ಬಳುವಲ ಹಣ್ಣು ಗೊಡಚಿ ಜಾತ್ರೆಗೆ ವಿಶಿಷ್ಟ ಗುರುತನ್ನು ನೀಡುವುದರ ಜತೆಗೆ ಪೀಳಿಗೆಯಿಂದ ಪೀಳಿಗೆಗೆ ಸಾಗಿದ ಪರಂಪರೆಯ ಸಂಕೇತವಾಗಿಯೂ ಉಳಿದಿದೆ. ಇತ್ತ ರಂಗಭೂಮಿ ಕಲಾವಿದರಿಗೆ ವೇದಿಕೆ ನೀಡುವ ಮೂಲಕ ಈ ಜಾತ್ರೆ ಕಲೆಗೂ ಜೀವ ತುಂಬುತ್ತಿದೆ. ಭಕ್ತಿ, ಬದುಕು ಮತ್ತು ಸಂಸ್ಕೃತಿ ಒಂದಾಗಿ ಬೆರೆತಿರುವ ಗೊಡಚಿ ಜಾತ್ರೆ ಉತ್ತರ ಕರ್ನಾಟಕದ ಆತ್ಮವನ್ನು ಪ್ರತಿಬಿಂಬಿಸುವ ಜೀವಂತ ಸಾಂಸ್ಕೃತಿಕ ಹಬ್ಬವಾಗಿದೆ.
ಉತ್ತರ ಕರ್ನಾಟಕದ ಧಾರ್ಮಿಕ ಸಾಂಸ್ಕೃತಿಕ ಪರಂಪರೆಯನ್ನು ಪ್ರತಿಬಿಂಬಿಸುವ ಬೆಳಗಾವಿ ಜಿಲ್ಲೆಯ ರಾಮದುರ್ಗ ತಾಲೂಕಿನ ಗೊಡಚಿ ವೀರಭದ್ರೇಶ್ವರ ಜಾತ್ರೆ ಕೇವಲ ಧಾರ್ಮಿಕ ಆಚರಣೆಗಳಿಗಷ್ಟೇ ಸೀಮಿತವಲ್ಲ. ಈ ಜಾತ್ರೆ ಜನಜೀವನ, ನಂಬಿಕೆ ಮತ್ತು ಆಹಾರ ಸಂಸ್ಕೃತಿಯನ್ನು ಒಟ್ಟುಗೂಡಿಸುವ ವಿಶಿಷ್ಟ ಹಬ್ಬವಾಗಿದೆ. ಈ ಜಾತ್ರೆಯ ಆತ್ಮವೇ ಬಳುವಲ ಹಣ್ಣಿನ ಸಿಹಿ.
ಹೊಸ್ತಿಲ ಹುಣ್ಣಿಮೆಯಿಂದ ಆರಂಭವಾಗಿ ಐದು ದಿನಗಳ ಕಾಲ ವಿಜೃಂಭಣೆಯಿಂದ ನಡೆಯುವ ಜಾತ್ರೆಗೆ ರಾಜ್ಯದ ನಾನಾ ಭಾಗಗಳಿಂದ ಲಕ್ಷಾಂತರ ಭಕ್ತರು ಆಗಮಿಸುತ್ತಾರೆ. ದೇವರ ದರ್ಶನದ ಜತೆಗೆ ಜಾತ್ರೆಗೆ ಬಂದ ಪ್ರತಿಯೊಬ್ಬರೂ ಬಳುವಲ ಹಣ್ಣನ್ನು ಖರೀದಿಸದೇ ಹಿಂದಿರುಗುವುದಿಲ್ಲ. ಭಕ್ತರ ದೃಷ್ಟಿಯಲ್ಲಿ ಬಳುವಲ ಹಣ್ಣು ಗೊಡಚಿ ವೀರಭದ್ರೇಶ್ವರನ ಪ್ರಸಾದವಾಗಿದ್ದು, ಮನೆಗೆ ಕೊಂಡೊಯ್ಯುವುದು ಆಶೀರ್ವಾದವೆಂದು ಭಾವಿಸಲಾಗಿದೆ.
