ರಾಯಚೂರು ಜಿಲ್ಲೆಯ ಹಲವು ತಾಲೂಕಿನ ಪಟ್ಟಣ ಪ್ರದೇಶಕ್ಕಿಂತಲೂ ಹಳ್ಳಿ ಹಳ್ಳಿಯಲ್ಲೂ ಕದ್ದು ಮುಚ್ಚಿ ಅಕ್ರಮ ಮದ್ಯ ಮಾರಾಟ ಜೋರಾಗಿದೆ. ಲಿಂಗಸೂಗೂರು ತಾಲೂಕಿನ ಹಲ್ಕಾವಟಗಿ ಗ್ರಾಮದ ಸುತ್ತ ಮುತ್ತ ಸಣ್ಣ ಪುಟ್ಟ ಹಳ್ಳಿಗಳಲ್ಲಿ ರಾಜಾರೋಷವಾಗಿ ಎಗ್ಗಿಲ್ಲದೆ ನಡೆಯುತ್ತಿದೆ ಎಂದು ಸಾರ್ವಜನಿಕರು ದೂರಿದ್ದಾರೆ.
ಗ್ರಾಮೀಣ ಭಾಗದ ಕೆಲವು ಸಣ್ಣ ಪುಟ್ಟ ಅಂಗಡಿಗಳು, ಹೋಟೆಲ್‌ಗಳು, ಕೆಲವರ ಮನೆಗಳಲ್ಲೂ ಕೂಡ ಮದ್ಯ ಮಾರಾಟ ಕೇಂದ್ರವಾಗಿ ಮಾರ್ಪಟ್ಟಿದೆ. ಈ ಅಕ್ರಮ ಮದ್ಯವನ್ನು ಬಾರ್‌ಗಳಿಗಿಂತಲೂ ಮೂರುಪಟ್ಟು ಹೆಚ್ಚು ದರದಲ್ಲಿ ಮಾರಾಟ ಮಾಡುತ್ತಾರೆ ಎಂದು ಗ್ರಾಮದ ಜನರು ದೂರು ನೀಡಿದ್ದಾರೆ.
ಮದ್ಯ ಮಾರಾಟಕ್ಕೆ ಕೊನೆಯಿಲ್ಲ. ಹಲವು ಬಾರಿ ಸಂಬಂಧಪಟ್ಟ ಇಲಾಖೆಗೆ ಮನವಿ ಸಲ್ಲಿಸಿ ಗಮನಕ್ಕೆ ತಂದರು ಕೂಡ ಯಾವುದೇ ರೀತಿಯ ಪ್ರಯೋಜನವಾಗಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಹಲ್ಕಾವಟಗಿ ಗ್ರಾಮದ ನಿವಾಸಿ ಪರಶುರಾಮ ಮಾತನಾಡಿ, ಮದ್ಯ ಮಾರಾಟ ಹಗಲು ರಾತ್ರಿ ಎಗ್ಗಿಲ್ಲದೆ ರಾಜಾರೋಷವಾಗಿ ನಡೆಯುತ್ತಿದೆ. ಜನರು ಆರ್ಥಿಕ ಸಂಕಷ್ಟದಲ್ಲಿದ್ದರೂ ಗ್ರಾಮಿಣ ಭಾಗದ ಜನರು, ಯುವಕರು ಗ್ರಾಮದಲ್ಲಿಯೇ ಸುಲಭವಾಗಿ ಸಿಗುವ ಮದ್ಯ ಸೇವನೆಯಿಂದ ಚಟಕ್ಕೆ ಬಿದ್ದಿದ್ದಾರೆ ಎಂದು ಹೇಳಿದರು.
ಇದನ್ನು ಓದಿದ್ದಿರಾ? ರಾಯಚೂರು | ಹೃದಯಾಘಾತದಿಂದ ಕರ್ತವ್ಯ ನಿರತ ಪೌರ ಕಾರ್ಮಿಕ ಸಾವು
ಸಣ್ಣ ಪುಟ್ಟ ಅಂಗಡಿಗಳಲ್ಲಿ ಮಾರಾಟ ಮಾಡುವುದರಿಂದ ವಿದ್ಯಾರ್ಥಿಗಳ ಮೇಲೆ ಪ್ರಭಾವ ಬೀರುತ್ತಿದೆ. ಕುಡಿಯುವ ನೀರಿನ ಪಕ್ಕದಲ್ಲಿ ರಾಶಿಯಾಗಿ ಮದ್ಯದ ಬಾಟಲಿ ,ಡಬ್ಬಿಗಳನ್ನು ಎಸೆದಿದ್ದಾರೆ ಎಂದರು.
ಈ ಕುರಿತು ಅಬಕಾರಿ ಇಲಾಖೆ, ಪೊಲೀಸ್ ಇಲಾಖೆ ಎಚ್ಚೆತ್ತುಕೊಂಡು ಸೂಕ್ತವಾಗಿ ತನಿಖೆ ಕೈಗೊಂಡು ತಪ್ಪಿತಸ್ಥರ ಮೇಲೆ ಕಠಿಣ ಕ್ರಮ ಜರುಗಿಸಬೇಕು ಎಂದು ಹಲ್ಕಾವಟಗಿ ಗ್ರಾಮದ ಜನರು ಆಗ್ರಹಿಸಿದ್ದಾರೆ.





