ಸಿರವಾರ ತಾಲ್ಲೂಕು ಮರಾಠ ಗ್ರಾಮದಲ್ಲಿ ಮೂಲಸೌಕರ್ಯ ಮರೀಚಿಕೆಯಾಗಿದ್ದು, ಸಾಮೂಹಿಕ ಶೌಚಾಲಯವಿಲ್ಲದೆ ಗ್ರಾಮಸ್ಥರಿಗೆ ಬಯಲೇ ಗತಿ ಎನ್ನುವಂತಾಗಿದೆ.
ಹೌದು ಮೂಲಸೌಕರ್ಯಗಳಿಗಾಗಿ ಸರ್ಕಾರಗಳು ಅನೇಕ ಯೋಜನೆಗಳು ಜಾರಿಗೊಳಿಸಿದರೂ ಅವು ಜನರಿಗೆ ತಲುಪದೇ ಕಾರಣ ಜನರಿಗೆ ಇಂದಿಗೂ ಮೂಲಸೌಕರ್ಯಗಳಿಂದ ವಂಚಿತರಾಗಬೇಕಾದ ಪರಿಸ್ಥಿತಿ ಇದ್ದೇ ಇದೆ. ಅಂತಹದೇ ಮರಾಠ ಗ್ರಾಮದಲ್ಲಿದ್ದು, ಸ್ಥಳೀಯ ಆಡಳಿತ ವ್ಯವಸ್ಥೆ ವಿರುದ್ಧ ಗ್ರಾಮಸ್ಥರು ತೀವ್ರ ಆಕ್ರೋಶ ಹೊರಹಾಕುತ್ತಿದ್ದಾರೆ.
ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸ್ಥಳೀಯ ಆಡಳಿತದ ನಿರ್ಲಕ್ಷ್ಯದಿಂದ ಮಹಿಳೆಯರು ದಾರಿಯಲ್ಲೇ ಶೌಚಕ್ಕೆ ಹೋಗುವಂತಾಗಿದ್ದು, ಇದು ಗೌರವಪೂರ್ಣ ಬದುಕಿಗೆ ತೊಂದರೆಯಾಗಿದೆ. ʼಕಾಲಿಡಲು ಸಹ ಭಯವಾಗುತ್ತಿದೆʼ ಎಂದು ಗ್ರಾಮದ ಮಹಿಳೆಯರು ಆರೋಪಿಸುತ್ತಿದ್ದಾರೆ. ವಿಶೇಷವಾಗಿ ಗ್ರಾಮದ ಸರ್ಕಾರಿ ಶಾಲೆಯ ಮುಂಭಾಗದಲ್ಲೇ ಬಯಲು ಶೌಚ ಕ್ರಿಯೆಗಳು ನಡೆಯುತ್ತಿರುವುದು ಗಂಭೀರ ಸಮಸ್ಯೆಯಾಗಿ ಪರಿಣಮಿಸಿದೆ.
ಸುಮಾರು 2000ಕ್ಕೂ ಅಧಿಕ ಜನಸಂಖ್ಯೆ ಹೊಂದಿರುವ ಈ ಗ್ರಾಮದಲ್ಲಿ 200ರಷ್ಟು ಕುಟುಂಬಗಳು ವಾಸಿಸುತ್ತವೆ. ಗ್ರಾಮಸ್ಥರಿಗೆ ಸ್ವಚ್ಛ ಭಾರತ ಯೋಜನೆಯಡಿ ನಿರ್ಮಿಸುವ ಶೌಚಾಲಯಗಳು ಇಲ್ಲಿ ಕಾಣದಂತೆ ಆಗಿವೆ. ಇನ್ನು ಸಾರ್ವಜನಿಕ ಶೌಚಾಲಯ ವ್ಯವಸ್ಥೆಯೂ ಇಲ್ಲದ ಹಿನ್ನೆಲೆ ಸಾಂಕ್ರಾಮಿಕ ರೋಗದ ಭೀತಿ ಸಹ ಎದುರಾಗಿದೆ.
