ಒಟ್ಟಾರೆಯಾಗಿ, ಈ ಬಾರಿ ರಾಜ್ಯ ಬಜೆಟ್‌ನಲ್ಲಿ ರಾಯಚೂರು ಜಿಲ್ಲೆಯ ಜನರ ಬೇಡಿಕೆಗೆ ಸ್ಪಂದನೆ ಸಿಗುತ್ತದೆಯೇ ಎಂಬುದೇ ಕುತೂಹಲವಾಗಿದೆ. ಉಚಿತ ವಿದ್ಯುತ್ ಅಥವಾ ವಿಶೇಷ ಸಬ್ಸಿಡಿ ಯೋಜನೆ ಘೋಷಣೆ ಮಾಡಿದರೆ ಕೃಷಿ, ಕುಡಿಯುವ ನೀರಿಗೆ ಅನುಕೂಲವಾಗುತ್ತದೆ. ಖಾಲಿ ಹುದ್ದೆಗಳನ್ನು ಭರ್ತಿ ಮಾಡುವುದರಿಂದ ಯುವಜನರಿಗೆ ಉದ್ಯೋಗ ಹಾಗೂ ಪಂಚಾಯಿತಿ ಕಾರ್ಯಾಲಯಗಳಲ್ಲಿ ಆಗಬೇಕಾದಂಥ ಕೆಲಸ ಕಾರ್ಯಗಳಿಗೆ ಅನುಕೂಲವಾಗುತ್ತದೆಂಬುದು ಸ್ಥಳೀಯರ ನಿರೀಕ್ಷೆಯಾಗಿದೆ.
ರಾಜ್ಯ ಬಜೆಟ್‌ಗೂ ಮುನ್ನ ರಾಯಚೂರು ಜಿಲ್ಲೆಯ ಜನರಲ್ಲಿ ಉಚಿತ ವಿದ್ಯುತ್ ಕುರಿತ ಚರ್ಚೆ ಗರಿಗೆದರಿದೆ. ಜಿಲ್ಲೆಯಲ್ಲೇ ಶಾಖೋತ್ಪನ್ನ ವಿದ್ಯುತ್ ಕೇಂದ್ರ ಕಾರ್ಯ ನಿರ್ವಹಿಸುತ್ತಿರುವುದರಿಂದ, ರಾಯಚೂರು ನಗರದ ಸುತ್ತಮುತ್ತಲಿನ ಪ್ರದೇಶಗಳಿಗೆ ಉಚಿತ ವಿದ್ಯುತ್ ನೀಡಬೇಕೆಂಬ ಬೇಡಿಕೆ ಸಾರ್ವಜನಿಕ ವಲಯದಲ್ಲಿ ಜೋರಾಗಿದೆ.
ರಾಯಚೂರಿನಲ್ಲಿರುವ ಶಾಖೋತ್ಪನ್ನ ವಿದ್ಯುತ್ ಕೇಂದ್ರವು ಇಡೀ ರಾಜ್ಯಕ್ಕೆ ಮಹತ್ವದ ಪ್ರಮಾಣದಲ್ಲಿ ವಿದ್ಯುತ್ ಪೂರೈಸುತ್ತಿದೆ. ಸ್ಥಳೀಯರ ಅಭಿಪ್ರಾಯದಂತೆ, ʼತಮ್ಮ ಜಿಲ್ಲೆಯಲ್ಲೇ ವಿದ್ಯುತ್ ಉತ್ಪಾದನೆ ನಡೆಯುತ್ತಿರುವುದರಿಂದ ಅದರ ಲಾಭ ಸ್ಥಳೀಯರಿಗೆ ಸಿಗಬೇಕುʼ ಎಂಬುದು ಪ್ರಮುಖ ವಾದವಾಗಿದೆ.
