ನಗರದ ಪಶ್ಚಿಮ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಮೂರು ಮನೆಗಳಲ್ಲಿ ಕಳ್ಳತನ ಪ್ರಕರಣ ಬೇಧಿಸಿ ಕಳ್ಳನನ್ನು ಪತ್ತೆ ಹಚ್ಚಿ ಆರೋಪಿಯಿಂದ 36.22 ಲಕ್ಷ ಮೌಲ್ಯದ ಚಿನ್ನಾಭರಣವನ್ನು ಜಪ್ತಿಪಡಿಸಿಕೊಳ್ಳಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಂ.ಪುಟ್ಟಮಾದಯ್ಯ ಹೇಳಿದರು.
ಅವರಿಂದು ನಗರದ ಎಸ್ಪಿ ಕಚೇರಿಯಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿ, ಆಂಧ್ರಪ್ರದೇಶದ ಧರ್ಮಾವರಂ ಮೂಲದ ಗುಜ್ಜಲ ರಾಮಕೃಷ್ಣ ಎನ್ನುವ ವ್ಯಕ್ತಿ ಮೇ.20 ಮತ್ತು ಆ.29ರಂದು ನಗರದ ಪಶ್ಚಿಮ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಬರುವ ಮೂರು ಮನೆಗಳ ಬೀಗ ಮುರಿದು ಮನೆಗಳ ಅಲಮಾರದಲ್ಲಿದ್ದ ಚಿನ್ನಾಭರಣಗಳನ್ನು ಕಳ್ಳತನ ಮಾಡಿದ್ದ, ಈ ಕುರಿತು ಪ್ರಕರಣ ದಾಖಲಾಗಿತ್ತು. ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ಪೊಲೀಸರು ತನಿಖೆ ಕೈಗೊಂಡು ಕಳ್ಳನನ್ನು ನ.10 ರಂದು ಪತ್ತೆಹಚ್ಚಿ 36,22,500 ರೂ. ಬೆಲೆ ಬಾಳುವ 315 ಗ್ರಾಂ. ಚಿನ್ನಾಭರಣವನ್ನು ಜಪ್ತಿಪಡಿಸಿಕೊಂಡಿದ್ದಾರೆ ಎಂದರು.
ಆರೋಪಿಯನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಳಪಡಿಸಲಾಗಿದ್ದು, ತನಿಖಾ ತಂಡದ ಕಾರ್ಯವು ಪ್ರಂಶಸನೀಯವಾಗಿದ್ದು, ವ್ಯಕ್ತಿಯು ದಿನನಿತ್ಯ ರೈಲಿನ ಮೂಲಕ ಆಗಮಿಸಿ, ಮನೆಗಳನ್ನು ಗುರುತಿಸಿಕೊಂಡು, ಕಳ್ಳತನ ಮಾಡಿರುವುದು ತನಿಖೆಯಿಂದ ತಿಳಿದುಬಂದಿದ್ದು, ಜನರು ಜಾಗೃತರಾಗಿ ತಮ್ಮ ಚಿನ್ನಾಭರಣವನ್ನು ತೋರಿಕೆಯ ರೀತಿಯಲ್ಲಿ ಹಾಕಿಕೊಳ್ಳದೇ ತಮ್ಮ ಮನೆಯಲ್ಲಿ ಲಾಕರ್‍ಗಳಲ್ಲಿ ಇಡಬೇಕು. ಮತ್ತು ಅನುಮಾನಾಸ್ಪದ ವ್ಯಕ್ತಿಗಳು ಕಂಡುಬಂದಲ್ಲಿ ಪೊಲೀಸ್ ಠಾಣೆಗೆ ಮಾಹಿತಿ ನೀಡಬೇಕು ಎಂದು ತಿಳಿಸಿದರು.
ಜಿಲ್ಲೆಯ ಕವಿತಾಳ ಪೊಲೀಸ್ ಠಾಣೆಯೂ ರಾಷ್ಟ್ರಮಟ್ಟದಲ್ಲಿ ಅತ್ಯುತ್ತಮ ಪೊಲೀಸ್ ಠಾಣೆಯಾಗಿ ಆಯ್ಕೆಯಾಗಿದೆ. ದೇಶದ ಮೂರು ಪೊಲೀಸ್ ಠಾಣೆಗಳು ಈ ಪ್ರಶಸ್ತಿಗೆ ಆಯ್ಕೆಯಾಗಿದ್ದು, ಸಿಸಿಸಿಎನ್ ಪೋರ್ಟಲ್‍ನಲ್ಲಿ ದೇಶದ ಎಲ್ಲಾ ರಾಜ್ಯಗಳ ಪೊಲೀಸ್ ಠಾಣೆಗಳ ಮಾಹಿತಿಗಳನ್ನು ಆಧರಿಸಿ, ತನಿಖಾ ಕಾರ್ಯ, ವಾರೆಂಟ್ ಪ್ರಕರಣಗಳು, ಸಮಾಜದಲ್ಲಿ ಭದ್ರತೆ, ದಾಖಲಾತಿ ಕ್ರೂಢೀಕರಣ ಸೇರಿದಂತೆ ಇತರೆ ಅಂಶಗಳನ್ನು ಪರಿಗಣಿಸಿ ಪ್ರಶಸ್ತಿಯನ್ನು ನೀಡಲಾಗುತ್ತಿದೆ. ನ.28ರಂದು ರಾಯಪುರದಲ್ಲಿ ನಡೆಯಲಿರುವ ಪೊಲೀಸ್ ಮಹಾನಿರ್ದೇಶಕರು, ಮಹಾ ಇನ್ಸಪೆಕ್ಟರ್‍ಗಳ ಸಮ್ಮೇಳನದಲ್ಲಿ ಕೇಂದ್ರ ಗೃಹ ಸಚಿವರು ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ ಎಂದು ತಿಳಿಸಿದರು.
ಈ ಸುದ್ದಿ ಓದಿದ್ದೀರಾ? ರಾಯಚೂರು | ರಾಷ್ಟ್ರಮಟ್ಟದಲ್ಲಿ ಮೂರನೇ ಸ್ಥಾನ ಪಡೆದ ಕವಿತಾಳ ಠಾಣೆ
ಈ ಸಂದರ್ಬದಲ್ಲಿ ಹೆಚ್ಚುವರಿ ಪೊಲೀಸ್ ಅಧೀಕ್ಷಕ ಕುಮಾರಸ್ವಾಮಿ, ಡಿವೈಎಸ್‍ಪಿಗಳಾದ ಶಾಂತವೀರ, ವೆಂಕಟೇಶ ಉಗಿಬಂಡಿ, ಸಿಪಿಐಗಳಾದ ನಾಗರಾಜ ಮೇಕಾ, ವಿ.ಶ್ವೇತಾ ಸೇರಿದಂತೆ ಅನೇಕರಿದ್ದರು.





