ಇ- ಕಾಮರ್ಸ್ ವಲಯಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಗಿಗ್ ಕಾರ್ಮಿಕರಿಗೆ ವಿಮಾ ಯೋಜನೆ, ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಅಭ್ಯರ್ಥಿಗಳಿಗೆ ಉದ್ಯೋಗ ನೀಡುವ, ಖಾಸಗಿ ಉದ್ಯೋಗದಾತರಿಗೆ ಮರುಪಾವತಿಯ ಆಶಾದೀಪ ಹಾಗೂ ಕರ್ನಾಟಕ ಸಿನೆಮಾ ಮತ್ತು ಸಾಂಸ್ಮೃತಿಕ ಚಟುವಟಿಕೆಯಲ್ಲಿ ತೊಡಗಿದ ಕಾರ್ಮಿಕರಿಗೆ ಸಾಮಾಜಿಕ ಭದ್ರತಾ ಸೌಲಭ್ಯ ಒದಗಿಸಲು, ಹೊಸದಾಗಿ ಸಿನೆಮಾ ಕಾರ್ಮಿಕರ ಸುಂಕ ಅಧಿನಿಯಮ ಜಾರಿಯಂತಹ ವಿನೂತನ ಯೋಜನೆಗಳನ್ನು ರಾಜ್ಯ ಕಾರ್ಮಿಕ ಇಲಾಖೆಯು ರೂಪಿಸಿ ಇಡೀ ದೇಶವೇ ಕರ್ನಾಟಕ ರಾಜ್ಯದತ್ತ ನೋಡುವಂತಾಗಿದೆ ಎಂದು ರಾಜ್ಯ ಕಾರ್ಮಿಕ ಸಚಿವ ಸಂತೋಷ ಲಾಡ್ ಅವರು ಹೇಳಿದರು.
ರಾಯಚೂರು ನಗರದ ಗಂಜ್ ಕಲ್ಯಾಣ ಮಂಟಪದಲ್ಲಿ ಅಕ್ಟೋಬರ್ 15ರಂದು ನಡೆದ ಜಿಲ್ಲೆಯ ವಿವಿಧ ವರ್ಗದ ಅಸಂಘಟಿತ ಕಾರ್ಮಿಕರಿಗೆ ಸ್ಮಾರ್ಟ್ ಕಾರ್ಡ್ ವಿತರಣೆ ಹಾಗೂ ವಿವಿಧ ಯೋಜನೆಗಳ ಕುರಿತ ಅರಿವು ಕಾರ್ಯಕ್ರಮದಲ್ಲಿ ಮಾತನಾಡಿದರು.
“ಸಣ್ಣ ಸಣ್ಣ ಕಸುಬು ಮಾಡುವ 101 ವರ್ಗದ ಕಾರ್ಮಿಕರು ದೇಶದ ದುಡಿಯುವ ವರ್ಗದಲ್ಲಿ ಶೇ.83ಕ್ಕಿಂತ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಇವರು ಅಸಂಘಟಿತ ವಲಯದಲ್ಲಿ ಇರುವುದಾಗಿ ಅಂದಾಜಿಸಿದ್ದು, ಶಾಸನಬದ್ದ ಸೌಲಭ್ಯಗಳಿಂದ ವಂಚಿತರಾಗಿರುವ ಸಂಭವ ಹೆಚ್ಚಾಗಿದೆ. ಇವರ ಜೀವನಮಟ್ಟ ಉತ್ತಮಪಡಿಸಿ ಅಸಂಘಟಿತ ಕಾರ್ಮಿಕರಿಗೆ ಸಾಮಾಜಿಕ ಭದ್ರತೆ ಒದಗಿಸಲು ನಾವು ಶ್ರಮಿಸುತ್ತಿದ್ದೇವೆ. ಸಾಮಾಜಿಕವಾಗಿ ಹಾಗೂ ಆರ್ಥಿಕವಾಗಿ ದುರ್ಬಲರಾದ ಈ ಅಸಂಘಟಿತ ವಲಯದ ಕಾರ್ಮಿಕರಿಗೆ ಸಾಮಾಜಿಕ ಭದ್ರತಾ ಸೌಲಭ್ಯಗಳನ್ನು ಒದಗಿಸುವುದು ಸರ್ಕಾರದ ಆದ್ಯ ಕರ್ತವ್ಯವೆಂದು ಭಾವಿಸಿ ಮಂಡಳಿಯು ಅಸಂಘಟಿತ ವಲಯದ ಕಾರ್ಮಿಕರಿಗಾಗಿ ಅನೇಕ ಸಾಮಾಜಿಕ ಭದ್ರತಾ ಯೋಜನೆಗಳನ್ನು ಅನುಷ್ಠಾನ ಮಾಡುತ್ತಿದೆ. ಅಂಬೇಡ್ಕರ್ ಕಾರ್ಮಿಕ ಸಹಾಯ ಹಸ್ತ ಯೋಜನೆಯಡಿ 101 ಅಸಂಘಟಿತ ವರ್ಗಗಳ ಸುಮಾರು 30ರಿಂದ 40 ಲಕ್ಷ ಕಾರ್ಮಿಕರಿಗೆ ಉಚಿತವಾಗಿ ನೋಂದಾಯಿಸಿ ಸ್ಮಾರ್ಟ್ ಕಾರ್ಡ್ ನೀಡುತ್ತಿದ್ದೇವೆ. ಈವರೆಗೆ ರಾಜ್ಯದಲ್ಲಿ 25,45,607 ಕಾರ್ಮಿಕರು ನೋಂದಣಿಯಾಗಿದ್ದು, ರಾಯಚೂರು ಜಿಲ್ಲೆಯಲ್ಲಿ 58,240 ಕಾರ್ಮಿಕರನ್ನು ನೋಂದಾಯಿಸಿ ಸ್ಮಾರ್ಟ್ ಕಾರ್ಡ್ ವಿತರಿಸಲಾಗುತ್ತಿದೆ” ಎಂದು ಸಚಿವರು ತಿಳಿಸಿದರು.
“ಇತ್ತೀಚೆಗೆ ರಾಜ್ಯದಲ್ಲಿ ಗಿಗ್ ಕಾರ್ಮಿಕರ ಸಂಖ್ಯೆ ಹೆಚ್ಚುತ್ತಿದ್ದು, ಈ ಕಾರ್ಮಿಕರಿಗೆ ಮುಂದಿನ ದಿನಗಳಲ್ಲಿ ಸಾಮಾಜಿಕ ಭದ್ರತೆ ನೀಡುತ್ತೇವೆ. ರಾಜ್ಯದಲ್ಲಿ ದಿನಪತ್ರಿಕೆ ವಿತರಣಾ ಕಾರ್ಮಿಕರು ಎಂದು 6047 ಜನರನ್ನು ನೋಂದಾಯಿಸಿದ್ದು, ಇವರಿಗೆ 2 ಲಕ್ಷ ಅಪಘಾತ ಪರಿಹಾರ ಮತ್ತು 1 ಲಕ್ಷ ವೈದ್ಯಕೀಯ ಸೌಲಭ್ಯ ನೀಡುತ್ತಿದ್ದೇವೆ” ಎಂದು ತಿಳಿಸಿದರು.
“ನಾನು ಎರಡನೇ ಬಾರಿಗೆ ಸಚಿವನಾಗಿದ್ದು, ಈ ಬಾರಿ ಕಳೆದ ಎರಡೂವರೆ ವರ್ಷದ ಅವಧಿಯಲ್ಲಿ ಕಾರ್ಮಿಕ ಸಚಿವನಾಗಿ ಉತ್ತಮ ಕಾರ್ಯ ಮಾಡಿರುವ ತೃಪ್ತಿಯಿದೆ” ಎಂದು ಹೇಳಿದರು.
