ರಾಯಚೂರು ಶಕ್ತಿನಗರ ಶಾಖೋತ್ಪನ್ನ ವಿದ್ಯುತ್ ಕೇಂದ್ರವು ದೇಶದಲ್ಲಿಯೇ ಹೆಸರುವಾಸಿ. ರಾಜ್ಯಕ್ಕೆ ವಿದ್ಯುತ್ ನೀಡುವುದರಲ್ಲಿ ಈ ವಿದ್ಯುತ್ ಕೇಂದ್ರ ಪಾತ್ರ ಮುಖ್ಯವಾಗಿದೆ. ಆದರೆ, ಇಲ್ಲಿನ ಶಾಖೋತ್ಪನ್ನ ಕೇಂದ್ರದಲ್ಲಿ ಕೆಲಸ ಮಾಡುವ ಕಾರ್ಮಿಕರು ವಸತಿ ಸೇರಿ ಮೂಲ ಸೌಕರ್ಯಗಳ ಕೊರತೆ ಎದುರಿಸುತ್ತಿದ್ದಾರೆ.
ರಾಜ್ಯದಲ್ಲಿ ಸ್ಥಾಪಿಸಲಾದ ಮೊದಲ ಉಷ್ಣ ವಿದ್ಯುತ್ ಸ್ಥಾವರವಾಗಿದೆ. ಇಡೀ ದೇಶಕ್ಕೆ ವಿದ್ಯುತ್ ಪೂರೈಕೆ ಮಾಡುವ ಪ್ರಮುಖ ಶಾಖೋತ್ಪನ್ನ ವಿದ್ಯುತ್ ಕೇಂದ್ರಗಳಲ್ಲಿ ರಾಯಚೂರು ಕೇಂದ್ರವು ಮೊದಲನೇ ಸ್ಥಾನದಲ್ಲಿದೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.ಈ ಶಾಖೋತ್ಪನ್ನ ವಿದ್ಯುತ್ ಕೇಂದ್ರಕ್ಕೆ ರಾಜ್ಯದ ವಿವಿಧ ಜಿಲ್ಲೆಗಳು ಮಾತ್ರವಲ್ಲದೆ ದೇಶದ ನಾನಾ ಭಾಗಗಳಿಂದ ಕಾರ್ಮಿಕರು ವಲಸೆ ಬಂದು ಕೆಲಸ ಮಾಡುತ್ತಿದ್ದಾರೆ.
ಶಾಖೋತ್ಪನ್ನ ಕೇಂದ್ರದಲ್ಲಿ ಸುಮಾರು 5 ಸಾವಿರಕ್ಕೂ ಹೆಚ್ಚು ಕಾರ್ಮಿಕರು ಕೆಲಸ ಮಾಡುತ್ತಿದ್ದಾರೆ. ಇದರಲ್ಲಿ 2000 ಸಾವಿರಕ್ಕಿಂತ ಹೆಚ್ಚು ಗುತ್ತಿಗೆ ಕಾರ್ಮಿಕರು ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಆದರೆ ಕಾರ್ಮಿಕರಿಗಾಗಿ ನಿರ್ಮಿಸಲಾದ 500ಕ್ಕೂ ಅಧಿಕ ವಸತಿ ಗೃಹಗಳು ನಿರ್ವಹಣೆಯಿಲ್ಲದೆ ಪಾಳು ಬಿದ್ದಿವೆ. ವಸತಿ ಗೃಹಗಳ ಸೂಕ್ತ ಬಳಕೆಯಾಗದೇ ಇರುವುದರಿಂದ ಇಲ್ಲಿ ಕೆಲಸ ಮಾಡುವ ಕಾರ್ಮಿಕರು ಹೊರಗಡೆ ಬಾಡಿಗೆ ಮನೆಗಳಲ್ಲಿ ವಾಸಿಸಬೇಕಾದ ಪರಿಸ್ಥಿತಿ ಇದೆ. ಕನಿಷ್ಠ ಸಂಬಳ ಪಡೆದು ಕೆಲಸ ಮಾಡುವ ಸಾರಿಗೆ, ಮನೆ ಖರ್ಚು ಜೊತೆಯಲ್ಲಿ ಈಗ ಮನೆ ಬಾಡಿಗೆ ವೆಚ್ಚ ಹೊರೆಯಾಗಿ ಪರಿಣಮಿಸಿದೆ.

