪ್ರಭಾಕರ ಪಾಟೀಲ್, ಶ್ರೀಶೈಲರೆಡ್ಡಿ, ಕಾಶಪ್ಪ, ಅಮೀರ್ ಅಲಿ, ಗೋವಿಂದ, ಸಲಾವುದ್ದಿನ್, ಎಂ.ರವಿ, ಎಂ.ಶರಣಗೌಡ, ಖಾಜಾ ಅಸ್ಲಂ, ಮಾರೆಪ್ಪ ವಕೀಲ, ಗೋಕುರಮ್ಮ, ಶರಣಮ್ಮ, ಈರಮ್ಮ, ಮಲ್ಲಮ್ಮ, ಮಲ್ಲನಗೌಡ, ರವಿ ಕುಮಾರ, ದೇವರಾಜ, ಸೇರಿ ಅಂಗನವಾಡಿ, ಆಶಾ ಕಾರ್ಯಕರ್ತೆಯರು, ವಿವಿಧ ಕಾರ್ಮಿಕ ಸಂಘಟನೆಗಳ ಮುಖಂಡರು ನೂರಾರು ಸಂಖ್ಯೆಯಲ್ಲಿ ಮುಷ್ಕರದಲ್ಲಿ ಭಾಗವಹಿಸಿದ್ದರು.