ಜಾಗೃತಿ ಕಾರ್ಯಕ್ರಮಕ್ಕೆ ಸೂಚನೆ: “ಪ್ರತಿ 1 ಗಂಟೆಗೆ ಆರು ಜನರು ರಸ್ತೆ ಅಪಘಾತದಲ್ಲಿ ಸಾವಿಗೀಡಾಗುತ್ತಾರೆ ಎನ್ನುವ ಆತಂಕಕಾರಿ ಅಂಕಿಅಂಶಗಳ ವರದಿ ಇದೆ. ಈ ಬಗ್ಗೆ ಜಿಲ್ಲಾಧಿಕಾರಿಗಳು, ಜಿಲ್ಲಾ ಪಂಚಾಯತ್ ಸಿಇಓ ಮತ್ತು ಸಾರಿಗೆ ಇಲಾಖೆಯ ಅಧಿಕಾರಿಗಳು ಕಾಳಜಿ ವಹಿಸಿ ಪ್ರತಿ ಮಾಹೆಗೊಮ್ಮೆ ಜಿಲ್ಲೆಯಲ್ಲಿ ರಸ್ತೆ ಸುರಕ್ಷತೆ ಜಾಗೃತಿ ಕಾರ್ಯಕ್ರಮಗಳನ್ನು ರೂಪಿಸಬೇಕು” ಎಂದು ಸಚಿವರು ಸೂಚನೆ ನೀಡಿದರು.
ಇಎಸ್ಐ ಆಸ್ಪತ್ರೆಯ ಮುಖ್ಯ ಶಾಖೆ ಸ್ಥಾಪನೆಗೆ ಹೋರಾಟ
ರಾಯಚೂರು ಗ್ರಾಮೀಣ ಶಾಸಕ ಬಸನಗೌಡ ದದ್ದಲ್ ಅವರ ಕೋರಿಕೆಯಂತೆ ರಾಜ್ಯ ಸರ್ಕಾರದಿಂದ ಅಗತ್ಯ ಕ್ರಮವಹಿಸಿ ರಾಯಚೂರು ಜಿಲ್ಲೆಯಲ್ಲಿ ಇಎಸ್ಐ ಆಸ್ಪತ್ರೆಯ ಮುಖ್ಯ ಶಾಖೆ ಸ್ಥಾಪನೆಗೆ ಶಕ್ತಿಮೀರಿ ಪ್ರಯತ್ನಿಸುವುದಾಗಿ ಸಚಿವರು ಇದೇ ವೇಳೆ ತಿಳಿಸಿದರು.
ಇಎಸ್ಐ ಆಸ್ಪತ್ರೆಯ ಮುಖ್ಯ ಶಾಖೆ ಮಂಜೂರಾತಿಗೆ ಶಾಸಕರ ಒತ್ತಾಯ
ಕರ್ನಾಟಕ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮದ ಅಧ್ಯಕ್ಷರಾಗಿರುವ ರಾಯಚೂರು ಗ್ರಾಮಾಂತರ ಕ್ಷೇತ್ರದ ಶಾಸಕ ಬಸನಗೌಡ ದದ್ದಲ್ ಮಾತನಾಡಿ, “ರಾಯಚೂರು ಜಿಲ್ಲೆಯಲ್ಲಿ ಅಂದಾಜು 400 ಕಾರ್ಖಾನೆಗಳಿವೆ. ಇಲ್ಲಿ ಕೆಲಸ ಮಾಡುವ ಸಾವಿರಾರು ಸಂಖ್ಯೆಯ ಕಾರ್ಮಿಕರಿಗೆ ಇಎಸ್ಐ ಸೌಕರ್ಯ ಸಿಗುವ ನಿಟ್ಟಿನಲ್ಲಿ ರಾಯಚೂರು ಜಿಲ್ಲೆಗೆ ಇಎಸ್ಐ ಆಸ್ಪತ್ರೆಯ ಮುಖ್ಯ ಶಾಖೆಯನ್ನು ಮಂಜೂರು ಮಾಡಲು ಕಾರ್ಮಿಕ ಸಚಿವರು ಕ್ರಮಕೈಗೊಳ್ಳಬೇಕು” ಎಂದು ಮನವಿ ಮಾಡಿದರು.
