ರಾಯಚೂರು ಜಿಲ್ಲೆ ಮಾನ್ವಿ ತಾಲೂಕು ಕುರ್ಡಿ ಗ್ರಾಮದಲ್ಲಿರುವ ಪ್ರಾಥಮಿಕ ಹಾಗೂ ಪ್ರೌಢ ಶಾಲಾ ಆವರಣದಲ್ಲಿ ಕಳೆದ ಕೆಲವು ತಿಂಗಳಿನಿಂದ ಗಿಡಗಂಟಿಗಳು ಅತಿಯಾಗಿ ಬೆಳೆದಿದ್ದು, ಶಾಲಾ ಮಕ್ಕಳ ಸುರಕ್ಷತೆಗೆ ಗಂಭೀರ ಅಪಾಯವನ್ನುಂಟು ಮಾಡಿದೆ. ಶಾಲಾ ಆವರಣ ಸಂಪೂರ್ಣ ಅಸುರಕ್ಷಿತ ಸ್ಥಿತಿಗೆ ತಲುಪಿರುವುದರಿಂದ ವಿದ್ಯಾರ್ಥಿಗಳು ದಿನ ನಿತ್ಯದ ಶೈಕ್ಷಣಿಕ ಹಾಗೂ ಸಹಪಠ್ಯ ಚಟುವಟಿಕೆಗಳಲ್ಲಿ ಪಾಲ್ಗೊಳ್ಳಲು ಭಯ ಪಡುವ ಸ್ಥಿತಿ ನಿರ್ಮಾಣವಾಗಿದೆ.
ಕೊಠಡಿಗಳ ಬಾಗಿಲಿಂದಲೇ ಶುರುವಾಗಿ ದಟ್ಟವಾಗಿ ಬೆಳೆದಿರುವ ಗಿಡಗಂಟಿಗಳು ಮಕ್ಕಳಿಗೆ ಓಡಾಡಲೂ ತೊಂದರೆ ಕೊಡುತ್ತಿವೆ. ಇದು ಮಕ್ಕಳ ದೈಹಿಕ ಮತ್ತು ಮಾನಸಿಕ ಬೆಳವಣಿಗೆಯ ಮೇಲೂ ಪರಿಣಾಮ ಬೀರುತ್ತಿದೆ ಎಂದು ಶಿಕ್ಷಕರು ಮತ್ತು ಪೋಷಕರು ಆತಂಕ ವ್ಯಕ್ತಪಡಿಸಿದ್ದಾರೆ. ಅಲ್ಲದೆ ಗಿಡಗಂಟಿಗಳ ನಡುವೆ ಕ್ರಿಮಿ ಕೀಟಗಳು, ವಿಷಕಾರಿ ಜಂತುಗಳು ಹೆಚ್ಚಾಗಿ ಕಂಡುಬರುತ್ತಿದ್ದು, ಕೆಲ ಮಕ್ಕಳಿಗೆ ಕೀಟಗಳು ಕಡಿದು ಗಾಯಗಳಾಗಿರುವ ಘಟನೆಗಳು ನಡೆದಿವೆ ಎಂದು ಸ್ಥಳೀಯರು ತಿಳಿಸಿದ್ದಾರೆ. ಇಂತಹ ಪರಿಸ್ಥಿತಿಯಿಂದ ಪೋಷಕರಲ್ಲಿ ಭಯದ ವಾತಾವರಣ ನಿರ್ಮಾಣವಾಗಿದ್ದು, ಮಕ್ಕಳನ್ನು ಶಾಲೆಗೆ ಕಳುಹಿಸುವುದಕ್ಕೂ ಆತಂಕ ವ್ಯಕ್ತವಾಗುತ್ತಿದೆ.
ಇದೇ ಆವರಣದಲ್ಲಿ ಹಿರಿಯ ಪ್ರಾಥಮಿಕ ಶಾಲೆ, ಫ್ರೌಢಶಾಲೆ, ಗ್ರಾಮ ಗ್ರಂಥಾಲಯ ಹಾಗೂ ಶಿಶುಪಾಲನಾ ಕೇಂದ್ರ ಕಾರ್ಯನಿರ್ವಹಿಸುತ್ತಿವೆ. ಶಾಲಾ ಮೈದಾನ ಮತ್ತು ಆವರಣದಲ್ಲಿನ ಸ್ವಚ್ಛತೆ ಕೊರತೆಯಿಂದ ಹಿರಿಯ ಪ್ರಾಥಮಿಕ ಹಾಗೂ ಫ್ರೌಢಶಾಲೆಯ ವಿದ್ಯಾರ್ಥಿಗಳಿಗೆ ದಿನನಿತ್ಯ ತೀವ್ರ ತೊಂದರೆ ಉಂಟಾಗುತ್ತಿದೆ. ದೈಹಿಕ ಶಿಕ್ಷಣ ತರಗತಿಗಳು ಹಾಗೂ ಕ್ರೀಡಾ ಚಟುವಟಿಕೆಗಳು ಸಂಪೂರ್ಣ ಸ್ಥಗಿತಗೊಂಡಿವೆ. ಗಿಡಗಂಟಿಗಳ ನಡುವೆ ವಿಷಕಾರಿ ಕೀಟಗಳು, ಹುಳಗಳು ಮತ್ತು ಹಾವುಗಳು ಅಡಗಿರುವ ಭೀತಿ ಎದುರಾಗಿದೆ.


