ರೀಲ್ಸ್ ಮಾಡುವ ಉದ್ದೇಶದಿಂದ ಸ್ನೇಹಿತರಿಗೆ ವಿಡಿಯೋ ಮಾಡಲು ಹೇಳಿ ಈಜಲು ನದಿಗೆ ಹಾರಿದ ಯುವಕನೋರ್ವನಿಗೆ ತಲೆಗೆ ತೀವ್ರ ಪೆಟ್ಟು ಬಿದ್ದು ಮೃತಪಟ್ಟ ಘಟನೆ ತಾಲೂಕಿನ ಮುಕ್ಕುಂದಾ ಗ್ರಾಮದಲ್ಲಿ ರವಿವಾರ ಸಂಜೆ ನಡೆದಿದೆ.
ಮೃತ ಯುವಕವನ್ನು ಸಿಂಧನೂರಿನ ಗಂಗಾನಗರದ ಅಮನ್ ಖಾನ್ ತಂದೆ ಖಾಜಾಸಾಬ್(22) ಎಂದು ಗುರುತಿಸಲಾಗಿದೆ. ಶನಿವಾರವಷ್ಟೇ ರಂಜಾನ್ ಮುಗಿದಿದ್ದು, ಇಂದು ಮೂವರು ಸ್ನೇಹಿತರೊಂದಿಗೆ ಪಾರ್ಟಿ ಮಾಡಲು ಮುಕ್ಕುಂದಾ ಹತ್ತಿರ ನದಿಗೆ ಹೋಗಿದ್ದನು ಎನ್ನಲಾಗಿದೆ.
ಮಧ್ಯಾಹ್ನ ಊಟ ಮುಗಿಸಿದ ನಂತರ ಸಂಜೆ ವೇಳೆಗೆ ಸ್ನೇಹಿತರೊಂದಿಗೆ ನದಿ ತಟದಲ್ಲಿ ರೀಲ್ಸ್ ಮಾಡಲು ಮುಂದಾಗಿದ್ದಾನೆ. ತನ್ನ ಗೆಳೆಯನಿಗೆ ವಿಡಿಯೋ ಮಾಡಲು ಹೇಳಿ ನದಿಗೆ ಜಿಗಿದಿದ್ದಾನೆ. ನೀರಿನಾಳದಲ್ಲಿನ ಗುಂಡು ಕಲ್ಲಿಗೆ ತಲೆ ಬಡಿದಿದ್ದು, ತೀವ್ರವಾಗಿ ಪೆಟ್ಟಾಗಿ ಸ್ಥಳದಲ್ಲೇ ಮೃತಪಟ್ಟಿದ್ದಾನೆ ಎಂದು ಆತನ ಸ್ನೇಹಿತರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ ಎನ್ನಲಾಗಿದೆ.
ಈ ಸುದ್ದಿ ಓದಿದ್ದೀರಾ? ರಾಯಚೂರು | ಧಾರಾಕಾರ ಮಳೆ;12 ಎಕರೆ ಪಪ್ಪಾಯಿ ಬೆಳೆ ನಾಶ, ರೈತನಿಗೆ 20 ಲಕ್ಷ ನಷ್ಟ
ಮೃತ ಯುವಕ ನದಿಗೆ ಹಾರಿದ ವಿಡಿಯೋ ಸಹ ಪೊಲೀಸರ ಕೈವಶವಾಗಿದೆ. ಮೃತನ ದೇಹವನ್ನು ಮರಣೋತ್ತರ ಪರೀಕ್ಷೆಗೆ ಸಿಂಧನೂರಿನ ಸಾರ್ವಜನಿಕ ಆಸ್ಪತ್ರೆಗೆ ತರಲಾಗಿದೆ. ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.