ಇಲ್ಲಿ ಕೆಲಸ ಮಾಡುವ ಗುತ್ತಿಗೆ ಕಾರ್ಮಿಕರಿಗೆ ಸೂಕ್ತ ವ್ಯವಸ್ಥೆ ಇಲ್ಲದಿರುವುದರಿಂದ ನಿತ್ಯ ಸುತ್ತಲಿನ ಹಳ್ಳಿಗಳಿಂದ ಬರುವಂತಾಗಿದೆ. ಇದರಿಂದ ಅವರ ದೈಹಿಕ ಮತ್ತು ಮಾನಸಿಕ ಆರೋಗ್ಯದ ಮೇಲೂ ಪರಿಣಾಮ ಬೀರುತ್ತಿದೆ. ಕೇಂದ್ರದಲ್ಲೇ ಇರುವ ವಸತಿ ಗೃಹಗಳು ಹಂಚಿಕೆಯಾದರೆ ಕಾರ್ಮಿಕರ ಆರ್ಥಿಕ ವೆಚ್ಚದ ಹೊರೆ ತಗ್ಗುವ ಜೊತೆಗೆ ನೆಮ್ಮದಿಯಿಂದ ಬದುಕುಬಹುದಾಗಿದೆ ಎಂಬುದು ಪ್ರಜ್ಞಾವಂತರ ಅಭಿಪ್ರಾಯ.
ವಸತಿ, ಶುದ್ಧ ಕುಡಿಯುವ ನೀರು, ಸ್ವಚ್ಚತೆ, ಆರೋಗ್ಯ ಸೌಲಭ್ಯಗಳ ಕೊರತೆ ಕಾರ್ಮಿಕರಲ್ಲಿ ಅಸಮಾಧಾನ ಮೂಡಿಸಿದೆ. ಸರ್ಕಾರಿ ಆಸ್ತಿಯಾದ ವಸತಿ ಮನೆಗಳು ಹಾಳಾಗಿರುವುದು ಸಾರ್ವಜನಿಕ ಸಂಪತ್ತಿನ ನಷ್ಟಕ್ಕೂ ಕಾರಣವಾಗಿದೆ. ಕಾರ್ಮಿಕರ ಶ್ರಮದ ಫಲವಾಗಿ ದೇಶದ ನಾನಾ ಭಾಗಗಳಿಗೆ ವಿದ್ಯುತ್ ಪೂರೈಕೆಯಾಗುತ್ತಿದ್ದರೂ, ಅವರ ಬದುಕು ಮಾತ್ರ ಅತಂತ್ರ ಸ್ಥಿತಿಯಲ್ಲಿದೆ. ವಸತಿ ಗೃಹಗಳ ದುರಸ್ತಿಗೊಳಿಸಿ ಪುನಃ ಕಾರ್ಮಿಕರಿಗೆ ಒದಗಿಸಿದರೆ ಬಾಡಿಗೆ ಸಮಸ್ಯೆ ನಿವಾರಣೆಯಾಗಲಿದೆ ಎಂಬ ಅಭಿಪ್ರಾಯ ವ್ಯಕ್ತವಾಗಿದೆ.
ಹಾಳುಬಿದ್ದ ಮನೆಗಳ ದುರಸ್ತಿ, ಹೊಸ ವಸತಿ ನಿರ್ಮಾಣ ಹಾಗೂ ಮೂಲಭೂತ ಸೌಕರ್ಯ ಒದಗಿಸುವ ಅಗತ್ಯ ತುರ್ತುವಾಗಿದೆ.
