2026-27ನೇ ಸಾಲಿನ ರಾಜ್ಯ ಬಜೆಟ್ ರಾಯಚೂರು ಭಾಗದ ಜನರ ಬಹುಕಾಲದ ಬೇಡಿಕೆಗಳನ್ನು ಈಡೇರಿಸಿದ್ದು, ನಗರೀಕರಣ, ಶೈಕ್ಷಣಿಕ ಪ್ರಗತಿ ಮತ್ತು ಆರೋಗ್ಯ ಮೂಲಸೌಕರ್ಯಗಳ ಅಭಿವೃದ್ಧಿಗೆ ಭದ್ರ ಬುನಾದಿ ಹಾಕಿದೆ.
“ಮಹಾತ್ಮ ಗಾಂಧಿ ನಗರ ವಿಕಾಸ ಯೋಜನೆ 2.0 ಅಡಿಯಲ್ಲಿ, ನೂತನವಾಗಿ ಮೇಲ್ದರ್ಜೆಗೇರಿರುವ ರಾಯಚೂರು ಮಹಾನಗರ ಪಾಲಿಕೆಗೆ ಬರೋಬ್ಬರಿ 200 ಕೋಟಿ ರೂ. ಅನುದಾನ ಒದಗಿಸಿರುವುದು ಒಂದು ಐತಿಹಾಸಿಕ ಮೈಲಿಗಲ್ಲಾಗಿದೆ.
ರಾಯಚೂರಿನ ಐಐಐಟಿಯಲ್ಲಿ (IIIT Raichur) ‘ಕೃತಕ ಬುದ್ಧಿಮತ್ತೆ ಉತ್ಕೃಷ್ಟತಾ ಕೇಂದ್ರ’ (AI Center of Excellence) ಸ್ಥಾಪಿಸಲು ಬಜೆಟ್‌ನಲ್ಲಿ 5 ಕೋಟಿ ರೂ. ಮಂಜೂರು ಮಾಡಲಾಗಿದೆ.
ಗ್ರಾಮೀಣ ಭಾಗದ ಶಿಕ್ಷಣ ವ್ಯವಸ್ಥೆಯನ್ನು ಬಲಪಡಿಸಲು, ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿಯ (KKRDB) ಬೃಹತ್ ಅನುದಾನದಡಿ ಮಸ್ಕಿಯಲ್ಲಿ ನೂತನ ‘ಪ್ರಥಮ ದರ್ಜೆ ಕಾಲೇಜು’ ಸ್ಥಾಪಿಸಲಾಗುವುದು. ಅಲ್ಲದೆ, ಗ್ರಾಮೀಣ ವಿದ್ಯಾರ್ಥಿಗಳಿಗೆ ಗುಣಮಟ್ಟದ ಉನ್ನತ ಶಿಕ್ಷಣ ಒದಗಿಸಲು ಅಂಬಾಮಠದಲ್ಲಿ 18 ಕೋಟಿ ರೂ. ವೆಚ್ಚದಲ್ಲಿ ‘ವಸತಿಯುತ ಪ್ರಥಮ ದರ್ಜೆ ಕಾಲೇಜು’ ನಿರ್ಮಾಣವಾಗಲಿದೆ.
ರಾಯಚೂರು ಗ್ರಾಮಾಂತರ ವಿಧಾನಸಭಾ ಕ್ಷೇತ್ರದಲ್ಲಿ ಶ್ರಮಿಕರ ಮಕ್ಕಳಿಗಾಗಿ ವಸತಿ ಶಾಲೆಗಳನ್ನು ಸ್ಥಾಪಿಸುವ ಯೋಜನೆಯನ್ನು ಕೈಗೊಳ್ಳಲಾಗುತ್ತದೆ.
ಆರೋಗ್ಯ ಕ್ಷೇತ್ರದಲ್ಲಿನ ಮಹತ್ವದ ಹೆಜ್ಜೆಯಾಗಿ, ರಾಯಚೂರಿನ ಇಎಸ್‌ಐ (ESI) ಔಷಧಾಲಯವನ್ನು ಮೇಲ್ದರ್ಜೆಗೇರಿಸಲಾಗುವುದು ಹಾಗೂ 10 ಕೋಟಿ ರೂ. ವೆಚ್ಚದಲ್ಲಿ ಟ್ರಾಮಾ ಕೇರ್ ಸೆಂಟರ್ (Trauma Care Centre) ಕಾಮಗಾರಿಯನ್ನು ಪೂರ್ಣಗೊಳಿಸಲಾಗಿದೆ.
ರಸ್ತೆ ಸಂಪರ್ಕ: ಕಲ್ಮಲಾ-ಸಿಂಧನೂರು ರಸ್ತೆಯ ಒಟ್ಟು 77 ಕಿ.ಮೀ ಪೈಕಿ 60 ಕಿ.ಮೀ ರಸ್ತೆ ಕಾಮಗಾರಿ ಪೂರ್ಣಗೊಂಡು ಸಾರ್ವಜನಿಕರ ಬಳಕೆಗೆ ಮುಕ್ತವಾಗಿದ್ದು, ಬಾಕಿ ಉಳಿದಿರುವ 17 ಕಿ.ಮೀ ರಸ್ತೆ ಕಾಮಗಾರಿಯನ್ನು ತ್ವರಿತಗತಿಯಲ್ಲಿ ಪೂರ್ಣಗೊಳಿಸಲಾಗುವುದು.
