ಸರ್ಕಾರದ ಜಮೀನನ್ನು ಅಕ್ರಮವಾಗಿ ಉಳುಮೆ ಮಾಡುತ್ತಿರುವುದರಿಂದ ನಾಡಗೌಡರ ಕುಟುಂಬದ ಸದಸ್ಯರ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸುವಂತೆ ಒತ್ತಾಯಿಸಿ ರಾಯಚೂರು ಜಿಲ್ಲೆ ಸಿಂಧನೂರಿನ ಮಿನಿ ವಿಧಾನಸೌಧ ಕಚೇರಿ ಎದುರು ರೈತ ಸಂಘ ಹಾಗೂ ಸಿಪಿಐಎಂಎಲ್ ಸಂಘಟನೆ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.
“ಕರ್ನಾಟಕ ಸರ್ಕಾರದ ಭೂಮಿಯನ್ನು ಅಕ್ರಮವಾಗಿ ಕಬಳಿಕೆ ಮಾಡಿದ ಜವಳಗೇರಾ ನಾಡಗೌಡರ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಿ ಜೈಲಿಗೆ ತಳ್ಳಿ, ಅಕ್ರಮ ಸಾಗುವಳಿ ಭೂ ಕಂದಾಯ ವಸೂಲಿ ಮಾಡಿ ತಾಲೂಕಿನಾದ್ಯಂತ ಸರ್ಕಾರಿ ಭೂ ಕಬಳಿಕೆದಾರರಿಂದ ತೆರವುಗೊಳಿಸಿ, ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡ ಹಾಗೂ ಎಲ್ಲ ಜಾತಿಯ ಭೂಹೀನ ಬಡವರಿಗೆ ಹಂಚಬೇಕು” ಎಂದು ಸಿಪಿಐ(ಎಂಎಲ್) ರೆಡ್ ಸ್ಟಾರ್ ಸಂಘಟನೆ ಕಾರ್ಯಕರ್ತರು ಆಗ್ರಹಿಸಿದರು.
ಸಿಪಿಐ ರಾಜ್ಯಾಧ್ಯಕ್ಷ ಮಾತನಾಡಿ, “ಸಿಂಧನೂರು ಕಂದಾಯ ಗ್ರಾಮದ ಸರ್ಕಾರಿ ಸರ್ವೆ ನಂಬರ್ 419/ಪಿ1 32.11 ಎಕರೆ ಹಾಗೂ ಸುಲ್ತಾನಪೂರ ಸರ್ಕಾರಿ ಸರ್ವೆ ನಂಬರ್ 186, 29.31 ಎಕರೆ ಭೂಮಿಯನ್ನು ಕಳೆದ 43 ವರ್ಷಗಳಿಂದ ಕೋಟಿಗಟ್ಟಲೆ ಬೆಲೆಬಾಳುವ 61 ಎಕರೆ ಸರ್ಕಾರಿ ಭೂಮಿಯಲ್ಲಿ ಅಕ್ರಮವಾಗಿ ಸಾಗುವಳಿ ಮಾಡಿ, ಹಾಡುಹಗಲೇ ಸರ್ಕಾರಕ್ಕೆ ವಂಚನೆ ಮಾಡಿದ ಜವಳಗೇರಾ ನಾಡಗೌಡರ ಕುಟುಂಬದ ವಿರುದ್ಧ ಸರ್ಕಾರ ಕ್ರಿಮಿನಲ್ ಕೇಸ್ ದಾಖಲಿಸಬೇಕು” ಎಂದು ಒತ್ತಾಯಿಸಿದರು.
ಈ ಸುದ್ದಿ ಓದಿದ್ದೀರಾ? ದಾವಣಗೆರೆ | ಪಿಎಂಶ್ರೀ ಯೋಜನೆಯಡಿ 7 ಶಾಲೆಗಳ ಉನ್ನತೀಕರಣಕ್ಕೆ 3.71ಕೋಟಿ ಅನುದಾನ: ಸಂಸದ ಸಿದ್ದೇಶ್ವರ
“ಕಳೆದ 43 ವರ್ಷಗಳಿಂದ ಸಾಗುವಳಿ ಮಾಡಿದ ಭೂ ಕಂದಾಯವನ್ನು ಸರ್ಕಾರ ವಸೂಲು ಮಾಡಬೇಕು. ತಾಲೂಕಿನಲ್ಲಿ ಸರ್ಕಾರಿ ಭೂಮಿ ಅಕ್ರಮ ಸಾಗುವಳಿ ಮತ್ತು ಒತ್ತುವರಿ ಮಾಡಿದ ನಾಡಗೌಡರ ಕುಟುಂಬ ಸೇರಿದಂತೆ ಇತರೆ ಅಕ್ರಮ ಭೂಗಳ್ಳರ ಮೇಲೆ ಕ್ರಿಮಿನಲ್ ಕೇಸ್ ದಾಖಲಿಸಿ, ಎಲ್ಲ ಜಾತಿಯ ಭೂಹೀನ ಬಡವರಿಗೆ ವಿತರಿಸಬೇಕು. ಅಕ್ರಮ-ಸಕ್ರಮದಡಿ ಫಾರಂ 1, 57, 94ಸಿ, 94ಸಿಸಿ ಅರ್ಜಿ ಹಾಕಿದ ಅರ್ಜಿದಾರರಿಗೆ ಸರ್ಕಾರಿ ಭೂಮಿ ಮತ್ತು ವಸತಿಯನ್ನು ನೀಡಬೇಕು” ಎಂದರು.
ಸಿಪಿಐಎಂಎಲ್ ರಾಜ್ಯ ಸದಸ್ಯ ಗಂಗಾಧರ್, ಜಿಲ್ಲಾಧ್ಯಕ್ಷ ಮಲ್ಲಯ್ಯ ಕಟ್ಟಿಮನಿ, ಕರ್ನಾಟಕ ರೈತ ಸಂಘ ಜಿಲ್ಲಾ ಉಪಾಧ್ಯಕ್ಷ ಸಂತೋಷ ಹಿರೆದಿನ್ನಿ, ಸಿಪಿಐ(ಎಂಎಲ್) ತಾಲ್ಲೂಕು ಮುಖಂಡ ಹನುಮಂತಪ್ಪ ಗೊಡ್ಯಾಳ, ಹನುಮಂತಪ್ಪ ಗೋಡ್ಯಾಳ, ಅಜೀಜ್ ಜಾಗೀರದಾರ ಸೇರಿದಂತೆ ಬಹುತೇಕರು ಇದ್ದರು.