ಬೇಸಿಗೆಯಲ್ಲಿ ತಾಪಮಾನ 45 ಡಿಗ್ರಿ ಸೆಲ್ಸಿಯಸ್
ರಾಯಚೂರು ಜಿಲ್ಲೆ ಬೇಸಿಗೆ ಕಾಲದಲ್ಲಿ ತೀವ್ರ ಉಷ್ಣತೆಗೆ ಹೆಸರುವಾಸಿಯಾಗಿದೆ. ಕೆಲವೊಮ್ಮೆ ತಾಪಮಾನವೂ 45 ಡಿಗ್ರಿ ಸೆಲ್ಸಿಯಸ್‌ಗೆ ತಲುಪುತ್ತದೆ. ಈ ಸಂದರ್ಭ ಜನರಿಗೆ ದಿನನಿತ್ಯದ ಜೀವನ ಕಷ್ಟಕರವಾಗುತ್ತದೆ. ಫ್ಯಾನ್, ಕೂಲರ್, ಏರ್‌ಕಂಡೀಷನರ್ ಮುಂತಾದ ಉಪಕರಣಗಳ ಬಳಕೆ ಹೆಚ್ಚಾಗುವುದರಿಂದ ವಿದ್ಯುತ್ ಖರ್ಚು ಕೂಡ ಏರಿಕೆಯಾಗುತ್ತದೆ. ಈ ಹಿನ್ನೆಲೆಯಲ್ಲಿ ಉಚಿತ ಅಥವಾ ಸಬ್ಸಿಡಿ ವಿದ್ಯುತ್ ನೀಡಬೇಕು ಎಂಬುದು ಸ್ಥಳೀಯರ ಅಭಿಪ್ರಾಯವಾಗಿದೆ.
ಇಡೀ ರಾಜ್ಯಕ್ಕೆ ನಾವು ವಿದ್ಯುತ್ ನೀಡುತ್ತಿದ್ದೇವೆ. ಆದರೆ ನಮ್ಮ ಪ್ರದೇಶದ ಅಭಿವೃದ್ಧಿಗೆ ಹಾಗೂ ಸೌಲಭ್ಯಗಳಿಗೆ ಹೆಚ್ಚಿನ ಆದ್ಯತೆ ನೀಡಬೇಕೆಂದು ಬಹುತೇಕ ನಾಗರಿಕರು ಅಭಿಪ್ರಾಯಪಟ್ಟಿದ್ದಾರೆ. ಕೈಗಾರಿಕಾ ಅಭಿವೃದ್ಧಿ, ಆರೋಗ್ಯ ಮತ್ತು ಕುಡಿಯುವ ನೀರಿನ ಸಮಸ್ಯೆಗಳ ಜತೆಗೆ ವಿದ್ಯುತ್ ರಿಯಾಯಿತಿ ಕೂಡಾ ಬಜೆಟ್‌ನಲ್ಲಿ ಘೋಷಿಸಬೇಕು ಎಂಬುದು ಒತ್ತಾಯವಾಗಿದೆ.
ಈ ಬಗ್ಗೆ ಎಸ್‌ಡಿಪಿಐ ಮುಖಂಡ ಅಕ್ಬರ್ ನಾಗುಂಡಿ ಈ ದಿನ.ಕಾಮ್ ಜತೆಗೆ ಮಾತನಾಡಿ, “ಇಲ್ಲಿನ ರಾಜಕೀಯ ಜನಪ್ರತಿನಿಧಿಗಳು ಅವರವರ ಸ್ಥಾನಮಾನ ಮತ್ತು ರಾಜಕೀಯ ಲಾಭಕ್ಕಾಗಿ ಒಬ್ಬರಿಗೊಬ್ಬರು ಕಚ್ಚಾಡುವುದರಲ್ಲೇ ತಲ್ಲೀನರಾಗಿದ್ದಾರೆ. ಜಿಲ್ಲೆಯ ಜನರ ಮೂಲಭೂತ ಸಮಸ್ಯೆಗಳ ಬಗ್ಗೆ ಗಂಭೀರ ಚರ್ಚೆ ನಡೆಯುತ್ತಿಲ್ಲ. ರಾಯಚೂರು ಜಿಲ್ಲೆಯಲ್ಲಿರುವ ಶಾಖೋತ್ಪನ್ನ ವಿದ್ಯುತ್ ಕೇಂದ್ರದಿಂದ ಇಡೀ ರಾಜ್ಯಕ್ಕೆ ವಿದ್ಯುತ್ ಪೂರೈಕೆಯಾಗುತ್ತಿದ್ದರೂ, ಸ್ಥಳೀಯರಿಗೆ ಅದರ ನೇರ ಪ್ರಯೋಜನ ಸಿಗುತ್ತಿಲ್ಲ. ಈ ವಿಷಯವನ್ನು ವಿಧಾನಸಭೆ ಅಥವಾ ಸಂಸತ್ ಭವನದಲ್ಲಿ ಗಂಭೀರವಾಗಿ ಪ್ರಸ್ತಾಪಿಸಿದರೆ ಜಿಲ್ಲೆಯ ಜನರಿಗೆ ಅನುಕೂಲಕರವಾದ ನಿರ್ಧಾರಗಳು ಸಾಧ್ಯವಾಗಬಹುದು” ಎಂಬ ಅಭಿಪ್ರಾಯ ವ್ಯಕ್ತಪಡಿಸಿದರು.
