ರಾಯಚೂರು ನಗರದಲ್ಲಿ ಬೀದಿ ನಾಯಿಗಳ ಉಪಟಳ ಹೆಚ್ಚಾದ ಹಿನ್ನೆಲೆ 200ಕ್ಕೂ ಹೆಚ್ಚು ಬೀದಿ ನಾಯಿಗಳನ್ನು ಬಂಧಿಸಿ ಮನ್ಸಲಾಪೂರ ಒಳಚರಂಡಿ ಸಂಸ್ಕರಣಾ ಘಟಕದ ಬಳಿ ಬೃಹತ್ ಪಂಜರದಲ್ಲಿ ಇಡಲಾಗಿದ್ದು, ಆದರೆ, ನಾಯಿಗಳಿಗೆ ಸೂಕ್ತ ಆಹಾರ ಮತ್ತು ನೀರು ಪೂರೈಕೆ ಮಾಡದಿರುವ ಘಟನೆ ಇದೀಗ ರಾಷ್ಟ್ರಮಟ್ಟದಲ್ಲಿ ಚರ್ಚೆಗೆ ಗ್ರಾಸವಾಗಿದೆ.
ಈ ಕುರಿತು ಮಾಜಿ ಕೇಂದ್ರ ಸಚಿವೆ, ಪ್ರಾಣಿ ಹಕ್ಕುಗಳ ಕಾರ್ಯಕರ್ತೆ ಹಾಗೂ ಪೀಪಲ್ ಫಾರ್ ಅನಿಮಲ್ಸ್ (ಪಿಎಫ್‌ಎ) ಸಂಸ್ಥಾಪಕ ಅಧ್ಯಕ್ಷೆ ಮನೇಕಾ ಸಂಜಯ್ ಗಾಂಧಿ ಅವರು ಬೀದಿ ನಾಯಿಗಳ ನಿರ್ಲಕ್ಷ್ಯ ಧೋರಣೆ ಬಗ್ಗೆ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಮನೇಕಾ ಗಾಂಧಿ ಅವರು ರಾಯಚೂರಿನ ಮಾಜಿ ಸಂಸದ ರಾಜಾ ಅಮರೇಶ್ವರ ನಾಯಕರಿಗೆ ಸಂದೇಶ ಕಳುಹಿಸಿ, ಬೀದಿ ನಾಯಿಗಳಿಗೆ ಆಗುತ್ತಿರುವ ಹಿಂಸಾತ್ಮಕ ವರ್ತನೆ ಕುರಿತು ಮಾಹಿತಿ ನೀಡಿ, ತಕ್ಷಣ ಕ್ರಮ ಕೈಗೊಂಡು ಪ್ರಾಣಿಗಳಿಗೆ ಸೂಕ್ತ ರಕ್ಷಣಾ ವ್ಯವಸ್ಥೆ ಕಲ್ಪಿಸುವಂತೆ ಸಂಬಂಧಪಟ್ಟ ಅಧಿಕಾರಿಗಳ ಗಮನಕ್ಕೆ ತರಲು ವಿನಂತಿಸಿದ್ದಾರೆ ಎಂದು ರಾಜಾ ಅಮರೇಶ್ವರ ನಾಯಕರು ತಿಳಿಸಿದ್ದಾರೆ.
ಮನೇಕಾ ಗಾಂಧಿಯವರು ಈ ಮೊದಲು ಡಿಎಂ ಅವರನ್ನು ದೂರವಾಣಿಯಲ್ಲಿ ಸಂಪರ್ಕಿಸಲು ಪ್ರಯತ್ನಿಸಿದರೂ ಅವರು ಪ್ರತಿಕ್ರಿಯೆಗೆ ಸಿಗದಿರುವ ಹಿನ್ನೆಲೆ ತಮಗೆ ಸಂದೇಶ ಕಳುಹಿಸಿರುವುದಾಗಿ ಅಮರೇಶ್ವರ ನಾಯಕ ತಿಳಿಸಿದ್ದಾರೆ.
ತಕ್ಷಣ ಕ್ರಮಕ್ಕೆ ಮುಂದಾದ ಮಾಜಿ ಸಂಸದ ರಾಜಾ ಅಮರೇಶ್ವರ ನಾಯಕರು, ಮಹಾನಗರ ಪಾಲಿಕೆ ಆಯುಕ್ತ ಜುಬಿನ್ ಮೊಹಪಾತ್ರ ಅವರನ್ನು ದೂರವಾಣಿಯಲ್ಲಿ ಸಂಪರ್ಕಿಸಿ ವಿಷಯವನ್ನು ತಿಳಿಸಿ ಸೂಕ್ತ ಕ್ರಮ ಕೈಗೊಳ್ಳುವಂತೆ ಸೂಚಿಸಿದ್ದಾರೆ.
ಈ ಸುದ್ದಿ ಓದಿದ್ದೀರಾ? ರಾಯಚೂರು | ಶಾಸಕಿ ಕಾರು ಅಪಘಾತ ; ಪ್ರಾಣಾಪಾಯದಿಂದ ಪಾರು
ಬಳಿಕ ಆಯುಕ್ತ ಜುಬಿನ್ ಮೊಹಪಾತ್ರ ಅವರು ಬೀದಿ ನಾಯಿಗಳನ್ನು ಬಂಧಿಸಿ ಇಡಲಾದ ಸ್ಥಳಕ್ಕೆ ಭೇಟಿ ನೀಡಿ ಪರಿಸ್ಥಿತಿ ಸರಿಪಡಿಸುವ ಭರವಸೆ ನೀಡಿದ್ದಾರೆ ಎಂದು ಮಾಜಿ ಸಂಸದ ಅಮರೇಶ್ವರ ಅವರು ಭಾನುವಾರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.





