ರಾಯಚೂರು ಜಿಲ್ಲೆಯಲ್ಲಿ ರಸ್ತೆ ಅಪಘಾತಗಳು ದಿನೇ ದಿನೇ ಹೆಚ್ಚುತ್ತಿರುವುದು ಗಂಭೀರ ಸಮಸ್ಯೆಯಾಗಿ ಪರಿಣಮಿಸಿದೆ. ಸಂಚಾರ ನಿಯಮಗಳನ್ನು ಪಾಲಿಸದೇ ವಾಹನ ಚಾಲನೆ ಮಾಡುವುದು, ಅತಿವೇಗ, ಹೆಲ್ಮೆಟ್ ಹಾಗೂ ಸೀಟ್‌ಬೆಲ್ಟ್ ಬಳಸದಿರುವುದು ಅಪಘಾತಗಳಿಗೆ ಪ್ರಮುಖ ಕಾರಣಗಳಾಗಿವೆ.
ಜಿಲ್ಲಾದ್ಯಂತ ಹಾಳಾದ ರಸ್ತೆಗಳು, ಗುಂಡಿ ತುಂಬಿದ ಮಾರ್ಗಗಳು ಹಾಗೂ ಸಮರ್ಪಕ ರಸ್ತೆ ನಿರ್ವಹಣೆಯ ಕೊರತೆಯೇ ಅನೇಕ ಅಪಘಾತಗಳಿಗೆ ಕಾರಣವೆಂದು ಸಾರ್ವಜನಿಕರು ಆರೋಪಿಸುತ್ತಿದ್ದಾರೆ. ರಸ್ತೆ ಸುರಕ್ಷತೆ ಬಗ್ಗೆ ಜಾಗೃತಿ, ನಿಯಮಗಳ ಕಟ್ಟುನಿಟ್ಟಿನ ಅನುಷ್ಠಾನ ಹಾಗೂ ರಸ್ತೆ ಸುಧಾರಣೆಗೆ ತಕ್ಷಣ ಕ್ರಮ ಕೈಗೊಳ್ಳದಿದ್ದರೆ ಅಪಘಾತಗಳ ಪ್ರಮಾಣ ಇನ್ನಷ್ಟು ಹೆಚ್ಚುವ ಆತಂಕವಿದೆ.
ʼಅಧಿಕ ರಸ್ತೆ ಅಪಘಾತಗಳು ಸಾರ್ವಜನಿಕರಲ್ಲಿ ಆತಂಕ ಮೂಡಿಸುತ್ತಿವೆ. ಪ್ರತಿದಿನವೂ ಒಂದಿಲ್ಲೊಂದು ಅಪಘಾತ ನಡೆದೇ ನಡೆಯುತ್ತಿದ್ದು, ಅಮೂಲ್ಯ ಜೀವಗಳು ಕಳೆದುಕೊಳ್ಳುತ್ತಿರುವುದು ದುಃಖಕರ ಸಂಗತಿಯಾಗಿದೆ. ಅತಿವೇಗದ ಚಾಲನೆ, ಮದ್ಯಪಾನ ಮಾಡಿ ವಾಹನ ಓಡಿಸುವುದು, ಮೊಬೈಲ್ ಬಳಕೆ, ಹಾಗೂ ಸಂಚಾರ ನಿಯಮಗಳನ್ನು ನಿರ್ಲಕ್ಷಿಸುವುದರಿಂದ ಅಪಘಾತಗಳ ಸಂಖ್ಯೆ ಹೆಚ್ಚುತ್ತಿದೆʼ ಎಂದು ಸಂಚಾರ ಪೊಲೀಸರು ತಿಳಿಸಿದ್ದಾರೆ.