ಈ ಬಗ್ಗೆ ಗ್ರಾಮದ ನಿವಾಸಿ ಹುಚ್ಚಪ್ಪ ಮಾತನಾಡಿ, “ಶಾಲೆಗಳ ಮೈದಾನಗಳಲ್ಲಿ ಗಿಡಗಂಟಿ, ಕಳೆಗಳು ಹೆಚ್ಚಾಗಿ ಬೆಳೆದು ಮಕ್ಕಳ ಆಟ-ಆನಂದಕ್ಕೆ ದೊಡ್ಡ ತೊಂದರೆಯಾಗಿದೆ. ಮಕ್ಕಳ ಸುರಕ್ಷತೆಗೂ ಅಪಾಯ ಎದುರಾಗಿದೆ. ತರಗತಿ ಪಾಠಗಳಿಂದ ಬೇಸತ್ತ ಮಕ್ಕಳು ಕೊಂಚ ಬಿಡುವು ಪಡೆಯುವುದು ಆಟದ ಮೈದಾನದಲ್ಲಿ, ಅವರಿಗೆ ಕೇವಲ ಓದು ಮೈಗತ್ತುವುದಿಲ್ಲ. ಆಟ-ಪಾಠ ಇದ್ದರೇನೇ ಶಾಲೆ. ಆದರೆ ಇತ್ತೀಚಿನ ದಿನಗಳಲ್ಲಿ ಶಾಲೆಯಲ್ಲಿ ನಿರ್ವಹಣೆಯ ಕೊರತೆಯಿಂದ ಮುಳ್ಳುಗಿಡ ಬೆಳೆದು ಮೈದಾನದ ತುಂಬೆಲ್ಲಾ ಕಳೆಗಳೇ ಕಾಣುತ್ತಿವೆ. ನಿತ್ಯ ಪಾಠ ಪ್ರವಚನ ನಡೆಯುತ್ತಿದ್ದರೂ ಹೊರಗಿನಿಂದ ಯಾವುದೇ ಪಾಳು ಕಟ್ಟದದ ನೆನಪಾಗುತ್ತದೆ. ಮಕ್ಕಳು ಓಡಾಡುವಾಗ ಮುಳ್ಳುಗಿಡಗಳು ತಗುಲಿ ಗಾಯವಾಗುತ್ತಿದೆ. ಕೆಲವೊಮ್ಮೆ ಗಿಡಗಳ ನಡುವೆ ಆಟದ ವಸ್ತುಗಳು ಸಿಕ್ಕಿಹಾಕಿಕೊಂಡು ಅಪಘಾತಕ್ಕೆ ಕಾರಣವಾಗುತ್ತಿವೆ” ಎಂದು ಆತಂಕ ವ್ಯಕ್ತಪಡಿಸಿದರು.
“ನಮ್ಮಂತಹ ಬಡ ಪೋಷಕರ ಆಶಯ ನಮ್ಮ ಮಕ್ಕಳು ವಿದ್ಯಾಭ್ಯಾಸ ಪಡೆದು ಉನ್ನತ ಮಟ್ಟಕ್ಕೆ ಬೆಳೆಯಬೇಕು ಎಂಬುದೊಂದೇ. ಆದರೆ ಶಾಲೆಯ ವಾತಾವರಣವೇ ಸ್ವಚ್ಚವಾಗಿರದಿದ್ದರೆ ಇಡೀ ಶಿಕ್ಷಣವೇ ಅತಂತ್ರವಾಗುತ್ತದೆ” ಎಂದು ಗ್ರಾಮದ ಹಲವು ಪೋಷಕರು ಬೇಸರ ವ್ಯಕ್ತಪಡಿಸಿದರು.