ಘಮಲಿನಿಂದ ಕಂಗೊಳಿಸುವ ಜಾತ್ರಾ ವಾತಾವರಣ
ಜಾತ್ರೆಯ ದಿನಗಳಿಂದಲೇ ಗೊಡಚಿ ಸುತ್ತಮುತ್ತಲ ಪ್ರದೇಶಗಳು ಬಳುವಲ ಹಣ್ಣಿನ ಘಮಲಿನಿಂದ ಕಂಗೊಳಿಸುತ್ತವೆ. ನೂರಾರು ವ್ಯಾಪಾರಸ್ಥರು ಟ್ರ್ಯಾಕ್ಟರ್‌ಗಳಲ್ಲಿ ಸಾವಿರಾರು ಚೀಲಗಳಷ್ಟು ಬಳುವಲ ಹಣ್ಣುಗಳನ್ನು ತಂದು ಮಾರಾಟ ಮಾಡುತ್ತಾರೆ. ಒಂದು ಜಾತ್ರೆಯ ಅವಧಿಯಲ್ಲಿ ಲಕ್ಷಾಂತರ ಹಣ್ಣುಗಳ ಮಾರಾಟವಾಗುವುದು ಇಲ್ಲಿನ ಆರ್ಥಿಕ ಚಟುವಟಿಕೆಯನ್ನೂ ಜೀವಂತಗೊಳಿಸುತ್ತದೆ.
ಬಳುವಲ ಹಣ್ಣಿನ ಪರಿಚಯ
ಭಾರತ ಮೂಲದ ಬಳುವಲ ಹಣ್ಣಿಗೆ ಕನ್ನಡದಲ್ಲಿ ಬೇಲ, ಬ್ಯಾಲ, ಮಳೂರ, ಮನ್ಮಥ ಪುಷ್ಪಫಲ ಎಂಬ ಹೆಸರುಗಳಿಂದ ಕರೆಯಲಾಗುತ್ತದೆ. ಸಂಸ್ಕೃತದಲ್ಲಿ ದಾದಿಫಲ, ದಂತಫಲ, ಗಂಧಫಲ ಸೇರಿದಂತೆ ಹಲವಾರು ಹೆಸರುಗಳಿವೆ. ಫೆರೋನಿಯಾ ಉಪವರ್ಗಕ್ಕೆ ಸೇರಿದ ಈ ಮರದ ಗೋಳಾಕಾರದ ಗಟ್ಟಿಯಾದ ಹಣ್ಣಿನಲ್ಲಿ ಸಿಹಿ ಹುಳಿ ರುಚಿಯ ತಿರುಳು ಮತ್ತು ಅನೇಕ ಸಣ್ಣ ಬೀಜಗಳು ಇರುತ್ತವೆ.

ಬಳುವಲ ಹಣ್ಣಿಗೆ ಧಾರ್ಮಿಕ ಮಹತ್ವದ ಜತೆಗೆ ಔಷಧೀಯ ಗುಣವೂ ಅಪಾರವಾಗಿದೆ. ಜೀರ್ಣಕ್ರಿಯೆಗೆ ಸಹಕಾರಿ, ವಾತ ಶಮನಕಾರಿ ಹಾಗೂ ಹೃದಯಕ್ಕೆ ಬಲ ನೀಡುವ ಗುಣಗಳಿಂದ ಇದು ಜನರಲ್ಲಿ ಹೆಚ್ಚು ಜನಪ್ರಿಯವಾಗಿದೆ. ಕೆಮ್ಮು, ಗಂಟಲು ನೋವು, ಅತಿಸಾರ, ಪಿತ್ತದ ತೊಂದರೆಗಳಿಗೆ ಇದು ಉಪಯುಕ್ತವೆಂದು ಹಿರಿಯರು ಹೇಳುತ್ತಾರೆ. ಹಣ್ಣಿನ ಸೇವನೆಯು ನರಮಂಡಲವನ್ನು ಬಲಪಡಿಸಿ ಸ್ಮರಣಶಕ್ತಿಯನ್ನು ಹೆಚ್ಚಿಸುತ್ತದೆ ಎಂಬ ನಂಬಿಕೆಯೂ ಇದೆ.
ಬಳುವಲ ಹಣ್ಣು ವ್ಯಾಪಾರಸ್ಥ ಅಡಿಯಪ್ಪ ಮಾತನಾಡಿ, “ಚಿತ್ರದುರ್ಗದಿಂದ ಹಣ್ಣು ತರುತ್ತೇವೆ. ಹುಚ್ಚೆಳು ಅಮವಾಸ್ಯೆಯ ನಂತರ ಜಾತ್ರೆಗೆ ಸುಮಾರು 20 ದಿನಗಳ ಮುಂಚೆ ಹಣ್ಣು ತಂದು ಭೂಮಿಯಲ್ಲಿ ಅಗೆದು ಮುಚ್ಚಿ, ಮಣ್ಣು ಹಾಕಿ ಬೆಂಕಿ ಹಚ್ಚುವ ಮೂಲಕ ಸಂಸ್ಕರಣೆ ಮಾಡಲಾಗುತ್ತದೆ. ಕಳೆದ 30 ವರ್ಷಗಳಿಂದ ಜಾತ್ರೆಯಲ್ಲಿ ವ್ಯಾಪಾರ ನಡೆಸುತ್ತಿದ್ದು, ಈ ಬಾರಿ 200 ಚೀಲ ಬಳುವಲ ಹಣ್ಣು ಮಾರಾಟವಾಗಿದೆ. ಒಂದು ಡಜನ್‌ಗೆ ₹100ರಿಂದ ₹200ರವರೆಗೆ ಬೆಲೆ ಇದೆ. ವೈದ್ಯಕೀಯ ಗುಣಗಳಿರುವುದರಿಂದ ವ್ಯಾಪಾರ ಲಾಭದಾಯಕವಾಗಿದೆ” ಎಂದು ಹೇಳಿದರು.

