ಸರಕಾರಿ ಶಾಲೆಗಳಿಗೆ ಮಧ್ಯಾಹ್ನದ ಬಿಸಿಯೂಟ ಯೋಜನೆಯಡಿ ತರಕಾರಿ, ಬಾಳೆ ಹಣ್ಣು ಹಾಗೂ ಮೊಟ್ಟೆಗಳ ಸರಬರಾಜನ್ನು ಸ್ವ-ಸಹಾಯ ಗುಂಪುಗಳಿಗೆ ನೀಡಲು ಜಿಲ್ಲಾ ಪಂಚಾಯತ್ ಮುಂದಾಗಿರುವ ನಿರ್ಧಾರವನ್ನು ಖಂಡಿಸಿ ಕರ್ನಾಟಕ ರಾಜ್ಯ ಅಕ್ಷರ ದಾಸೋಹ ಬಿಸಿಯೂಟ ನೌಕರರ ಜಿಲ್ಲಾ ಸಮಿತಿಯಿಂದ ನಗರದ ಟಿಪ್ಪಸುಲ್ತಾನ ಉದ್ಯಾನದಲ್ಲಿ ಶುಕ್ರವಾರ ಪ್ರತಿಭಟನೆ ನಡೆಸಿದರು.
ಕಳೆದ 24 ವರ್ಷಗಳಿಂದ ಅತಿ ಕಡಿಮೆ ಸಂಬಳಕ್ಕೆ ಹೆಚ್ಚು ಹೊಣೆಗಾರಿಕೆಯಿಂದ ಕೆಲಸ ಮಾಡುತ್ತಿರುವ ಬಿಸಿಯೂಟ ನೌಕರರ ಶ್ರಮವನ್ನು ಕಡೆಗಣಿಸಿ, ಯಾವುದೇ ಚರ್ಚೆ ಇಲ್ಲದೇ ಸ್ವ-ಸಹಾಯ ಗುಂಪುಗಳಿಗೆ ಸರಬರಾಜು ನೀಡಿರುವುದು ನೌಕರ ವಿರೋಧಿ ನಡೆಯಾಗಿದೆ. ಈವರೆಗೆ ಶಾಲಾ ಮುಖ್ಯೋಪಾಧ್ಯಾಯರ ಸಹಕಾರದೊಂದಿಗೆ ಬಿಸಿಯೂಟ ನೌಕರರೇ ತರಕಾರಿ, ಹಣ್ಣು ಹಾಗೂ ಮೊಟ್ಟೆಗೆ ಳನ್ನು ಖರೀದಿಸಿ ಮಕ್ಕಳಿಗೆ ಪೌಷ್ಟಿಕ ಆಹಾರ ಒದಗಿಸುತ್ತಿದ್ದರು. ಈ ವ್ಯವಸ್ಥೆ ಸರಾಗವಾಗಿ ನಡೆಯುತ್ತಿರುವಾಗ ಹೊಸದಾಗಿ ಸ್ವ-ಸಹಾಯ ಗುಂಪುಗಳನ್ನು ತರಲಾಗಿರುವುದು ಯೋಜನೆಯನ್ನು ಖಾಸಗೀಕರಣ ಮಾಡುವ ಹುನ್ನಾರದ ಭಾಗವಾಗಿದೆ ಎಂದು ಆರೋಪಿಸಿದರು.
ಪ್ರಧಾನ ಕಾರ್ಯದರ್ಶಿ ಮರಿಯಮ್ಮ ಮಾತನಾಡಿ, ಮಹಿಳಾ ಸಬಲೀಕರಣದ ಹೆಸರಿನಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ ಎನ್ನಲಾಗುತ್ತಿದೆ. ಆದರೆ ಬಿಸಿಯೂಟ ನೌಕರರ ಬಹುಪಾಲು ಮಹಿಳೆಯರೇ ಎಂಬುದನ್ನು ಅಧಿಕಾರಿಗಳು ಮರೆತಿದ್ದಾರೆ. ಇದರಿಂದ ನಮ್ಮ ಉದ್ಯೋಗಕ್ಕೆ ಧಕ್ಕೆಯಾಗುವ ಆತಂಕ ಎದುರಾಗಿದೆ ಎಂದರು. ಸ್ವ-ಸಹಾಯ ಗುಂಪುಗಳಿಗೆ ತರಕಾರಿ, ಬಾಳೆಹಣ್ಣು ಮತ್ತು ಮೊಟ್ಟೆಗಳ ಸರಬರಾಜು ನೀಡುವ ನಿರ್ಧಾರವನ್ನು ಕೂಡಲೇ ಹಿಂಪಡೆಯಬೇಕು ಎಂದು ಒತ್ತಾಯಿಸಿದರು.
ಈ ಸುದ್ದಿ ಓದಿದ್ದೀರಾ? ಸಿಂಧನೂರು | ಶಾಲೆಯಲ್ಲಿ ವಿದ್ಯುತ್ ತಂತಿ ತಗುಲಿ ವಿದ್ಯಾರ್ಥಿನಿ ಸಾವು
ಈ ವೇಳೆ ಸಮಿತಿಯ ರಾಜ್ಯ ಪ್ರಧಾನ ಕಾರ್ಯದರ್ಶಿ ಮಾಲಿನಿ ಮೆಸ್ತಾ ಪ್ರಧಾನ ಕಾರ್ಯದರ್ಶಿ ಮರಿಯಮ್ಮ ಜಿಲ್ಲಾ ಅಧ್ಯಕ್ಷೆ ರೆಣುಕಮ್ಮ ಸಿಐಟಿಯು ಜಿಲ್ಲಾ ಅಧ್ಯಕ್ಷ ಹೆಚ್. ಪದ್ಮ, ಪ್ರಧಾನ ಕಾರ್ಯದರ್ಶಿ ಡಿ.ಎಸ್. ಶರಣಬಸವ, ಖಜಾಂಚಿ ಮಹಮ್ಮದ್ ಹನೀಫ್ ಸೇರಿದಂತೆ ಅನೇಕ ಬಿಸಿಯೂಟ ನೌಕರರು ಪಾಲ್ಗೊಂಡಿದ್ದರು.





