ರಾಯಚೂರು | ಗ್ಯಾರಂಟಿ ಯೋಜನೆ ಹಣವನ್ನು ಸಾಲಕ್ಕೆ ಹೊಂದಾಣಿಕೆ ಮಾಡಬೇಡಿ – ಪಾಮಯ್ಯ ಮುರಾರಿ

Date:

ಗ್ಯಾರಂಟಿ ಯೋಜನೆಗಳಡಿ ಫಲಾನುಭವಿಗಳಿಗೆ ನೀಡಲಾಗುವ ಹಣವನ್ನು ಬ್ಯಾಂಕ್ ಅಧಿಕಾರಿಗಳು ಸಾಲಕ್ಕೆ ಹೊಂದಾಣಿಕೆ ಮಾಡಬಾರದು. ಈಗಾಗಲೇ ಸಾಲಕ್ಕೆ ಹೊಂದಿಸಿದ ಮೊತ್ತವನ್ನು ಕೂಡಲೇ ಫಲಾನುಭವಿಗಳ ಖಾತೆಗೆ ಜಮಾ ಮಾಡುವಂತೆ ಲೀಡ್ ಬ್ಯಾಂಕ್ ವ್ಯವಸ್ಥಾಪಕರಿಗೆ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿಯ ಜಿಲ್ಲಾ ಅಧ್ಯಕ್ಷ ಪಾಮಯ್ಯ ಮುರಾರಿ ಅವರು ಎಚ್ಚರಿಕೆ ನೀಡಿದರು.

ನಗರದ ಜಲ ನಿರ್ಮಲ ಸಭಾಂಗಣದಲ್ಲಿ ನಡೆದ ಗ್ಯಾರಂಟಿ ಯೋಜನೆಗಳ ಜಿಲ್ಲಾ ಮಟ್ಟದ ಸಮಿತಿ ಸಭೆಯಲ್ಲಿ ಮಾತನಾಡಿದ ಅವರು, ಗೃಹಲಕ್ಷ್ಮೀ ಯೋಜನೆ ಜಾರಿಯಿಂದ ಮಹಿಳೆಯರಿಗೆ ದೊಡ್ಡ ಮಟ್ಟದ ಸಹಾಯವಾಗಿದೆ. ಆದರೆ ಕೆಲವು ಬ್ಯಾಂಕ್ ಅಧಿಕಾರಿಗಳು ಯೋಜನೆ ಹಣವನ್ನು ಸಾಲ ತೀರಿಸಲು ಬಳಸುತ್ತಿರುವುದು ಫಲಾನುಭವಿಗಳಿಗೆ ಅನ್ಯಾಯವಾಗಿದೆ. ಈ ಕ್ರಮವನ್ನು ತಕ್ಷಣ ನಿಲ್ಲಿಸಿ ಎಲ್ಲಾ ಬ್ಯಾಂಕ್ ಅಧಿಕಾರಿಗಳಿಗೆ ಸೂಚನೆ ನೀಡಬೇಕು ಎಂದು ಒತ್ತಾಯಿಸಿದರು.

ಗೃಹಜ್ಯೋತಿ ಯೋಜನೆ ಅಡಿ ಪ್ರತಿ ತಿಂಗಳು ಬಿಲ್ ನೀಡಬೇಕು, ಆದರೆ ಕೆಲವೆಡೆ 40-45 ದಿನಗಳ ಬಳಿಕ ಮಾತ್ರ ಬಿಲ್ ನೀಡುತ್ತಿರುವುದು ಫಲಾನುಭವಿಗಳನ್ನು ವಂಚಿಸುತ್ತಿದೆ. ಇದನ್ನು ತಡೆಯಲು ಬಿಲ್ ಕಲೆಕ್ಟರ್‌ಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಬೇಕು ಎಂದರು.

