ರಾಜ್ಯ ಸಚಿವ ಸಂಪುಟ ಅನುಮೋದಿಸಿರುವ 56,432 ಹುದ್ದೆಗಳ ಭರ್ತಿಗೆ ಕೂಡಲೇ ಅಧಿಸೂಚನೆ ಹೊರಡಿಸಬೇಕು ಎಂದು ಒತ್ತಾಯಿಸಿ ಉದ್ಯೋಗಾಕಾಂಕ್ಷಿಗಳ ಹೋರಾಟ ಸಮಿತಿಯಿಂದ ರಾಯಚೂರು ನಗರದ ಅಂಬೇಡ್ಕರ್ ವೃತ್ತದಲ್ಲಿ ಪ್ರತಿಭಟನೆ ನಡೆಸಿದರು
ರಾಜ್ಯದಲ್ಲಿ ಖಾಲಿ ಇರುವ 2,84,881 ಹುದ್ದೆಗಳಲ್ಲಿ 56,432 ಹುದ್ದೆಗಳಿಗೆ ಯಾವುದೇ ವಿಳಂಬವಿಲ್ಲದೆ ಅಧಿಸೂಚನೆ ಹೊರಡಿಸಬೇಕು. ಶಿಕ್ಷಕರ ಹುದ್ದೆಯನ್ನು ನಾಶಮಾಡುವ ಕೆಪಿಎಸ್ ಮ್ಯಾಗ್ನೆಟ್ ಶಾಲೆಗಳ ಯೋಜನೆಯನ್ನು ಕೈಬಿಡಬೇಕು ಎಂದು ಒತ್ತಾಯಿಸಿದರು.
ʼಜಿಲ್ಲೆಯಲ್ಲಿ ಖಾಲಿ ಇರುವ 5,000 ಕ್ಕೂ ಅಧಿಕ ಪ್ರಾಥಮಿಕ ಮತ್ತು ಪ್ರೌಢಶಾಲಾ ಶಿಕ್ಷಕರನ್ನು ಹಾಗೂ ಚಿತ್ರಕಲಾ, ಸಂಗೀತ, ದೈಹಿಕ ಶಿಕ್ಷಕರ ಹುದ್ದೆಗಳನ್ನು ಭರ್ತಿ ಮಾಡಬೇಕು. ಪ್ರತಿ ವರ್ಷ ಖಾಲಿಯಾಗುವ ಹುದ್ದೆಗಳ ಭರ್ತಿಗೆ ವಾರ್ಷಿಕ ಕ್ಯಾಲೆಂಡರ್ ಅನ್ನು ಬಿಡುಗಡೆ ಮಾಡಬೇಕುʼ ಎಂದು ಆಗ್ರಹಿಸಿದರು.
ʼಕೇಂದ್ರದ 78 ಇಲಾಖೆಗಳಲ್ಲಿ ಖಾಲಿ ಇರುವ 9.79 ಲಕ್ಷ ಹುದ್ದೆಗಳ ಭರ್ತಿಗೆ ಕೂಡಲೇ ಕ್ರಮ ಕೈಗೊಳ್ಳಬೇಕು. ಸರ್ಕಾರಿ ವೆಚ್ಚ ಕಡಿತ ಮಾಡುವ ಹೆಸರಿನಲ್ಲಿ ಜಾರಿಗೊಳಿಸಲಾಗಿರುವ ಫಿಸ್ಕಲ್ ರೆಸ್ಪಾನ್ಸಿಬಿಲಿಟಿ ಅಂಡ್ ಬಜೆಟ್ ಮ್ಯಾನೇಜ್ಮೆಂಟ್(ಎಫ್.ಆರ್.ಬಿ.ಎಂ) ಕಾಯ್ದೆಯನ್ನು ರದ್ದುಗೊಳಿಸಬೇಕು. ರಾಜ್ಯದಲ್ಲಿ ಹಾರನಳ್ಳಿ ರಾಮಸ್ವಾಮಿ, ವೀರಪ್ಪ ಮೊಗಲಿ ಮತ್ತು ದೇಶಪಾಂಡೆ ನೇತೃತ್ವದ ಎಆರ್‌ಸಿ ಶಿಫಾರಸುಗಳನ್ನು ಕೈಬಿಡಬೇಕುʼ ಎಂದು ಮನವಿ ಮಾಡಿದರು.