ರಸ್ತೆ ಅಪಘಾತಗಳನ್ನು ತಡೆಗಟ್ಟಲು ರಸ್ತೆ ದುರಸ್ತಿ, ಅಪಾಯಕಾರಿ ತಿರುವುಗಳಲ್ಲಿ ಸೂಚನಾ ಫಲಕಗಳು, ವೇಗ ನಿಯಂತ್ರಣ ಕ್ರಮಗಳು ಹಾಗೂ ರಸ್ತೆ ಸುರಕ್ಷತಾ ಜಾಗೃತಿ ಕಾರ್ಯಕ್ರಮಗಳನ್ನು ಪರಿಣಾಮಕಾರಿಯಾಗಿ ಜಾರಿಗೊಳಿಸುವ ಅಗತ್ಯವಿದೆ. ಜೊತೆಗೆ, ವಾಹನ ಸವಾರರು ಸ್ವಯಂ ಶಿಸ್ತು ಪಾಲಿಸಿ, ಸುರಕ್ಷತಾ ಕ್ರಮಗಳನ್ನು ಕಡ್ಡಾಯವಾಗಿ ಅನುಸರಿಸಿದಾಗ ಮಾತ್ರ ಅಪಘಾತಗಳನ್ನು ಕಡಿಮೆ ಮಾಡಬಹುದು ಎಂಬ ಅಭಿಪ್ರಾಯ ವ್ಯಕ್ತವಾಗಿದೆ.
ಅಪಘಾತ ಅಂಕಿ-ಅಂಶ :
ಕಳೆದ ಐದು ವರ್ಷಗಳಲ್ಲಿ ನಡೆದಿರುವ ಅಪಘಾತಗಳ ಅಂಕಿ-ಅಂಶಗಳನ್ನು ಗಮನಿಸಿದರೆ, 2021ರಲ್ಲಿ ಜಿಲ್ಲೆಯಲ್ಲಿ ಒಟ್ಟು 705 ರಸ್ತೆ ಅಪಘಾತಗಳು ಸಂಭವಿಸಿದ್ದು, ಇದರಲ್ಲಿ 335 ಮಂದಿ ಮೃತಪಟ್ಟಿದ್ದಾರೆ. ಈ ಅಪಘಾತಗಳಲ್ಲಿ 976 ಮಂದಿ ಗಾಯಗೊಂಡಿದ್ದಾರೆ. 2022ರಲ್ಲಿ 658 ಅಪಘಾತಗಳು ದಾಖಲಾಗಿದ್ದು, 330 ಮಂದಿ ಸಾವನ್ನಪ್ಪಿದ್ದು, 863 ಮಂದಿ ಗಾಯಗೊಂಡಿದ್ದಾರೆ.
2023ರಲ್ಲಿ ಅಪಘಾತಗಳ ಸಂಖ್ಯೆ 630ಕ್ಕೆ ಇಳಿದಿದ್ದರೂ, 279 ಮಂದಿ ಪ್ರಾಣ ಕಳೆದುಕೊಂಡಿದ್ದು, 855 ಮಂದಿ ಗಾಯಗೊಂಡಿದ್ದಾರೆ. 2024ರಲ್ಲಿ ಮತ್ತೆ ಅಪಘಾತಗಳ ಸಂಖ್ಯೆ ಏರಿಕೆಯಾಗಿದ್ದು, ಒಟ್ಟು 690 ಅಪಘಾತಗಳು ಸಂಭವಿಸಿ, 350 ಮಂದಿ ಮೃತಪಟ್ಟಿದ್ದಾರೆ. ಈ ವರ್ಷ 902 ಮಂದಿ ಗಾಯಗೊಂಡಿದ್ದಾರೆ ಎಂದು ಸರ್ಕಾರದ ಅಧಿಕೃತ ಮಾಹಿತಿ ಹೇಳುತ್ತದೆ.
2025ರ ಅಕ್ಟೋಬರ್ ತಿಂಗಳವರೆಗಿನ ಅಂಕಿ-ಅಂಶಗಳ ಪ್ರಕಾರ, ಜಿಲ್ಲೆಯಲ್ಲಿ 736 ರಸ್ತೆ ಅಪಘಾತಗಳು ಸಂಭವಿಸಿದ್ದು, 264 ಮಂದಿ ಮೃತಪಟ್ಟಿದ್ದಾರೆ. ಈ ಅವಧಿಯಲ್ಲಿ 936 ಮಂದಿ ಗಾಯಗೊಂಡಿದ್ದಾರೆ ಎಂದು ವರದಿಯಾಗಿದೆ.
ಒಟ್ಟಾರೆ 2021ರಿಂದ 2025ರ ಅಕ್ಟೋಬರ್ ವರೆಗೆ ಜಿಲ್ಲೆಯಲ್ಲಿ 3,419 ರಸ್ತೆ ಅಪಘಾತಗಳು ಸಂಭವಿಸಿದ್ದು, ಇದರಿಂದ 1,558 ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. ಜೊತೆಗೆ 4,532 ಮಂದಿ ಗಾಯಗೊಂಡಿದ್ದಾರೆ.
