ಶೌಚಾಲಯವೊಂದು ಕೇವಲ ಭೌತಿಕ ರಚನೆಯಲ್ಲ; ಅದು ಗೌರವ, ಆರೋಗ್ಯ ಮತ್ತು ಸಮಾನತೆಯ ಸಂಕೇತ. ಇದನ್ನು ನಿರ್ಲಕ್ಷಿಸುವುದು ಸರ್ಕಾರದ ಸ್ವಚ್ಛತಾ ಬದ್ಧತೆಗೆ ಕಳಂಕವಾಗುತ್ತದೆ. ಈಗಲೇ ಕ್ರಮ ಕೈಗೊಂಡರೆ ಮಾತ್ರ ಮಹಿಳೆಯರಿಗೆ ಸುರಕ್ಷಿತ, ಗೌರವಯುತ ಜೀವನ ನೀಡುವುದು ಸಾಧ್ಯ. ಇಲ್ಲದಿದ್ದರೆ, ʼಸ್ವಚ್ಛ ಭಾರತ್ʼ ಎಂಬುದು ಕೇವಲ ಘೋಷಣೆಯಾಗಿ ಉಳಿಯುತ್ತದೆ.
ಕೇಂದ್ರ ಸರ್ಕಾರದ ʼಬಯಲು ಮುಕ್ತ ಶೌಚಾಲಯ, ʼಮನೆ ಮನೆಗೆ ಶೌಚಾಲಯʼ, ʼಸ್ವಚ್ಛ ಭಾರತʼ ಎನ್ನುವ ಹಲವು ಯೋಜನೆಗಳು ವೇದಿಕೆ ಭಾಷಣಕ್ಕೆ ಮಾತ್ರ ಸೀಮಿತವಾಗಿವೆ ಎನ್ನುವಂತಾಗಿದೆ. ಶೌಚಾಲಯ ಸ್ವಚ್ಛವಾಗಿದ್ದರೆ ಇಡೀ ಗ್ರಾಮವೇ ಸ್ವಚ್ಛವಾಗಿ ಆರೋಗ್ಯವಾಗಿರುತ್ತದೆ. ಆದರೆ ರಾಯಚೂರು ನಗರ ಪ್ರದೇಶದಲ್ಲಿ ಮಹಿಳೆಯರ ಅನುಕೂಲಕ್ಕಾಗಿ ನಿರ್ಮಿಸಲಾಗಿದ್ದ ಶೌಚಾಲಯ ಕಳೆದ ಹತ್ತು ವರ್ಷಗಳಿಂದ ಪಾಳುಬಿದ್ದ ಸ್ಥಿತಿಯಲ್ಲಿದೆ. ನಿರ್ವಹಣೆಯ ಕೊರತೆಯಿಂದ ಬಳಕೆಗೆ ಅಸಾಧ್ಯವಾಗಿದೆ. ಸುತ್ತಲೂ ಮುಳ್ಳುಗಂಟಿಗಳು ಬೆಳೆದು ನಿಂತಿದ್ದು, ಶೌಚಾಲಯದ ಒಳಗೆ ಪ್ರವೇಶಿಸುವುದೇ ಒಂದು ಸವಾಲಾಗಿದೆ.
ರಾಯಚೂರು ನಗರದಲ್ಲಿ ನೂತನವಾಗಿ ನಿರ್ಮಾಣಗೊಂಡ ಜಿಲ್ಲಾಧಿಕಾರಿ ಕಚೇರಿಯ ಸಮೀಪದಲ್ಲೇ, ಕಚೇರಿಗೆ ಕೂದಲೆಳೆ ಅಂತರದಲ್ಲಿ ಈ ಶೌಚಾಲಯವಿದ್ದು, ಜಿಲ್ಲಾಧಿಕಾರಿ ಕಚೇರಿಗೆ ತೆರಳುವ ಪ್ರಮುಖ ಮಾರ್ಗದಲ್ಲಿರುವ ಯಕ್ಲಾಸಪುರ ಪ್ರದೇಶದಲ್ಲಿದೆ. ಆದರೂ ಸಮಸ್ಯೆಯತ್ತ ಈವರೆಗೂ ಜಿಲ್ಲಾಡಳಿತದ ಗಮನ ಹರಿದಿಲ್ಲ.
