ಹುಬ್ಬಳ್ಳಿ ತಾಲ್ಲೂಕಿನ ಇನಾಂ ವೀರಾಪುರ ಗ್ರಾಮದಲ್ಲಿ ದಲಿತ ಯುವಕನನ್ನು ಪ್ರೀತಿಸಿ ಮದುವೆಯಾಗಿದ್ದ ಕಾರಣಕ್ಕೆ ಕುಟುಂಬವೊಂದು ತನ್ನ ಮಗಳನ್ನು ಹತ್ಯೆ ಮಾಡಿ, ಜೊತೆಗೆ ಯುವಕನ ಮನೆಯವರ ಮೇಲೆ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿದ ಅಮಾನುಷ ಘಟನೆಯನ್ನು ಖಂಡಿಸಿ ಮಾದಿಗ ಮೀಸಲಾತಿ ಹೋರಾಟ ಸಮಿತಿ ವತಿಯಿಂದ ಪ್ರತಿಭಟನೆ ನಡೆಸಿದರು.
ದೇವದುರ್ಗ ತಾಲ್ಲೂಕು ತಹಶೀಲ್ದಾರ್ ಕಚೇರಿ ಎದುರು ಘೋಷಣೆಗಳನ್ನು ಕೂಗಿ, ಪ್ರಕರಣದಲ್ಲಿ ಭಾಗಿಯಾದ ಎಲ್ಲಾ ಆರೋಪಿಗಳನ್ನು ತಕ್ಷಣ ಬಂಧಿಸಿ ಕಠಿಣ ಶಿಕ್ಷೆಗೆ ಗುರಿಪಡಿಸಬೇಕು ಎಂದು ಒತ್ತಾಯಿಸಿದರು. ಇಂತಹ ಗೌರವ ಹತ್ಯೆ ಪ್ರಕರಣಗಳು ಸಮಾಜಕ್ಕೆ ಕಳಂಕವಾಗಿದ್ದು, ದಲಿತ ಸಮುದಾಯದ ಮೇಲೆ ನಡೆಯುತ್ತಿರುವ ದೌರ್ಜನ್ಯವನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಬೇಕೆಂದು ಅವರು ಆಗ್ರಹಿಸಿದರು.
ಮೇ ತಿಂಗಳಲ್ಲಿ ಇಬ್ಬರು ಪರಸ್ಪರ ಪ್ರೀತಿಸಿ ಕಾನೂನು ಪ್ರಕಾರ ಉಪ ನೋಂದಣಿ ಇಲಾಖೆಯಲ್ಲಿ ಮದುವೆ ಆಗಿ ಜೀವನ ನಡೆಸುತ್ತಿದ್ದರು. ಇದನ್ನು ಸಹಿಸದೇ ಯುವತಿ ತಂದೆಯಾದ ಪ್ರಕಾಶಗೌಡ ಪಾಟೀಲ್ ಇವರು ನಮ್ಮ ಕುಲಕ್ಕೆ ಅವಮಾನವಾಗಿದೆ ಎಂದು ಕ್ರೋದಿತಗೊಂಡು ಮಗಳನ್ನೆ ಮಾರಾಕಾಸ್ತ್ರಗಳಿಂದ ಹೊಡೆದು ಕೊಲೆ ಮಾಡಿದ್ದಾನೆ ಮತ್ತು ಇತನ ಕುಟುಂಬಸ್ಥರು ಸೇರಿ ದಲಿತ ಯುವಕನ ಮನೆಗೆ ನುಗ್ಗಿ ಮೂವರಿಗೆ ಮಾರಣಾಂತಿಕ ಹಲ್ಲೆ ಮಾಡಿದ್ದಾರೆ. ಈಗಾಗಲೇ ಕೆಲವರ ಬಂಧನವಾಗಿದ್ದು ಕಠಿಣ ಶಿಕ್ಷೆಗೆ ಗುರಿಪಡಿಸಬೇಕು ಎಂದು ಒತ್ತಾಯಿಸಿದರು.
ಹಿಂದು ನಾವೆಲ್ಲ ಒಂದು ಅನ್ನುವವರು ಈ ಘಟನೆ ಬಗ್ಗೆ ಯಾಕೆ ಹೇಳಿಕೆ ಕೊಡುತ್ತಿಲ್ಲ, ದೇಶಕ್ಕೆ ಸ್ವಾತಂತ್ರ್ಯ ಸಿಕ್ಕು ಸುಮಾರು 78 ವರ್ಷ ಗತಿಸಿದರೂ ಕೂಡಾ ಇನ್ನು ಜಾತಿವಾದ ತೊಲಗುತ್ತಿಲ್ಲ ಮತ್ತು ಇಂತಹ ಘಟನೆ ನಡೆದರೂ ಕೂಡ ಹುಬ್ಬಳ್ಳಿ- ಧಾರವಾಡ ಉಸ್ತುವಾರಿ ಸಚಿವರು ಕುಟುಂಬಕ್ಕೆ ಭೇಟಿ ನೀಡದೇ ಇರುವುದು ಖಂಡನೀಯ ಎಂದರು.
ಕೂಡಲೇ ಇಂತಹ ಘಟನೆಗಳು ಮರುಕಳಿಸದಂತೆ ಆರೋಪಿಗಳನ್ನು ಗಲ್ಲು ಶಿಕ್ಷೆಗೆ ಗುರಿ ಪಡಿಸಬೇಕು ಹಾಗೂ ಯುವಕನ ಕುಟುಂಬಸ್ಥರಿಗೆ ಸೂಕ್ತ ಭದ್ರತೆ ಒದಗಿಸಬೇಕು ಮತ್ತು ಸರಕಾರದಿಂದ ೨೦ ಲಕ್ಷ ಪರಿಹಾರ ನೀಡಬೇಕು. ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ಬೃಹತ್ ಹೋರಾಟ ಮಾಡಲಾಗುವುದು ಎಂದು ಎಚ್ಚರಿಕೆ ನೀಡಿದರು.
ಈ ಸುದ್ದಿ ಓದಿದ್ದೀರಾ? ರಾಯಚೂರು | ವಿಬಿಜಿ- ರಾಮಜಿ ಮಸೂದೆ ವಿರೋಧಿಸಿ ಸಂಸದರ ಕಚೇರಿ ಮುಂದೆ ಕೂಲಿಕಾರರ ಪ್ರತಿಭಟನೆ
ಪ್ರತಿಭಟನೆಯಲ್ಲಿ ಮಾದಿಗ ಮೀಸಲಾತಿ ಹೋರಾಟ ಸಮಿತಿ ಜಿಲ್ಲಾಧ್ಯಕ್ಷ ಹನುಮಂತಪ್ಪ ಮನ್ನಾಪುರಿ, ಭೀಮ್ ಆರ್ಮಿ ಅಧ್ಯಕ್ಷರು ವಿಶ್ವನಾಥ ಬಲ್ಲಿದೇವ್, ಲಿಂಗಪ್ಪ ಗೌಡುರ, ವೆಂಕಟೇಶ ಜಾಲಹಳ್ಳಿ, ಶಿವರಾಜ ಕೊಪ್ಪರ, ಹನುಮಂತ ಇರಬಗೇರಾ ಇನ್ನಿತರರು ಹಾಜರಿದ್ದರು.





