ಇತ್ತೀಚಿಗೆ ದೇವದುರ್ಗ ಶಾಸಕಿ ಜಿ.ಕರೆಮ್ಮ ನಾಯಕ ಪುತ್ರ ಸಂತೋಷ ನಾಯಕ ಕಾಕರಗಲ್ ಬಳಿಯ ಟೋಲ್‌ಗೇಟ್ ಧ್ವಂಸಗೊಳಿಸಿದ್ದು, ಖಂಡನೀಯ, ದೇವದುರ್ಗ ವ್ಯಾಪ್ತಿಯಲ್ಲಿ ಶಾಸಕಿಯ ಪುತ್ರನಿಂದಲೇ ಗೂಂಡಾ ವರ್ತನೆ ಕಂಡುಬರುತ್ತಿದ್ದು, ಕೂಡಲೇ ಪೊಲೀಸರು ಸಂತೋಷ ನಾಯಕನನ್ನು ಬಂಧಿಸಬೇಕು ಎಂದು ಕೆಪಿಸಿಸಿ ಮಹಿಳಾ ಘಟಕದ ಉಪಾಧ್ಯಕ್ಷೆ ಶ್ರೀದೇವಿ ನಾಯಕ ಆಗ್ರಹಿಸಿದರು.
ಅವರಿಂದು ಮಾಧ್ಯಮಗೋಷ್ಠಿಯನ್ನುದ್ದೇಶಿಸಿ ಮಾತನಾಡಿ, ದೇವದುರ್ಗ ತಾಲೂಕಿನಲ್ಲಿ ಶಾಸಕಿ ಪುತ್ರನ ಗೂಂಡಾ ವರ್ತನೆ ಹೆಚ್ಚಾಗಿ ಹೋಗಿದ್ದು, ಈ ಹಿಂದೆಯೂ ಪೊಲೀಸ್ ಪೇದೆ ಮೇಲೆ ಹಲ್ಲೆ ಮಾಡಿರುವ ಬಗ್ಗೆಯೂ ಆರೋಪಗಳಿದ್ದು, ಇದೀಗ ಟೋಲ್‌ಗೇಟ್ ಧ್ವಂಸಗೊಳಿಸಿ ಪುಂಡಾಟ ಮೆರೆದಿದ್ದಾನೆ ಎಂದು ದೂರಿದರು.
ಟೋಲ್‌ಗೇಟ್ ತೆರವುಗೊಳಿಸಲು ಅದರದ್ದೇ ಆದ ನಿಯಮಗಳಿವೆ. ರಾಜ್ಯ ಸರ್ಕಾರಕ್ಕೆ ಈ ಬಗ್ಗೆ ಗಮನಕ್ಕೆ ತರಬೇಕು. ಅಥವಾ ಜಿಲ್ಲೆಯ ಅದಿಕಾರಿಗಳ ಗಮನಕ್ಕೆ ತಂದು ಟೋಲ್‌ಗೇಟ್ ತೆರವು ಮಾಡಿಸಬಹುದಿತ್ತು, ಆದರೆ ಈ ರೀತಿ ಟೋಲ್ ಧ್ವಂಸಗೊಳಿಸಿರುವುದು ಖಂಡನೀಯ ಎಂದರು.
ಟೋಲ್ ಗೇಟ್ ಜನರ ತೆರಿಗೆಯಿಂದಾದ ಸರ್ಕಾರದ ಆಸ್ತಿಯಾಗಿದ್ದು, ಜನಪ್ರತಿನಿಧಿಯ ಪುತ್ರ ಈ ರೀತಿಯಾಗಿ ಗೂಂಡಾವರ್ತನೆ ತೋರಿರುವುದು ಸರಿಯಲ್ಲ. ಮುಂದಿನ ದಿನಗಳಲ್ಲಿ ಸರ್ಕಾರ ಅಧಿಕಾರಿಗಳು ಮಾತು ಕೇಳಿಲ್ಲವೆಂದು ಇಲಾಖೆಯ ಕಚೇರಿಗಳಿಗೂ ಹಾನಿ ಮಾಡುವ ಸಾಧ್ಯತೆಗಳಿರುತ್ತವೆ ಎಂದರು.
ರೈತರ ಮೇಲಿನ ಕಾಳಜಿಯಿಂದ ಟೋಲ್ ಗೇಟ್ ಮುಚ್ಚುವಂತೆ ಶಾಸಕಿಯ ಪುತ್ರ ಹಾಗೂ ಬೆಂಬಲಿಗರು ಹೋರಾಟ ಮಾಡುತ್ತಿಲ್ಲ ಬದಲಾಗಿ ತಾವು ನಡೆಸುವ ಮರಳು ಸಾಗಾಣಿಕೆ ಸೇರಿ ಅಕ್ರಮ ದಂದೆಗಳಿಗೆ ತೊಂದರೆ ಉಂಟಾಗುತ್ತದೆ ಎಂಬ ಉದ್ದೇಶದಿಂದ ಈ ರೀತಿ ದಾಳಿಗಳನ್ನು ಮಾಡುತ್ತಿದ್ದಾರೆ ಎಂದು ಆರೋಪಿಸಿದರು.
ಈ ಸುದ್ದಿ ಓದಿದ್ದೀರಾ? ರಾಯಚೂರು | ಸಿಡಿಲು ಬಿದ್ದು ; ವಾಹನ ಭಸ್ಮ
ಈ ಬಗ್ಗೆ ರಾಜ್ಯದ ಮುಖ್ಯಮಂತ್ರಿಗಳು ಹಾಗೂ ಗೃಹ ಸಚಿವರಿಗೆ ಮನವಿ ಮಾಡಲಾಗುವುದು. ಜೊತೆಗೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳೂ ಕೂಡ ಕೂಡಲೇ ಆರೋಪಿಯನ್ನು ಬಂದಿಸಬೇಕು ಇಲ್ಲವಾದಲ್ಲಿ ಮುಂದಿನ ದಿನಗಳಲ್ಲಿ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಮಾಲಾ ಭಜಂತ್ರಿ, ಮಂಜುಳಾ, ಖಾಸಿಂಬಿ ,ಲಕ್ಷ್ಮೀ ,ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.





