ವರ್ಣಾಶ್ರಮ ವ್ಯವಸ್ಥೆ ಪೋಷಣೆಗೆ ಸಾರ್ವಜನಿಕವಾಗಿ ಕರೆ ನೀಡಿರುವ ಕನೇರಿ ಮಠದ ಶ್ರೀ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು. ಸರ್ಕಾರ ಜಾರಿಗೆ ತರುವುದಾಗಿ ಘೋಷಿಸಿರುವ ದ್ವೇಷ ಭಾಷಣ ತಡೆ ಮಸೂದೆಯನ್ನು ಯಾವುದೇ ವಿಳಂಬವಿಲ್ಲದೆ ಜಾರಿಗೊಳಿಸಬೇಕು ಎಂದು ಪ್ರಗತಿಪರ ಚಿಂತಕ ಆರ್.ಮಾನಸಯ್ಯ ಆಗ್ರಹಿಸಿದರು.
ಭೀಮಾ ಕೋರೆಗಾಂವ್ ಯುದ್ಧ ವಿಜಯೋತ್ಸವದ 208ನೇ ಶೌರ್ಯ ದಿನದ ಅಂಗವಾಗಿ ಲಿಂಗಸೂಗೂರು ನಗರದಲ್ಲಿ ಅದ್ದೂರಿಯಾಗಿ ಆಚರಣೆಯಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ʼದೇಶದ ಚರಿತ್ರೆಯನ್ನು ಒಂದಲ್ಲಾ ಒಂದು ರೀತಿಯಲ್ಲಿ ವಿಕೃತಗೊಳಿಸಿ ನಾಶಪಡಿಸುವ ಪ್ರಯತ್ನಗಳು ನಡೆಯುತ್ತಿವೆ. ದಮನಿತರ ಮೇಲೆ ನಡೆಯುತ್ತಿರುವ ಅನ್ಯಾಯ ಮತ್ತು ದೌರ್ಜನ್ಯಗಳ ವಿರುದ್ಧ ದಮನಿತ ವರ್ಗಗಳು ಒಗ್ಗೂಡಿ ಹಿಮ್ಮೆಟಿಸಬೇಕಾಗಿದೆ. ಆರ್‌ಎಸ್‌ಎಸ್ ಕಾರ್ಯಕರ್ತರು ಭೀಮಾ ಕೊರೆಂಗಾವ್ ಯುದ್ದದ ಬಗ್ಗೆ ಅಪಪ್ರಚಾರ ಮಾಡುತ್ತಾರೆ. ಈ ಯುದ್ದದ ಗೆಲುವು ನಮಗೆ ಸ್ವಾಭಿಮಾನ ತಂದುಕೊಟ್ಟಿದೆ. ಸಂವಿಧಾನವಾದಿಗಳು ಅಸಮಾನತೆ ವಿರುದ್ಧ ಹೋರಾಡಬೇಕಿದೆʼ ಎಂದು ಕರೆ ನೀಡಿದರು.

ʼಹಿಂದೂ ರಾಷ್ಟ್ರ ನಿರ್ಮಾಣದ ಹೆಸರಿನಲ್ಲಿ ಮನೆ-ಮನೆಗೆ ತೆರಳಿ ತಲವಾರ್‌ಗಳನ್ನು ವಿತರಿಸುತ್ತಿರುವುದಾಗಿ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ. ಈ ರೀತಿಯ ಚಟುವಟಿಕೆಗಳು ದೇಶದ ಯುವ ಜನತೆಗೆ ಯಾವ ಸಂದೇಶವನ್ನು ನೀಡುತ್ತಿವೆ. ಶಸ್ತ್ರಾಸ್ತ್ರಗಳ ಮೂಲಕ ಸಮಾಜ ನಿರ್ಮಾಣ ಸಾಧ್ಯವಿಲ್ಲ. ಗಾತ್ರದ ವಿರುದ್ಧ ಗುಣತನ ಗೆಲ್ಲಬೇಕು, ಅಸಮಾನತೆ ವಿರುದ್ಧ ಸಮಾನತೆ ಗೆಲ್ಲಬೇಕುʼ ಎಂದು ತಿಳಿಸಿದರು.
ನಗರದ ಪ್ರವಾಸಿ ಮಂದಿರದಿಂದ ಮೆರವಣಿಗೆ ಆರಂಭಗೊಂಡು ಗಡಿಯಾರ ಚೌಕ್, ಬಸವ ಸರ್ಕಲ್ ಮೂಲಕ ಸಾಗುತ್ತಾ ಅಂಬೇಡ್ಕರ್ ವೃತ್ತವನ್ನು ತಲುಪಿತು. ನೂರಾರು ಜನರು ಕೈಯಲ್ಲಿ ನೀಲಿ ಧ್ವಜಗಳನ್ನು ಹಿಡಿದು, ವಿಜಯೋತ್ಸವ ಘೋಷಣೆಗಳನ್ನು ಕೂಗುತ್ತಾ ಸಂಭ್ರಮದಿಂದ ಮೆರವಣಿಗೆ ನಡೆಸಿದರು. ಬಳಿಕ ಡಾ.ಬಿ.ಆರ್.ಅಂಬೇಡ್ಕರ್ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಗೌರವ ಸಲ್ಲಿಸಲಾಯಿತು.
ಇದನ್ನೂ ಓದಿ : ಬೀದರ್ | 10 ತಿಂಗಳಲ್ಲಿ 800ಕ್ಕೂ ಅಧಿಕ ರಸ್ತೆ ಅಪಘಾತ : 263 ಮಂದಿ ಸಾವು
ಈ ವೇಳೆ ಪ್ರಮುಖರಾದ ಸಿ.ದಾನಪ್ಪ ನಿಲೊಗಲ್, ದೊಡ್ಡಪ್ಪ ಮುರಾರಿ, ಎಚ್ ಬಿ ಮುರಾರಿ, ಪಾಮಯ್ಯ ಮುರಾರಿ, ಹೆಚ್.ಎನ್ ಬಡಿಗೇರ, ಚಿದಾನಂದ ನಾಯಕ, ಮೀನಾ ಕುಮಾರಿ, ಗಂಗಾಧರ ನೀರಲಕೇರಿ ಸೇರಿ ಅನೇಕರಿದ್ದರು.