“ಇಡೀ ದೇಶವೇ ಕರ್ನಾಟಕ ರಾಜ್ಯದತ್ತ ತಿರುಗಿ ನೋಡುವ ರೀತಿ ಕಾರ್ಮಿಕ ಸಚಿವ ಸಂತೋಷ ಲಾಡ್ ಅವರು ಕಾರ್ಮಿಕ ಇಲಾಖೆಯಲ್ಲಿ ಕ್ರಾಂತಿಕಾರಿ ಯೋಜನೆಗಳನ್ನು ಜಾರಿ ಮಾಡಿದ್ದಾರೆ. ಸಾಕಷ್ಟು ಶ್ರಮವಹಿಸುವ 101 ವರ್ಗಗಳ ಅಸಂಘಟಿತ ಕಾರ್ಮಿಕರನ್ನು ಗುರುತಿಸಿ ಅವರಿಗೆ ಸ್ಮಾರ್ಟ್ ಕಾರ್ಡ್ ವಿತರಣೆಗೆ ಕ್ರಮವಹಿಸಿರುವುದು ಶ್ಲಾಘನೀಯ ಸಂಗತಿ. ಬಡವರು, ಕಾರ್ಮಿಕರ ಬಗ್ಗೆ ಸಂತೋಷ್ ಲಾಡ್ ಅವರಿಗೆ ಇರುವ ಕಾಳಜಿ ನಿಜಕ್ಕೂ ಅಭಿನಂದನಾರ್ಹವಾದುದು” ಎಂದು ಶ್ಲಾಘಿಸಿದರು.
ಈ ಸುದ್ದಿ ಓದಿದ್ದೀರಾ? ಉಡುಪಿ | ಅಕ್ರಮವಾಗಿ ಸಿಡಿಮದ್ದು ಸಂಗ್ರಹ, ಪೊಲೀಸರಿಂದ ದಾಳಿ
ಶಾಸಕ ಹಂಪಯ್ಯ ನಾಯಕ ಮಾತನಾಡಿ, “ಕಾರ್ಮಿಕ ಸಚಿವ ಸಂತೋಷ ಲಾಡ್ ಅವರು ರಾಜ್ಯಾದ್ಯಂತ ಸುತ್ತಿ, ಕಾರ್ಮಿಕ ವರ್ಗದ ನಾಡಿಮಿಡಿತ ಅರಿತು ಕಾರ್ಮಿಕರಿಗೆ ಅನುಕೂಲವಾಗುವ ರೀತಿಯ ಅನೇಕ ಯೋಜನೆಗಳನ್ನು ಜಾರಿ ಮಾಡಿದ್ದಾರೆ” ಎಂದರು.
ಸಮಾರಂಭದಲ್ಲಿ ರಾಯಚೂರು ಮಹಾನಗರ ಪಾಲಿಕೆಯ ಅಧ್ಯಕ್ಷೆ ನರಸಮ್ಮ ನರಸಿಂಹಲು ಮಾಡಗಿರಿ, ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಅಧ್ಯಕ್ಷ ಮಲ್ಲಿಕಾರ್ಜುನ ಗೌಡ, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ರಾಜಶೇಖರ ರಾಮಸ್ವಾಮಿ, ಜಿಲ್ಲಾ ಮಟ್ಟದ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿಯ ಅಧ್ಯಕ್ಷ ಪಾಮಯ್ಯ ಮುರಾರಿ, ಕಾರ್ಮಿಕ ಆಯುಕ್ತರು ಹಾಗೂ ರಾಜ್ಯ ವಿಮಾ ಯೋಜನಾ ವೈದ್ಯಕೀಯ ಸೇವೆಗಳ ಆಯುಕ್ತ ಡಾ. ಎಚ್ ಎನ್ ಗೋಪಾಲಕೃಷ್ಣ, ಜಂಟಿ ಕಾರ್ಮಿಕ ಆಯುಕ್ತ ಎಸ್ ಪಿ ರವಿಕುಮಾರ, ಜಿಲ್ಲಾಧಿಕಾರಿ ನಿತೀಶ್ ಕೆ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಈಶ್ವರ ಕುಮಾರ್ ಕಾಂದೂ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪುಟ್ಟಮಾದಯ್ಯ ಎಂ, ರಾಯಚೂರು ಮಹಾನಗರ ಪಾಲಿಕೆಯ ಆಯುಕ್ತ ಜುಬಿನ್ ಮೊಹಪಾತ್ರ, ಜಿಲ್ಲಾ ಕಾರ್ಮಿಕ ಅಧಿಕಾರಿ ಆರತಿ ಪೂಜಾರ, ಜಿಲ್ಲಾ ಕಾರ್ಮಿಕ ಇಲಾಖೆಯ ನಿರೀಕ್ಷಕ ಅಧಿಕಾರಿ ಪ್ರಿಯಾಂಕ ಭಾಸ್ಕರ್ ಇದ್ದರು.