ಒಟ್ಟಿನಲ್ಲಿ, ರಾಯಚೂರು ಜಿಲ್ಲೆಯ ಶಾಖೋತ್ಪನ್ನ ವಿದ್ಯುತ್ ಕೇಂದ್ರದ ಹಿನ್ನೆಲೆ ಹಾಗೂ ಬೇಸಿಗೆಯ ತೀವ್ರ ಉಷ್ಣತೆ ಗಮನದಲ್ಲಿಟ್ಟುಕೊಂಡು, ಈ ಬಾರಿ ಬಜೆಟ್‌ನಲ್ಲಿ ವಿಶೇಷ ಅನುದಾನ ಘೋಷಣೆ ಮಾಡುವಂತೆ ಸಾರ್ವಜನಿಕರು ಆಗ್ರಹಿಸುತ್ತಿದ್ದಾರೆ. ಸರ್ಕಾರದ ಅಂತಿಮ ನಿರ್ಧಾರ ಏನಾಗುತ್ತದೆ ಎಂಬುದನ್ನು ಕಾದು ನೋಡಬೇಕಾಗಿದೆ.
ದೇವದುರ್ಗ ತಾಲೂಕಿನ 33 ಗ್ರಾಮ ಪಂಚಾಯಿತಿಗಳಲ್ಲಿ 24 ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳ(PDO) ಹುದ್ದೆಗಳು ಖಾಲಿ ಇರುವ ಹಿನ್ನೆಲೆಯಲ್ಲಿ ಆಡಳಿತಾತ್ಮಕ ಕಾರ್ಯಗಳಿಗೆ ಹಿನ್ನಡೆಯಾಗುತ್ತಿದೆ. ಗ್ರಾಮೀಣ ಪ್ರದೇಶಗಳಲ್ಲಿ ಮೂಲಭೂತ ಸಮಸ್ಯೆಗಳು ತೀವ್ರವಾಗುತ್ತಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ. ತಾಲೂಕಿನ ಒಟ್ಟು 33 ಗ್ರಾಮ ಪಂಚಾಯಿತಿಗಳಲ್ಲಿ ಕೇವಲ 10 ಪಂಚಾಯಿತಿಗಳಿಗೆ ಮಾತ್ರ ನಿಯೋಜಿತ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ಕಾರ್ಯನಿರ್ವಹಿಸುತ್ತಿದ್ದು, ಉಳಿದ 24 ಪಂಚಾಯಿತಿಗಳು ಗ್ರೇಡ್–2 ಕಾರ್ಯದರ್ಶಿಗಳು ಹಾಗೂ ಕಂಪ್ಯೂಟರ್ ಆಪರೇಟರ್‌ಗಳ ಮೇಲೆಯೇ ಅವಲಂಬಿತವಾಗಿವೆ. ಪರಿಣಾಮವಾಗಿ ಆಡಳಿತ ಕಾರ್ಯಗಳು ವಿಳಂಬಗೊಳ್ಳುತ್ತಿದ್ದು, ಜನಸಾಮಾನ್ಯರ ಅರ್ಜಿಗಳು ಮತ್ತು ಅಭಿವೃದ್ಧಿ ಕಾಮಗಾರಿಗಳು ಸ್ಥಗಿತಗೊಳ್ಳುವ ಪರಿಸ್ಥಿತಿ ನಿರ್ಮಾಣವಾಗಿದೆ.