ವ್ಯಾಪಾರಸ್ಥ ಬುಡ್ಡೆಸಾಬ ಅವರು ಈ ದಿನ.ಕಾಮ್ ಜತೆ ಮಾತನಾಡಿ, “ಶಿಕಾರಿಪುರದಿಂದ ಬಳುವಲ ಕಾಯಿ ತಂದು ಚೀಲಗಳಲ್ಲಿ ಸಂಗ್ರಹಿಸಲಾಗುತ್ತದೆ. ಐದು ದಿನಗಳ ಬಳಿಕ ಹಣ್ಣು ಪಕ್ವವಾಗುತ್ತದೆ. ಜಾತ್ರೆಯಲ್ಲಿ ಮಾತ್ರ ಹೆಚ್ಚು ಮಾರಾಟವಾಗುತ್ತಿದ್ದು, ಈ ಬಾರಿ 50 ಲೋಡ್ ಮಾರಾಟವಾಗಿದೆ” ಎಂದು ಹೇಳಿದರು.
ಅಬ್ದುಲ್ ಅವರು ಈ ದಿನ.ಕಾಮ್ ಜತೆ ಮಾತನಾಡಿ, “ದಾವಣಗೆರೆಯಿಂದ ಬಳುವಲ ಹಣ್ಣು ತಂದು ವ್ಯಾಪಾರ ಮಾಡಲಾಗುತ್ತದೆ. ಕಾಯಿ ಒಡೆದು ಬೆಲ್ಲ ಹಾಕಿ ತಿನ್ನುತ್ತಾರೆ. ಇದು ಆರೋಗ್ಯಕ್ಕೆ ಒಳ್ಳೆಯದು. ಈ ಬಾರಿ 200 ಚೀಲ ಮಾರಾಟ ಮಾಡಿದ್ದೇವೆ. ಭಕ್ತರು ಇದನ್ನು ವಿರಭದ್ರೇಶ್ವರ ಪ್ರಸಾದವೆಂದು ಖರೀದಿಸುತ್ತಾರೆ ಎಂದರು.
ಹುಬ್ಬಳ್ಳಿಯಿಂದ ಬಂದ ಪೂಜಾ ಅವರು, ಈ ದಿನ.ಕಾಮ್ ಜತೆ ಮಾತನಾಡಿ, “ಕಳೆದ 25 ವರ್ಷಗಳಿಂದ ಜಾತ್ರೆಗೆ ಬರುತ್ತಿದ್ದೇನೆ. ಬಳುವಲ ಹಣ್ಣಿಗೆ ಬೆಲ್ಲ ಸೇರಿಸಿ ತಿನ್ನುವ ರುಚಿ ವಿಶೇಷ” ಎಂದು ಹೇಳಿದರು.
ಬೈಲಹೊಂಗಲದ ಶಿವಪ್ರಸಾದ ಅವರು ಈ ದಿನ.ಕಾಮ್ ಜತೆ ಮಾತನಾಡಿ, “ಗೊಡಚಿ ಜಾತ್ರೆಗೆ ಇರುವ ಇತಿಹಾಸದಂತೆ ಬಳುವಲ ಕಾಯಿಗೂ ಇತಿಹಾಸವಿದೆ. ಇದರಲ್ಲಿ ಸಿ ವಿಟಮಿನ್ ಇರುವುದರಿಂದ ಆರೋಗ್ಯಕರ. ಬಳುವಲ ಕಾಯಿ ಖರೀದಿಸಿದರೆ ಜಾತ್ರೆಗೆ ಬಂದ ಸಾರ್ಥಕತೆ ಎಂಬ ನಂಬಿಕೆ ಇದೆ” ಎಂದು ತಿಳಿಸಿದರು.
ರಂಗಭೂಮಿ ಕಲಾವಿದರ ಕೈ ಹಿಡಿಯುವ ಜಾತ್ರೆ
ಗೊಡಚಿ ಶ್ರೀ ವೀರಭದ್ರೇಶ್ವರ ಜಾತ್ರೆ ರಂಗಭೂಮಿ ಕಲಾವಿದರಿಗೆ ವರವಾಗಿ ಪರಿಣಮಿಸಿದೆ. ಜಾತ್ರೆಯ ಅವಧಿಯಲ್ಲಿ ರಾಜ್ಯದ ವಿವಿಧ ಭಾಗಗಳಿಂದ ಅನೇಕ ನಾಟಕ ಕಂಪೆನಿಗಳು ಗೊಡಚಿಗೆ ಆಗಮಿಸುತ್ತವೆ.