ಇನ್ನು ಮುಂದಾದರೂ ಸ್ಥಳೀಯ ಆಡಳಿತ ಇತ್ತ ಗಮನಹರಿಸಿ ಗ್ರಾಮದ ಮಹಿಳೆಯರ ಬಳಕೆಗೆ ಶೌಚಾಲಯ ನೀಡಬೇಕು. ಮುಂದಿನ ದಿನಗಳಲ್ಲಿ ಸಮಗ್ರ ನಿರ್ವಹಣೆಗೆ ಕ್ರಮ ಕೈಗೊಳ್ಳಬೇಕು” ಎಂದು ಗ್ರಾಮಸ್ಥರು ಆಗ್ರಹಿಸಿದರು.
ಸ್ಥಳೀಯ ಆಡಳಿತದ ನಿರ್ಲಕ್ಷ್ಯದಿಂದ ಶೌಚಾಲಯವಿದ್ದರೂ ಮಹಿಳೆಯರು ದಾರಿಯಲ್ಲೇ ಶೌಚಕ್ಕೆ ಹೋಗುವಂತಾಗಿದ್ದು, ಇದು ಗೌರವಪೂರ್ಣ ಬದುಕಿಗೆ ತೊಂದರೆಯಾಗಿದೆ. ʼಕಾಲಿಡಲೂ ಕೂಡ ಭಯವಾಗುತ್ತಿದೆʼ ಎಂದು ಗ್ರಾಮದ ಮಹಿಳೆಯರು ಆರೋಪಿಸುವುದರ ಜತೆಗೆ ಹಿಡಿಶಾಪ ಹಾಕುತ್ತಿದ್ದಾರೆ.

ಶೌಚಾಲಯವನ್ನು ಎಚ್‌ಕೆಆರ್‌ಡಿಬಿ ಮೈಕ್ರೋ ಯೋಜನೆಯಡಿ 2014-15ನೇ ಸಾಲಿನಲ್ಲಿ ಸುಮಾರು 6 ಲಕ್ಷ ಅನುದಾನದಲ್ಲಿ ನಿರ್ಮಿಸಲಾಗಿದೆ. ಶೌಚಾಲಯದಲ್ಲಿ ಬೋರ್‌ವೆಲ್, ವಿದ್ಯುತ್ ಸೇರಿದಂತೆ ಮೂಲ ಸೌಕರ್ಯಗಳು ಸಮರ್ಪಕವಾಗಿದ್ದರೂ ಬಳಕೆಯಿಲ್ಲದೆ ಅವುಗಳೂ ಹಾಳಾಗಿವೆ. ಇಡೀ ವ್ಯವಸ್ಥೆ ಅಸ್ತವ್ಯಸ್ತಗೊಂಡಿದೆ. ಸರ್ಕಾರದ ವಿವಿಧ ಯೋಜನೆಯಡಿ ಲಕ್ಷಾಂತರ ರೂಪಾಯಿ ಖರ್ಚು ಮಾಡಿ ಸಮುದಾಯ ಶೌಚಾಲಯ, ಸಾಮೂಹಿಕ ಮಹಿಳಾ ಶೌಚಾಲಯ, ಸಾರ್ವಜನಿಕ ಶೌಚಾಲಯಗಳನ್ನು ನಿರ್ಮಿಸಲಾಗಿದೆ. ಆದರೆ, ಅಧಿಕಾರಿಗಳ ನಿರ್ಲಕ್ಷ್ಯ ಹಾಗೂ ನಿರ್ವಹಣೆ ಇಲ್ಲದೆ ಹಲವು ವರ್ಷಗಳಿಂದ ಸ್ಥಗಿತಗೊಂಡಿವೆ. ಇದರಿಂದ ಇಲ್ಲಿನ ಮಹಿಳೆಯರು ಅನಿವಾರ್ಯವಾಗಿ ಶೌಚಕ್ಕಾಗಿ ಬಯಲನ್ನೇ ಆಶ್ರಯಿಸಿದ್ದಾರೆ.
ಸಾರ್ವಜನಿಕ ವಿಶ್ವನಾಥ ಈ ದಿನ.ಕಾಮ್‌ನೊಂದಿಗೆ ಮಾತನಾಡಿ, “ನಿತ್ಯ ನಾವು ಜಿಲ್ಲಾಧಿಕಾರಿ ಕಚೇರಿಗೆ ಇದೇ ಮಾರ್ಗದಲ್ಲಿ ತೆರಳಬೇಕು. ಆ ವೇಳೆ ಈ ದುರ್ನಾತವನ್ನು ಸಹಿಸಿಕೊಂಡೇ ಓಡಾಡುವಂತಾಗಿದೆ. ಜಿಲ್ಲಾಧಿಕಾರಿ, ತಹಶೀಲ್ದಾರ್ ಹಾಗೂ ಇನ್ನಿತರ ಎಲ್ಲ ಮೇಲಾಧಿಕಾರಿಗಳು ಇದೇ ರಸ್ತೆಯಿಂದ ಓಡಾಡಿದರೂ ಇತ್ತ ನೋಡುವುದಿಲ್ಲ” ಎಂದು ಆರೋಪಿಸಿದರು.