ʼನೇಮಕಾತಿ ಪ್ರಕ್ರಿಯೆಯಲ್ಲಿ ಸಂಪೂರ್ಣ ಪಾರದರ್ಶಕತೆ ಇರಬೇಕು. ಎಲ್ಲಾ ತೆರನಾದ ಪರೀಕ್ಷಾ ಅಕ್ರಮಗಳನ್ನು ತಡೆಗಟ್ಟಬೇಕು. ನೇಮಕಾತಿಗಳಲ್ಲಿ ದುಬಾರಿ ಅರ್ಜಿ ಶುಲ್ಕ ಕೈಬಿಡಬೇಕು. ಅಭ್ಯರ್ಥಿಗಳಿಗೆ ಉಚಿತ ಸಾರಿಗೆ ವ್ಯವಸ್ಥೆ ಕಲ್ಪಿಸಬೇಕು. ಉದ್ಯೋಗಾವಕಾಶ ದೊರೆಯುವವರಿಗೆ ಗೌರವಯುತ ಜೀವನ ನಡೆಸಲು ಸೂಕ್ತವಾದ ನಿರುದ್ಯೋಗ ಭತ್ಯೆ ನೀಡಬೇಕುʼ ಎಂದು ಒತ್ತಾಯಿಸಿದರು.
ಕೆಪಿಎಸ್ಸಿಯಲ್ಲಿನ ಅಕ್ರಮ ತಡೆಗಟ್ಟಲು ರಾಜ್ಯ ಸರ್ಕಾರ ಹೋರಾಟ ಸಮಿತಿ ಶಿಫಾರಸ್ಸುಗಳನ್ನು ಜಾರಿಗೊಳಿಸಬೇಕು. ಸರ್ಕಾರಿ ಸಂಸ್ಥೆಗಳ ಖಾಸಗೀಕರಣ ನೀತಿಯನ್ನು ರದ್ದುಗೊಳಿಸಬೇಕು. ಗುತ್ತಿಗೆ ಪದ್ಧತಿಯನ್ನು ರದ್ದುಗೊಳಿಸಬೇಕು, ಖಾಯಂ ನೇಮಕಾತಿಗಳನ್ನು ಮಾಡಬೇಕುʼ ಎಂದು ಮನವಿಯಲ್ಲಿ ತಿಳಿಸಲಾಗಿದೆ.
ಇದನ್ನೂ ಓದಿ : ಬೀದರ್ | ಚಂದ್ರ ಗ್ರಹಣ : ʼಮೌಢ್ಯತೆ ತೊಲಗಲಿʼ ಜಾಗೃತಿ ಕಾರ್ಯಕ್ರಮ
ಪ್ರತಿಭಟನೆಯಲ್ಲಿ ಉದ್ಯೋಗಾಕಾಂಕ್ಷಿಗಳ ಹೋರಾಟ ಸಮಿತಿ ರಾಜ್ಯ ಸಂಚಾಲಕ ಚನ್ನಬಸವ ಜಾನೇಕಲ್, ಜಿಲ್ಲಾ ಘಟಕದ ಅಧ್ಯಕ್ಷ ಹನುಮಂತ ಕುರ್ಡಿ, ಜಿಲ್ಲಾ ಜಂಟಿ ಕಾರ್ಯದರ್ಶಿ ಶಿವಪ್ಪ ಅಸ್ಕಿಹಾಳ್, ವಿನೋದ ಕುಮಾರ, ಉದ್ಯೋಗ ಆಕಾಂಕ್ಷಿಗಳಾದ ಅಶೋಕ, ಮೌನೇಶ, ಕೃಷ್ಣ, ಸಂತೋಷ ಸಾಗರ್, ಶರಣಬಸವ, ರವಿ, ಜಮಶೇರ್, ಮೋಹನ, ಸಣ್ಣ ಬಸವ, ಮಂಜುನಾಥ, ಶ್ರೀಕಾಂತ್, ಶಾಂತಕುಮಾರ್, ಶಹೆಬಾಜ್ ಪಾಲ್ಗೊಂಡಿದ್ದರು.




