ರಾಯಚೂರು ತಾಲೂಕಿನ ಯರಗೇರಾ ಹೋಬಳಿ ಕೇಂದ್ರವನ್ನು ತಾಲೂಕ ಕೇಂದ್ರವನ್ನಾಗಿ ಮಾಡಲು ಬಜೆಟ್‍ನಲ್ಲಿ ಘೋಷಿಸಬೇಕು ಇಲ್ಲದಿದ್ದರೆ ವಿವಿಧ ಹಂತಗಳಲ್ಲಿ ಹೋರಾಟ ನಡೆಸಲಾಗುತ್ತದೆ ಎಂದು ಯರಗೇರಾ ತಾಲೂಕ ರಚನೆ ಹೋರಾಟ ಸಮಿತಿ ಪ್ರಧಾನ ಸಂಚಾಲಕ ನಿಜಾಮುದ್ದಿನ್ ಹೇಳಿದರು.
ಬುಧವಾರ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿ, ಯರಗೇರಾ ಹೋಬಳಿ ಕೇಂದ್ರವನ್ನು ತಾಲೂಕ ಕೇಂದ್ರ ಮಾಡಲು ಸುಮಾರು ವರ್ಷಗಳಿಂದ ಹೋರಾಟ ನಡೆಸಲಾಗಿದೆ. ಬೆಂಗಳೂರಿನಲ್ಲಿ ಹೋರಾಟ ನಡೆಸಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಭೇಟಿ ನೀಡಿದಾಗ ತಾಲೂಕು ರಚನೆಗೆ ಭರವಸೆ ನೀಡಿದ್ದರು. ಜಿಲ್ಲಾಧಿಕಾರಿಗಳು ಸಹ ತಾಲೂಕ ಕೇಂದ್ರವನ್ನಾಗಿ ಮಾಡಲು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದ್ದಾರೆ. ಗ್ರಾಮೀಣ ಶಾಸಕ ದದ್ದಲ್ ಬಸನಗೌಡ ಅವರು ಬೆಂಬಲ ವ್ಯಕ್ತಪಡಿಸಿದ್ದಾರೆ. ಬಜೆಟ್‍ನಲ್ಲಿ ಆಶಾಭಾವನೆ ಇದೆ ಎಂದರು.
ಯರಗೇರಾ ಹೋಬಳಿಯಲ್ಲಿ 326 ಎಕರೆ ಸರ್ಕಾರದ ಜಮೀನು ಲಭ್ಯವಿದೆ. 250 ಎಕರೆ ರಾಯಚೂರು ವಿಶ್ವ ವಿದ್ಯಾಲಯಕ್ಕೆ ನೀಡಲಾಗಿದೆ. 19 ಗ್ರಾಮ ಪಂಚಾಯತಿಗಳ 64 ಗ್ರಾಮಗಳ ಜನರು ನಿತ್ಯ ಕೆಲಸಕ್ಕೆ ರಾಯಚೂರು ನಗರಕ್ಕೆ ಅಲೆದಾಡುವ ಪರಸ್ಥಿತಿ ಉಂಟಾಗಿದೆ, ತಾಲೂಕು ಕೇಂದ್ರ ಮಾಡಿದಲ್ಲಿ ಸಾಕಷ್ಟು ಅನುಕೂಲವಾಗಲಿದೆ ಎಂದು ಹೇಳಿದರು.
ಈ ಸುದ್ದಿ ಓದಿದ್ದೀರಾ? ರಾಯಚೂರು | ವೇತನ ಕಡಿತ, ದೌರ್ಜನ್ಯದ ಆರೋಪ; ರಿಮ್ಸ್ ಹೊರಗುತ್ತಿಗೆ ನೌಕರರಿಂದ ಮಿಂಚಿನ ಪ್ರತಿಭಟನೆ
ಈವೇಳೆ ಬಸವರಾಜ ಹೂಗಾರ, ಪಿ.ಮಲ್ಲಿಕಾರ್ಜುನ ರೆಡ್ಡಿ, ಮಹಿಬೂಬ್ ಪಟೇಲ್, ಬಸವರಾಜ ರೆಡ್ಡಿ, ವಿದ್ಯಾನಂದರೆಡ್ಡಿ, ಕೆಸಿ ಲಕ್ಷ್ಮಿಪತಿಸ್ವಾಮಿ, ಶಾಂತ ಕುಮಾರ, ರವಿತಾತ, ಶ್ರೀನಿವಾಸ ರೆಡ್ಡಿ ಇದ್ದರು.





