ಕಳೆದ ಮೂರು ವರ್ಷಗಳಲ್ಲಿ ಮಹಿಳೆಯರು ಮತ್ತು ಬಾಲಕಿಯರ ನಾಪತ್ತೆ ಪ್ರಕರಣಗಳು ಹೆಚ್ಚಾಗುತ್ತಿರುವುದು ಆತಂಕಕ್ಕೆ ಕಾರಣವಾಗಿದೆ. ಕೆಲವು ಪ್ರಕರಣಗಳು ಪತ್ತೆಯಾಗಿದ್ದರೂ, ಇನ್ನೂ ಕೆಲವು ಪ್ರಕರಣಗಳ ಸುಳಿವು ಸಿಗದೇ ಇರುವುದರಿಂದ ಮಾನವ ಕಳ್ಳಸಾಗಣೆ ಜಾಲದ ಬಗ್ಗೆ ಅನುಮಾನ ವ್ಯಕ್ತವಾಗುತ್ತಿದೆ.
2023 ರಿಂದ 2025 ರವರೆಗೆ ಜಿಲ್ಲೆಯಲ್ಲಿ ಒಟ್ಟು 679 ಮಹಿಳೆಯರು ನಾಪತ್ತೆಯಾದ ಪ್ರಕರಣಗಳು ದಾಖಲಾಗಿವೆ. ಈ ಪೈಕಿ 649 ಮಹಿಳೆಯರನ್ನು ಪತ್ತೆ ಹಚ್ಚಲಾಗಿದೆ. ಆದರೆ ಇನ್ನೂ 30 ಮಹಿಳೆಯರ ಪತ್ತೆ ಬಾಕಿಯಿದೆ. ಅವರು ಎಲ್ಲಿದ್ದಾರೆ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ ಎಂಬುದು ಸರ್ಕಾರದ ಅಂಕಿ-ಅಂಶಗಳೇ ಹೇಳುತ್ತವೆ.
ಮಹಿಳೆಯರಷ್ಟೇ 80 ಹೆಣ್ಣು ಮಕ್ಕಳು ಕೂಡಾ ನಾಪತ್ತೆಯಾಗಿದ್ದಾರೆ. ಇವರಲ್ಲಿ 75 ಮಕ್ಕಳನ್ನು ಪತ್ತೆ ಹಚ್ಚಲಾಗಿದೆ, ಆದರೆ ಇನ್ನೂ 5 ಹೆಣ್ಣು ಮಕ್ಕಳು ಪತ್ತೆಯಾಗಿಲ್ಲ. ಈ ಪ್ರಕರಣಗಳು ಮಹಿಳಾ ಸುರಕ್ಷತೆ ಕುರಿತು ಆತಂಕವನ್ನು ಹೆಚ್ಚಿಸಿವೆ.
ವೈಜ್ಞಾನಿಕ ಹೇಳುವುದಾದರೆ ಸಾಲದ ಹೊರೆ, ಕೌಟುಂಬಿಕ ಕಲಹ, ಮಾನಸಿಕ ಹಿಂಸೆ, ಪ್ರೇಮ ಪ್ರಕರಣಗಳು ಮತ್ತು ಆರ್ಥಿಕ ಸಮಸ್ಯೆಗಳು ಸೇರಿದಂತೆ ಹಲವು ಕಾರಣಗಳಿಂದ 18 ವರ್ಷ ಮೇಲ್ಪಟ್ಟವರು ಮನೆ ಬಿಟ್ಟು ಹೋಗುತ್ತಿರುವುದು ಕಂಡುಬರುತ್ತಿದೆ. ಕೆಲವರು ಕುಟುಂಬದ ಒತ್ತಡದಿಂದ ಮನೆಯಿಂದ ಹೊರಟು ಹೋಗುವುದೂ ಇದೆ.
ಹೆಣ್ಣುಮಕ್ಕಳ ನಾಪತ್ತೆಗೆ ಪೋಷಕರ ಅತಿಯಾದ ಶಿಸ್ತು, ಕಿರುಕುಳ, ಹದಿಹರೆಯದ ಆಕರ್ಷಣೆ, ಪ್ರೇಮ ಸಂಬಂಧಗಳು, ಶಿಕ್ಷಣದ ಒತ್ತಡ ಮತ್ತು ಶೈಕ್ಷಣಿಕ ವೈಫಲ್ಯ ಕಾರಣವಾಗುತ್ತಿವೆ ಎಂದು ತಿಳಿದುಬಂದಿದೆ. ಟಿವಿ, ಸಿನಿಮಾ ಮತ್ತು ಮೊಬೈಲ್‌ಗಳಂತಹ ಆಧುನಿಕ ಮಾಧ್ಯಮಗಳ ಪ್ರಭಾವವೂ ಕೆಲವು ಮಕ್ಕಳ ನಿರ್ಧಾರಗಳ ಮೇಲೆ ಪರಿಣಾಮ ಬೀರುತ್ತಿದೆ ಎನ್ನಲಾಗಿದೆ.
