ರೈತರ ಉತ್ಪನ್ನಗಳಿಗೆ ಕನಿಷ್ಟ ಬೆಂಬಲ ಬೆಲೆಯನ್ನು ಖಾತ್ರಿಪಡಿಸುವುದು ಹಾಗೂ ಡಾ.ಸ್ವಾಮಿನಾಥನ್ ವರದಿ ಜಾರಿಗೆ ಆಗ್ರಹಿಸಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ರಾಜ್ಯಾಧ್ಯಕ್ಷ ಚುನ್ನಪ್ಪ ಪುಜೇರಿ ನೇತೃತ್ವದಲ್ಲಿ ಡಿ.11 ರಂದು ಬೆಳಗಾವಿ ಸುವರ್ಣ ಸೌಧ ಮುತ್ತಿಗೆ ಪ್ರತಿಭಟನೆ ನಡೆಸುವದಾಗಿ ಸಂಘಟನೆ ರಾಜ್ಯ ಪ್ರಧಾನ ಕಾರ್ಯದರ್ಶಿ ಶರಣಪ್ಪ ಮರಳಿ ಹೇಳಿದರು.
ಅವರಿಂದು ಮಾಧ್ಯಮಗೋಷ್ಟಿ ಉದ್ದೇಶಿಸಿ ಮಾತನಾಡಿ, ಕನಿಷ್ಟ ಬೆಂಬಲ ನೀತಿಯೇ ಅವೈಜ್ಞಾನಿಕವಾಗಿದ್ದು ರೈತರು ಬೆಳೆದ ಬೆಲೆ ಮಾರುಕಟ್ಟೆ ಪ್ರವೇಶಿಸುತ್ತಿದ್ದಂತೆ ಬೆಲೆಗಳು ಕುಸಿತವಾಗುತ್ತಿವೆ. ಕನಿಷ್ಟ ಬೆಂಬಲ ಬೆಲೆಯಿಲ್ಲದೇ ಆರ್ಥಿಕ ನಷ್ಟಕ್ಕೆ ರೈತರು ಗುರಿಯಾಗುತ್ತಿದ್ದರೆ, ಪ್ರತಿ ಬೆಲೆಗೆ ಬೆಲೆ ನೀಡಲು ರೈತರು ಹೋರಾಟ ನಡೆಸಬೇಕಾದ ಸ್ಥಿತಿ ನಿರ್ಮಾಣ ವಾಗಿದೆ. ನೆರೆ, ಅತಿವೃಷ್ಟಿ ,ಬರದಿಂದ ರೈತರು ಮಾಡಿದ ಸಾಲ ತೀರಿಸಲಾಗದ ರೈತರು ಆತ್ಮಹತ್ಯೆ ದಾರಿ ಹಿಡಿಯುವಂತಾಗಿದೆ. ೨೦೦೨ ರಲ್ಲಿ ರೈತರ ಆತ್ಮಹತ್ಯೆ ತಡೆಯಲು ಡಾ.ಸ್ವಾಮಿನಾಥನ ನೇತೃತ್ವದ ನೀಡಲಾಗಿರು ವರದಿಯನ್ನು ಜಾರಿಗೊಳಿಸಲು ಬಿಜೆಪಿ ಮತ್ತು ಕಾಂಗ್ರೆಸ್ ಸರ್ಕಾರಗಳು ಮುಂದಾಗುತ್ತಿಲ್ಲ. ಕೃಷಿ ವೆಚ್ಚಕ್ಕೆ ಶೇ.50 ಹೆಚ್ಚುವರಿಯಾಗಿ ಸೇರಿ ಬೆಂಬಲ ಬೆಲೆಯನ್ನು ನಿಗದಿಪಡಿಸಬೇಕೆಂಬ ಶಿಫಾರಸ್ಸು ಜಾರಿಗೆ ಕೇಂದ್ರ ಸರ್ಕಾರ ಮುಂದಾಗುತ್ತಿಲ್ಲ.
