ರಾಯಚೂರು ನಗರದ ಜನತೆಗೆ ಒಂದೇ ಸೂರಿನಡಿ ಸೌಲಭ್ಯಗಳ ಅವಕಾಶ ಕಲ್ಪಿಸಲು ಸಕಾಲ ಸೇವೆ (ಸಿಂಗಲ್ ವಿಂಡೋ ಸಿಸ್ಟಮ್) ಕೌಂಟರ್‌ಗಳನ್ನು ಪ್ರಾರಂಭಿಸಲಾಗಿದೆ.
ಇಲ್ಲಿ ಸರಳವಾಗಿ ಇ-ಖಾತಾ ಮುಟೇಷನ್, ತಿದ್ದುಪಡಿ, ತೆರಿಗೆ ಪಾವತಿ, ಕುಂದುಕೊರತೆಗಳ ಮಾಹಿತಿ ಸೇರಿದಂತೆ ವಿವಿಧ ಸೌಲಭ್ಯಕ್ಕಾಗಿ ಸಾರ್ವಜನಿಕರು ಸಂಪರ್ಕಿಸಬಹುದು. ನಗರಸಭೆಯು ಈ ಸೇವೆ ಆರಂಭಿಸಿದ್ದು, ನಗರ ನಿವಾಸಿಗಳು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ಸಣ್ಣ ನೀರಾವರಿ ಹಾಗೂ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ ಸಚಿವ ಎನ್. ಎಸ್. ಬೋಸರಾಜು ಹೇಳಿದರು.
ಸಾರ್ವಜನಿಕ ಸೇವೆಗಳ ಕೌಂಟರ್ ಉದ್ಘಾಟಿಸಿ ಮಾತನಾಡಿ, ನಗರದ ಜನತೆಗೆ ಸಾರ್ವಜನಿಕ ಸೇವೆ ಸುಗಮವಾಗಿ ದೊರೆಯಲು ಹಾಗೂ ಇ-ಖಾತಾ, ಮುಟೇಷನ್‌ಗಾಗಿ ತೊಂದರೆ ಪಡೆಯದೆ ಕೌಂಟರ್ ವ್ಯವಸ್ಥೆ ಮಾಡಲಾಗಿದೆ. ಎಲ್ಲಾ ವಾರ್ಡ್‌ಗಳಲ್ಲಿ ಪ್ರತ್ಯೇಕ ಕೌಂಟರ್‌ಗಳಿದ್ದು, ಜೊತೆಗೆ ಹೆಲ್ಪ್ ಲೈನ್ ಕೌಂಟರ್ ಸಹ ಮಾಡಿದೆ. ಯಾವುದೇ ಸಮಸ್ಯೆಗಳಿದ್ದಲ್ಲಿ ಇಲ್ಲಿ ತಮ್ಮ ಸಮಸ್ಯೆ ತಿಳಿಸಬಹುದು ಎಂದರು.
ನಗರಸಭೆ ಅಧಿಕಾರಿಗಳು ಸಹ ಸಾರ್ವಜನಿಕರಿಗೆ ಸ್ಪಂದಿಸಿ ಕೆಲಸ ಮಾಡಬೇಕು. ಅಧಿಕಾರಿಗಳು ಉತ್ತಮ ಕೆಲಸ ಮಾಡಿದಾಗ ಮಾತ್ರ ಜನರಿಗೆ ಅನುಕೂಲವಾಗುತ್ತದೆ. ನಗರದಲ್ಲಿ ಅನೇಕ ಸಮಸ್ಯೆಗಳಿದ್ದು, ನಗರಸಭೆಯ ಮೇಲೆ ಆಧಾರವಾಗಿದ್ದಾರೆ. ಎಲ್ಲಾ ವಾರ್ಡ್ ಸದಸ್ಯರು ತಮ್ಮ ತಮ್ಮ ವಾರ್ಡ್‌ಗಲ್ಲಿ ಕುಡಿಯುವ ನೀರಿನ ಸಮಸ್ಯೆ ಕುರಿತು ಆಲಿಸಲಿದ್ದು, ಕುಡಿಯುವ ನೀರಿನ ತೊಂದರೆ ಇದ್ದಲ್ಲಿ ಸರಿಪಡಿಸುವ ಕೆಲಸ ಮಾಡಲಿದ್ದಾರೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಪೌರಾಯುಕ್ತ ಗುರುಸಿದ್ದಯ್ಯ ಹಿರೇಮಠ, ಹಿರಿಯ ನಗರ ಸಭೆ ಸದಸ್ಯ ಜಯಣ್ಣ, ಶಾಂತಪ್ಪ, ಜಿಂದಪ್ಪ, ಬಸವರಾಜರಡ್ಡಿ, ರಮೇಶ, ಭೀಮರಾಯ್, ಶಾಂತಪ್ಪ, ನರಸಿಂಹಲು ಮಾಡಗಿರಿ, ಆಂಜನೇಯ್ಯ ಕಡಗೋಲ್, ದರೂರ್ ಬಸವರಾಜ್ ಸೇರಿದಂತೆ ಅನೇಕರು ಇದ್ದರು.





