ರಾಜ್ಯದಲ್ಲಿ ನಿಗಮ-ಮಂಡಳಿ ಹಾಗೂ ಪ್ರಾಧಿಕಾರಗಳ ಅಧ್ಯಕ್ಷ, ಉಪಾಧ್ಯಕ್ಷರ ನೇಮಕಾತಿ ಪ್ರಕ್ರಿಯೆಯಲ್ಲಿ ರಾಯಚೂರು ಜಿಲ್ಲೆಗೆ ತೀವ್ರ ಅನ್ಯಾಯ ನಡೆದಿದೆ ಎಂಬ ಆರೋಪ ಜಿಲ್ಲೆಯಲ್ಲಿ ಕೇಳಿ ಬರುತ್ತಿದೆ. ಕಾಂಗ್ರೆಸ್ ಪಕ್ಷದ ಒಳಬಣಗಳ ಮಧ್ಯೆ ನಡೆಯುತ್ತಿರುವ ತಾರತಮ್ಯ ಹಾಗೂ ಒಗ್ಗಟ್ಟಿನ ಕೊರತೆಯಿಂದಾಗಿ ಜಿಲ್ಲೆಗೆ ನಿಗಮ-ಮಂಡಳಿ ಹಂಚಿಕೆ ಕೈ ತಪ್ಪಿದೆ ಎಂದು ಪಕ್ಷದ ಕಾರ್ಯಕರ್ತರು ಹಾಗೂ ಜಿಲ್ಲೆಯ ಮುಖಂಡರಲ್ಲಿ ಚರ್ಚೆಗೆ ಗ್ರಾಸವಾಗಿದೆ.
ಜಿಲ್ಲೆಯ ಕಾಂಗ್ರೆಸ್ ನಾಯಕರ ನಡುವೆ ಬಣಬಳಗದ ಪೈಪೋಟಿ ಹೆಚ್ಚಾಗಿದ್ದು, ಇದರ ಪರಿಣಾಮವಾಗಿ ರಾಜ್ಯ ಮಟ್ಟದಲ್ಲಿ ಪ್ರಾಬಲ್ಯ ಸಾಧಿಸಲು ವಿಫಲರಾಗಿದ್ದಾರೆ ಎಂಬ ಟೀಕೆ ಕೇಳಿ ಬರುತ್ತಿದೆ. ಜನತೆಯ ಹಿತಾಸಕ್ತಿಯನ್ನು ಕಡೆಗಣಿಸಿ ನಾಯಕರು ಬಣ ರಾಜಕಾರಣದಲ್ಲಿ ತೊಡಗಿರುವುದರಿಂದ ಜಿಲ್ಲೆಯ ಹಕ್ಕು ಕಸಿದುಕೊಳ್ಳಲಾಗಿದೆ. ʼನಾ ಮುಂದೆ ನೀ ಮುಂದೆʼ ಎನ್ನುವ ಕಾರಣದಿಂದ ಹಲವು ಬಾರಿ ಇಂತಹ ಅವಕಾಶಗಳು ಕೈತಪ್ಪುತ್ತಿವೆʼ ಎಂದು ಕಾರ್ಯಕರ್ತರು ಮಾತಾಡಿಕೊಳ್ಳುತ್ತಿದ್ದಾರೆ.
ಪಕ್ಷ ಸಂಘಟಕರು, ಹಳೆ ನಾಯಕರಿಗೆ ನ್ಯಾಯ ಸಿಗದೆ, ನೇಮಕಾತಿಯಲ್ಲಿ ರಾಯಚೂರು ಜಿಲ್ಲೆಯ ಪ್ರತಿನಿಧಿತ್ವ ನಸುಕಿನ ಕನಸಾಗಿಬಿಟ್ಟಿದೆ. ಇದರಿಂದ ಜಿಲ್ಲೆಯಲ್ಲಿ ಅಸಮಾಧಾನ ಹೆಚ್ಚಾಗಿದ್ದು, ಪಕ್ಷದ ಹೈಕಮಾಂಡ್ ತಕ್ಷಣ ಮಧ್ಯಪ್ರವೇಶಿಸಬೇಕೆಂದು ಆಗ್ರಹಿಸಲಾಗಿದೆ.