ಈ ಬಗ್ಗೆ ಸ್ಥಳೀಯ ನಿವಾಸಿ ಸಂಧ್ಯಾ ಈ ದಿನ.ಕಾಮ್ ಜತೆ ಮಾತನಾಡಿ, “ಅನೇಕ ವರ್ಷಗಳಿಂದ ಶೌಚಾಲಯಗಳು ಸ್ಥಗಿತಗೊಂಡ ಕಾರಣ ಮಹಿಳೆಯರು ಊರ ಹೊರವಲಯದಲ್ಲಿನ ಹೊಲದ ದಾರಿ, ರಸ್ತೆ ಬದಿ ಶೌಚಕ್ಕೆ ಹೋಗಬೇಕು. ಇಲ್ಲವಾದರೆ ಮುಳ್ಳುಗಂಟಿ, ತಗ್ಗು ಗುಂಡಿಗಳನ್ನು ಆಶ್ರಯಿಸಬೇಕಾಗಿದೆ. ಸೂರ್ಯೋದಯದ ಒಳಗೆ ಅಥವಾ ಸೂರ್ಯಾಸ್ತದ ನಂತರ ಶೌಚ ಮುಗಿಸಬೇಕಾಗಿದೆ. ಸಮಸ್ಯೆ ಇಷ್ಟು ಬಿಗಡಾಯಿಸಿದ್ದರೂ ಮಹಿಳೆಯರ ಗೋಳು ಕೇಳುವವರು ಯಾರೂ ಇಲ್ಲದಂತಾಗಿದೆ” ಎಂದು ಆಕ್ರೋಶ ವ್ಯಕ್ತಪಡಿಸಿದರು.
ಗ್ರಾಮದ ಹಿರಿಯ ಮಹಿಳೆ ಮಾತನಾಡಿ, “ಮನೆ ಮನೆಗೆ ಶೌಚಾಲಯ ನಿರ್ಮಿಸಿ ಕೊಡಬೇಕು. ಸುಮಾರು ವರ್ಷಗಳಿಂದ ಬಯಲಲ್ಲೇ ಶೌಚಕ್ಕೆ ಹೋಗುವಂತಾಗಿದೆ. ಮೊದಲು ಗಿಡ ಮರಗಳನ್ನು ಆಶ್ರಯಿಸಲಾಗುತ್ತಿತ್ತು. ಆದರೆ ಸದ್ಯ ಜಮೀನುಗಳಲ್ಲಿ ಹೋಗದ ಸ್ಥಿತಿಯಾಗಿದ್ದು, ಜಿಲ್ಲಾಡಳಿತಕ್ಕೆ ಹೋಗುವ ಮುಖ್ಯ ರಸ್ತೆಯಲ್ಲೇ ಶೌಚಕ್ಕೆ ಕೂರುವ ಸ್ಥಿತಿ ಬಂದೊದಗಿದೆ” ಎಂದು ಬೇಸರ ವ್ಯಕ್ತಪಡಿಸಿದರು.
ಜಿಲ್ಲಾಡಳಿತಕ್ಕೆ ಕೆಲಸದ ನಿಮಿತ್ಯ ಬಂದ ವಿಶ್ವನಾಥ ಬಲ್ಲಿದೇವ ಮಾತನಾಡಿ, “ಜಿಲ್ಲಾಡಳಿತದ ಮುಖ್ಯ ರಸ್ತೆಗೆ ಹೋಗಬೇಕಾದರೆ ಮೂಗು ಮುಚ್ಚಿಕೊಂಡು ಹೋಗಿ ಬರುವುದಾಗಿದೆ. ಜಿಲ್ಲಾಡಳಿತದ ಪಕ್ಕದಲ್ಲೇ ಇಂತಹ ಸಮಸ್ಯೆ ಎದುರಿಸುತ್ತಿದ್ದರೂ ಅಧಿಕಾರಿಗಳ ಗಮನಕ್ಕೆ ಬಾರದಿರುವಾಗ ಇನ್ನು ದೂರದ ಹಳ್ಳಿಗಳಲ್ಲಿನ ಸ್ಥಿತಿ ಏನು?” ಎಂದು ಕಳವಳ ವ್ಯಕ್ತಪಡಿಸಿದರು.