ಕೇಂದ್ರ ಸರ್ಕಾರ ಜಾರಿಗೊಳಿಸಿದ್ದ ಮೂರು ಮಾರಕ ಕಾಯ್ದೆಗಳನ್ನು ರೈತರ ಪ್ರತಿರೋಧದಿಂದ ಹಿಂಪಡೆಯಲಾಯಿತು ಆದರೆ ರಾಜ್ಯದಲ್ಲಿರುವ ಸರ್ಕಾರಗಳು ಮಾತ್ರ ಮುಂದುವರೆಸಿಕೊಂಡು ಹೊರಟಿವೆ. ಬಿಜೆಪಿ ಸರ್ಕಾರದೊಂದಿಗೆ ಕಾಂಗ್ರೆಸ್ ಸಹ ಕಾಯ್ದೆಗಳನ್ನು ಹಿಂಪಡೆಯಲು ಮುಂದಾಗುತ್ತಿಲ್ಲ. ಕೃಷಿಯೇ ಸಂಕಷ್ಟದಲ್ಲಿರುವಾಗ ಸರ್ಕಾರಗಳು ಸಹ ರೈತರನ್ನು ಒಕ್ಕಲೆಬ್ಬಿಸುವ ನೀತಿಗಳನ್ನು ಅನುಸರಿಸುತ್ತಿವೆ. ಬೆಳೆಹಾನಿ ಸಂದರ್ಬದಲ್ಲಿಯೂ ಬ್ಯಾಂಕ್‌ಗಳು ಸಾಲ ವಸೂಲಿಗೆ ನೋಟಿಸ್ ನೀಡುತ್ತಿವೆ. ಸರ್ಕಾರಗಳ ಸೂಚನೆಯೂ ಪಾಲಿಸದೇ ಇದ್ದರೂ ಸರ್ಕಾರ ಯಾವುದೇ ಕ್ರಮಕ್ಕೆ ಮುಂದಾಗುತ್ತಿಲ್ಲ. ಕೇಂದ್ರ ಬಿಜೆಪಿ ಸರ್ಕಾರ ಹಾಗೂ ರಾಜ್ಯದ ಕಾಂಗ್ರೆಸ್ ಸರ್ಕಾರ ರೈತ ವಿರೋಧಿ ನೀತಿ ಖಂಡಿಸಿ ನಡೆಯಲಿರುವ ಮುತ್ತಿಗೆ ಪ್ರತಿಭಟನೆಯಲ್ಲಿ ರಾಜ್ಯದ ಎಲ್ಲಾ ಜಿಲ್ಲೆಗಳಿಂದ ರೈತರು ಭಾಗಿಯಾಗಲಿದ್ದಾರೆ ಎಂದರು.
ಜಿಲ್ಲಾಧ್ಯಕ್ಷ ರಾಮಯ್ಯ ಜವಳಗೇರಾ ಮಾತನಾಡಿ ಹವಮಾನ ವೈಪರಿತ್ಯದಿಂದಾಗಿ ಭತ್ತ ಜೊಳ್ಳಾಗಿದೆ. ಸೂಕ್ತ ಬೆಲೆಯಿಲ್ಲದೇ ಇದ್ದಾಗ ಖರೀದಿ ಕೇಂದ್ರಗಳು ಸಹ ಪ್ರಾರಂಭವಾಗಿಲ್ಲ. ಭತ್ತ ಬೆಳೆದ ರೈತರು ಆರ್ಥಿಕ ಸಂಕಷ್ಟಕ್ಕೆ ಗುರಿಯಾಗಿದ್ದಾರೆ. ತುಂಗಭದ್ರ ಅಚ್ಚುಕಟ್ಟು ಪ್ರದೇಶಕ್ಕೆ ಎರಡನೇ ಬೆಳೆಗೆ ನೀರು ಇಲ್ಲ. ಬೆಳೆದ ಭತ್ತಕ್ಕೆ ಬೆಲೆಯೂ ಇಲ್ಲದೇ ದಯನೀಯ ಸ್ಥಿತಿಯಲ್ಲಿದ್ದು ಸರ್ಕಾರ ಕೂಡಲೇ ಭತ್ತ ಖರೀಧಿ ಕೇಂದ್ರ ಸ್ಥಾಪಿಸಿ ನೆರವಿಗೆ ಬರಬೇಕೆಂದರು.
ಈ ಸುದ್ದಿ ಓದಿದ್ದೀರಾ? ರಾಯಚೂರು | ಖಾಲಿ ಭರವಸೆ; ರೈತರನ್ನು ಮೋಸಗೊಳಿಸಿದ ಕಾಂಗ್ರೆಸ್ ಸರಕಾರ: ಶಾಸಕ ಶಿವರಾಜ ಪಾಟೀಲ ಟೀಕೆ
ಈ ಸಂದರ್ಬದಲ್ಲಿ ಸಂಘಟನೆ ಪದಾಧಿಕಾರಿಗಳಾದ ತಿಮ್ಮಪ್ಪ ಭೋವಿ, ಚನ್ನಪ್ಪ ಹುಣಸಿಹಾಳ ಹುಡಾ, ವೆಂಕಟೇಶ ಸಂತೆಕಲ್ಲೂರು, ಲಾಲಸಾಬ ನಾಡಗೌಡ, ಇನ್ನಿತರರಿದ್ದರು.





