ರಾಯಚೂರು ಜಿಲ್ಲೆಯ ದೇವದುರ್ಗ ತಾಲೂಕಿನ ಕೊಪ್ಪರ ಗ್ರಾಮದಲ್ಲಿ ಸರಿಯಾದ ಚರಂಡಿ ವ್ಯವಸ್ಥೆಯೇ ಇಲ್ಲದಿರುವುದರಿಂದ ಗ್ರಾಮಸ್ಥರು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದಾರೆ. ಪ್ರತಿಯೊಂದು ಮನೆಯ ಮುಂದೆ ಮಳೆ ನೀರು ಹಾಗೂ ಮಲಿನ ನೀರು ನಿಂತುಕೊಳ್ಳುತ್ತಿದ್ದು, ಇದರಿಂದಾಗಿ ದೈನಂದಿನ ಜೀವನವೇ ದುಸ್ತರವಾಗಿದೆ. ಗ್ರಾಮದ ಮುಖ್ಯ ರಸ್ತೆಗಳು ಕೆಸರುಮಯವಾಗಿದ್ದು, ನಿವಾಸಿಗಳು ನಿತ್ಯ ಕೆಸರಿನಲ್ಲೇ ನಡೆಯುವಂತಹ ಅನಿವಾರ್ಯ ಸ್ಥಿತಿಯಲ್ಲಿದ್ದು, ತೀವ್ರ ಅಸಮಾಧಾನಗೊಂಡಿದ್ದಾರೆ.
ಗ್ರಾಮದ ರಸ್ತೆಗಳು ಸಂಪೂರ್ಣವಾಗಿ ಕೆಸರಿನಿಂದ ತುಂಬಿಕೊಂಡಿವೆ. “ಕೆಸರಲ್ಲಿ ರಸ್ತೆಯೋ, ರಸ್ತೆಯಲ್ಲಿ ಕೆಸರೋ” ಎಂಬಂತಹ ಹದಗೆಟ್ಟ ಸ್ಥಿತಿ ನಿರ್ಮಾಣವಾಗಿದೆ. ಮಕ್ಕಳು ಶಾಲೆಗೆ ಹೋಗುವಾಗಲೂ ಈ ಮಲಿನ ನೀರಿನ ಮೂಲಕವೇ ನಡೆಯಬೇಕಾದ ಪರಿಸ್ಥಿತಿ ಉಂಟಾಗಿದ್ದು, ಅವರ ಆರೋಗ್ಯಕ್ಕೆ ಗಂಭೀರ ಧಕ್ಕೆಯಾಗುತ್ತಿದೆ. ಮನೆಯ ಮುಂದೆಯೇ ನೀರು ನಿಂತುಕೊಳ್ಳುವುದರಿಂದ ದಿನನಿತ್ಯ ಕೆಟ್ಟ ವಾಸನೆ ಹರಡುತ್ತಿದ್ದು, ಇದು ಗ್ರಾಮದ ವಾತಾವರಣವನ್ನು ಮಲಿನಗೊಳಿಸುತ್ತಿದೆ.

ಈ ಸಮಸ್ಯೆಯಿಂದಾಗಿ ಗ್ರಾಮದಲ್ಲಿ ಡೆಂಗ್ಯೂ, ಮಲೇರಿಯಾ ಹಾಗೂ ಚರ್ಮರೋಗಗಳು ಹಬ್ಬುತ್ತಿವೆ. ಹತ್ತಾರು ಮಂದಿ ಈಗಾಗಲೇ ಜ್ವರದಿಂದ ಬಳಲುತ್ತಿದ್ದಾರೆ. ಹಿರಿಯರು ಮತ್ತು ಮಕ್ಕಳ ಆರೋಗ್ಯ ದಿನೇದಿನೇ ಹದಗೆಡುತ್ತಿದ್ದು, ಆಸ್ಪತ್ರೆಗಳಲ್ಲಿ ಸಾವಿರಾರು ರೂಪಾಯಿಗಳನ್ನು ಖರ್ಚುಮಾಡುವಂತಹ ಅನಿವಾರ್ಯತೆ ಉಂಟಾಗಿದೆ. “ನಮ್ಮ ಗ್ರಾಮದಲ್ಲಿ ಚರಂಡಿ ವ್ಯವಸ್ಥೆಯನ್ನು ಸರಿಪಡಿಸದಿದ್ದರೆ ಆರೋಗ್ಯ ಸಮಸ್ಯೆಗಳು ಮತ್ತಷ್ಟು ಉಲ್ಬಣಗೊಳ್ಳುತ್ತವೆ” ಎನ್ನುತ್ತಾರೆ ಗ್ರಾಮಸ್ಥರು.
