ರಾಯಚೂರು ತಾಲೂಕಿನ ಗುಂಜಹಳ್ಳಿ ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಶಿಶು ಮರಣ ಸಾವನ್ನಪ್ಪಿದ ಘಟನೆ ತಡವಾಗಿ ಬೆಳಕಿಗೆ ಬಂದಿದೆ.
ಮಾಹಿತಿಯ ಪ್ರಕಾರ, ಸೆಪ್ಟೆಂಬರ್ 6 ರಂದು ಸಂಜೆ 5 ಗಂಟೆಗೆ ಗರ್ಭಿಣಿ ಮಹಿಳೆ ಅನಿತಾ ಅವರನ್ನು ಕುಟುಂಬಸ್ಥರು ಗುಂಜಹಳ್ಳಿ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಕರೆದುಕೊಂಡು ಹೋದಾಗ, ಅಲ್ಲಿ ಯಾವುದೇ ಸಿಬ್ಬಂದಿ ಹಾಜರಿರಲಿಲ್ಲ. ಸಂಜೆ 5ಕ್ಕೆ ಕರ್ತವ್ಯಕ್ಕೆ ಬರುವ ಸಿಬ್ಬಂದಿ ರಾತ್ರಿ 8 ಗಂಟೆಗೆ ಬರಲಾಗಿದೆ. ಯಾವುದೇ ತಪಾಸಣೆ ನಡೆಸದೇ, ತಕ್ಷಣವೇ ರೋಗಿಯನ್ನು ರಿಮ್ಸ್ ಆಸ್ಪತ್ರೆಗೆ ರವಾನಿಸಿದರು.
ಅಂಬುಲೆನ್ಸ್ ಮುಖಾಂತರ ರಾತ್ರಿ 11 ಗಂಟೆ ಸುಮಾರಿಗೆ ರಿಮ್ಸ್ ಆಸ್ಪತ್ರೆಗೆ ತಲುಪಿದ ಗರ್ಭಿಣಿಗೆ ತುರ್ತು ಚಿಕಿತ್ಸೆ ನೀಡಿದಾಗ, ಮಗು ಗರ್ಭದಲ್ಲೇ ಸಾವನ್ನಪ್ಪಿದೆ ಎಂದು ವೈದ್ಯರು ದೃಢಪಡಿಸಿದರು. ಬಳಿಕ ಶಸ್ತ್ರಚಿಕಿತ್ಸೆಯ ಮೂಲಕ (ಸಿಜೇರಿಯನ್) ಮೃತ ಮಗುವನ್ನು ಹೊರತೆಗೆದರು.
ಈ ಸುದ್ದಿ ಓದಿದ್ದೀರಾ? ರಾಯಚೂರು | ಸ್ಮಶಾನ ಭೂಮಿಯಿಲ್ಲದೇ ಅಂತ್ಯಸಂಸ್ಕಾರಕ್ಕೆ ಸಂಕಟ
ಘಟನೆಯ ನಂತರ ಮೃತ ಶಿಶುವಿನ ಗ್ರಾಮಸ್ಥರು ಆರೋಗ್ಯ ಇಲಾಖೆಯ ನಿರ್ಲಕ್ಷ್ಯಕ್ಕೆ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದು, ಗುಂಜಹಳ್ಳಿ ಆರೋಗ್ಯ ಕೇಂದ್ರದಲ್ಲಿ ಸಿಬ್ಬಂದಿ ಕೊರತೆ ಮತ್ತು ಸಮಯಪಾಲನೆಯ ನಿರ್ಲಕ್ಷ್ಯದಿಂದ ಈ ದುರಂತ ಸಂಭವಿಸಿದೆ ಎಂದು ಆರೋಪಿಸಿದರು.