ಕಾರ್ಮಿಕರಿಗೆ ನ್ಯಾಯಸಮ್ಮತ ಸೌಲಭ್ಯಗಳು ದೊರೆತರೆ ಮಾತ್ರ ಈ ವಿದ್ಯುತ್ ಕೇಂದ್ರದ ಅಭಿವೃದ್ಧಿ ಸಂಪೂರ್ಣವಾಗುತ್ತದೆ. ಹಳೆಯ ಕಾರ್ಮಿಕರು ತಮ್ಮ ಕುಟುಂಬಗಳೊಂದಿಗೆ ಕಳೆದ ದಿನಗಳನ್ನು ನೆನಪಿಸಿಕೊಂಡು ಬೇಸರ ವ್ಯಕ್ತಪಡಿಸುತ್ತಿದ್ದಾರೆ. ಇಂದಿಗೂ ಅನೇಕ ಕಾರ್ಮಿಕರು ವಸತಿ ಸಮಸ್ಯೆಯಿಂದ ಬಳಲುತ್ತಿದ್ದರೂ. ಕೆಪಿಸಿಎಲ್ ಆಡಳಿತದ ನಿರ್ಲಕ್ಷ್ಯದಿಂದಾಗಿ ಈ ಸಾಧ್ಯತೆಗಳು ಕೈ ತಪ್ಪುತ್ತಿರುವುದು ವಿಷಾದಕರವಾಗಿದೆ.

ಗುತ್ತಿಗೆ ಕಾರ್ಮಿಕ ರಂಗಾರೆಡ್ಡಿ ಮಾತನಾಡಿ, ʼಸುಮಾರು 20 ವರ್ಷಗಳಿಂದ ಕೆಪಿಸಿಎಲ್ ಕಾರ್ಮಿಕರ ಬಳಕೆಗೆ ವಸತಿ ಮನೆಗಳು ಯಾವುದೇ ನಿರ್ವಹಣೆ ಇಲ್ಲದೆ ಹಾಳುಬಿದ್ದ ಸ್ಥಿತಿಗೆ ತಲುಪಿವೆ. ಈಗಾಗಲೇ ಮನೆಗಳ ಗೋಡೆಗಳಲ್ಲಿ ಬಿರುಕು ಬಿಟ್ಟಿದೆ. ಮೇಲ್ಛಾವಣಿ ಕುಸಿಯುವಂತಾಗಿವೆ. ಬಾಗಿಲು–ಕಿಟಕಿ ಮುರಿದು ಬಿದ್ದಿದ್ದು, ಒಳಭಾಗ ಸಂಪೂರ್ಣವಾಗಿ ನಿರ್ಜನವಾಗಿದೆ.
ವಿದ್ಯುತ್ ಹಾಗೂ ನೀರಿನ ಸಂಪರ್ಕಗಳು ವರ್ಷಗಳಿಂದ ಸ್ಥಗಿತಗೊಂಡಿವೆ. ಸುತ್ತಮುತ್ತಲಿನ ಆವರಣದಲ್ಲಿ ಮುಳ್ಳು ಕಂಟಿ, ಕಳೆಗಳು ದಟ್ಟವಾಗಿ ಬೆಳೆದಿವೆ. ಇದರಿಂದ ಸರ್ಪ, ವಿಷಕಾರಿ ಕೀಟಗಳ ಭೀತಿ ಹೆಚ್ಚಾಗಿದೆ. ಮಳೆಗಾಲದಲ್ಲಿ ನೀರು ಸಂಗ್ರಹಗೊಂಡು ಆವಾಸ ಸ್ಥಾನವಾಗಿ ಮಾರ್ಪಾಡಾಗಿ ಅಪರಾಧ ಚಟುವಟಿಕೆಗಳಿಗೆ ತಾಣವಾಗುತ್ತಿದೆʼ ಎಂದು ಆತಂಕ ವ್ಯಕ್ತಪಡಿಸಿದರು.
