ರಾಮನಗರ ಜಿಲ್ಲೆಯ ಚನ್ನಪಟ್ಟಣ ನಗರದ ಸುತ್ತಮುತ್ತ ಶನಿವಾರ ಸಂಜೆ ಒಂದು ಗಂಟೆಗೂ ಅಧಿಕ ಧಾರಾಕಾರವಾಗಿ ಮಳೆ ಸುರಿದ ಕಾರಣ ಬೆಂಗಳೂರು-ಮೈಸೂರು ಹೆದ್ದಾರಿ ಸೇರಿದಂತೆ ನಗರದ ಬಹುತೇಕ ರಸ್ತೆಗಳು ಕೆರೆಯಂತಾಗಿದ್ದು, ಗುಡುಗು, ಮಿಂಚು, ಗಾಳಿ ಅರ್ಭಟ ಇರಲಿಲ್ಲ. ಆದರೂ ಈ ವರ್ಷದಲ್ಲಿ ಸುರಿದ ದೊಡ್ಡ ಮಳೆ ಇದಾಗಿದೆ.
ರೈಲು ನಿಲ್ದಾಣದ ಬಳಿಯ ಚರಂಡಿಗಳ ನೀರು ಉಕ್ಕಿ ರೈಲ್ವೆ ಸ್ಟೇಷನ್ ಒಳಗೆ ನುಗ್ಗಿತು. ಹಳಿಗಳ ಮೇಲೆ ನೀರು ಸಂಗ್ರಹವಾಗಿ ಕೆರೆಯಂತಾಯಿತು. ಇದರಿಂದ ರೈಲುಗಳು ನಿಧಾನವಾಗಿ ಚಲಿಸಿದವು. ಗಾಂಧಿ ಭವನ, ಪಕ್ಕದ ಪೆಟ್ರೋಲ್ ಬಂಕ್, ರೇಷ್ಮೆ ಮಾರುಕಟ್ಟೆ, ತಾಲೂಕು ಪಂಚಾಯಿತಿ ಹಾಗೂ ತಾಲೂಕು ಕಚೇರಿ ಆವರಣಕ್ಕೂ ನೀರು ನುಗ್ಗಿತ್ತು. ಅಂಗಡಿ, ಮುಂಗಟ್ಟುಗಳಿಗೆ ನೀರು ನುಗ್ಗಿ, ಅಂಗಡಿಯಲ್ಲಿದ್ದ ವಸ್ತುಗಳು ನೀರಿನಲ್ಲಿ ತೇಲಾಡಿದವು. ಅಂಗಡಿಯಲ್ಲಿದ್ದ ನೀರನ್ನು ಹೊರ ಹಾಕಲು ವ್ಯಾಪಾರಸ್ಥರು ಹೈರಾಣಾದರು.
ಹೆದ್ದಾರಿ ಮತ್ತು ರಸ್ತೆಯಲ್ಲಿ ರಭಸವಾಗಿ ಹರಿಯುತ್ತಿದ್ದ ನೀರಿನಲ್ಲಿ ಬೈಕ್, ಕಾರು, ಬಸ್ ಹಾಗೂ ಇತರ ವಾಹನಗಳು ಮುಂದೆ ಚಲಿಸಲು ಸಾಧ್ಯವಾಗದೆ ರಸ್ತೆ ಮಧ್ಯೆದಲ್ಲಿಯೇ ಸಾಲುಗಟ್ಟಿ ನಿಂತಿದ್ದವು. ಬೈಕ್, ಕಾರುಗಳು ನೀರಿನಲ್ಲಿ ಮುಳುಗಿದ್ದವು.
ಈ ಸುದ್ದಿ ಓದಿದ್ದೀರಾ? ಚಾಮರಾಜನಗರ | ಲಿಂಗತ್ವ ಅಲ್ಪಸಂಖ್ಯಾತರ ಸಮೀಕ್ಷಾ ಕಾರ್ಯಕ್ಕೆ ಅಗತ್ಯ ಸಿದ್ಧತೆಗೆ ಜಿಲ್ಲಾಧಿಕಾರಿ ಸೂಚನೆ
ಚನ್ನಪಟ್ಟಣ ನಗರದ ಸಾರ್ವಜನಿಕ ಆಸ್ಪತ್ರೆಯ ಒಳರೋಗಿಗಳ ವಾರ್ಡ್‌ಗಳಿಗೂ ನೀರು ನುಗ್ಗಿ ರೋಗಿಗಳು ಪರದಾಡುವಂತಾಯಿತು. ಶೆಟ್ಟಿಹಳ್ಳಿ ಕೆರೆ ಸ್ವಚ್ಛತೆ ಕಾರ್ಯ ನಡೆಯುತ್ತಿದ್ದು, ಕೆರೆಯಲ್ಲಿ ಸಂಗ್ರಹವಾಗಿದ್ದ ಕೊಳಚೆನೀರು ಹೊರ ಬಿಡಲು ಕೆರೆಯ ಏರಿ ಒಡೆಯಲಾಗಿತ್ತು. ಕೆರೆಗೆ ಹರಿದು ಬಂದ ಮಳೆ ನೀರು ಒಡೆದಿರುವ ಏರಿಯ ಮೂಲಕ ಮತ್ತೆ ಹೊರಗೆ ಹರಿಯಿತು. ಇದರಿಂದ ನಗರದ ರಾಜಾ ಕೆಂಪೇಗೌಡ ಬಡಾವಣೆಯ ಕೆಲವು ಮನೆಗಳು ನೀರಿನಿಂದ ಆವೃತವಾದವು.