ಶಿಸ್ತು ಮತ್ತು ಶಿಕ್ಷಣವೇ ಸಂಘಟನೆಯ ಶಕ್ತಿ ಎಂಬುದು ಬಾಬಾಸಾಹೇಬ್ ಅಂಬೇಡ್ಕರ್ ಅವರ ಧ್ಯೇಯ ವಾಕ್ಯವಾಗಿತ್ತು. ಆದರೆ ಪ್ರಸ್ತುತ ಶಾಲೆಯ ವಾತಾವರಣವೇ ಅಸ್ವಚ್ಚತೆಯಿಂದ ಕೂಡಿರುವುದು ವಿಷಾದಕರ ಸಂಗತಿ ಎಂದು ಪೋಷಕರು ಅಭಿಪ್ರಾಯಪಟ್ಟರು. ಇದೇ ಆವರಣದಲ್ಲಿ ಶಾಲೆಯ ಮುಖ್ಯಸ್ಥರು, ಶಿಕ್ಷಕರು ಹಾಗೂ ಸಂಬಂಧಪಟ್ಟ ಅಧಿಕಾರಿಗಳು ದಿನನಿತ್ಯ ಬೋಧನೆ ನಡೆಸುತ್ತಿದ್ದರೂ ಆವರಣ ಸ್ವಚ್ಚಗೊಳಿಸಲು ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.


ಇದನ್ನೂ ಓದಿ: ರಾಯಚೂರು | ಟ್ರಾಕ್ಟರ್ ಗೆ ಟಿಪ್ಪರ್ ಡಿಕ್ಕಿ; ಓರ್ವ ಸಾವು
ಗ್ರಾಮದ “ಗ್ರಂಥಾಲಯವೆಂದರೆ ಶಾಂತ, ವಿಶಾಲ ಹಾಗೂ ಓದಿಗೆ ಅನುಕೂಲವಾಗಿರುವ ವಾತಾವರಣ ಇರಬೇಕು. ಇದೇ ಭಾವನೆಯಿಂದ ವಿದ್ಯಾರ್ಥಿಗಳು ಇಲ್ಲಿ ಬರುತ್ತಾರೆ. ಆದರೆ ವಾಸ್ತವದಲ್ಲಿ ಗ್ರಂಥಾಲಯದ ಸುತ್ತಮುತ್ತ ಗಿಡಗಂಟಿಗಳು ಹೆಚ್ಚಾಗಿ ಬೆಳೆದಿರುವುದರಿಂದ ಓದಿಗೆ ಬಹಳ ತೊಂದರೆಯಾಗುತ್ತಿದೆ. ಅಸ್ವಚ್ಛ ವಾತಾವರಣದಿಂದ ವಿದ್ಯಾರ್ಥಿಗಳು ಗ್ರಂಥಾಲಯಕ್ಕೆ ಬರಲು ಹಿಂಜರಿಯುವಂತಾಗಿದೆ. ಸಂಬಂಧಪಟ್ಟ ಅಧಿಕಾರಿಗಳು ಕೂಡಲೇ ಕ್ರಮ ಕೈಗೊಂಡು ಗಿಡಗಂಟಿಗಳನ್ನು ತೆರವುಗೊಳಿಸಿ, ಓದುಗರಿಗೆ ಅನುಕೂಲಕರ ವಾತಾವರಣ ಕಲ್ಪಿಸಬೇಕು” ಎಂದು ಆಗ್ರಹಿಸಿದರು.
ಸಮಸ್ಯೆ ಬಗ್ಗೆ ಈದಿನ.ಕಾಮ್ ಮಾಧ್ಯಮ ಜೊತೆ ಮಾತನಾಡಿದ ಶಾಲೆಯ ಮುಖ್ಯಸ್ಥರಾದ ಶಂಕರ ಕಾಮ್ಡೆ, ಶಾಲೆಯ ಸಮಸ್ಯೆ ನಿವಾರಣೆಗೆ ಸಂಬಂಧಿಸಿ ಗ್ರಾಮ ಪಂಚಾಯತ್‌ಗೆ ಹಲವು ಬಾರಿ ಮನವಿ ಸಲ್ಲಿಸಲಾಗಿದೆ. ಆದರೆ ಇದುವರೆಗೂ ಯಾವುದೇ ಪರಿಹಾರ ಸಿಕ್ಕಿಲ್ಲ. ಶಿಕ್ಷಣ, ಆರೋಗ್ಯ ಮತ್ತು ಭದ್ರತೆಯನ್ನು ಗಮನದಲ್ಲಿಟ್ಟು ಸಮಸ್ಯೆಯನ್ನು ಅತೀ ಶೀಘ್ರದಲ್ಲಿ ಸ್ವಚ್ಛಗೊಳಿಸಲಾಗುವುದಾಗಿ ಭರವಸೆ ನೀಡಿದರು.





