ಜನರಿಂದ ಜನರಿಗಾಗಿ ಜನರಿಗೋಸ್ಕರ ರೂಪಿತಗೊಂಡ ಸಂವಿಧಾನ ಆಶಯಗಳನ್ನು ಜಾರಿಗೊಳಿಸಲು ಎಲ್ಲರೂ ಕೈ ಜೋಡಿಸಬೇಕು ಎಂದು ಸಣ್ಣನೀರಾವರಿ ಸಚಿವ ಎನ್ ಎಸ್ ಬೋಸರಾಜ ಅವರು ಹೇಳಿದರು.
ರಾಯಚೂರು ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಮತ್ತು ನಗರಸಭೆಗಳ ಸಹಯೋದಲ್ಲಿ ನಗರದ ಮಹಾತ್ಮ ಗಾಂಧಿ ಕ್ರೀಡಾಂಗಣದಲ್ಲಿ ಸೆಪ್ಟೆಂಬರ್ 15ರಂದು ಆಯೋಜಿಸಿದ್ದ ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ಹಮ್ಮಿಕೊಂಡಿದ್ದ ಸಾಮೂಹಿಕ ಸಂವಿಧಾನ ಓದು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
“ವೈವಿಧ್ಯತೆಯಲ್ಲಿ ಏಕತೆ ಸಾರುವ ಸಂವಿಧಾನ ಭ್ರಾತೃತ್ವ, ಸಾಮರಸ್ಯದ ಭಾವನೆಯನ್ನು ಮೂಡಿಸಿ ರಕ್ತಪಾತವಿಲ್ಲದೆ ಸಮಾಜ ನಿರ್ಮಾಣ ಮಾಡಲು ಪ್ರೇರಣೆಯಾಗಿದೆ. ಸಾಮಾಜಿಕ, ಆರ್ಥಿಕ, ರಾಜಕೀಯ ನ್ಯಾಯ ಎಲ್ಲರಿಗೂ ದೊರೆಯುವಂತೆ ಮಾಡುವ ಮೂಲಕ ವಿಚಾರ, ಅಭಿವ್ಯಕ್ತಿ, ವಿಶ್ವಾಸ, ಧರ್ಮಶ್ರದ್ದೆ ಮತ್ತು ಉಪಾಸನಾ ಸ್ವಾತಂತ್ರ್ಯವನ್ನು ನೀಡಿದ್ದು, ಸಂವಿಧಾನ ಆಶಯಗಳನ್ನು ಅರ್ಥೈಸಿಕೊಂಡು ಅನುಷ್ಠಾನಕ್ಕೆ ತರಲು ಪ್ರತಿಯೊಬ್ಬರ ಸಹಕಾರವೂ ಅಗತ್ಯವಾಗಿದ್ದು, ರಾಷ್ಟ್ರದ ಏಕತೆಯೊಂದಿಗೆ ಸಮಾನ ಅವಕಾಶ ನೀಡಲು ಸಹಕರಿಸಬೇಕಿದೆ” ಎಂದರು.
ಸಂವಿಧಾನ ಓದುವ ಪ್ರಜಾಪ್ರಭುತ್ವ ದಿನದ ಅಂಗವಾಗಿ ಎಲ್ಲರಿಗೂ ಸಂವಿಧಾನ ಪುಸ್ತಕಗಳನ್ನು ವಿತರಿಸಲಾಯಿತು. ಸಚಿವ ಎನ್ ಎಸ್ ಬೋಸರಾಜು ಅವರು ಸಂವಿಧಾನ ಪೀಠಿಕೆ ಓದಿದರು.
ಈ ಸುದ್ದಿ ಓದಿದ್ದೀರಾ? ಗದಗ | ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ
ಹಲವು ಶಾಲೆಯಿಂದ ಎಂಟು ಸಾವಿರಕ್ಕೂ ಅಧಿಕ ಮಕ್ಕಳು ಭಾಗಿಯಾದರು. ವೇದಿಕೆಯಲ್ಲಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ರಾಹುಲ ತುಕರಾಂ ಪಾಂಡ್ವೆ, ಅಪರ ಜಿಲ್ಲಾಧಿಕಾರಿ ದುರಗೇಶ, ಉಪ ಕಾರ್ಯದರ್ಶಿ ಶಶಿಕಾಂತ ಶಿವಪುರೆ, ತಹಶೀಲ್ದಾರ್, ಸಮಾಜ ಕಲ್ಯಾಣ ಅಧಿಕಾರಿ ಮಹೇಶ ಪೋತ್ದಾರ, ನಗರಸಭೆ ಸದಸ್ಯರುಗಳಾದ ಜಯಣ್ಣ, ಜಿಂದಪ್ಪ, ದರೂರು ಬಸವರಾಜ, ತಿಮ್ಮಪ್ಪ ನಾಯಕ, ಪಾರಮಸಲ್ ಸುಖಾಣ, ಮಹ್ಮದಶಾಲಂ, ಅಮರೇಗೌಡ ಹಂಚಿನಾಳ, ಹರಿರಾಂಪುರು, ನರಸಿಂಹಲು ಮಾಡಗಿರಿ, ಬಸವರಾಜ ಪಾಟೀಲ್ ಅತ್ತನೂರು ಸೇರಿದಂತೆ ಬಹುತೇಕ ಮುಖಂಡರು, ಹಲವು ಶಾಲಾ ಕಾಲೇಜುಗಳು ಶಿಕ್ಷಕರು, ಅಧಿಕಾರಿಗಳು ಇದ್ದರು.
ಸಿಟಿಜನ್ ಜರ್ನಲಿಸ್ಟ್ ಹಫೀಜುಲ್ಲ