ದಲಿತ ಹೋರಾಟಗಾರ ಎಂ ಆರ್ ಭೇರಿ ಮಾತನಾಡಿ, “ರಾಯಚೂರು ಉತ್ಸವ ನಡೆಯುವ ನಿಟ್ಟಿನಲ್ಲಿ ಇಡೀ ರಾಯಚೂರು ನಗರವನ್ನು ಸ್ವಚ್ಛತೆ ಮಾಡುತ್ತೇವೆಂದು ಸಭೆಗಳಲ್ಲಿ ಮಾತ್ರ ಚರ್ಚೆಯಾಗುತ್ತಿದೆ. ಆದರೆ ಜಿಲ್ಲಾಡಳಿತ ಮುಖ್ಯ ರಸ್ತೆಗೆ ಶೌಚಾಲಯ ಬಳಕೆಯಿಲ್ಲದೆ ಹಾಳುಬಿದ್ದು ಗಬ್ಬೆದ್ದು ನಾರುತ್ತಿದೆ. ಇದೇ ರಸ್ತೆಯಲ್ಲಿ ಅಧಿಕಾರಿಗಳು ಓಡಾಡಿದರೂ ಇತ್ತ ಗಮನಹರಿಸುತ್ತಿಲ್ಲ” ಎಂದರು.
ಸ್ಥಳೀಯ ನಿವಾಸಿ ಚನ್ನಪ್ಪ ಯಾಕ್ಲಾಸಪುರ ಮಾತನಾಡಿ, “ಹಲವು ಬಾರಿ ಶೌಚಾಲಯದ ಅಸ್ತವ್ಯಸ್ತದ ಕುರಿತು ಪಂಚಾಯಿತಿ ಅಧಿಕಾರಿಗಳಿಗೆ ಮನವಿ ಸಲ್ಲಿಸಲಾಗಿದೆ. ಕಾಮಗಾರಿ ಮುಗಿದು ಹತ್ತು ವರ್ಷಗಳಾಗುತ್ತಿದ್ದರೂ ಶೌಚಾಲಯ ಬಳಕೆಯಾಗಿಲ್ಲ. ಹಾಗಿದ್ದರೆ ಇಲ್ಲಿ ಶೌಚಾಲಯ ನಿರ್ಮಿಸಿದ್ದು ನಾಮಕಾವಸ್ತೆಗೆ ಅಲ್ಲವೇ.. ಬಳಕೆಗೆ ಕೊಡದೆ ಪಾಳು ಬೀಳಿಸುವುದಾದರೆ ಲಕ್ಷಾಂತರ ರೂಪಾಯಿ ಅನುದಾನ ಖರ್ಚು ಮಾಡಿ ಕಟ್ಟಿದ್ದಾದರೂ ಯಾಕೆ” ಎಂದು ವ್ಯವಸ್ಥೆಯನ್ನು ಪ್ರಶ್ನಿಸಿದರು.

“ಶೌಚಾಲಯವಿಲ್ಲದೆ ಮಹಿಳೆಯರು ಬಯಲು ಬಹಿರ್ದೆಸೆಗೆ ಹೋಗುವ ಸ್ಥಿತಿ ನಿರ್ಮಾಣವಾಗಿದೆ. ವಾಸ್ತವದಲ್ಲಿ ಹೊರ ವಲಯದ ರಸ್ತೆಗಳಲ್ಲಿ ಮಹಿಳೆಯರು, ಮಕ್ಕಳು, ವೃದ್ಧರು ಸೇರಿದಂತೆ ಗ್ರಾಮಸ್ಥರು ಶೌಚಕ್ಕಾಗಿ ಬಯಲನ್ನೇ ಅವಲಂಬಿಸಿದ್ದಾರೆ. ಜನ ಮೂಗು ಮುಚ್ಚಿಕೊಂಡು ಹೋಗದೇ ಬೇರೆ ದಾರಿಯಿಲ್ಲ. ಇಲ್ಲಿನ ಸ್ವಚ್ಛತೆ ಮರೀಚಿಕೆಯಾಗಿದ್ದು, ಗ್ರಾಮ ರೋಗರುಜಿನುಗಳಿಗೆ ಆವಾಸಸ್ಥಾನವಾಗಿದೆ. ಮಾರಣಾಂತಿಕ ಸೋಂಕುಗಳ ಭಯ ಜನರನ್ನು ಬಿಟ್ಟೂ ಬಿಡದೆ ಕಾಡುತ್ತಿದೆ” ಎಂದು ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.