ಸಾಮಾಜಿಕ ಹೋರಾಟಗಾರ ಬಾಬು ಮಾತನಾಡಿ, ʼಜಿಲ್ಲೆಯಲ್ಲಿ ಸಾವಿರಕ್ಕೂ ಹೆಚ್ಚು ಜನರು ರಸ್ತೆ ಅಪಘಾತಗಳಲ್ಲಿ ಪ್ರಾಣ ಕಳೆದುಕೊಂಡಿರುವುದು ಅತ್ಯಂತ ನೋವಿನ ಸಂಗತಿ. ಹಲವು ಪ್ರಮುಖ ರಸ್ತೆಗಳು ಇನ್ನೂ ದುರಸ್ತಿ ಆಗದೆ ಹಾಳಾಗಿರುವುದೇ ಅಪಘಾತಗಳ ಹೆಚ್ಚಳಕ್ಕೆ ಕಾರಣವಾಗಿದೆʼ ಎಂದು ಅವರು ಆರೋಪಿಸಿದರು.
ʼರಸ್ತೆಯುದ್ದಕ್ಕೂ ತೆರೆದುಕೊಂಡಿರುವ ತೆಗ್ಗು, ಗುಂಡಿಗಳು ಜನ ಜೀವ ಪಡೆಯುವುದಕ್ಕೆ ಕಾರಣವಾಗಿವೆ. ವಿಶೇಷವಾಗಿ ರಾತ್ರಿ ಸಮಯದಲ್ಲಿ ಹಾಗೂ ಮಳೆಗಾಲದಲ್ಲಿ ತೆಗ್ಗು, ಗುಂಡಿಗಳಲ್ಲಿ ನೀರು ಸಂಗ್ರಹಗೊಂಡು ರಸ್ತೆಯ ಸ್ಥಿತಿ ಗೋಚರಿಸದಂಥ ದುಸ್ಥಿತಿ ತಲುಪುತ್ತದೆ. ಇಂತಹ ಗುಂಡಿಮಯ ರಸ್ತೆಯಲ್ಲಿ ಸಂಚರಿಸುವ ವಾಹನ ಸವಾರರು ಬಿದ್ದು ಪ್ರಾಣ ಕಳೆದುಕೊಂಡ ಉದಾಹರಣೆಗಳು ಸಾಕಷ್ಟಿವೆʼ ಎಂದರು.
ಕೆಲ ರಸ್ತೆಗಳಲ್ಲಿ ಅಗಲ ಕಡಿಮೆಯಾಗಿರುವುದು ಹಾಗೂ ವಾಹನಗಳ ಒತ್ತಡ ಹೆಚ್ಚಿರುವುದರಿಂದ ಅಪಘಾತಗಳ ಸಂಖ್ಯೆ ಹೆಚ್ಚಾಗಿ ಕಂಡು ಬರುತ್ತಿವೆ. ಈ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಹಿಡಿಯಲು ಸ್ಥಳೀಯ ಶಾಸಕ, ಸಂಸದರು ಹಾಗೂ ಸಂಬಂಧಪಟ್ಟ ಅಧಿಕಾರಿಗಳು ಇದನ್ನು ಗಂಭೀರವಾಗಿ ಪರಿಗಣಿಸಿ ತತ್‌ಕ್ಷಣ ರಸ್ತೆ ದುರಸ್ತಿಗೆ ಕ್ರಮ ಕೈಗೊಳ್ಳಬೇಕು. ರಸ್ತೆ ಅಪಘಾತ ತಡೆ ಸೇರಿದಂತೆ ಜನರ ಜೀವ ಉಳಿಸುವ ನಿಟ್ಟಿನಲ್ಲಿ ಜಿಲ್ಲಾಡಳಿತ ಜಾಗೃತವಾಗಬೇಕಿದೆʼ ಎಂದು ಒತ್ತಾಯಿಸಿದರು.