ತಾಲೂಕಿನ ವಿವಿಧ ಪಂಚಾಯತಿಗಳಾದ ಕೊಪ್ಪರ, ಹೇಮನಾಳ, ಕರೇಗುಡ್ಡ, ಗಬ್ಬೂರು, ಕರಡಿಗುಡ್ಡ, ಜಾಲಹಳ್ಳಿ, ಗೂಗಲ್, ಜೇರಬಂಡಿ, ಹಿರೇಬುದುರು, ಅಮರಾಪುರ, ಶಾವಂತಗೇರಾ, ಅಲ್ಕೋಡ್, ಅರಕೇರಾ, ಜಾಗೀರಜಾಡಲದಿನ್ನಿ, ಮುಷ್ಟೂರು, ಕೊತ್ತದೊಡ್ಡಿ, ನಾಗಡದಿನ್ನಿ, ಬಿ.ಗಣೇಕಲ್, ಗಾಣದಾಳ, ರಾಮದುರ್ಗ, ಕ್ಯಾದಿಗೇರಾ, ಮಲದಕಲ್, ಸೋಮನಮರಡಿ ಹಾಗೂ ಭೂಮನಗುಂಡ ಸೇರಿದಂತೆ ಅನೇಕ ಪಂಚಾಯತಿಗಳಲ್ಲಿ ಪಿಡಿಒಗಳ ಕೊರತೆ ಸ್ಪಷ್ಟವಾಗಿದೆ.
ಮಳೆಯ ಸಮಯದಲ್ಲಿ ನೀರು ಸಂಗ್ರಹವಾಗುವ ಸಮಸ್ಯೆ ಹೆಚ್ಚಾಗಿದೆ. ಕುಡಿಯುವ ನೀರು, ರಸ್ತೆ ದುರಸ್ತಿ, ಬೀದಿ ದೀಪಗಳ ನಿರ್ವಹಣೆ ಸೇರಿದಂತೆ ಹಲವಾರು ಮೂಲಸೌಕರ್ಯಗಳಲ್ಲಿ ಕೊರತೆ ಕಂಡುಬರುತ್ತಿದೆ. ಆದರೆ ಈ ಸಮಸ್ಯೆಗಳ ಕುರಿತು ಸ್ಥಳೀಯ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಸಮರ್ಪಕ ಸ್ಪಂದನೆ ನೀಡುತ್ತಿಲ್ಲವೆಂಬ ಆರೋಪ ಕೇಳಿಬರುತ್ತಿದೆ.
ಪಂಚಾಯಿತಿಯಲ್ಲಿ ಪೂರ್ಣ ಪ್ರಮಾಣದ ಅಧಿಕಾರಿಗಳಿಲ್ಲದ ಕಾರಣ ನಮ್ಮ ಸಮಸ್ಯೆಗಳನ್ನು ಕೇಳಿಕೊಳ್ಳುವವರೇ ಇಲ್ಲ. ಸಣ್ಣ ಕೆಲಸಕ್ಕೂ ತಾಲೂಕು ಕಚೇರಿಗೆ ಓಡಾಡಬೇಕಾದ ಪರಿಸ್ಥಿತಿ ಎದುರಾಗಿದೆ. ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳ ಕೊರತೆಯಿಂದ ಯೋಜನೆಗಳ ಅನುಷ್ಠಾನ, ಅನುದಾನಗಳ ಬಳಕೆ ಮತ್ತು ಗ್ರಾಮಾಭಿವೃದ್ಧಿ ಕಾರ್ಯಗಳು ಪರಿಣಾಮಕಾರಿಯಾಗಿ ನಡೆಯುತ್ತಿಲ್ಲ. ಸರ್ಕಾರ ತಕ್ಷಣವೇ ಖಾಲಿ ಹುದ್ದೆಗಳನ್ನು ಭರ್ತಿ ಮಾಡಿ ಆಡಳಿತ ವ್ಯವಸ್ಥೆಯನ್ನು ಬಲಪಡಿಸಬೇಕೆಂಬುದು ಯುವಜನರ ಆಗ್ರಹವಾಗಿದೆ.