ಜಾತ್ರೆಗೆ ಆಗಮಿಸುವ ಭಕ್ತರು ಹಾಗೂ ಸಾರ್ವಜನಿಕರು ಸಾಮಾಜಿಕ ಸಂದೇಶ ಒಳಗೊಂಡ ನಾಟಕಗಳನ್ನು ಹೆಚ್ಚಿನ ಆಸಕ್ತಿಯಿಂದ ವೀಕ್ಷಿಸುವುದರಿಂದ ನಾಟಕ ಕಂಪನಿಗಳಿಗೆ ಉತ್ತಮ ಆದಾಯ ದೊರೆಯುತ್ತಿದೆ. ಇದರಿಂದ ರಂಗಭೂಮಿ ಕಲಾವಿದರಿಗೆ ಉದ್ಯೋಗಾವಕಾಶಗಳ ಜತೆಗೆ ಕಲೆಗೆ ಗೌರವ ಹಾಗೂ ಪ್ರೋತ್ಸಾಹವೂ ಸಿಗುತ್ತಿದೆ.
ಇದನ್ನೂ ಓದಿದ್ದೀರಾ? ಮನರೇಗಾ ಬದಲಿಗೆ ವಿಬಿ-ಜಿ ರಾಮ್ ಜಿ ಮಸೂದೆ: ಉದ್ಯೋಗ ಖಾತ್ರಿ ಯೋಜನೆಯ ಬದಲಾವಣೆಗಳೇನು?
ನಾಟಕಗಳ ಮೂಲಕ ಸಮಾಜಕ್ಕೆ ಸಂದೇಶ ನೀಡುವ ಕಲಾವಿದರಿಗೆ ಬೆಂಬಲ ನೀಡುತ್ತಿರುವ ಗೊಡಚಿ ಶ್ರೀ ವೀರಭದ್ರೇಶ್ವರ ಜಾತ್ರೆ, ಕಲಾವಿದರ ಕೈ ಹಿಡಿಯುವ ಜಾತ್ರೆಯಾಗಿ ಗುರುತಿಸಿಕೊಂಡಿದೆ.
ಗೊಡಚಿ ಶ್ರೀ ವಿರಭದ್ರೇಶ್ವರ ಜಾತ್ರೆ ಧಾರ್ಮಿಕ ಆಚರಣೆಯೊಂದರ ಮಿತಿಯನ್ನು ಮೀರಿ, ಜನಜೀವನ, ಆರೋಗ್ಯ, ಆರ್ಥಿಕತೆ ಮತ್ತು ಸಂಸ್ಕೃತಿಯನ್ನು ಒಟ್ಟುಗೂಡಿಸುವ ಮಹತ್ವದ ಹಬ್ಬವಾಗಿ ರೂಪುಗೊಂಡಿದೆ. ಭಕ್ತರ ನಂಬಿಕೆಯ ಕೇಂದ್ರವಾಗಿರುವ ಬಳುವಲ ಹಣ್ಣು ಗೊಡಚಿ ಜಾತ್ರೆಗೆ ವಿಶಿಷ್ಟ ಗುರುತನ್ನು ನೀಡುವುದರ ಜತೆಗೆ ಪೀಳಿಗೆಯಿಂದ ಪೀಳಿಗೆಗೆ ಸಾಗಿದ ಪರಂಪರೆಯ ಸಂಕೇತವಾಗಿಯೂ ಉಳಿದಿದೆ. ಇತ್ತ ರಂಗಭೂಮಿ ಕಲಾವಿದರಿಗೆ ವೇದಿಕೆ ನೀಡುವ ಮೂಲಕ ಈ ಜಾತ್ರೆ ಕಲೆಗೂ ಜೀವ ತುಂಬುತ್ತಿದೆ. ಭಕ್ತಿ, ಬದುಕು ಮತ್ತು ಸಂಸ್ಕೃತಿ ಒಂದಾಗಿ ಬೆರೆತಿರುವ ಗೊಡಚಿ ಜಾತ್ರೆ ಉತ್ತರ ಕರ್ನಾಟಕದ ಆತ್ಮವನ್ನು ಪ್ರತಿಬಿಂಬಿಸುವ ಜೀವಂತ ಸಾಂಸ್ಕೃತಿಕ ಹಬ್ಬವಾಗಿದೆ.

ಸುನಿಲ್ ಹಂಪನ್ನವರ
ಬೆಳಗಾವಿ ಜಿಲ್ಲಾ ಸಂಯೋಜಕರು




