ನ್ಯಾಯಬೆಲೆ ಅಂಗಡಿಗಳನ್ನು ತಿಂಗಳಪೂರ್ತಿ ತೆಗೆಯಬೇಕು. ಬೆರಳಚ್ಚಿಗಾಗಿ 10 ರೂ. ವಸೂಲಿ ಮಾಡುತ್ತಿರುವ ನ್ಯಾಯಬೆಲೆ ಅಂಗಡಿ ಮಾಲೀಕರ ವಿರುದ್ದ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿ ರಾಯಚೂರು ಸ್ಲಂ ನಿವಾಸಿಗಳ ಕ್ರಿಯಾ ವೇದಿಕೆ ಒತ್ತಾಯಿಸಿದೆ.
ರಾಯಚೂರಿನಲ್ಲಿ ಪ್ರತಿಭಟನೆ ನಡೆಸಿದ ವೇದಿಕೆಯ ಕಾರ್ಯಕರ್ತರು ಜಿಲ್ಲಾಧಿಕಾರಿಗೆ ಹಕ್ಕೊತ್ತಾಯ ಪತ್ರ ಸಲ್ಲಿಸಿದ್ದಾರೆ. “ನಗರದಲ್ಲಿ ನ್ಯಾಯಬೆಲೆ ಅಂಗಡಿಯಲ್ಲಿ ತಿಂಗಳಲ್ಲಿ ಒಂದೆರಡು ದಿನ ಮಾತ್ರವೇ ತೆರೆದು, ತಿಂಗಳುಪೂರ್ತಿ ಮುಚ್ಚಲಾಗುತ್ತಿದೆ. ಅಂತಹ ಅಂಗಡಿ ಮಾಲೀಕರು ವಿರುದ್ಧ ಕ್ರಮ ಕೈಗೊಳ್ಳಬೇಕು. ಅವರ ಪರವಾನಗಿ ರದ್ದುಗೊಳಿಸಬೇಕು” ಎಂದು ಆಗ್ರಹಿಸಿದ್ದಾರೆ.
“ನರಗದ ಮೈಲಾರ ನಗರ, ಕಾಳಿದಾಸ ನಗರ, ಆಶ್ರಯ ಕಾಲೋನಿ ಹಾಗೂ ಸ್ಲಂಗಳಲ್ಲಿ ಅಲ್ಲಿನ ಜನರಿಗೆ ಅನುಕೂಲವಾಗುವಂತೆ ಆ ಪ್ರದೇಶಗಳ ಮಧ್ಯ ಭಾಗದಲ್ಲಿ ನ್ಯಾಯಬೆಲೆ ಅಂಗಡಿಗಳನ್ನು ತೆರೆಯಬೇಕು. ಪ್ರತಿ ತಿಂಗಳು ಆಹಾರ ನಿರೀಕ್ಷಕರು ನ್ಯಾಯಬೆಲೆ ಅಂಗಡಿಗಳಲ್ಲಿ ಜಾಗೃತ ಕಮಿಟಿ ಸಭೆ ಮಾಡಿ ಲೋಪದೋಷಗಳನ್ನು ಸರಿಪಡಿಸಬೇಕು” ಎಂದು ಒತ್ತಾಯಿಸಿದ್ದಾರೆ.
“ಐದು ಕೆಜಿ ಅಕ್ಕಿ ಬದಲಿಗೆ ಹಣ ನೀಡುವುದನ್ನು ಕೈಬಿಟ್ಟು ಜೋಳ, ಗೋದಿ, ಎಣ್ಣೆ ಇನ್ನಿತರ ಪೌಷ್ಠಿಕ ಆಹಾರ ಧಾನ್ಯ ವಿತರಿಸಲು ಕ್ರಮ ಕೈಗೊಳ್ಳಬೇಕು” ಎಂದು ಆಗ್ರಹಿಸಿದರು.
ಈ ಸಂದರ್ಭದಲ್ಲಿ ಸಂಘಟನೆ ಅಧ್ಯಕ್ಷ ಜನಾರ್ಧನ ಹಳ್ಳಿಬೆಂಚಿ, ಸಂಘಟನಾ ಕಾರ್ಯದರ್ಶಿ ಬಸವರಾಜ ಹೊಸೂರು, ಕಾರ್ಯದರ್ಶಿ ನೂರ್‌ಜಾನ್, ಮಾಧವರೆಡ್ಡಿ, ರಾಜಶೇಖರ್, ವಿರೇಶ ಕೇಬಲ್ ಆಪರೇಟರ್, ಮಹೇಶ, ನಾಗರಾಜ, ಜಂಬಣ್ಣ ಡೊಕ್ಕ ಸೇರಿದಂತೆ ಅನೇಕರಿದ್ದರು.




