ನದಾಫ್–ಪಿಂಜಾರ ಸಮುದಾಯದ ಸಮಸ್ಯೆಗಳು, ಬೇಡಿಕೆಗಳು ಹಾಗೂ ಅಭಿವೃದ್ಧಿಯ ಅಗತ್ಯತೆ ಕುರಿತು ಸರ್ಕಾರದ ಗಮನ ಸೆಳೆಯುವ ಉದ್ದೇಶದಿಂದ ಡಿ.21 (ರವಿವಾರ) ರಂದು ಲಿಂಗಸೂಗೂರು ತಾಲ್ಲೂಕು ಹಟ್ಟಿ ಚಿನ್ನ ಗಣಿಯ ಸ್ವರ್ಣ ಭವನದಲ್ಲಿ ವಿಶೇಷ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದು ನದಾಫ್–ಪಿಂಜಾರ ಸಂಘದ ಜಿಲ್ಲಾಧ್ಯಕ್ಷ ಮೌಲಾಸಾಬ್ ಗಣದಿನ್ನಿ ಹೇಳಿದ್ದಾರೆ.
ಸೋಮವಾರ ಲಿಂಗಸೂಗೂರು ತಾಲ್ಲೂಕು ಹಟ್ಟಿ ಚಿನ್ನದ ಗಣಿ ಪಟ್ಟಣದ ಪತ್ರಿಕಾ ಭವನದಲ್ಲಿ ಮಾತನಾಡಿ, ಕರ್ನಾಟಕ ರಾಜ್ಯದಲ್ಲಿ ಸರಿಸುಮಾರು 25 ರಿಂದ 30 ಲಕ್ಷದವರೆಗೆ ನದಾಫ್–ಪಿಂಜಾರ ಸಮಾಜದ ಜನಸಂಖ್ಯೆ ಇದ್ದರೂ, ಪ್ರಸ್ತುತ ವಿಧಾನಸಭೆಯಲ್ಲಿ ಸಮಾಜದಿಂದ ಒಬ್ಬರೂ ಶಾಸಕರು ಇಲ್ಲದಿರುವುದು ವಿಷಾದನೀಯ. ಇತ್ತ ರಾಜ್ಯದಲ್ಲಿ ಕೇವಲ 5 ಲಕ್ಷ ಜನಸಂಖ್ಯೆ ಇರುವ ಕೆಲ ಸಮಾಜಗಳಿಗೆ ಹಲವಾರು ಶಾಸಕರು ಇರುವ ಉದಾಹರಣೆಗಳಿದ್ದು, ಇದರ ಪರಿಣಾಮವಾಗಿ ನದಾಫ್–ಪಿಂಜಾರ ಸಮಾಜವು ಆರ್ಥಿಕ, ಸಾಮಾಜಿಕ, ಶೈಕ್ಷಣಿಕ ಹಾಗೂ ರಾಜಕೀಯವಾಗಿ ಬಹಳ ಹಿಂದೆ ಉಳಿದಿದೆ ಎಂದು ಹೇಳಿದರು.
ಇಂತಹ ಸಂದರ್ಭದಲ್ಲಿ ನದಾಫ್–ಪಿಂಜಾರ ಸಮುದಾಯದ ಅಭಿವೃದ್ಧಿ ಕುರಿತು ವಿಧಾನಸಭೆಯಲ್ಲಿ ಧ್ವನಿ ಎತ್ತಿ ಸರ್ಕಾರದ ಗಮನ ಸೆಳೆದ ಶಾಸಕ ಲಕ್ಷ್ಮಣ ಸವದಿ ಅವರ ಕಾರ್ಯ ಶ್ಲಾಘನೀಯವಾಗಿದೆ. ರಾಯಚೂರು ಜಿಲ್ಲೆಯಲ್ಲಿ ಮಾತ್ರವೇ ಸುಮಾರು 2 ಲಕ್ಷಕ್ಕೂ ಹೆಚ್ಚು ನದಾಫ್–ಪಿಂಜಾರ ಸಮಾಜದ ಜನಸಂಖ್ಯೆಯಾಗಿದೆ. ಈ ನಿಟ್ಟಿನಲ್ಲಿ ವಿಶೇಷ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದರು.
ಜಿಲ್ಲೆಯ ಉಸ್ತುವಾರಿ ಸಚಿವರು, ಸಂಸದರು, ಲಿಂಗಸುಗೂರು ಶಾಸಕರು, ಮಾಜಿ ಶಾಸಕರು, ವಿಧಾನ ಪರಿಷತ್ ಸದಸ್ಯರು ಆಗಮಿಸುತ್ತಿದ್ದಾರೆ. ಜಿಲ್ಲೆಯ ನದಾಫ್–ಪಿಂಜಾರ ಸಮಾಜದ ಬಂಧುಗಳು ಸಹಸ್ರಾರು ಸಂಖ್ಯೆಯಲ್ಲಿ ಭಾಗವಹಿಸಬೇಕು ಎಂದು ಹೇಳಿದರು.
ಈ ಸುದ್ದಿ ಓದಿದ್ದೀರಾ? ರಾಯಚೂರು | ಮನರೇಗಾ ಹೆಸರು ಬದಲಾವಣೆ ವಿರೋಧಿಸಿ ಕಾಂಗ್ರೆಸ್ ಪ್ರತಿಭಟನೆ
ಪತ್ರಿಕಾಗೋಷ್ಠಿಯಲ್ಲಿ ತಾಲೂಕು ಪಿಂಜಾರ ನದಾಫ್ ಸಂಘಟನೆಯ ಉಪಾಧ್ಯಕ್ಷ ಅಮೀನ್, ಹಟ್ಟಿ ಘಟಕ ಅಧ್ಯಕ್ಷ ಮೌಲಾಲೀ, ಉಪಾಧ್ಯಕ್ಷ ಖಾಜಾ ಬಂಗಾರಿ, ಪ್ರಧಾನ ಕಾರ್ಯದರ್ಶಿ ಸೈಫುಲ್, ಕಾರ್ಯದರ್ಶಿ ಮುಕ್ತಾರ್, ರಾಜ್ ಮೊಹಮ್ಮದ್ ಇನ್ನಿತರರು ಹಾಜರಿದ್ದರು.