ಕಾರ್ಖಾನೆ ವ್ಯಾಪ್ತಿಯಲ್ಲಿ ಸುಮಾರು 2500 ರಿಂದ 3000 ವರೆಗೂ ವಸತಿ ಗೃಹಗಳಿವೆ. ಅದರಲ್ಲಿ 2000 ವಸತಿ ಗೃಹಗಳು ಖಾಯಂ ಕಾರ್ಮಿಕರಿಗೆ ನೀಡಿರುತ್ತಾರೆ. ಇನ್ನೂ 1,000ಕ್ಕೂ ಹೆಚ್ಚು ವಸತಿ ಗೃಹಗಳು ಖಾಲಿಯಾಗಿ ಬಿದ್ದಿದ್ದು, ಅವುಗಳನ್ನು ಗುತ್ತಿಗೆ ಕಾರ್ಮಿಕರಿಗೆ ನೀಡದೇ ನಿರ್ಲಕ್ಷ್ಯ ಮಾಡಲಾಗುತ್ತಿದೆ. ಇದರಿಂದ ಮನೆಗಳು ಹಾಳಾಗುತ್ತಿದ್ದು, ಗುತ್ತಿಗೆ ಕಾರ್ಮಿಕರು 15 ರಿಂದ 20 ಕಿಲೋಮೀಟರ್ ದೂರದ ಹಳ್ಳಿಗಳಿಂದ ಪ್ರತಿದಿನ ಕೆಲಸಕ್ಕೆ ಬರುವ ಪರಿಸ್ಥಿತಿ ಎದುರಿಸುತ್ತಿದ್ದಾರೆ.
ಖಾಲಿ ಇರುವ ವಸತಿಗಳನ್ನು ಪಾಳಿಯಲ್ಲಿ ಕೆಲಸ ಮಾಡುವ ಗುತ್ತಿಗೆ ಕಾರ್ಮಿಕರಿಗೆ ನೀಡಿದಲ್ಲಿ, ದೂರದ ಪ್ರಯಾಣ ತಪ್ಪಿಸಿ, ವಿಶೇಷವಾಗಿ ರಾತ್ರಿ ಪಾಳಿಗೆ ಬರುವಾಗ ಸಂಭವಿಸಬಹುದಾದ ಅಪಘಾತಗಳನ್ನು ತಡೆಯಲು ಸಾಧ್ಯವಾಗುತ್ತದೆ. ಜೊತೆಗೆ ವಸತಿಗಳನ್ನು ಸ್ವಚ್ಛವಾಗಿ ಕಾಪಾಡಿಕೊಳ್ಳಲು ಸಹ ಅನುಕೂಲವಾಗುತ್ತದೆ. ಕಡಿಮೆ ಬಾಡಿಗೆಯಲ್ಲಿ ಮನೆಗಳನ್ನು ನೀಡಿದರೆ ಆರ್‌ಟಿಪಿಎಸ್ ಕಂಪನಿಗೂ ಆರ್ಥಿಕ ಲಾಭವಾಗಲಿದೆ.