“ಜಿಲ್ಲಾಧಿಕಾರಿಗೆ ಹೋಗುವ ಮುಖ್ಯ ರಸ್ತೆಯಲ್ಲಿ ವಿದ್ಯುತ್ ಕಂಬಗಳನ್ನು ಹಾಕಿದ್ದಾರೆ. ಆದರೆ ರಾತ್ರಿ ವೇಳೆ ಅದನ್ನು ಬಂದ್ ಮಾಡಿ ಮಹಿಳೆಯರು ರಸ್ತೆಯಲ್ಲೇ ಬಹಿರ್ದೆಸೆಗೆ ಹೋಗುತ್ತಾರೆ. ಇಂತಹ ದುರಂತ ನಮನ್ನು ಕಾಡುತ್ತಿದೆ. ಶೌಚಾಲಯಗಳನ್ನು ತಕ್ಷಣ ದುರಸ್ತಿ ಮಾಡಿಸಿ ಬಳಕೆಗೆ ಅನುಕೂಲ ಮಾಡಿಕೊಟ್ಟರೆ ರಸ್ತೆ ಬದಿಗೆ ಹೋಗುವ ಅವಸ್ಥೆ ತಪ್ಪುತ್ತದೆ” ಎಂದರು.
ಇದನ್ನೂ ಓದಿದ್ದೀರಾ? ಬಡವರ ಬಾದಾಮಿಗೆ ಬಂಗಾರದ ಬೆಲೆ: ರೈತರ ಮೊಗದಲ್ಲಿ ಮಂದಹಾಸ
ಈ ಬಗ್ಗೆ ಜಿಲ್ಲಾಧಿಕಾರಿ ನಿತೀಶ್ ಕೆ ಅವರನ್ನು ಸಂಪರ್ಕಿಸಿದಾಗ ಕರೆ ಸ್ವೀಕರಿಸಿ ಮಾತನಾಡಿ, ಮಹಾನಗರ ಪಾಲಿಕೆಗೆ 8 ಕೋಟಿ ರೂ. ಅನುದಾನವನ್ನು ಸರ್ಕಾರ ಬಿಡುಗಡೆ ಮಾಡಿದೆ. ಈ ಅನುದಾನವನ್ನು ಸಾರ್ವಜನಿಕ ಶೌಚಾಲಯಗಳ ನಿರ್ಮಾಣ ಹಾಗೂ ಸುಧಾರಣೆಗೆ ಬಳಸಲಾಗುವುದು ಎಂದು ತಿಳಿಸಿದರು.
ಶೌಚಾಲಯವೊಂದು ಕೇವಲ ಭೌತಿಕ ರಚನೆಯಲ್ಲ; ಅದು ಗೌರವ, ಆರೋಗ್ಯ ಮತ್ತು ಸಮಾನತೆಯ ಸಂಕೇತ. ಇದನ್ನು ನಿರ್ಲಕ್ಷಿಸುವುದು ಸರ್ಕಾರದ ಸ್ವಚ್ಛತಾ ಬದ್ಧತೆಗೆ ಕಳಂಕವಾಗುತ್ತದೆ. ಈಗಲೇ ಕ್ರಮ ಕೈಗೊಂಡರೆ ಮಾತ್ರ ಮಹಿಳೆಯರಿಗೆ ಸುರಕ್ಷಿತ, ಗೌರವಯುತ ಜೀವನ ನೀಡುವುದು ಸಾಧ್ಯ. ಇಲ್ಲದಿದ್ದರೆ, ʼಸ್ವಚ್ಛ ಭಾರತ್ʼ ಎಂಬುದು ಕೇವಲ ಘೋಷಣೆಯಾಗಿ ಉಳಿಯುತ್ತದೆ. ಜಿಲ್ಲಾಡಳಿತ ತಕ್ಷಣ ಸ್ಪಂದಿಸಿ, ಈ ಅವಗಣನೆಯನ್ನು ತೊಡೆದುಹಾಕಬೇಕು – ಇದು ಮಹಿಳೆಯರ ಹಕ್ಕು ಮಾತ್ರವಲ್ಲ, ಸಮಾಜದ ಗೌರವದ ಪ್ರಶ್ನೆಯಾಗಿದೆ.

ರಫಿ ಗುರುಗುಂಟ
ಗುಲಬರ್ಗಾ ವಿವಿಯಿಂದ ಪತ್ರಿಕೋದ್ಯಮದಲ್ಲಿ ಎಂ ಎ ಪದವಿ, ಕಲ್ಯಾಣ ಕರ್ನಾಟಕ ವಲಯ ಕೋರ್ಡಿನೇಟರ್