ಭೀಮ್ ಆರ್ಮಿ ಅಧ್ಯಕ್ಷ ವಿಶ್ವನಾಥ ಬಲ್ಲಿದೇವ್ ಮಾತನಾಡಿ, ʼಅಪಘಾತ ಸಂಭವಿಸಿ ಜನರು ಸಾವನ್ನಪ್ಪಿದ ನಂತರವೇ ಶಾಸಕರು, ಸಂಸದರು ಹಾಗೂ ಅಧಿಕಾರಿಗಳು ಎಚ್ಚೆತ್ತುಕೊಳ್ಳುತ್ತಿರುವುದು ವಿಷಾದಕರ ಸಂಗತಿ. ಇಕ್ಕಟ್ಟಾದ ರಸ್ತೆ, ಗುಂಡಿ ಬಿದ್ದ ರಸ್ತೆ ಸೇರಿದಂತೆ ವಾಹನ ಸವಾರರು ಸಂಚಾರಿ ನಿಯಮಗಳನ್ನು ಪಾಲಿಸದೇ ಇರುವುದು ರಸ್ತೆ ಅಪಘಾತಗಳಿಗೆ ಮುಖ್ಯ ಕಾರಣ ಎನ್ನಬಹುದು. ಜನ ಜಾಗೃತರಾಗಿ ಸಂಚಾರಿ ನಿಯಮ ಪಾಲಿಸಿದರೆ ಅಪಘಾತಗಳ ಸಂಖ್ಯೆಯೂ ಇಳಿಕೆಯಾಗಬಹುದುʼ ಎಂದು ಅಭಿಪ್ರಾಯಪಟ್ಟರು.
ಜಿಲ್ಲೆಗೆ ಮುಖ್ಯಮಂತ್ರಿ ಭೇಟಿ ನೀಡುವ ಸಂದರ್ಭದಲ್ಲಷ್ಟೇ ಅವರು ಪ್ರಯಾಣಿಸುವ ಮಾರ್ಗಗಳಲ್ಲಿರುವ ತೆಗ್ಗು ಗುಂಡಿಗಳನ್ನು ತಾತ್ಕಾಲಿಕವಾಗಿ ಮುಚ್ಚಲಾಗುತ್ತದೆ. ಆದರೆ ಸಾಮಾನ್ಯ ಜನರು ಅದೇ ರಸ್ತೆಯಲ್ಲಿ ಅಪಘಾತಕ್ಕೀಡಾಗಿ ಮೃತಪಟ್ಟರೂ ಅಧಿಕಾರಿಗಳು ಯಾವುದೇ ಗಂಭೀರ ಕ್ರಮ ಕೈಗೊಳ್ಳುತ್ತಿಲ್ಲ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.
ಇದನ್ನೂ ಓದಿ : ಬೀದರ್ | ಚನ್ನಬಸವೇಶ್ವರ ಗುರುಕುಲದಲ್ಲಿ 100 ಮಕ್ಕಳಿಗೆ ಎರಡು ವರ್ಷ ಉಚಿತ ಶಿಕ್ಷಣ
ಇನ್ನೂ ಅನೇಕ ರಸ್ತೆ ತಿರುವುಗಳಲ್ಲಿ ಸೂಚನಾ ಫಲಕಗಳೇ ಇಲ್ಲದೆ ಇರುವುದು ಅಪಘಾತಗಳಿಗೆ ಕಾರಣವಾಗುತ್ತಿದೆ ಎಂದು ಹೇಳಿದರು. ರಸ್ತೆ ಸುರಕ್ಷತೆಗಾಗಿ ಅಗತ್ಯ ಸೂಚನಾ ಫಲಕಗಳನ್ನು ಅಳವಡಿಸುವುದರ ಜೊತೆಗೆ, ಹೆಲ್ಮೆಟ್ ಧಾರಣೆಯನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸುವ ಕ್ರಮ ಕೈಗೊಳ್ಳಬೇಕು ಎಂದು ಅವರು ಒತ್ತಾಯಿಸಿದರು.

ರಫಿ ಗುರುಗುಂಟ
ಗುಲಬರ್ಗಾ ವಿವಿಯಿಂದ ಪತ್ರಿಕೋದ್ಯಮದಲ್ಲಿ ಎಂ ಎ ಪದವಿ, ಕಲ್ಯಾಣ ಕರ್ನಾಟಕ ವಲಯ ಕೋರ್ಡಿನೇಟರ್




