ಬೈಕ್ ವಿಚಾರಕ್ಕೆ ಸ್ನೇಹಿತರ ಮಧ್ಯೆ ಗಲಾಟೆಯಾಗಿ ಯುವಕನನ್ನು ಕೊಲೆ ಮಾಡಿರುವ ಘಟನೆ ನಗರದ ಮಾವಿನ ಕೆರೆ ಬಳಿ ಶುಕ್ರವಾರ ರಾತ್ರಿ ನಡೆದಿದೆ.
ಜಹೀರಾಬಾದ ಬಡಾವಣೆಯ ವಿಶಾಲ್ (21) ಮೃತ ಯುವಕ ಎಂದು ಗುರುತಿಸಲಾಗಿದೆ. ವಿಶಾಲ್ ನ ಸ್ನೇಹಿತರಾದ ಜಹೀರಾಬಾದ ಬಡಾವಣೆಯ ರಾಜು ಹಾಗೂ ಬಸವರಾಜ ಕೊಲೆ ಮಾಡಿದ್ದಾರೆ ಎಂದು ತಿಳಿದುಬಂದಿದೆ. ಮಾವಿನ ಕೆರೆ ಬಳಿಯ ದತಾರ ಲೇಔಟ್ ಬಳಿ ಶುಕ್ರವಾರ ರಾತ್ರಿ 11 ಗಂಟೆ ಸುಮಾರು ದುರ್ಘಟನೆ ಸಂಭವಿಸಿದೆ ಎನ್ನಲಾಗಿದೆ.
ವಿಶಾಲ್ ಗೆ ಆರೋಪಿ ರಾಜು ಬೈಕ್ ಕೇಳಿದ ವೇಳೆ ವಿಶಾಲ್ ಬೈಕ್ ಕೊಡಲು ನಿರಾಕರಿಸಿದ್ದ ಈ ವಿಚಾರಕ್ಕೆ ವಿಶಾಲ್ ಮತ್ತು ರಾಜು ಎನ್ನುವವರ ಮಧ್ಯೆ ಮಾತಿನ ಚಕಮಕಿ ನಡೆದಿದ್ದು, ಮುಂದುವರೆದು ರಾಜು ಹಾಗೂ ಬಸವರಾಜ ಸೇರಿ ಕೊಲೆ ಮಾಡಿದ್ದಾರೆ ಎಂದು ಪೊಲೀಸ್ ಮೂಲಗಳಿಂದ ತಿಳಿದುಬಂದಿದೆ. ಈ ಕುರಿತು ಸದರ್ ಬಜಾರ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಈ ಸುದ್ದಿ ಓದಿದ್ದೀರಾ? ರಾಯಚೂರು | ಶಾಸಕ ಮಾನಪ್ಪ ವಜ್ಜಲ್ ಕಾಣೆಯಾಗಿದ್ದಾರೆ; ಪೋಸ್ಟರ್ ವೈರಲ್
ಈ ಪ್ರಕರಣಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅರುಣಾಂಗ್ಷುಗಿರಿ ಮಾಧ್ಯಮಗಳೊಂದಿಗೆ ಮಾತನಾಡಿ, ಮಾವಿನಕೆರೆ ಬಳಿಯ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದೆ. ಮೃತನ ಸಂಬಂಧಿಕರು ದೂರು ನೀಡಿದ್ದು, ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ ಎಂದರು.