ಗ್ರಾಮೀಣ ಭಾಗದಲ್ಲಿ ವಿದ್ಯುತ್ ಪರಿವರ್ತಕಗಳ ದುರಸ್ತಿ ವಿಳಂಬವಾಗುವುದರಿಂದ ಎರಡು-ಮೂರು ದಿನಗಳ ಕಾಲ ವಿದ್ಯುತ್ ಕಡಿತವಾಗುತ್ತಿರುವ ಬಗ್ಗೆ ಗಂಭೀರ ಚಿಂತನೆ ವ್ಯಕ್ತಪಡಿಸಿದ ಅವರು, ಹೆಚ್ಚುವರಿ ವೆಚ್ಚವನ್ನು ಗ್ರಾಮಸ್ಥರಿಂದ ವಸೂಲು ಮಾಡುವುದನ್ನು ತಕ್ಷಣ ನಿಲ್ಲಿಸಬೇಕು ಎಂದು ತಿಳಿಸಿದರು. ಅಲ್ಲದೆ, ಕೆಲವು ಗ್ರಾಮಗಳಲ್ಲಿ ಹೊಸ ಮೀಟರ್ ಅಳವಡಿಕೆ ಹಾಗೂ ಹೊಸ ಸಂಪರ್ಕ ನೀಡುವಲ್ಲಿ ತೊಂದರೆ ಉಂಟಾಗುತ್ತಿರುವುದರಿಂದ ಕ್ರಮ ವಹಿಸಬೇಕೆಂದರು. ಶಾಲೆ ಹಾಗೂ ಅಂಗನವಾಡಿಗಳಿಗೆ ಉಚಿತ ವಿದ್ಯುತ್ ಸೌಲಭ್ಯ ಕಲ್ಪಿಸಿ ಬಿಲ್ ನೀಡಬಾರದು ಎಂದರು.

ಅನ್ನಭಾಗ್ಯ ಯೋಜನೆ ಅಡಿ ಪಡಿತರ ಪಡೆಯುವಾಗ ಬೆರಳಚ್ಚು ನೀಡದೇ ಇದ್ದಲ್ಲಿ ಯೋಜನೆ ಸ್ಥಗಿತಗೊಳ್ಳುತ್ತಿರುವುದರಿಂದ ಪ್ರತೀ ತಿಂಗಳು ಫಲಾನುಭವಿಗಳು ಪಡಿತರ ಪಡೆಯುವಂತೆ ನೋಡಿಕೊಳ್ಳಬೇಕು. ಈ ಬಗ್ಗೆ ಎಲ್ಲಾ ನ್ಯಾಯಬೆಲೆ ಅಂಗಡಿಗಳ ಮಾಲೀಕರಿಗೆ ಸೂಚನೆ ನೀಡಲು ಅಧಿಕಾರಿಗಳಿಗೆ ಸೂಚಿಸಿದರು.

ಶಕ್ತಿ ಯೋಜನೆ ಕುರಿತು ಗ್ರಾಮೀಣ ಭಾಗದಲ್ಲಿ ಬಸ್‌ಗಳು ಸಮಯಕ್ಕೆ ತೆರಳದೇ ಇರುವುದರಿಂದ ವಿದ್ಯಾರ್ಥಿಗಳು ಸಂಕಷ್ಟಕ್ಕೆ ಸಿಲುಕುತ್ತಿದ್ದಾರೆ. ಬಸ್‌ಗಳನ್ನು ಸಮಯಕ್ಕೆ ಚಲಾಯಿಸುವಂತೆ ಸಾರಿಗೆ ಇಲಾಖೆ ಅಧಿಕಾರಿಗಳಿಗೆ ಹೇಳಿದರು. ಜಿಲ್ಲೆಯಲ್ಲಿ ಹೊಸದಾಗಿ 98 ಕಡೆಗಳಲ್ಲಿ ಬಸ್ ಸಂಚಾರ ಆರಂಭವಾಗಿದ್ದು, ಈಗಾಗಲೇ 188 ಕಡೆಗಳಲ್ಲಿ 346 ಹೆಚ್ಚುವರಿ ಟ್ರಿಪ್‌ಗಳನ್ನು ಮಾಡಲಾಗಿದೆ. ಉಳಿದ ಗ್ರಾಮೀಣ ಭಾಗಕ್ಕೂ ಹೆಚ್ಚಿನ ಒತ್ತು ನೀಡಬೇಕೆಂದರು.

