ಮುದಗಲ್ ಪಟ್ಟಣವನ್ನು ತಾಲೂಕು ಕೇಂದ್ರವಾಗಿ ಘೋಷಿಸುವಂತೆ ಹಾಗೂ ಶಾಶ್ವತ ಕುಡಿಯುವ ನೀರಿನ ಯೋಜನೆಯನ್ನು ಜಾರಿಗೆ ತರಬೇಕೆಂದು ಆಗ್ರಹಿಸಿ ಪ್ರಗತಿಪರ ಸಂಘಟನೆಗಳು ಬುಧವಾರ ಕರೆ ನೀಡಿದ್ದ ಬಂದ್‌ಗೆ ವ್ಯಾಪಕ ಬೆಂಬಲ ವ್ಯಕ್ತವಾಗಿ, ಸಂಪೂರ್ಣ ಯಶಸ್ವಿಯಾಯಿತು.
ಪ್ರತಿಭಟನಾಕಾರರು ಪಟ್ಟಣದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಸಿ ಸರ್ಕಾರದ ವಿರುದ್ಧ ಧಿಕ್ಕಾರದ ಘೋಷಣೆಗಳನ್ನು ಕೂಗಿದರು. ಬಳಿಕ ಕೆಲಕಾಲ ರಸ್ತೆ ತಡೆ ನಡೆಸಿ ತಮ್ಮ ಆಕ್ರೋಶವನ್ನು ವ್ಯಕ್ತಪಡಿಸಿದರು.
ಪ್ರತಿಭಟನೆ ಉದ್ದೇಶಿಸಿ ಮಾತನಾಡಿದ ಹೋರಾಟ ಸಮಿತಿಯ ಸದಸ್ಯ ಅಶೋಕಗೌಡ ಪಾಟೀಲ್ ಮುದಗಲ್ ಪಟ್ಟಣವು ಸುತ್ತಮುತ್ತಲಿನ 60 ಗ್ರಾಮಗಳು ಹಾಗೂ 18 ತಾಂಡಾಗಳಿಗೆ ಕೇಂದ್ರ ಬಿಂದುವಾಗಿದ್ದು, ಎರಡು ರಾಜ್ಯ ಹೆದ್ದಾರಿಗಳನ್ನು ಹೊಂದಿರುವ ಪ್ರಮುಖ ಪಟ್ಟಣವಾಗಿದೆ ಎಂದು ಹೇಳಿದರು. ತಾಲೂಕು ಕೇಂದ್ರವಾಗಲು ಅಗತ್ಯವಿರುವ ಎಲ್ಲಾ ಮೂಲಭೂತ ಅರ್ಹತೆಗಳನ್ನು ಈ ಪಟ್ಟಣ ಹೊಂದಿದೆ ಎಂದು ಅವರು ವಿವರಿಸಿದರು.
ಪುರಸಭೆ, ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ, ವಿದ್ಯುತ್ ಪ್ರಸಾರಣಾ ಕೇಂದ್ರ, ಪದವಿ ಕಾಲೇಜು, ಬಸ್ ನಿಲ್ದಾಣ, ಸಮುದಾಯ ಆರೋಗ್ಯ ಕೇಂದ್ರ, ಪೊಲೀಸ್ ಠಾಣೆ, ನಾಡ ತಹಶೀಲ್ದಾರ್ ಕಚೇರಿ ಸೇರಿದಂತೆ ರಾಷ್ಟ್ರೀಕೃತ ಬ್ಯಾಂಕ್‌ಗಳಂತಹ ಸೌಕರ್ಯಗಳು ಈಗಾಗಲೇ ಇಲ್ಲಿವೆ ಎಂದು ತಿಳಿಸಿದರು.

ಪಟ್ಟಣ ಪ್ರಮುಖ ವಾಣಿಜ್ಯ ಕೇಂದ್ರವಾಗಿದ್ದು, ಈ ಹಿಂದೆ ಹುಂಡೆಕಾರ್, ಗದ್ದಿಗೌಡರ್, ವಾಸುದೇವ ಸಮಿತಿಗಳು ಪಟ್ಟಣ ತಾಲೂಕು ಕೇಂದ್ರವಾಗಲು ಯೋಗ್ಯವಾಗಿದ್ದು,ತಾಲೂಕು ಕೇಂದ್ರವನ್ನಾಗಿ ಮಾಡಬೇಕು ಎಂದು ಮಾಜಿ ಶಾಸಕ ದಿ.ಎಂ.ಗಂಗಣ್ಣನವರ ನೇತೃತ್ವದಲ್ಲಿ ಸಾಕಷ್ಟು ಬಾರಿ ಸರಕಾರಕ್ಕೆ ಮನವಿ ಸಲ್ಲಿಸಿದರು ಪ್ರಯೋಜನವಾಗಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ಮನವಿ ಸ್ವೀಕರಿಸಿ ಶಾಸಕ ಮಾನಪ್ಪ ವಜ್ಜಲ್ ಮಾತನಾಡಿ ಕಾಂಗ್ರೆಸ್ ಸರಕಾರ ಮುದಗಲ್ ಪಟ್ಟಣವನ್ನು ಹೊಸ ತಾಲೂಕು ಕೇಂದ್ರವೆಂದು ಘೋಷಣೆ ಮಾಡಬೇಕು ಹಾಗೂ ಪಟ್ಟಣಕ್ಕೆ ಶಾಶ್ವತ ಕುಡಿಯುವ ನೀರಿನ ಯೋಜನೆ ಕಾಮಗಾರಿಗೆ ಅನುಧಾನ ಮೀಸಲಿಡಬೇಕು ಎಂದು ಈಗಾಗಲೇ ಅಧಿವೇಶನದಲ್ಲಿ ನಾನಾ ಬಾರಿ ಪ್ರಸ್ತಾಪಿಸಿದರೂ ಸರಕಾರ ಕಿಂಚಿತ್ತೂ ಗಮನಹರಿಸಿಲ್ಲ.ಬಜೆಟ್ ಅಧಿವೇಶನಕ್ಕೂ ಮುಂಚೆ ಹೋರಾಟಗಾರ ಜತೆ ನಾನು ಕೂಡಾ ಭಾಗವಹಿಸಿ ಮುಖ್ಯಮಂತ್ರಿಗಳಲ್ಲಿ ಹಾಗೂ ಕಂದಾಯ ಸಚಿವರಲ್ಲಿ ಮನವಿಗೂ ಸಿದ್ದ ಎಂದರು.
ಈ ಸುದ್ದಿ ಓದಿದ್ದೀರಾ? ಲಿಂಗಸುಗೂರು | ಕಾರು ಪಲ್ಟಿಯಾಗಿ ಹೋಟೆಲ್‌ಗೆ ನುಗ್ಗಿ ಅಪಘಾತ; ಪ್ರಾಣಾಪಾಯದಿಂದ ಪಾರು
ಈ ಸಂದರ್ಭದಲ್ಲಿ ತಹಸೀಲ್ದಾರ್ ಪುರುರಾಜಸಿಂಗ್ ಸೊಲಂಕಿ,
ಕೃಷ್ಣಾ ಚಲುವಾದಿ, ಮೈಬೂಬಸಾಬ, ಕಡ್ಡಿಪುಡಿ, ಶರಣಪ್ಪ ಕಟ್ಟಿಮನಿ, ಮೌನೇಶ ಶಿವನಗುತ್ತಿ, ರಹೀಮ್ ಷಾ, ಬಸವರಾಜ ಬಂಕ ದಮನಿ ಸೇರಿ ಇತರರು ಇದ್ದರು.