ಈ ಬಗ್ಗೆ ನಿವಾಸಿ ಚನ್ನಬಸವ ಮಾತನಾಡಿ, “ಗ್ರಾಮದಲ್ಲಿ ಚರಂಡಿ ವ್ಯವಸ್ಥೆ ಇಲ್ಲದೆ, ನೀರು ಬೇರೆ ಕಡೆ ಹೋಗದೆ ಅವರವರ ಮನೆಯ ಮುಂದೆಯೇ ನಿಲ್ಲುತ್ತಿದೆ. ಮಳೆ ಬಂದಾಗಲಂತೂ ಹಳ್ಳವೇ ನಿರ್ಮಾಣವಾಗಿಬಿಟುತ್ತದೆ. ತಗ್ಗುಗಳಲ್ಲಿ ಮನೆ ಒಳಗೇ ನೀರು ನುಗ್ಗುತ್ತದೆ. ಇಡೀ ಗ್ರಾಮದ ಜನತೆಯ ಸಂಕಟವನ್ನು ಕೇಳುವವರೇ ಇಲ್ಲದಂತಾಗಿದೆ. ಗ್ರಾಮದ ಆಸ್ಪತ್ರೆ ಹಿಂಭಾಗ ಇರುವ ವಾರ್ಡ್‌ನಲ್ಲಿ ಸುಮಾರು ಮೂರು ವರ್ಷಗಳಿಂದಲೂ ಇದೇ ಪರಿಸ್ಥಿತಿ. ಗ್ರಾಮದಲ್ಲಿರುವ ಸುಮಾರು 80 ಕುಟುಂಬಗಳು ನಿತ್ಯ ಇದೇ ಗೋಳಿನಲ್ಲಿ ಜೀವನ ನಡೆಸುವಂತಾಗಿದೆ. ಚುನಾವಣೆ ಬಂದಾಗ ರಾಜಕಾರಣಿಗಳು ಗ್ರಾಮಕ್ಕೆ ಆಗಮಿಸಿ ದೊಡ್ಡ ದೊಡ್ಡ ಭಾಷಣಗಳನ್ನು ಮಾಡುತ್ತಾರೆ. ಚರಂಡಿ, ರಸ್ತೆ, ಆರೋಗ್ಯ ಸೌಲಭ್ಯಗಳನ್ನು ಸರಿಪಡಿಸುವ ಭರವಸೆ ನೀಡುತ್ತಾರೆ. ಆದರೆ ಚುನಾವಣೆ ಮುಗಿದ ಕೂಡಲೇ ಕಾಣೆಯಾಗುತ್ತಾರೆ” ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಗ್ರಾಮಸ್ಥರು ಸ್ಥಳೀಯ ಗ್ರಾಮ ಪಂಚಾಯಿತಿ ಮತ್ತು ತಾಲೂಕು ಆಡಳಿತದ ಬಳಿ ಮನವಿ ಮಾಡಿಕೊಂಡರೂ, ಯಾವುದೇ ಗಮನಾರ್ಹ ಕ್ರಮ ಕೈಗೊಳ್ಳಲಾಗಿಲ್ಲ. ಪ್ರತಿ ಚುನಾವಣೆಯಲ್ಲೂ ಭರವಸೆಗಳ ಸುರಿಮಳೆ, ಆದರೆ ಕೆಲಸ ಶೂನ್ಯ. ಈಗಲಾದರೂ ಚರಂಡಿ ವ್ಯವಸ್ಥೆಗೆ ಶಾಶ್ವತ ಪರಿಹಾರ ಬೇಕು ಎಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ. ಸರಕಾರ ಮತ್ತು ಜನಪ್ರತಿನಿಧಿಗಳು ಈ ಸಮಸ್ಯೆಗೆ ಗಂಭೀರವಾಗಿ ಸ್ಪಂದಿಸದಿದ್ದರೆ, ಗ್ರಾಮಸ್ಥರು ಮುಂದಿನ ದಿನಗಳಲ್ಲಿ ಪ್ರತಿಭಟನೆಗೆ ಇಳಿಯುವ ಸಾಧ್ಯತೆ ಇದೆ. ಸ್ಥಳೀಯ ಆಡಳಿತದಿಂದ ಈ ಬಗ್ಗೆ ಯಾವುದೇ ಪ್ರತಿಕ್ರಿಯೆ ದೊರೆಯದಿರುವುದು ಗ್ರಾಮಸ್ಥರ ಕೋಪಕ್ಕೆ ಇನ್ನಷ್ಟು ಕಾರಣವಾಗಿದೆ ಎಂದರು.