ಈ ಸುದ್ದಿ ಓದಿದ್ದೀರಾ? ರಾಯಚೂರು |ಒಳ ಮೀಸಲಾತಿ ಜಾರಿ : ಮಾದಿಗ ಸಮುದಾಯದ ಸಂಭ್ರಮ

ಸಭೆಯಲ್ಲಿ ಜಿಪಂ ಯೋಜನಾ ನಿರ್ದೇಶಕ ಟಿ. ರೋಣಿ, ಗ್ಯಾರಂಟಿ ಯೋಜನೆಗಳ ಸಮಿತಿಯ ಉಪಾಧ್ಯಕ್ಷ ಗಫೂರ್ ಸಾಬ್, ಸದಸ್ಯರಾದ ನಾಗೇಂದ್ರಪ್ಪ ಮಟಮಾರಿ, ಹನುಮಂತಪ್ಪ ಜಾಲಿಬೆಂಚಿ, ಶೇಖರಗೌಡ ತುರವಿಹಾಳ, ತಾಲೂಕು ಅಧ್ಯಕ್ಷರು ಪವನ ಕಿಶೋರ ಪಾಟೀಲ್, ಮಹಿಬೂಬ್ ಸಾಬ್, ಬಸವರಾಜ ಎಚ್.ಪಿ, ನಜೀರ್ ಪಂಜಾಬಿ ಸೇರಿದಂತೆ ಅಧಿಕಾರಿಗಳು ಉಪಸ್ಥಿತರಿದ್ದರು.

WhatsApp Image 2025 11 17 at 3.21.38 PM
ಈ ದಿನ ಡೆಸ್ಕ್
+ posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಸಿಂಧನೂರು | ರೀಲ್ಸ್ ಮಾಡಲು ಹೋದ ಯುವಕ ನೀರು ಪಾಲು

ರೀಲ್ಸ್ ಮಾಡುವ ಉದ್ದೇಶದಿಂದ ಸ್ನೇಹಿತರಿಗೆ ವಿಡಿಯೋ ಮಾಡಲು ಹೇಳಿ ಈಜಲು ನದಿಗೆ...

ಗದಗ | ಆದ್ಯ ವಚನಕಾರ ದೇವರ ದಾಸಿಮಯ್ಯ: ರಾಘವೇಂದ್ರ ಕೊಪ್ಪಳ

"ಆದ್ಯ ವಚನಕಾರ ನೇಕಾರ ಸಂತ ದೇವರ ದಾಸಿಮಯ್ಯನವರು 10 ನೇ ಶತಮಾನದಲ್ಲಿ...

ಮಾರ್ಚ್ 25ರಂದು ಬೆಂಗಳೂರಿನ ಫ್ರೀಡಂ ಪಾರ್ಕ್ನಲ್ಲಿ ಬಲಗೈ ಜಾತಿಗಳ ಬೃಹತ್ ಹೋರಾಟ

ಬಾಗೇಪಲ್ಲಿ:-ಕರ್ನಾಟಕ ರಾಜ್ಯ ಬಲಗೈ ಜಾತಿಗಳ ಮಹಾ ಒಕ್ಕೂಟದ ವತಿಯಿಂದ ಒಳ ಮೀಸಲಾತಿ...

ಯುಪಿಎಸ್ಸಿ ರ‍್ಯಾಂಕ್‌ ವಿಜೇತ ವರುಣ್ ಗೌಡಗೆ ಸನ್ಮಾನ

ಕೋಲಾರ: ಯುಪಿಎಸ್ಸಿ ಪರೀಕ್ಷೆಯಲ್ಲಿ 462 ನೇ ರ‍್ಯಾಂಕ್‌ ಪಡದ ತಾಲೂಕಿನ ತ್ಯಾವನಹಳ್ಳಿ...