ಗ್ರಾಮದ ಶಾಲೆಯಲ್ಲಿ 209 ಮಕ್ಕಳು ವ್ಯಾಸಂಗ ಮಾಡುತ್ತಿದ್ದಾರೆ. ಆದರೆ ಶಾಲೆಯಲ್ಲಿಯೂ ಶೌಚಾಯಲ ವ್ಯವಸ್ಥೆ ಇಲ್ಲ. ಹೀಗಾಗಿ ಮಕ್ಕಳು, ಶಾಲಾ ಸಿಬ್ಬಂದಿಗೆ ಶೌಚಾಲಯ ಸಮಸ್ಯೆ ಎದುರಿಸುತ್ತಿದ್ದು, ಕೂಡಲೇ ಶೌಚಾಲಯ ದುರಸ್ತಿಗೊಳಿಸಿ ಅನುಕೂಲಕರ ಮಾಡಬೇಕು ಎಂದು ಶಿಕ್ಷಕಿಯರ ಒತ್ತಾಯವಾಗಿದೆ.

ಈ ಬಗ್ಗೆ ಹಲವು ಬಾರಿ ಸಂಬಂಧಿಸಿದ ಅಧಿಕಾರಿಗಳಿಗೆ ಮನವಿ ಸಲ್ಲಿಸಿದ್ದರೂ ಸಮಸ್ಯೆಗೆ ಶಾಶ್ವತ ಪರಿಹಾರ ದೊರಕಿಲ್ಲವೆಂದು ತಿಳಿದುಬಂದಿದೆ. ತಕ್ಷಣ ಗ್ರಾಮದಲ್ಲಿ ಸಮರ್ಪಕ ಸಾರ್ವಜನಿಕ ಶೌಚಾಲಯಗಳನ್ನು ನಿರ್ಮಿಸಿ, ಸ್ವಚ್ಛತಾ ಜಾಗೃತಿ ಕಾರ್ಯಕ್ರಮಗಳನ್ನು ಕೈಗೊಳ್ಳಬೇಕೆಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.
ಗ್ರಾಮದ ಬೂದೆಮ್ಮ ಮಾತನಾಡಿ, ʼಅನೇಕ ವರ್ಷಗಳಿಂದ ಶೌಚಾಲಯಗಳು ಸ್ಥಗಿತಗೊಂಡ ಕಾರಣ ಮಹಿಳೆಯರು ಊರ ಹೊರ ವಲಯದಲ್ಲಿನ ಹೊಲದ ದಾರಿ, ರಸ್ತೆ ಬದಿ, ಮುಳ್ಳುಕಂಟಿ, ತಗ್ಗು ಗುಂಡಿಗಳಿಗೆ ಶೌಚಾಲಯಕ್ಕೆ ಹೋಗಬೇಕಿದೆ. ಸೂರ್ಯೋದಯದ ಒಳಗೆ ಅಥವಾ ಸೂರ್ಯಾಸ್ತದ ನಂತರ ಶೌಚ ಮುಗಿಸಬೇಕಾಗಿದೆ. ಸಮಸ್ಯೆ ಇಷ್ಟು ಬಿಗಡಾಯಿಸಿದ್ದರೂ ಮಹಿಳೆಯರ ಗೋಳು ಕೇಳುವವರು ಯಾರೂ ಇಲ್ಲದಂತಾಗಿದೆʼ ಎಂದು ಆಕ್ರೋಶ ವ್ಯಕ್ತಪಡಿಸಿದರು.