ಇನ್ನೋರ್ವ ಗ್ರಾಮದ ನಿವಾಸಿ ಮಲ್ಲಯ್ಯ ಮಾತನಾಡಿ, “ಬೀದಿಗಳಿಗೆ ಚರಂಡಿ ಹಾಗೂ ರಸ್ತೆ ವ್ಯವಸ್ಥೆ ಇಲ್ಲ. ಪರಿಣಾಮ ನಿವಾಸಿಗಳು ಮನೆ ಬಳಕೆ ನೀರನ್ನು ಹೊರಗೆ ಬಿಡಲು ಸ್ಥಳವಿಲ್ಲದೆ ಮನೆಯ ಮುಂದೆ ಗುಂಡಿ ನಿರ್ಮಿಸಿಕೊಂಡು ಅಲ್ಲಿ ಮಲಿನ ನೀರನ್ನು ಬಿಡುವ ಸ್ಥಿತಿ ಇದೆ. ಗ್ರಾಮದ ಕೆಲ ಮನೆಗಳ ಮುಂದೆ ಮನೆಯಲ್ಲಿ ಬಳಸಿದ ನೀರನ್ನು ರಸ್ತೆ ಬದಿಗೆ ಬಿಡಲಾಗುತ್ತಿದೆ. ಅದು ಮುಂದಕ್ಕೆ ಹೋಗಲು ಆಗದೇ ಅಲ್ಲೆ ನಿಂತು ದೊಡ್ಡ ಗುಂಡಿಯಾಗಿ ದುರ್ನಾತ ಬೀರುತ್ತಿದೆ. ಕೆಲಮನೆಗಳ ಮುಂದೆ ಮಣ್ಣು ರಸ್ತೆಯ ನಡುವೆ ಚರಂಡಿಯಿಲ್ಲದೇ ಸಣ್ಣದಾಗಿ ಅಗೆದು ನೀರು ಬೀಡುತ್ತಿದ್ದಾರೆ. ಕೊಳಚೆ ನೀರಿನ ಜತೆಗೆ ಕಾಡು ಜಾತಿಯ ಹುಲ್ಲು ಬೆಳೆದಿರುವುದು ಇಡೀ ಪ್ರದೇಶವನ್ನು ಕೊಳಚೆ ತಾಣವಾಗಿ ಮಾರ್ಪಾಡು ಮಾಡಿದೆ. ಮನೆಯ ಮುಂದೆ ಕೊಳಚೆ ನೀರು ನಿಂತ ಪರಿಣಾಮ ಸೊಳ್ಳೆ ಕಾಟ ವಿಪರೀತ ವಾಗಿದೆ. ಈಗ ಎಲ್ಲೂ ಸಮರ್ಪಕ ಮಳೆಯಾಗದೇ ಕಸಕಡ್ಡಿ ಹೊರಹೋಗಲು ಜಾಗವೇ ಇಲ್ಲ. ಆ ಹಿನ್ನೆಲೆಯಲ್ಲಿ ರಾತ್ರಿ ವೇಳೆ ಸೊಳ್ಳೆಗಳ ಕಾಟವಂತೂ ಹೇಳ ತೀರವಾಗಿದೆ. ಕೂಡಲೇ ಸಂಬಂಧಪಟ್ಟ ಅಧಿಕಾರಿಗಳು ಇತ್ತ ಗಮನಹರಿಸಿ ಬಡಾವಣೆ ಮೂಲ ಸೌಲಭ್ಯ ಕಲ್ಪಿಸುವ ನಿಟ್ಟಿನಲ್ಲಿ ಮುಂದಾಗಬೇಕು” ಎಂದು ಆಗ್ರಹಿಸಿದರು.
ಇದನ್ನೂ ಓದಿ: ರಾಯಚೂರು | ಗ್ಯಾರಂಟಿ ಯೋಜನೆಗಳ ಅರ್ಥ ತಿಳಿಯದವರು ಮಾತ್ರ ಅದರ ವಿರುದ್ಧ ಮಾತನಾಡುತ್ತಾರೆ — ಪಾಮಯ್ಯ ಮುರಾರಿ
ಗ್ರಾಮಸ್ಥರು ಸ್ಥಳೀಯ ಅಧಿಕಾರಿಗಳು ಈ ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸಿ ತಕ್ಷಣ ಕ್ರಮ ಕೈಗೊಳ್ಳಬೇಕೆಂದು ಗ್ರಾಮ ಪಂಚಾಯಿತಿ ಮತ್ತು ತಾಲೂಕು ಆಡಳಿತದಿಂದ ಯಾವುದೇ ಪ್ರತಿಕ್ರಿಯೆ ದೊರೆಯದಿರುವುದು ಗ್ರಾಮಸ್ಥರ ಕೋಪಕ್ಕೆ ಕಾರಣವಾಗಿದೆ. ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ಹೋರಾಟ ಮಾಡಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ.

ರಫಿ ಗುರುಗುಂಟ
ಗುಲಬರ್ಗಾ ವಿವಿಯಿಂದ ಪತ್ರಿಕೋದ್ಯಮದಲ್ಲಿ ಎಂ ಎ ಪದವಿ, ಕಲ್ಯಾಣ ಕರ್ನಾಟಕ ವಲಯ ಕೋರ್ಡಿನೇಟರ್