ಒಟ್ಟಾರೆ, ದೇವದುರ್ಗ ತಾಲೂಕಿನಲ್ಲಿ ಪಂಚಾಯಿತಿ ಮಟ್ಟದ ಆಡಳಿತ ವ್ಯವಸ್ಥೆ ದುರ್ಬಲಗೊಂಡಿದ್ದು, ಮೂಲಭೂತ ಸೌಕರ್ಯಗಳ ಸಮಸ್ಯೆ ತೀವ್ರವಾಗುತ್ತಿದೆ. ಜನರ ಸಮಸ್ಯೆಗಳಿಗೆ ಶೀಘ್ರ ಪರಿಹಾರ ಕಂಡುಹಿಡಿಯಲು ಸರ್ಕಾರ ಹಾಗೂ ಸಂಬಂಧಪಟ್ಟ ಅಧಿಕಾರಿಗಳು ತಕ್ಷಣ ಕ್ರಮ ಕೈಗೊಳ್ಳಬೇಕೆಂಬುದು ಸಾರ್ವಜನಿಕರ ಒತ್ತಾಯವಾಗಿದೆ.
ಈ ಬಗ್ಗೆ ಭೀಮ್ ಆರ್ಮಿ ಮುಖಂಡ ವಿಶ್ವನಾಥ ಬಲ್ಲಿದೇವ್ ಈ ದಿನ.ಕಾಮ್ ಜತೆ ಮಾತನಾಡಿ, “ಜಿಲ್ಲೆಯ ಗ್ರಾಮ ಪಂಚಾಯಿತಿಗಳಲ್ಲಿ ಗ್ರಾಮ ಅಭಿವೃದ್ಧಿ ಅಧಿಕಾರಿಗಳ(ಪಿಡಿಒ) ಹುದ್ದೆಗಳು ದೀರ್ಘಕಾಲದಿಂದ ಖಾಲಿ ಇರುವುದರಿಂದ ಸಾರ್ವಜನಿಕ ಸಮಸ್ಯೆಗಳು ಹೆಚ್ಚುತ್ತಿವೆ. ಪಿಡಿಒ ಹುದ್ದೆಗಳು ಖಾಲಿ ಇರುವ ಕಾರಣ ಗ್ರಾಮ ಪಂಚಾಯಿತಿಗಳಲ್ಲಿ ಆಡಳಿತಾತ್ಮಕ ಕಾರ್ಯಗಳು ಸ್ಥಗಿತಗೊಂಡಂತಾಗಿದ್ದು, ಸಂಪೂರ್ಣ ಹೊಣೆಗಾರಿಕೆ ಕಂಪ್ಯೂಟರ್ ಆಪರೇಟರ್‌ಗಳ ಮೇಲೆಯೇ ನಿಂತಿದೆ. ಇದರಿಂದ ಕಾರ್ಯಪದ್ಧತಿಯಲ್ಲಿ ಅವ್ಯವಸ್ಥೆ ಉಂಟಾಗಿ, ಕೆಲವರದೇ ದರ್ಬಾರ್ ನಡೆಯುತ್ತಿರುವಂತಾಗಿದೆ” ಎಂದು ದೂರಿದರು.
