ಬಿಹಾರ ಮುಖ್ಯಮಂತ್ರಿ ನಿತಿಶ್ ಕುಮಾರ್ ಅವರು ಸಾರ್ವಜನಿಕ ವೇದಿಕೆಯಲ್ಲಿ ವೈದ್ಯೆಯೊಬ್ಬರಿಗೆ ನೇಮಕಾತಿ ಪತ್ರ ವಿತರಿಸುವ ಸಂದರ್ಭದಲ್ಲಿ ಹಿಜಾಬನ್ನು ಎಳೆದು ಅವಮಾನಸಿದ ಘಟನೆಯನ್ನು ಖಂಡಿಸಿ ವಕ್ಫ್ ಬಚಾವ್ ಆಂದೋಲನ ಜಿಲ್ಲಾ ಸಮಿತಿಯ ವತಿಯಿಂದ ಪ್ರತಿಭಟನೆ ನಡೆಸಿದರು.
ನಗರದ ಟಿಪ್ಪುಸುಲ್ತಾನ್ ಉದ್ಯಾನದಲ್ಲಿ ನಿತಿಶ್ ಕುಮಾರ ಭಾವಚಿತ್ರ ಬಿತ್ತಿ ಪತ್ರಕ್ಕೆ ಚಪ್ಪಲಿಯ ಹಾರ ಹಾಕಿ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.
ಪ್ರತಿಭಟನೆ ಉದ್ದೇಶಿಸಿ ಹೋರಾಟಗಾರ್ತಿ ಫರ್ಜಾನಾ ಖಾನುಂ ನಿತೀಶ್ ಕುಮಾರ ಅವರು ಮಹಿಳೆಗೆ ಸಾರ್ವಜನಿಕ ಸಭೆಯಲ್ಲಿ ಮಹಿಳೆಯ ಅಪ್ಪಣೆ ಇಲ್ಲದೇ ಹಿಜಾಬ್ ಗೆ ಕೈ ಹಾಕಿ ಅವಮಾನಿಸಿದ್ದು ಆ ಮಹಿಳೆಗೆ ಮಾತ್ರ ಅವಮಾನವಲ್ಲ ಇಡೀ ಮಹಿಳಾ ಸಮಾಜಕ್ಕೆ ಅವಮಾನವಾಗಿದೆ. ಯಾರನ್ನಾದರೂ ಮುಟ್ಟಬೇಕಾದರೆ ಅವರ ಸ್ಪಷ್ಟ ಅಪ್ಪಣೆ ಅಗತ್ಯವಾಗಿದ್ದು, ಮಹಿಳೆಯ ಗೌರವವನ್ನು ಲೆಕ್ಕಿಸದೇ ವರ್ತಿಸಿರುವುದು ಖಂಡನೀಯ ಎಂದು ಹೇಳಿದರು.
ಮಹಿಳೆಯ ಸಾಧನೆಯನ್ನು ದೇಶಕ್ಕೆ ತೋರಿಸುವ ನೆಪದಲ್ಲಿ ಮುಖ ಕವಚ ತೆಗೆದಿದ್ದಾರೆ ಎನ್ನುವ ಸಮರ್ಥನೆ ಸ್ವೀಕಾರಾರ್ಹವಲ್ಲ. ಘಟನೆಯ ನಂತರ ವಿವಿಧ ಹೇಳಿಕೆಗಳ ಮೂಲಕ ವಿಷಯವನ್ನು ಮುಚ್ಚಿಹಾಕುವ ಪ್ರಯತ್ನ ನಡೆಯುತ್ತಿದೆ. ಉನ್ನತ ಸ್ಥಾನದಲ್ಲಿರುವ ವ್ಯಕ್ತಿಯಿಂದ ಇಂತಹ ಅವಮಾನಕಾರಿ ವರ್ತನೆ ಸಮಂಜಸವಲ್ಲ. ನೈತಿಕ ಹೊಣೆ ಹೊತ್ತು ನಿತೀಶ್ ಕುಮಾರ್ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಹಾಗೂ ಬಹಿರಂಗವಾಗಿ ಕ್ಷಮೆಯಾಚಿಸಬೇಕು ಎಂದು ಆಕ್ರೋಶ ವ್ಯಕ್ತಪಡಿಸಿದರು.
ಮತ್ತೋರ್ವ ಮುಖಂಡ ಮಹ್ಮದ್ ಶಫೀ ಮಾತನಾಡಿ, ಮುಸ್ಲಿಂ ಮಹಿಳೆ ಎನ್ನುವ ಕಾರಣಕ್ಕೆ ಕಾಂಗ್ರೆಸ್ ಪಕ್ಷದ ನಾಯಕರು ಈ ಘಟನೆಯ ವಿರುದ್ಧ ಪ್ರತಿಭಟನೆ ನಡೆಸಲು ಮುಂದಾಗುತ್ತಿಲ್ಲ ಎಂದು ಆರೋಪಿಸಿದರು. ಮತ ಕೇಳುವ ವೇಳೆ ಮಾತ್ರ ಮುಸ್ಲಿಂ ಆದರೆ ಅವಮಾನವಾದ ಸಂದರ್ಭಗಳಲ್ಲಿ ಮೌನ ವಹಿಸುತ್ತಿದ್ದಾರೆ ಎಂದು ಟೀಕಿಸಿದರು.
ಪ್ರಿಯಾಂಕ ಗಾಂಧಿ ಅಥವಾ ಸೋನಿಯಾ ಗಾಂಧಿ ಅವರ ಬಗ್ಗೆ ಏನಾದರೂ ಹೇಳಿದರೆ ಕಾಂಗ್ರೆಸ್ ಪಕ್ಷದ ಮುಖಂಡರು ತಕ್ಷಣ ಪ್ರತಿಭಟನೆ ನಡೆಸುವವರು, ಹಿಜಾಬ್‌ಗೆ ಕೈ ಹಾಕಿ ಅವಮಾನಿಸಿದ ಮಹಿಳೆಯ ವಿಷಯದಲ್ಲಿ ಯಾಕೆ ಧ್ವನಿ ಎತ್ತುತ್ತಿಲ್ಲ ಎಂದು ಪ್ರಶ್ನಿಸಿದರು.
ಈ ಸುದ್ದಿ ಓದಿದ್ದೀರಾ? ರಾಯಚೂರು | ವಿಬಿಜಿ- ರಾಮಜಿ ಮಸೂದೆ ವಿರೋಧಿಸಿ ಸಂಸದರ ಕಚೇರಿ ಮುಂದೆ ಕೂಲಿಕಾರರ ಪ್ರತಿಭಟನೆ
ಪ್ರತಿಭಟನೆಯಲ್ಲಿ ತಯ್ಯಬಾ, ತಬಸ್ಸುಮ್ , ಅಕ್ಬರ್ ನಾಗುಂಡಿ, ತೌಸೀಫ್ ಅಹ್ಮದ್, ಶೇಕ್ ಮಾಸೂಮ್, ಹಾಫೀಜ್ ಮೆಹಬೂಬ್, ಮಹಮ್ಮದ್ ಶಫಿ, ಮುರ್ಷಿದ್ ಜಾನಿಸಾಹೇಬ್ಣ ಮಹಮ್ಮದ್ ಸಾಹೇಬ್ ಮತ್ತಿತರರು ಇದ್ದರು





