ರಸ್ತೆ ಮೇಲೆ ನಿಂತಿರುವ ರೋಡ್ ರೋಲರ್ ಗೆ ನೇಣು ಬಿಗಿದ ಸ್ಥಿತಿಯಲ್ಲಿ ಯುವತಿ ಶವ ಪತ್ತೆಯಾಗಿದ್ದು, ಕೊಲೆಯಾಗಿದೆ ಎಂದು ಆರೋಪಿಸಿ ಯುವತಿಯ ಕುಟುಂಬಸ್ಥರು ಲಿಂಗಸೂಗೂರು ತಾಲ್ಲೂಕು ಹಟ್ಟಿ ಚಿನ್ನದ ಗಣಿ ಪೊಲೀಸ್ ಠಾಣೆ ಎದುರು ಶವವಿಟ್ಟು ಪ್ರತಿಭಟನೆ ನಡೆಸಿದರು.
ಘಟನೆ ಸಂಬಂಧ ಪೊಲೀಸರು ಓರ್ವ ಯುವಕನನ್ನು ಬಂಧಿಸಿದ್ದು, ಈ ಪ್ರಕರಣಕ್ಕೆ ಸಹಕರಿಸಿದ ಆರೋಪಿಯ ಕುಟುಂಬದ ಸದಸ್ಯರನ್ನು ಸಹ ಬಂಧಿಸಬೇಕೆಂದು ಯುವತಿಯ ಪೋಷಕರು ಪಟ್ಟು ಹಿಡಿದಿದ್ದಾರೆ.
ಯುವತಿ ಸಾವಿಗೆ ನ್ಯಾಯ ಸಿಗುವರೆಗೂ ಅಂತ್ಯಸಂಸ್ಕಾರ ನಡೆಸುವುದಿಲ್ಲ ಎಂದು ಠಾಣೆ ಎದುರು ಪ್ರತಿಭಟನೆ ಮುಂದುವರೆಸಿದರು.
ಹಟ್ಟಿ ಪಟ್ಟಣದ ನಿವಾಸಿ ಜ್ಯೋತಿ ಆರೋಗ್ಯಪ್ಪ ಹೂವಿನಭಾವಿ (28) ಮೃತ ಯುವತಿ ಎಂದು ಗುರುತಿಸಲಾಗಿದ್ದು, ಮೃತಳು ರಾಯಚೂರು ರಿಮ್ಸ್ ಆಸ್ಪತ್ರೆಯಲ್ಲಿ ಸ್ಟಾಫ್ ನರ್ಸ್ ಎಂದು ಹೊರಗುತ್ತಿಗೆ ಆಧಾರದ ಮೇಲೆ ಕೆಲಸ ಮಾಡುತ್ತಿದ್ದಳೆಂದು ತಿಳಿದು ಬಂದಿದೆ.