“ಈ ಬಾರಿ ನಡೆಯುವ ಬಜೆಟ್‌ನಲ್ಲಿ ನಮ್ಮ ಜಿಲ್ಲೆಯ ಹಾಗೂ ತಾಲೂಕಿನ ಖಾಲಿ ಹುದ್ದೆಗಳನ್ನು ಕೂಡಲೇ ಭರ್ತಿ ಮಾಡುವ ಬಗ್ಗೆ ಸರ್ಕಾರ ಘೋಷಣೆ ಮಾಡಬೇಕು. ಇಲ್ಲವಾದರೆ ಗ್ರಾಮೀಣ ಅಭಿವೃದ್ಧಿ ಕಾರ್ಯಗಳು ಹಿಂದುಳಿಯುವ ಸಾಧ್ಯತೆ ಇದೆ” ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಸ್ಥಳೀಯ ಕೆಲವು ಜನಪ್ರತಿನಿಧಿಗಳು ಮರಳು ದಂಧೆ ಮತ್ತು ಒತ್ತುವರಿ ಕಾರ್ಯಗಳಲ್ಲಿ ನಿರತರಾಗಿದ್ದಾರೆ. ವಿಧಾನಸಭೆಯಲ್ಲಿ ಪಿಡಿಒ ಹುದ್ದೆಗಳ ಖಾಲಿತನ ಕುರಿತು ಗಂಭೀರವಾಗಿ ಚರ್ಚೆ ಮಾಡಬೇಕಾಗಿದ್ದರೂ, ಅದಕ್ಕೆ ಪ್ರಾಮುಖ್ಯತೆ ನೀಡಲಾಗಿಲ್ಲ. ಇಲ್ಲಿನ ಕೆಲವು ರಾಜಕೀಯ ಮುಖಂಡರು ಅಭಿವೃದ್ಧಿ ವಿಷಯವನ್ನು ಕಡೆಗಣಿಸಿ, ತಮ್ಮ ತಮ್ಮ ವ್ಯಾಪಾರ ವಹಿವಾಟಿನಲ್ಲಿ ತೊಡಗಿದ್ದಾರೆ. ಜನರ ಸಮಸ್ಯೆಗಳ ಪರಿಹಾರಕ್ಕಿಂತ ಸ್ವಾರ್ಥದ ರಾಜಕಾರಣವೇ ಮೇಲುಗೈ ಸಾಧಿಸಿದೆ” ಎಂದು ಟೀಕಿಸಿದರು.
ಡಿವೈಎಫ್ಐ ತಾಲೂಕಾಧ್ಯಕ್ಷ ರಾಜಶೇಖರ್ ಮಾತನಾಡಿ, “ಪ್ರಸ್ತುತ ಕೆಲ ಪಿಡಿಒಗಳು ಒಂದೇ ಸಮಯದಲ್ಲಿ ಎರಡರಿಂದ ಮೂರು ಪಂಚಾಯತಿಗಳ ಜವಾಬ್ದಾರಿಯನ್ನು ನಿರ್ವಹಿಸುತ್ತಿದ್ದು, ಆಡಳಿತಾತ್ಮಕ ಒತ್ತಡ ಹೆಚ್ಚಾಗಿದೆ. ಇದರ ಪರಿಣಾಮವಾಗಿ ಸಾರ್ವಜನಿಕರ ಅರ್ಜಿಗಳು, ಯೋಜನೆಗಳ ಅನುಷ್ಠಾನ ಹಾಗೂ ದಿನನಿತ್ಯದ ಕಾರ್ಯಗಳು ವಿಳಂಬಗೊಳ್ಳುತ್ತಿವೆ. ಸಣ್ಣಪುಟ್ಟ ದಾಖಲೆ ಕೆಲಸಗಳಿಗೂ ಗ್ರಾಮಸ್ಥರು ಹಲವು ಬಾರಿ ಕಚೇರಿಗಳಿಗೆ ಅಲೆದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ವೃದ್ಧಾಪ್ಯ ವೇತನ, ಮನೆ ಯೋಜನೆ, ಉದ್ಯೋಗ ಖಾತ್ರಿ ಸೇರಿದಂತೆ ವಿವಿಧ ಸರ್ಕಾರಿ ಯೋಜನೆಗಳ ಲಾಭ ಪಡೆಯಲು ಜನರು ತೊಂದರೆ ಅನುಭವಿಸುತ್ತಿದ್ದಾರೆ. ಹಾಗಾಗಿ ಸರ್ಕಾರ ಕೂಡಲೇ ಖಾಲಿ ಹುದ್ದೆಗಳನ್ನು ಭರ್ತಿ ಮಾಡಿ, ಗ್ರಾಮ ಪಂಚಾಯಿತಿಗಳ ಕಾರ್ಯಕ್ಷಮತೆಯನ್ನು ಸುಧಾರಿಸಬೇಕು” ಎಂದು ಆಗ್ರಹಿಸಿದ್ದಾರೆ.
ಇದನ್ನೂ ಓದಿದ್ದೀರಾ? ರಾಜ್ಯ ಬಜೆಟ್ | ಸಾಂಸ್ಕೃತಿಕ ನಗರಿ ಮೈಸೂರಿನ ನಿರೀಕ್ಷೆಗಳೇನು? ಕಳೆದ ಬಜೆಟ್ ಕಡತದಲ್ಲೇ ಉಳಿಯಿತೇ?