ಪೊಲೀಸ್ ಠಾಣೆಗಳಲ್ಲಿ ದಾಖಲಾಗಿರುವ ಮಕ್ಕಳ ನಾಪತ್ತೆ ಪ್ರಕರಣಗಳಲ್ಲಿ ಬಾಲಕರಿಗಿಂತ ಬಾಲಕಿಯರ ಸಂಖ್ಯೆ ಹೆಚ್ಚು ಎಂಬುದು ಗಮನಾರ್ಹವಾಗಿದೆ. ಇದಲ್ಲದೆ, ಕೆಲವು ಪ್ರಕರಣಗಳಲ್ಲಿ ಅಕ್ರಮ ಮಾನವ ಕಳ್ಳಸಾಗಣೆ ಕೂಡಾ ಕಾರಣವಾಗಿರುವ ಸಾಧ್ಯತೆಯನ್ನು ಪೊಲೀಸರು ಪರಿಶೀಲಿಸುತ್ತಿದ್ದಾರೆ.
ಪ್ರತಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಾಪತ್ತೆ ಪ್ರಕರಣಗಳ ಪತ್ತೆಗೆ ಪ್ರತ್ಯೇಕ ತಂಡಗಳನ್ನು ರಚಿಸಲಾಗಿದೆ. ಈ ತಂಡಗಳು ಮಹಿಳೆಯರು ಮತ್ತು ಮಕ್ಕಳ ನಾಪತ್ತೆ ಪ್ರಕರಣಗಳ ತನಿಖೆ ನಡೆಸಿ ಪತ್ತೆ ಹಚ್ಚುವ ಜವಾಬ್ದಾರಿ ಹೊಂದಿವೆ. ಕಾನೂನು ಸುವ್ಯವಸ್ಥೆ ಸೇರಿದಂತೆ ಇತರ ಅಪರಾಧ ಪ್ರಕರಣಗಳ ಒತ್ತಡದ ನಡುವೆಯೂ ಈ ಪ್ರಕರಣಗಳ ತನಿಖೆಗೆ ಆದ್ಯತೆ ನೀಡುವಂತೆ ಪೊಲೀಸ್ ಇಲಾಖೆ ಸೂಚಿಸಿದೆ.
ಪೊಲೀಸ್ ಮೂಲಗಳ ಪ್ರಕಾರ, ಪ್ರೇಮ ಪ್ರಕರಣಗಳಲ್ಲಿ ನಾಪತ್ತೆಯಾದವರಲ್ಲಿ ಬಹುತೇಕರು ಪತ್ತೆಯಾಗುತ್ತಾರೆ. ಆದರೆ ಅಪಹರಣ ಅಥವಾ ಮಾನವ ಕಳ್ಳಸಾಗಣೆ ಜಾಲಕ್ಕೆ ಸಿಲುಕಿದವರು ಪತ್ತೆಯಾಗುವುದು ಅಪರೂಪ ಎಂಬ ಆತಂಕ ವ್ಯಕ್ತವಾಗಿದೆ. ಈ ಹಿನ್ನೆಲೆಯಲ್ಲಿ ಗೃಹ ಇಲಾಖೆ ಈ ಪ್ರಕರಣಗಳ ಬಗ್ಗೆ ಗಂಭೀರ ಕ್ರಮ ಕೈಗೊಳ್ಳಬೇಕೆಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.
ಈ ಬಗ್ಗೆ ಛಲವಾದಿ ಮಹಾಸಭಾದ ಜಿಲ್ಲಾಧ್ಯಕ್ಷ ಅರ್ಚನಾ ಸುಂಕಾರಿ ಮಾತನಾಡಿ, ʼಇತ್ತೀಚಿನ ದಿನಗಳಲ್ಲಿ ಮಹಿಳೆಯರು ಹಾಗೂ ಹೆಣ್ಣು ಮಕ್ಕಳು ನಾಪತ್ತೆಯಾಗುತ್ತಿರುವ ಘಟನೆಗಳು ಹೆಚ್ಚಾಗುತ್ತಿವೆ. ವಿಶೇಷವಾಗಿ ಹಾಸ್ಟೆಲ್‌ಗಳು ಮತ್ತು ಸ್ಲಂ ಪ್ರದೇಶಗಳಲ್ಲಿ ಇಂತಹ ಪ್ರಕರಣಗಳು ಹೆಚ್ಚು ಕಂಡು ಬರುತ್ತಿರುವುದು ಗಂಭೀರವಾಗಿ ಪರಿಗಣಿಸಬೇಕುʼ ಎಂದು ಹೇಳಿದರು.
