ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ವಿವಿಧ ಇಲಾಖೆಗಳಲ್ಲಿರುವ ಖಾಲಿ ಹುದ್ದೆಗಳನ್ನು ಭರ್ತಿ ಮಾಡಬೇಕು, ನೇಮಕಾತಿ ಪಾರದರ್ಶಕವಾಗಿ ಪ್ರಕ್ರಿಯೆ ನಡೆಯಬೇಕು ಹಾಗೂ ಕನಿಷ್ಠ ವಯೋಮಿತಿ 5 ವರ್ಷ ಹೆಚ್ಚಿಸಬೇಕು ಸೇರಿದಂತೆ ಇನ್ನಿತರ ಬೇಡಿಕೆಗಳ ಈಡೇರಿಕೆಗಾಗಿ ಆಗ್ರಹಿಸಿ ಉದ್ಯೋಗಾಕಾಂಕ್ಷಿಗಳ ಹೋರಾಟ ಸಮಿತಿ ನೇತೃತ್ವದಲ್ಲಿ ಬೃಹತ್ ಪ್ರತಿಭಟನೆ ನಡೆಸಿದರು.
ನಗರದ ಡಾ. ಬಿ. ಆರ್. ಅಂಬೇಡ್ಕರ್ ವೃತ್ತದಿಂದ ಟಿಪ್ಪು ಸುಲ್ತಾನ್ ಉದ್ಯಾನವನದವರಗೆ ಪ್ರತಿಭಟನಾ ರ‍್ಯಾಲಿ ನಡೆಸಿ, ಕೇಂದ್ರ ಮತ್ತು ರಾಜ್ಯದ ವಿವಿಧ ಇಲಾಖೆಗಳಲ್ಲಿ ಲಕ್ಷಾಂತರ ಹುದ್ದೆಗಳು ಖಾಲಿ ಬಿದ್ದಿವೆ. ಆದರೆ ನೇಮಕಾತಿಗಳು ನಡೆದು ಹಲವು ವರ್ಷಗಳೇ ಕಳೆದಿದ್ದರೂ ನಿರ್ಲಕ್ಷ್ಯ ವಹಿಸಿದ ಸರ್ಕಾರದ ವಿರುದ್ಧ ಘೋಷಣೆ ಕೂಗಿ ಆಗ್ರಹಿಸಿದರು.
ಕಳೆದ 10 ವರ್ಷಗಳಿಂದ ಉದ್ಯೋಗಾಕಾಂಕ್ಷಿ ಯುವಕರು ತರಬೇತಿ ಪಡೆದು, ಲಕ್ಷಾಂತರ ಹಣವನ್ನು ಕಳೆದುಕೊಂಡಿದ್ದಾರೆ ಹಾಗೂ ನೇಮಕಾತಿಯ ಚಿಂತನೆಯಲ್ಲಿ ಮಾನಸಿಕ ಕುಗ್ಗಿ ಹೋಗಿದ್ದಾರೆ. ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಸರ್ಕಾರಗಳು ನೇಮಕಾತಿ ಅಧಿಸೂಚನೆ ಹೊರಡಿಸಬೇಕು ಎಂದು ಒತ್ತಾಯಿಸಿದರು.
2025-26 ನೇ ಸಾಲಿನಲ್ಲಿ ರಾಜ್ಯದ 44 ಇಲಾಖೆಗಳಲ್ಲಿ 2,84,881 ಹುದ್ದೆಗಳು ಖಾಲಿ ಕೇಂದ್ರದ ವಿವಿಧ ಇಲಾಖೆಗಳಲ್ಲಿ 9.5 ಲಕ್ಷ ಹುದ್ದೆ ಖಾಲಿ ಇವೆ. ರೈಲ್ವೇ ಇಲಾಖೆಯಲ್ಲಿ ನಾಲ್ಕು ಲಕ್ಷಕ್ಕೂ ಅಧಿಕ ಹುದ್ದೆಗಳು ಖಾಲಿ ಬಿದ್ದಿವೆ. ಇವು ಅನುಮೋದಿತ ಹುದ್ದೆಗಳು ಆದರೂ ಹೊಸದಾಗಿ ಸೃಜಿಸಬೇಕಾದ ಹುದ್ದೆಗಳು ಇನ್ನೆಷ್ಟೋ ಬಾಕಿಯಿವೆ. ಹುದ್ದೆಯ ಖಾಲಿಗಳ ಲೆಕ್ಕವಿಲ್ಲ ಈ ಖಾಲಿ ಇರುವ ಹುದ್ದೆಗಳ ನೇಮಕಕ್ಕೆ ಪ್ರಯತ್ನಗಳು ನಡೆಯುತ್ತಿಲ್ಲ. ಕುಂಟು ನೆಪಗಳನ್ನು ಹೇಳಿ ನೇಮಕಾತಿಗಳನ್ನು ಮುಂದೂಡುವ ಪರಿಪಾಠವನ್ನು ಎಲ್ಲಾ ಸರ್ಕಾರಗಳು