ಸಂಬಂಧಿಸಿದ ಇಲಾಖೆ ಶೀಘ್ರ ಕ್ರಮ ಕೈಗೊಳ್ಳದಿದ್ದರೆ ಗ್ರಾಮೀಣಾಭಿವೃದ್ಧಿಗೆ ಮತ್ತಷ್ಟು ಹಿನ್ನಡೆ ಉಂಟಾಗುವ ಸಾಧ್ಯತೆ ಇದೆ. ಜಿಲ್ಲೆಯ ವಿವಿಧ ಗ್ರಾಮ ಪಂಚಾತಿಗಳಲ್ಲಿ ಅಭಿವೃದ್ಧಿ ಕಾರ್ಯಗಳಿಗೆ ಹೊಣೆಗಾರರಾಗಿರುವ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳ (ಪಿಡಿಒ) ಒಟ್ಟು 55 ಹುದ್ದೆಗಳು ಖಾಲಿಯಾಗಿರುವುದು ಗ್ರಾಮೀಣಾಭಿವೃದ್ಧಿಗೆ ದೊಡ್ಡ ಅಡ್ಡಿಯಾಗುತ್ತಿದೆ. ಈ ಹಿನ್ನೆಲೆಯಲ್ಲಿ ಗ್ರಾಮಗಳಲ್ಲಿ ಮೂಲಭೂತ ಸೌಕರ್ಯಗಳಾದ ಕುಡಿಯುವ ನೀರು, ಒಳಚರಂಡಿ ವ್ಯವಸ್ಥೆ, ರಸ್ತೆ ದುರಸ್ತಿ ಸೇರಿದಂತೆ ಹಲವು ಅಗತ್ಯ ಕೆಲಸಗಳು ಕುಂಠಿತಗೊಂಡಿವೆ. ಹಾಗಾಗಿ ಪ್ರಸ್ತುತ ಬಜೆಟ್‌ನಲ್ಲಿ ಇವೆಲ್ಲವನ್ನೂ ಒಳಗೊಂಡಂತೆ ಅನುದಾನ ನೀಡಬೇಕಾಗಿ ಒತ್ತಾಯಿಸುತ್ತಿದ್ದಾರೆ,
ಒಟ್ಟಾರೆಯಾಗಿ, ಈ ಬಾರಿ ರಾಜ್ಯ ಬಜೆಟ್‌ನಲ್ಲಿ ರಾಯಚೂರು ಜಿಲ್ಲೆಯ ಜನರ ಬೇಡಿಕೆಗೆ ಸ್ಪಂದನೆ ಸಿಗುತ್ತದೆಯೇ ಎಂಬುದೇ ಕುತೂಹಲವಾಗಿದೆ. ಉಚಿತ ವಿದ್ಯುತ್ ಅಥವಾ ವಿಶೇಷ ಸಬ್ಸಿಡಿ ಯೋಜನೆ ಘೋಷಣೆ ಮಾಡಿದರೆ ಕೃಷಿ, ಕುಡಿಯುವ ನೀರಿಗೆ ಅನುಕೂಲವಾಗುತ್ತದೆ. ಖಾಲಿ ಹುದ್ದೆಗಳನ್ನು ಭರ್ತಿ ಮಾಡುವುದರಿಂದ ಯುವಜನರಿಗೆ ಉದ್ಯೋಗ ಹಾಗೂ ಪಂಚಾಯಿತಿ ಕಾರ್ಯಾಲಯಗಳಲ್ಲಿ ಆಗಬೇಕಾದಂಥ ಕೆಲಸ ಕಾರ್ಯಗಳಿಗೆ ಅನುಕೂಲವಾಗುತ್ತದೆಂಬುದು ಸ್ಥಳೀಯರ ನಿರೀಕ್ಷೆಯಾಗಿದೆ.

ರಫಿ ಗುರುಗುಂಟ
ಗುಲಬರ್ಗಾ ವಿವಿಯಿಂದ ಪತ್ರಿಕೋದ್ಯಮದಲ್ಲಿ ಎಂ ಎ ಪದವಿ, ಕಲ್ಯಾಣ ಕರ್ನಾಟಕ ವಲಯ ಕೋರ್ಡಿನೇಟರ್