ʼಮಕ್ಕಳ ಸುರಕ್ಷತೆ ಕುರಿತು ಸಮಾಜದಲ್ಲಿ ಜಾಗೃತಿ ಮೂಡಿಸುವುದು ಅತ್ಯಂತ ಅಗತ್ಯವಾಗಿದೆ. ಈ ನಿಟ್ಟಿನಲ್ಲಿ ವಿವಿಧ ಕಡೆಗಳಲ್ಲಿ ಜಾಗೃತಿ ಕಾರ್ಯಕ್ರಮಗಳನ್ನು ಆಯೋಜಿಸಬೇಕು. ಜೊತೆಗೆ ಪೊಲೀಸ್ ಇಲಾಖೆಯ ʼಅಕ್ಕ ಪಡೆʼಯ ಮೂಲಕ ಮಹಿಳೆಯರು ಮತ್ತು ಮಕ್ಕಳಿಗೆ ಕಾನೂನು ಅರಿವು ಮೂಡಿಸುವ ಕಾರ್ಯ ನಿರಂತರವಾಗಿ ನಡೆಯಬೇಕಿದೆʼ ಎಂದು ಅಭಿಪ್ರಾಯಪಟ್ಟರು.
ಮಹಿಳಾ ಹಕ್ಕುಗಳಿಗಾಗಿ ಕೆಲಸ ಮಾಡುತ್ತಿರುವ ಎನ್‌ಜಿಒಗಳು ಮತ್ತು ಮಹಿಳಾ ಸಂಘಟನೆಗಳನ್ನು ಕೂಡಾ ಸೇರಿಸಿಕೊಂಡು ಜಂಟಿಯಾಗಿ ಕಾರ್ಯಕ್ರಮಗಳನ್ನು ನಡೆಸಬೇಕು. ಸಮಾಜದ ಎಲ್ಲ ವರ್ಗಗಳ ಸಹಭಾಗಿತ್ವದಿಂದ ಮಾತ್ರ ಈ ಸಮಸ್ಯೆಯನ್ನು ಪರಿಣಾಮಕಾರಿಯಾಗಿ ಎದುರಿಸಲು ಸಾಧ್ಯ ಎಂದು ಹೇಳಿದರು.
ಸರ್ಕಾರ ಆರಂಭಿಸಿರುವ ಮಹಿಳಾ ಸಹಾಯವಾಣಿ ಹಾಗೂ ಮಕ್ಕಳ ಸಹಾಯವಾಣಿ ಸೇವೆಗಳು ಕೇವಲ ಹೆಸರಿಗೆ ಮಾತ್ರ ಉಳಿಯಬಾರದು. ಅವುಗಳನ್ನು ಪರಿಣಾಮಕಾರಿ ಹಾಗೂ ಚಾಲ್ತಿಯಲ್ಲಿರುವ ವ್ಯವಸ್ಥೆಯಾಗಿ ರೂಪಿಸಿ, ಸಂಕಷ್ಟದಲ್ಲಿರುವವರಿಗೆ ತಕ್ಷಣ ಸಹಾಯ ದೊರೆಯುವಂತೆ ಮಾಡಬೇಕಾಗಿದೆ ಎಂಬುದು ಸಾರ್ವಜನಿಕರ ಅಭಿಪ್ರಾಯ.
ಪ್ರತಿ ಸಮುದಾಯ ಭವನದಲ್ಲಿ ವಾರಕ್ಕೊಮ್ಮೆ ಮಹಿಳಾ ಜಾಗೃತಿ ಅಭಿಯಾನ ಕಾರ್ಯಕ್ರಮಗಳನ್ನು ಆಯೋಜಿಸಬೇಕು ಎಂದು ಅವರು ಮುಖಂಡರೊಬ್ಬರು ಒತ್ತಾಯಿಸಿದರು.
ಈ ಸುದ್ದಿ ಓದಿದ್ದೀರಾ? ರಾಯಚೂರು | ಶಿಕ್ಷಕರ ಹುದ್ದೆ ಭರ್ತಿ, ಕನ್ನಡ ನಾಮಫಲಕ ಕಡ್ಡಾಯ; ಕನ್ನಡ ಸೇನೆ ಆಗ್ರಹ
ಈ ಬಗ್ಗೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಗೆ ಹಲವು ಬಾರಿ ಸಂಪರ್ಕಿಸಿದರು ಕರೆ ಸ್ವೀಕರಿಸಲಿಲ್ಲ.

ರಫಿ ಗುರುಗುಂಟ
ಗುಲಬರ್ಗಾ ವಿವಿಯಿಂದ ಪತ್ರಿಕೋದ್ಯಮದಲ್ಲಿ ಎಂ ಎ ಪದವಿ, ಕಲ್ಯಾಣ ಕರ್ನಾಟಕ ವಲಯ ಕೋರ್ಡಿನೇಟರ್




