ಬೆಂಗಳೂರು ಯಲಹಂಕ ವಿಧಾನಸಭಾ ಕ್ಷೇತ್ರದ ಕೋಗಿಲು ಬಡಾವಣೆಯ ಫಕೀರ್ ಕಾಲೋನಿಯಲ್ಲಿ ನೂರಾರು ಮನೆಗಳನ್ನು ಧ್ವಂಸಗೊಳಿಸಿದ ಸರ್ಕಾರದ ಕ್ರಮವನ್ನು ಖಂಡಿಸಿ ಸೋಶಿಯಲ್ ಡೆಮಾಕ್ರೆಟಿಕ್ ಪಾರ್ಟಿ ಆಫ್ ಇಂಡಿಯಾ ವತಿಯಿಂದ ಪ್ರತಿಭಟಿಸಿದರು.
ರಾಯಚೂರು ನಗರದ ಅಂಬೇಡ್ಕರ್ ವೃತ್ತದಲ್ಲಿ ಸರಕಾರದ ವಿರುದ್ಧ ಘೋಷಣೆ ಕೂಗುವ ಮೂಲಕ ನಿರಾಶ್ರಿತರಿಗೆ ನ್ಯಾಯ ಒದಗಿಸಬೇಕೆಂದು ಧಿಕ್ಕಾರ ಹಾಕಿ ಆಗ್ರಹಿಸಿದರು.
ಮುಖಂಡ ಅಕ್ಬರ್ ನಾಗುಂಡಿ ಮಾತನಾಡಿ, ʼಬಡವರ ಮನೆಗಳನ್ನು ಬುಲ್ಡೋಜರ್ ಮೂಲಕ ಏಕಾಏಕಿ ದ್ವಂಸಗೊಳಿಸಿದ್ದು ಕಾನೂನು ಬಾಹಿರವಾಗಿದೆ. ಮನೆ ಧ್ವಂಸ ಮಾಡುವ ಮುನ್ನ ನಿವಾಸಿಗಳಿಗೆ ಯಾವುದೇ ಮುನ್ನೋಟಿಸ್ ನೀಡಿಲ್ಲ. ಮನೆಗಳನ್ನು ಒಳಗಿನ ವಸ್ತುಗಳೊಡನೆ ಧ್ವಂಸಗೊಳಿಸಿರುವುದರಿಂದ ಭಾರೀ ನಷ್ಟ ಸಂಭವಿಸಿದೆ. ಧ್ವಂಸ ನಂತರವೂ ಸರ್ಕಾರದಿಂದ ಯಾವುದೇ ಪರ್ಯಾಯ ಪುನರ್ವಸತಿ ಕ್ರಮ ಕೈಗೊಳ್ಳಲಾಗಿಲ್ಲʼ ಎಂದು ಆಕ್ರೋಶ ವ್ಯಕ್ತಪಡಿಸಿದರು.
ʼರಾಜ್ಯದ ಜನರು ಕಾಂಗ್ರೆಸ್ ಪಕ್ಷವನ್ನು ಜನಪರ, ಕಾಳಜಿಯುಳ್ಳ ಪಕ್ಷವೆಂದು ಪ್ರಚಂಡ ಬಹುಮತದಿಂದ ಗೆಲ್ಲಿಸಿದ್ದಾರೆ. ಆದರೆ, ಸರಕಾರ ಯುಪಿ ಮಾಡೆಲ್ ರೀತಿಯಲ್ಲಿ ಕ್ರಮಕೈಗೊಂಡಿದ್ದು ಜನವಿರೋಧಿ ಸರಕಾರವಾಗಿದೆ ಎಂದು ಸಾಬೀತಾಗಿದೆʼ ಎಂದು ದೂರಿದರು.
ಕೂಡಲೇ ಸರಕಾರ ಸಂತ್ರಸ್ತರಿಗೆ ಪರಿಹಾರ ಒದಗಿಸಬೇಕು ಇಲ್ಲದಿದ್ದರೆ ಎಸ್‌ಡಿಪಿಐ ವತಿಯಿಂದ ರಾಜ್ಯಾದ್ಯಂತ ಹೋರಾಟ ಮಾಡಲಾಗುವುದು ಎಂದು ಎಚ್ಚರಿಕೆ ನೀಡಿದರು.
ಪ್ರತಿಭಟನೆಯಲ್ಲಿ ಗೌಸ್, ತೌಸಿಫ್ ಇನ್ನಿತರರು ಇದ್ದರು.