ʼಮಹಿಳೆಯರು, ಮಕ್ಕಳು, ವಯೋವೃದ್ಧರು ಸೇರಿದಂತೆ ಗ್ರಾಮಸ್ಥರು ಶೌಚಕ್ಕಾಗಿ ಬಯಲನ್ನೇ ಅವಲಂಬಿಸಿದ್ದಾರೆ. ಜನ ಮೂಗು ಮುಚ್ಚಿಕೊಂಡು ಹೋಗದೇ ಬೇರೆ ದಾರಿಯಿಲ್ಲ. ಇಲ್ಲಿನ ಸ್ವಚ್ಛತೆ ಮರೀಚಿಕೆಯಾಗಿದ್ದು, ಗ್ರಾಮ ರೋಗರುಜಿನುಗಳಿಗೆ ಆವಾಸಸ್ಥಾನವಾಗಿದೆ. ಮಾರಣಾಂತಿಕ ಸೋಂಕುಗಳ ಭಯ ಜನರನ್ನು ಬಿಟ್ಟೂ ಬಿಡದೆ ಕಾಡುತ್ತಿದೆʼ ಎಂದು ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.

ಬಹುಜನ ಸಂಘರ್ಷ ಸಮಿತಿ ಮುಖಂಡ ಶಿವರಾಜ ಮರಾಠ ಮಾತನಾಡಿ, ʼಕೇಂದ್ರ ಸರ್ಕಾರದ ʼಬಯಲು ಮುಕ್ತ ಶೌಚಾಲಯ, ʼಮನೆ ಮನೆಗೆ ಶೌಚಾಲಯʼ, ʼಸ್ವಚ್ಛ ಭಾರತʼ ಎನ್ನುವ ಹಲವು ಯೋಜನೆಗಳು ವೇದಿಕೆ ಭಾಷಣಕ್ಕೆ ಮಾತ್ರ ಸೀಮಿತವಾಗಿವೆ ಎನ್ನುವಂತಾಗಿದೆ. ಶೌಚಾಲಯ ಸ್ವಚ್ಛವಾಗಿದ್ದರೆ ಇಡೀ ಗ್ರಾಮವೇ ಸ್ವಚ್ಛವಾಗಿ ಆರೋಗ್ಯವಾಗಿರುತ್ತದೆ. ಇನ್ನು ಮುಂದಾದರೂ ಸ್ಥಳೀಯ ಆಡಳಿತ ಇತ್ತ ಗಮನಹರಿಸಿ ಗ್ರಾಮದ ಮಹಿಳೆಯರ ಬಳಕೆಗೆ ಶೌಚಾಲಯ ನೀಡಬೇಕು, ಮುಂದಿನ ದಿನಗಳಲ್ಲಿ ಸಮಗ್ರ ನಿರ್ವಹಣೆಗೆ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ಇದನ್ನೂ ಓದಿ : ಕಸಾಪದಲ್ಲಿ ಅಕ್ರಮ ಪ್ರಕರಣ: ಮಹೇಶ್ ಜೋಶಿಗೆ ಹೈಕೋರ್ಟ್ ನೋಟಿಸ್
ಶಾಲಾ ಮುಖ್ಯಗುರು ಪಂಪಾಪತಿ ಮಾತನಾಡಿ, ʼಶಾಲೆಯಲ್ಲಿ ಸುಮಾರು 209 ಮಕ್ಕಳಿದ್ದಾರೆ. ಆರು ವರ್ಷಗಳಿಂದ ಶೌಚಾಲಯ ಹಾಳುಬಿದ್ದಿದ್ದು ಬಯಲು ಬಹಿರ್ದೆಸೆಗೆ ಹೋಗುವಂತಾಗಿದೆ. ಶಾಲೆಗೆ 4 ಶೌಚಾಲಯ ತುರ್ತಾಗಿ ಬೇಕಾಗಿದೆʼ ಎಂದು ಹೇಳಿದರು.

ರಫಿ ಗುರುಗುಂಟ
ಗುಲಬರ್ಗಾ ವಿವಿಯಿಂದ ಪತ್ರಿಕೋದ್ಯಮದಲ್ಲಿ ಎಂ ಎ ಪದವಿ, ಕಲ್ಯಾಣ ಕರ್ನಾಟಕ ವಲಯ ಕೋರ್ಡಿನೇಟರ್