ʼಅಭಿವೃದ್ದಿಯ ದೃಷ್ಟಿಯಿಂದ ರಾಯಚೂರು ಜಿಲ್ಲೆಯ ಬಗ್ಗೆ ಸರ್ಕಾರ ಪದೇ ಪದೇ ನಿರ್ಲಕ್ಷ್ಯ ಧೋರಣೆ ತೋರಿಸುತ್ತಿದೆ. ಈ ವರೆಗೂ ನಮ್ಮ ಜಿಲ್ಲೆಗೆ ನ್ಯಾಯ ಸಿಗದೇ ಇರುವುದು ನೋವಿನ ಸಂಗತಿ. ಕೆಲವು ನಿಗಮಗಳಲ್ಲಿ ಸಾಮಾನ್ಯ ಸದಸ್ಯರ ನೇಮಕಾತಿ ಬಿಟ್ಟರೆ ಯಾವುದೇ ಅಧ್ಯಕ್ಷ ಸ್ಥಾನ ನೀಡಿಲ್ಲ. ನೆರೆಯ ಕಲಬುರಗಿಗೆ ಎರಡು ಮೂರು ಅಧ್ಯಕ್ಷ ಸ್ಥಾನ ನೀಡಿರುವಾಗ ರಾಯಚೂರು ಜಿಲ್ಲೆಗೆ ಒಬ್ಬರನ್ನೂ ನೀಡದೇ ಇರುವುದು ಅನ್ಯಾಯʼ ಎಂದು ಹೆಸರು ಹೇಳಲು ಇಚ್ಚಿಸದ ಮುಖಂಡರು ಆಕ್ರೋಶ ವ್ಯಕ್ತಪಡಿಸಿದರು.
ʼಸರ್ವರಿಗೂ ಸಮಪಾಲು, ಸರ್ವರಿಗೂ ಸಮಬಾಳು’ ಎಂಬ ತತ್ವವನ್ನು ಸರ್ಕಾರ ಪಾಲಿಸುತ್ತಿದ್ದರೆ, ಕೆಲ ಹಿಂದುಳಿದ ಜಿಲ್ಲೆಗಳನ್ನು ಹೀಗಾಗಿ ಕಡೆಗಣಿಸುವುದು ಹೇಗೆ ನ್ಯಾಯ? ಅನ್ಯಾಯದ ವಿರುದ್ಧ ಧ್ವನಿ ಎತ್ತದೇ ಇರುವುದು, ಅನ್ಯಾಯಕ್ಕೆ ಬೆಂಬಲ ನೀಡಿದಂತಾಗಿದೆ. ಆದ್ದರಿಂದ ನಾವು ಜಿಲ್ಲೆಗೆ ಆಗುತ್ತಿರುವ ಅನ್ಯಾಯದ ವಿರುದ್ಧ ಧ್ವನಿ ಎತ್ತುತ್ತಿದ್ದೇವೆʼ ಎಂದು ಸ್ಪಷ್ಟಪಡಿಸಿದರು.
ರಾಯಚೂರಿನ ಕಾಂಗ್ರೆಸ್ ಕಾರ್ಯಕರ್ತರು ಸದಾ ಪಕ್ಷದ ಪರವಾಗಿ ನಿಸ್ವಾರ್ಥ ಸೇವೆ ಮಾಡಿದ್ದಾರೆ. ಇತ್ತೀಚಿನ ವಿಧಾನಸಭೆ ಹಾಗೂ ಲೋಕಸಭೆ ಚುನಾವಣೆಯಲ್ಲಿ ಶ್ರಮಪಟ್ಟು ಪಕ್ಷದ ಅಭ್ಯರ್ಥಿಗಳಿಗೆ ಗೆಲುವು ತಂದುಕೊಡಲು ಶ್ರಮಿಸಿದ್ದಾರೆ. ಹೀಗಿದ್ದರೂ ಅಂತಹ ಕಾರ್ಯಕರ್ತರನ್ನು ಪರಿಗಣಿಸದೇ ಇರುವುದು ಖಂಡನೀಯʼ ಎಂದು ಅಸಮಧಾನ ಹೊರಹಾಕಿದರು.
ಈ ಸುದ್ದಿ ಓದಿದ್ದೀರಾ? ರಾಯಚೂರು | ಜಿಲ್ಲೆಯಲ್ಲಿ ಮೂರು ದಿನ ಮಳೆ ಸಾಧ್ಯತೆ : ಜನಜೀವನ ಅಸ್ತವ್ಯಸ್ತ
ನಮ್ಮದೇ ಸರ್ಕಾರದಿಂದ ನಮ್ಮ ಪಕ್ಷದ ಕಾರ್ಯಕರ್ತರ ಬಗ್ಗೆ ತಾರತಮ್ಯ ನೀತಿ ಅನುಸರಿಸುವುದು ಸಮಂಜಸವೇ? ಸರ್ಕಾರವು ತಕ್ಷಣವೇ ಈ ವಿಚಾರದಲ್ಲಿ ಗಮನ ಹರಿಸಿ, ರಾಯಚೂರು ಜಿಲ್ಲೆಯ ಅಭಿವೃದ್ಧಿಗೆ ಹಾಗೂ ಪಕ್ಷದ ಕಾರ್ಯಕರ್ತರಿಗೆ ಸೂಕ್ತ ಸ್ಥಾನಮಾನ ನೀಡಬೇಕು ಎಂದು ಕಾಂಗ್ರೆಸ್ ಮುಖಂಡರು ಒತ್ತಾಯಿಸಿದರು.