ʼಕಾರ್ಮಿಕರು ಹಾಗೂ ಕಂಪನಿ ಆಡಳಿತ ಅಧಿಕಾರಿಗಳು ಕೂಡಲೇ ವಸತಿ ಹಾಗೂ ಮೂಲಭೂತ ಸೌಲಭ್ಯಗಳ ನೈಜ ಸಮಸ್ಯೆಯನ್ನು ಅಧ್ಯಯನ ಮಾಡಿ, ಕಾರ್ಮಿಕರಿಗೆ ಸಿಗಬೇಕಾದ ಎಲ್ಲಾ ಸೌಲಭ್ಯಗಳನ್ನು ಶೀಘ್ರದಲ್ಲಿ ಒದಗಿಸಬೇಕು. ಆರ್‌ಟಿಪಿಎಸ್‌ನ ಕಾರ್ಖಾನೆಯಲ್ಲಿ 20-30 ವರ್ಷಗಳ ಕಾಲ ಕೆಲಸ ನಿರ್ವಹಿಸುತ್ತಿರುವ ಅನೇಕ ಕಾರ್ಮಿಕರಿಗೆ ಇಂದಿಗೂ 30 ಸಾವಿರ ವೇತನವೂ ಲಭಿಸುತ್ತಿಲ್ಲ. ವಿಶೇಷವಾಗಿ ಪಾಳಿಯಲ್ಲಿ ಕೆಲಸ ಮಾಡುವ ಗುತ್ತಿಗೆ ಕಾರ್ಮಿಕರಿಗೆ ವಸತಿ ಸೌಲಭ್ಯ, ಕ್ಯಾಂಟೀನ್, ಟೂ-ಕ್ಯಾನ್ ಸೌಲಭ್ಯ ಹಾಗೂ ಅಗತ್ಯ ಸುರಕ್ಷತಾ ಉಪಕರಣಗಳು ಇನ್ನೂ ಸಂಪೂರ್ಣವಾಗಿ ಲಭ್ಯವಾಗಿಲ್ಲ ಎಂದು ಕಾರ್ಮಿಕರು ಅಸಮಾಧಾನ ವ್ಯಕ್ತಪಡಿಸುತ್ತಾರೆ.

ಕಾರ್ಮಿಕರಿಗಾಗಿ ನಿರ್ಮಿಸಲಾದ ಮನೆ ಬಳಕೆಯಿಲ್ಲದೆ ನಾಶವಾಗುತ್ತಿರುವುದು ವಿಷಾದಕರವಾಗಿದೆ. ನಿರ್ವಹಣೆ ಮಾಡದಿರುವುದು ಕೆಪಿಸಿಎಲ್ ಆಡಳಿತದ ನಿರ್ಲಕ್ಷ್ಯಕ್ಕೆ ಸಾಕ್ಷಿಯಾಗಿದೆ. ಕಾರ್ಮಿಕರಿಗೆ ವಸತಿ ಸೌಲಭ್ಯ ಒದಗಿಸುವ ಅವಕಾಶ ಇದ್ದರೂ ಅದನ್ನು ಬಳಸಿಕೊಳ್ಳಲಾಗುತ್ತಿಲ್ಲ. ಈ ಮನೆಗಳನ್ನು ದುರಸ್ತಿ ಮಾಡಿ ಪುನಃ ಬಳಕೆಗೆ ತರುವ ಸಾಧ್ಯತೆ ಇದೆ ಎಂದು ಕಾರ್ಮಿಕರ ಆಕ್ರೋಶ.
ʼವಿದ್ಯುತ್ ಉತ್ಪಾದನಾ ಕೇಂದ್ರದಲ್ಲಿ ದಶಕಗಳ ಕಾಲ ದುಡಿದರೂ ಸಹ ಕಾರ್ಮಿಕರಿಗೆ ಯಾವುದೇ ಮನೆ ವಸತಿ ಸೌಲಭ್ಯ ಕಲ್ಪಿಸಿಲ್ಲ. ಮನೆ ವಸತಿ ಇಲ್ಲದ ಕಾರಣದಿಂದಲೇ ತಾವು ಕಳೆದ 30 ವರ್ಷಗಳಿಂದ ಬಾಡಿಗೆ ಮನೆಯಲ್ಲಿ ಜೀವನ ನಡೆಸಬೇಕಾದ ಸ್ಥಿತಿ ನಿರ್ಮಾಣವಾಗಿದೆ. ಸುಮಾರು 30 ವರ್ಷಗಳಿಂದ ವಿದ್ಯುತ್ ಕೇಂದ್ರದಲ್ಲಿ ಸೇವೆ ಸಲ್ಲಿಸುತ್ತಿರುವ ಕಾರ್ಮಿಕರೊಬ್ಬರು ತಮ್ಮ ಅಳಲನ್ನು ವ್ಯಕ್ತಪಡಿಸಿದ್ದಾರೆ.