ಕ್ರೀಡಾ ಅಭಿವೃದ್ಧಿ: ಸ್ಥಳೀಯ ಕ್ರೀಡಾ ಪ್ರತಿಭೆಗಳನ್ನು ಪ್ರೋತ್ಸಾಹಿಸಲು ಮಸ್ಕಿಯಲ್ಲಿ 2 ಕೋಟಿ ರೂ. ವೆಚ್ಚದಲ್ಲಿ ತಾಲೂಕು ಕ್ರೀಡಾಂಗಣ ನಿರ್ಮಾಣ ಹಾಗೂ ಕಾನೂನು ಮತ್ತು ಸುವ್ಯವಸ್ಥೆಗಾಗಿ ರಾಯಚೂರು ಜಿಲ್ಲಾ ಕೇಂದ್ರ ಕಾರಾಗೃಹದ ನಿರ್ಮಾಣ ಕಾಮಗಾರಿಗೆ ಚಾಲನೆ.
ರಾಯಚೂರು ಜಿಲ್ಲೆಯ ವಿವಿಧ ಭಾಗಗಳಲ್ಲಿ ನೀರಾವರಿ ಅಭಿವೃದ್ಧಿಗಾಗಿ ಹಲವು ಯೋಜನೆಗಳನ್ನು ಕೈಗೊಳ್ಳಲಾಗುತ್ತಿದೆ. ಮಸ್ಕಿ ತಾಲ್ಲೂಕಿನ ಜಾಲವಾಡಗಿ ಗ್ರಾಮದಲ್ಲಿ ನಾಲೆಗೆ ಚೆಕ್ ಡ್ಯಾಂ ನಿರ್ಮಾಣ ಮಾಡುವ ಮೂಲಕ ಏತ ನೀರಾವರಿ ಯೋಜನೆಯನ್ನು ಜಾರಿಗೆ ತರಲಾಗುತ್ತದೆ. ಮಾನವಿ ತಾಲ್ಲೂಕಿನ ಜೇನೂರು-ಉದ್ಘಾಳ ಹಾಗೂ ಮುದ್ದಾಪೂರ ಪ್ರದೇಶಗಳಲ್ಲಿ ಏತ ನೀರಾವರಿ ಯೋಜನೆಯ ಪುನರುಜ್ಜೀವನ ಕಾರ್ಯ ನಡೆಯಲಿದೆ. ಅದೇ ರೀತಿಯಾಗಿ ಮಾನವಿ ತಾಲ್ಲೂಕಿನ ದದ್ದಲ್ ಗ್ರಾಮದ ಬಳಿ ಏತ ನೀರಾವರಿ ಯೋಜನೆಯನ್ನು ಪುನರುಜ್ಜೀವನಗೊಳಿಸಲಾಗುತ್ತದೆ.
ಮಸ್ಕಿ ತಾಲ್ಲೂಕಿನ ಪಾಮನಕಲ್ಲೂರು ಮತ್ತು ಸುತ್ತಮುತ್ತಲಿನ ಪ್ರದೇಶಗಳಿಗೆ ನೀರಾವರಿ ಸೌಲಭ್ಯ ಒದಗಿಸುವ ಯೋಜನೆಯನ್ನೂ ಕೈಗೊಳ್ಳಲಾಗಿದೆ. ಸಿಂಧನೂರು ತಾಲ್ಲೂಕಿನ ಸಾಲಗುಂದದಲ್ಲಿ ಏತ ನೀರಾವರಿ ಯೋಜನೆ ಜಾರಿಗೆ ಬರಲಿದೆ. ಸಿಂಧನೂರು ತಾಲ್ಲೂಕಿನ ಮುಳ್ಳೂರು ಗ್ರಾಮದ ಸಮೀಪ ಸಿಂಧನೂರು ಹಳ್ಳದ ಮೇಲೆ ಬ್ರಿಡ್ಜ್-ಕಂ-ಬ್ಯಾರೇಜ್ ನಿರ್ಮಾಣ ಮಾಡಲಾಗುತ್ತದೆ.
ಈ ಸುದ್ದಿ ಓದಿದ್ದೀರಾ? ರಾಜ್ಯ ಬಜೆಟ್ | ರಾಯಚೂರಿನಲ್ಲಿ AI ಶ್ರೇಷ್ಠತಾ ಕೇಂದ್ರ ಸ್ಥಾಪನೆ; ಸಿದ್ದರಾಮಯ್ಯ
ಮಾನವಿ ತಾಲ್ಲೂಕಿನ ಯದ್ರಿಹಾಳ ಗ್ರಾಮದ ಸಮೀಪ ಅಚ್ಚುಕಟ್ಟಿಗೆ ನೀರು ಒದಗಿಸುವುದು ಹಾಗೂ ಸರ್ವಿಸ್ ರಸ್ತೆ ಅಭಿವೃದ್ಧಿ ಕಾರ್ಯಗಳು ಕೂಡ ನಡೆಯಲಿವೆ. ಇದರ ಜೊತೆಗೆ ರಾಯಚೂರು ತಾಲ್ಲೂಕಿನಡಿ 18 ಕೆರೆಗಳು ಮತ್ತು ದೇವದುರ್ಗ ತಾಲ್ಲೂಕಿನಡಿ ಕೆರೆಗಳನ್ನು ತುಂಬಿಸುವ ಯೋಜನೆಯನ್ನೂ ಕೈಗೊಳ್ಳಲಾಗುತ್ತದೆ.