ಅನುಸರಿಸುತ್ತಿವೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ರಾಜ್ಯದ ಪ್ರಾಥಮಿಕ ಮತ್ತು ಪ್ರೌಢಶಾಲೆಗಳಲ್ಲಿ 59,454 ಹುದ್ದೆಗಳು ಖಾಲಿಯಿವೆ. ಕಲ್ಯಾಣ ಕರ್ನಾಟಕ ಭಾಗದ 6 ಜಿಲ್ಲೆಗಳಲ್ಲಿ 21381 ಶಿಕ್ಷಕರ ಹುದ್ದೆಗಳು ಕೂಡ ಖಾಲಿಯಿವೆ. ಇನ್ನು ಚಿತ್ರಕಲಾ, ಸಂಗೀತ, ನಾಟಕ, ದೈಹಿಕ ಸೇರಿದ ವಿಶೇಷ ಶಿಕ್ಷಕರ ನೇಮಕಾತಿ ಬಗ್ಗೆ ಮಾತನಾಡುವುದೇ ಬೇಡ ಎಂಬಂತಾಗಿದೆ. ಮತ್ತೊಂದೆಡೆ ಆರೋಗ್ಯ, ಗ್ರಾಮೀಣಾಭಿವೃದ್ಧಿ, ಹಾಗೂ ಪಂಚಾಯತ್ ರಾಜ್, ಕಂದಾಯ, ಒಳಾಡಳಿತ ಸೇರಿದಂತೆ ಹಲವಾರು ಇಲಾಖೆಗಳಲ್ಲಿ ಬಹಳ ದೊಡ್ಡ ಸಂಖ್ಯೆಯ ಹುದ್ದೆಗಳು ಖಾಲಿ ಇವೆ. ಖಾಲಿ ಇರುವ ಹುದ್ದೆಗಳನ್ನು ಅತಿಥಿ ಶಿಕ್ಷಕ, ಅತಿಥಿ ಉಪನ್ಯಾಸಕ, ಗುತ್ತಿಗೆ, ಹೊರಗುತ್ತಿಗೆ ಆಧಾರದಲ್ಲಿ ತುಂಬಿಕೊಂಡು ಉದ್ಯೋಗ ಭದ್ರತೆ ನೀಡದೆ ದುಡಿಸಿಕೊಳ್ಳಲಾಗುತ್ತಿದೆ ಇಷ್ಟೆಲ್ಲಾ ಗಂಭೀರ ಸಮಸ್ಯೆಗಳನ್ನು ಯುವಜನರು ಎದುರಿಸುತ್ತಿದ್ದಾರೆ ಎಂದರು.
ಖಾಲಿ ಇರುವ ಎಲ್ಲಾ ಹುದ್ದೆಗಳನ್ನು ಈ ಕೂಡಲೇ ಭರ್ತಿ ಮಾಡಬೇಕು, ಎಲ್ಲಾ ಹುದ್ದೆಗಳ ನೇಮಕಾತಿಯಲ್ಲಿ ಐದು ವರ್ಷಗಳ ಸಡಿಲಿಕೆ ನೀಡಬೇಕು, ನೇಮಕಾತಿಯಲ್ಲಿ ಭ್ರಷ್ಟಾಚಾರ ತಡೆಗಟ್ಟಿ, ಪಾರದರ್ಶಕತೆಯನ್ನು ಕಾಪಾಡಬೇಕು, ಚಿತ್ರಕಲಾ, ಸಂಗೀತ, ದೈಹಿಕ ಶಿಕ್ಷಕರು ಸೇರಿದಂತೆ ಎಲ್ಲಾ ಶಿಕ್ಷಕ ಹುದ್ದೆಗಳನ್ನು ಭರ್ತಿ ಮಾಡಬೇಕು ಎಂದು ಆಗ್ರಹಿಸಿದರು.
ಈ ಸುದ್ದಿ ಓದಿದ್ದೀರಾ? ರಾಯಚೂರು | ಹೊಲದಲ್ಲಿ ಹತ್ತಿ ಕಳವು ; ರೈತರಿಗೆ ಆತಂಕ
ಈ ಸಂದರ್ಭದಲ್ಲಿ ಉದ್ಯೋಗಾಕಾಂಕ್ಷಿಗಳ ಹೋರಾಟ ಸಮಿತಿ ರಾಜ್ಯ ಕಾರ್ಯದರ್ಶಿ ಚನ್ನಬಸವ ಜಾನೇಕಲ್, ಜಿಲ್ಲಾಧ್ಯಕ್ಷ ಡಾ.ಹನುಮೇಶ ಕುರ್ಡಿ, ಜಿಲ್ಲಾ ಘಟಕ ಜಂಟಿ ಕಾರ್ಯದರ್ಶಿ ಯಲ್ಲಪ್ಪ ದೊರೆ, ವಿನೋದ ಕುಮಾರ, ಕಾರ್ಯದರ್ಶಿ ರಾಮಚಂದ್ರಪ್ಪ, ಸಂತೋಷ ಸಾಗರ್ ಮನ್ಸಲಾಪುರ, ಸುದೀಪ್ ಮನ್ಸಲಾಪೂರ ಸೇರಿದಂತೆ ಉದ್ಯೋಗಾಕ್ಷಿಗಳು, ವಿವಿಧ ಕಾಲೇಜುಗಳು ವಿದ್ಯಾರ್ಥಿಗಳು ಭಾಗವಹಿಸಿದ್ದರು.





