ಕಲ್ಯಾಣ ಕರ್ನಾಟಕ ಪ್ರದೇಶದ ಶೈಕ್ಷಣಿಕ ಸಮಸ್ಯೆಗಳಿಗೆ ಪರಿಹಾರಗಳ ಕುರಿತು ಸ್ಟೂಡೆಂಟ್ ಇಸ್ಲಾಮಿಕ್ ಆರ್ಗನೈಜೇಷನ್ (ಎಸ್‌ಐಓ) ರಾಜ್ಯ ಘಟಕದ ವತಿಯಿಂದ ಡಿಸೆಂಬರ್ 15ರಿಂದ ಫೆಬ್ರವರಿ 15ರವರೆಗೆ ಎರಡು ತಿಂಗಳ ಅವಧಿಯ ‘ಕಲಿಕ ಕಲ್ಯಾಣ’ ಶೈಕ್ಷಣಿಕ ಅಭಿಯಾನವನ್ನು ಹಮ್ಮಿಕೊಳ್ಳಲು ನಿರ್ಧರಿಸಲಾಗಿದೆ ಎಂದು ಎಸ್‌ಐಓ ಮುಖಂಡ ಇಮ್ತಿಯಾಜ್ ಸಿಂಧನೂರು ಹೇಳಿದರು.
ನಗರದ ಪತ್ರಿಕಾ ಭವನದಲ್ಲಿ ಮಾಧ್ಯಮಗೋಷ್ಟಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ಶಾಲೆಯಿಂದ ಹೊರಗುಳಿದ ಮಕ್ಕಳ ಸಂಖ್ಯೆ ಹೆಚ್ಚಾಗಿರುವುದು, ಎಸ್‌ಎಸ್‌ಎಲ್‌ಸಿ ಫಲಿತಾಂಶದಲ್ಲಿ ಕುಸಿತ, ಶಿಕ್ಷಕರ ಕೊರತೆ ಸೇರಿದಂತೆ ಹಲವು ಗಂಭೀರ ಸಮಸ್ಯೆಗಳು ಶಿಕ್ಷಣ ಕ್ಷೇತ್ರವನ್ನು ಕಾಡುತ್ತಿವೆ ಎಂದು ಆತಂಕ ವ್ಯಕ್ತಪಡಿಸಿದರು.
ಅಭಿಯಾನದ ಭಾಗವಾಗಿ ಶಿಕ್ಷಣದ ಮಹತ್ವ ಕುರಿತು ಜಾಗೃತಿ ಮೂಡಿಸುವುದು, ಶಾಲೆಗಳಿಗೆ ಹೋಗಿ ಸಮಸ್ಯೆಯನ್ನು ಅಲಿಸುವದು, ಬೀದಿ ಬದಿ ಸಭೆಗಳು, ಉಪನ್ಯಾಸಗಳು, ವಿದ್ಯಾರ್ಥಿಗಳಿಗೆ ಹಾಗೂ ಪೋಷಕರಿಗೆ ತರಬೇತಿ ಕಾರ್ಯಕ್ರಮಗಳನ್ನು ನಡೆಸುವ ಉದ್ದೇಶ ಹೊಂದಲಾಗಿದೆ. ವಿಶೇಷವಾಗಿ ಜಿಲ್ಲಾ ಮತ್ತು ತಾಲೂಕ ಮಟ್ಟದಲ್ಲಿ ಚುನಾಯಿತ ಜನಪ್ರತಿನಿಧಿಗಳಾದ ಸಂಸದರು, ಶಾಸಕರುಗಳನ್ನು ಭೇಟಿ ಮಾಡಿ ಚರ್ಚಿಸಲಾಗುತ್ತದೆ. ವೃತ್ತಿ ನಿರತರಿಂದ ಮಾರ್ಗದರ್ಶನ ಉಪನ್ಯಾಸಗಳು, ದುಂಡುಮೇಜಿನ ಸಭೆ ಜಿಲ್ಲಾ ಮಟ್ಟದಲ್ಲಿ ನಡೆಸಿ ಮಾಹಿತಿ ಕ್ರೋಢೀಕರಿಸಲಾಗುತ್ತದೆ ಎಂದರು.
ಅಭಿಯಾನ ಉದ್ದೇಶಿಸಿ ಮತ್ತೋರ್ವ ಮುಖಂಡ ಸೈಯದ್ ಆಕಿಫ್ ಆಯ್ನಾನ್ ಮಾತನಾಡಿ, ಕಲ್ಯಾಣ ಕರ್ನಾಟಕದ ಏಳು ಜಿಲ್ಲೆಗಳಲ್ಲಿ ನಡೆಯಲಿರುವ ಕಲಿಕ ಕಲ್ಯಾಣ ಅಭಿಯಾನ ಮೂಲಕ ಶೈಕ್ಷಣಿಕ ಸಮಸ್ಯೆ, ಪರಿಹಾರ ಸವಾಲುಗಳ ಕುರಿತು ಸಮಾಲೋಚಿಸಲಾಗುತ್ತದೆ. ಗುಣಮಟ್ಟ ಶಿಕ್ಷಣಕ್ಕೆ ಸಮುದಾಯ ಜವಾಬ್ದಾರಿಯನ್ನು ಜಾಗೃತಗೊಳಿಸುವ ಜೊತೆಗೆ ಸರ್ಕಾರವನ್ನು ಗಮನಸೆಳೆಯುವ ಪ್ರಯತ್ನ ನಡೆಸಲಾಗುತ್ತಿದೆ ಎಂದು ತಿಳಿಸಿದರು.
ಈ ಸುದ್ದಿ ಓದಿದ್ದೀರಾ? ರಾಯಚೂರು | ಎಂಪಿಸಿಎಲ್- ಕೃಷ್ಣಬ್ರಿಡ್ಜ್ ರಸ್ತೆಯಲ್ಲಿ ನಿಲ್ಲದ ರಸ್ತೆ ಅಪಘಾತ
ಪತ್ರಿಕಾಗೋಷ್ಠಿಯಲ್ಲಿ ಆರೀಫ್, ನೂರ ಅಹ್ಮದ, ಆಸೀಫ್ ಹಾಜರಿದ್ದರು.