ʼವಿದ್ಯುತ್ ಉತ್ಪಾದನಾ ಘಟಕದಲ್ಲಿ ಬೂದಿ ವಿಭಾಗ ಸೇರಿದಂತೆ ಕಠಿಣ ಹಾಗೂ ಅಪಾಯಕರ ಕೆಲಸಗಳಲ್ಲಿ ಕಾರ್ಮಿಕರು ನಿರಂತರವಾಗಿ ದುಡಿಯುತ್ತಿದ್ದಾರೆ. ಕಾರ್ಮಿಕರಿಗಾಗಿ ಮನೆಗಳನ್ನು ನಿರ್ಮಿಸಲಾಗಿದ್ದರೂ ಅವುಗಳನ್ನು ಸಣ್ಣ ಕಾರ್ಮಿಕರಿಗೆ ನೀಡದೇ ನಿರ್ಲಕ್ಷ್ಯ ವಹಿಸಲಾಗಿದೆ. ಕಾರ್ಮಿಕರಿಗಾಗಿ ನಿರ್ಮಿಸಲಾದ ಸುಮಾರು ಮನೆಗಳು ಕಳೆದ 20 ವರ್ಷಗಳಿಂದ ಬಳಕೆಯಿಲ್ಲದೆ ಹಾಳು ಬಿದ್ದಿದ್ದು, ಸುತ್ತಮುತ್ತ ಗಿಡಗಂಟಿ ಬೆಳೆದು ಅವ್ಯವಸ್ಥೆ ಆವರಿಸಿದೆ. ಈ ಮನೆಗಳನ್ನು ದುರಸ್ತಿ ಮಾಡಿ ಕಾರ್ಮಿಕರಿಗೆ ನೀಡಿದರೆ ಅವರ ಬದುಕಿಗೆ ಬಹು ದೊಡ್ಡ ನೆರವಾಗುತ್ತದೆʼ ಎಂದು ಕಾರ್ಮಿಕರು ಒತ್ತಾಯಿಸಿದ್ದಾರೆ.
ಸಂಸ್ಥೆಯ ಅಭಿವೃದ್ಧಿಗೆ ತಮ್ಮ ಜೀವನವನ್ನೇ ಮುಡಿಪಾಗಿಟ್ಟ ಕಾರ್ಮಿಕರಿಗೆ ಕನಿಷ್ಠ ಮೂಲಭೂತ ಸೌಲಭ್ಯ ಒದಗಿಸದೆ ನಿರ್ಲಕ್ಷ್ಯ ವಹಿಸುವುದು ವಿಪರ್ಯಾಸದ ಸಂಗತಿ. ಸಂಬಂಧಪಟ್ಟ ಅಧಿಕಾರಿಗಳು ತಕ್ಷಣ ಸ್ಪಂದಿಸಿ ಕಾರ್ಮಿಕರ ವಸತಿ ಸಮಸ್ಯೆಗೆ ಶಾಶ್ವತ ಪರಿಹಾರ ಒದಗಿಸಬೇಕು ಎಂದು ಕಾರ್ಮಿಕರು ಒತ್ತಾಯಿಸಿದ್ದಾರೆ.
ಇದನ್ನೂ ಓದಿ : ಲೋಕನಾಯಕ ʼಭೀಮಣ್ಣ ಖಂಡ್ರೆʼ ವಿಭೂತಿಯಲ್ಲಿ ಲೀನ
ಆರ್‌ಟಿಪಿಎಸ್ ಗುತ್ತಿಗೆ ಕಾರ್ಮಿಕ ಬಸಪ್ಪ ಮಾತನಾಡಿ, “ಪ್ರತಿ ತಿಂಗಳು ನಾವು ಸುಮಾರು 3 ಸಾವಿರ ರೂಪಾಯಿ ಬಾಡಿಗೆ ಕಟ್ಟುತ್ತಿದ್ದೇವೆ. ಕೆಲವೊಮ್ಮೆ ಮನೆ, ಪ್ರಯಾಣ ಹಾಗೂ ಇತರೆ ಹೊರಗಿನ ಖರ್ಚು ಸೇರಿ 5 ಸಾವಿರ ರೂಪಾಯಿವರೆಗೂ ಖರ್ಚಾಗುತ್ತದೆ. ಕೆಪಿಸಿಎಲ್ ವಸತಿಗಳನ್ನು ನಮಗೆ ನೀಡಿದರೆ ಈ ಹೊರಗಿನ ಖರ್ಚು ಬಹಳಷ್ಟು ಕಡಿಮೆಯಾಗುತ್ತದೆ. ಉಳಿದ ಹಣವನ್ನು ಮಕ್ಕಳ ವಿದ್ಯಾಭ್ಯಾಸ ಹಾಗೂ ದೈನಂದಿನ ಅಗತ್ಯಗಳಿಗೆ ಬಳಸಿಕೊಳ್ಳಲು ಸಾಧ್ಯವಾಗುತ್ತದೆ” ಎಂದು ಹೇಳಿದರು.
ಖಾಯಂ ಅಧಿಕಾರಿಗಳಿಗೆ ವಸತಿ ಗೃಹಗಳನ್ನು ನೀಡಲಾಗಿದೆ. ಆದರೆ ಖಾಲಿಯಾಗಿ ಹಾಳು ಬಿದ್ದಿರುವ ಮನೆಗಳನ್ನು ಗುತ್ತಿಗೆ ಕಾರ್ಮಿಕರಿಗೆ ನೀಡಿದರೆ ನಾವು ಅವುಗಳನ್ನು ಸ್ವಚ್ಛವಾಗಿ ಕಾಪಾಡಿಕೊಂಡು ಜೀವನ ನಡೆಸುತ್ತೇವೆ. ಕಚೇರಿಗೆ ತೆರಳಲು ಸಹ ತುಂಬಾ ಅನುಕೂಲವಾಗುತ್ತದೆ. ಹಳ್ಳಿಯಿಂದ ಬರುವಾಗ ಸರಿಯಾದ ಸಮಯಕ್ಕೆ ಬಸ್ ವ್ಯವಸ್ಥೆ ಇಲ್ಲದ ಕಾರಣ ಕೆಲವೊಮ್ಮೆ ರಜೆ ತೆಗೆದುಕೊಳ್ಳಬೇಕಾದ ಪರಿಸ್ಥಿತಿ ಉಂಟಾಗುತ್ತದೆ” ಎಂದು ತಮ್ಮ ಅಳಲು ತೋಡಿಕೊಂಡರು.
ಹಾಳು ಬಿದ್ದಿರುವ ಮನೆಗಳನ್ನು ಗುತ್ತಿಗೆ ಕಾರ್ಮಿಕರಿಗೆ ನೀಡಿದರೆ ನಾವು ಬಾಡಿಗೆ ಕಟ್ಟಲು ಸಿದ್ಧರಿದ್ದೇವೆ. ಸುಮ್ಮನೆ ಮನೆಗಳು ಹಾಳಾಗಿದ್ದರೆ ಯಾವುದೇ ಪ್ರಯೋಜನವಿಲ್ಲ. ವಸತಿಗಳನ್ನು ನೀಡಿದರೆ ನಮಗೆ ಜೀವನ ನಿರ್ವಹಣೆಗೆ ಬಹಳ ಅನುಕೂಲವಾಗುತ್ತದೆ” ಎಂದು ಅವರು ಮನವಿ ಮಾಡಿದರು.

ರಫಿ ಗುರುಗುಂಟ
ಗುಲಬರ್ಗಾ ವಿವಿಯಿಂದ ಪತ್ರಿಕೋದ್ಯಮದಲ್ಲಿ ಎಂ ಎ ಪದವಿ, ಕಲ್ಯಾಣ ಕರ್ನಾಟಕ ವಲಯ ಕೋರ್ಡಿನೇಟರ್




