ರಾಮನಗರ ಜಿಲ್ಲೆಯಲ್ಲಿ ಮಾನವ ಮತ್ತು ಕಾಡಾನೆ ನಡುವಣ ಸಂಘರ್ಷ ಮುಂದುವರೆದಿದ್ದು, ಹಾರೋಹಳ್ಳಿ ತಾಲೂಕಿನ ದುಮ್ಮಸಂದ್ರ ಗ್ರಾಮದಲ್ಲಿ ಕಾಡಾನೆ ದಾಳಿಗೆ ರೈತರೊಬ್ಬರು ಮೃತಪಟ್ಟಿರುವ ಘಟನೆ ಭಾನುವಾರ ನಡೆದಿದೆ.
ಮೃತ ರೈತ ಪುಟ್ಟಮಾದೇಗೌಡ ಎಂದು ಗುರುತಿಸಲಾಗಿದೆ. ಗ್ರಾಮದಲ್ಲಿರುವ ತಮ್ಮ ಜಮೀನಿಗೆ ನೀರು ಹರಿಸುವುದಕ್ಕಾಗಿ ಪುಟ್ಟಮಾದೇಗೌಡ ಅವರು, ಬೆಳಿಗ್ಗೆಯೇ ಹೊಲಕ್ಕೆ ಹೋಗಿದ್ದರು. ನೀರು ಹಾಯಿಸುತ್ತಿರುವಾಗ ಏಕಾಏಕಿ ಕಾಡಾನೆ ದಾಳಿ ನಡೆಸಿ, ತುಳಿದು ಹಾಕಿದೆ. ದಾಳಿಯ ತೀವ್ರತೆಗೆ ಪುಟ್ಟಮಾದೇಗೌಡ ಅವರು ಸ್ಥಳದಲ್ಲೇ ಕೊನೆಯುಸಿರೆಳೆದಿದ್ದಾರೆ.
ಜಮೀನಿಗೆ ಹೋದ ಪುಟ್ಟಮಾದೇಗೌಡ ಅವರು ಎಷ್ಟೊತ್ತಾದರೂ ಮನೆಗೆ ಬಾರದಿದ್ದರಿಂದ ಹಾಗೂ ಮೊಬೈಲ್ ಫೋನ್ ಕರೆಯನ್ನೂ ಸ್ವೀಕರಿಸದಿದ್ದರಿಂದ, ಕುಟುಂಬದವರು ಜಮೀನಿಗೆ ಹುಡುಕಿಕೊಂಡು ಹೋಗಿದ್ದಾರೆ. ಆಗ, ಜಮೀನಿನಲ್ಲಿ ಪುಟ್ಟಮಾದೇಗೌಡ ಅವರ ಶವವು ಅರೆನಗ್ನಾವಸ್ಥೆಯಲ್ಲಿ ಬಿದ್ದಿರುವುದು ಕಂಡುಬಂದಿದೆ.
ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಸಂಬಂಧಿಕರು ಹಾಗೂ ಗ್ರಾಮಸ್ಥರು ಸ್ಥಳದಲ್ಲಿ ಜಮಾಯಿಸಿದರು. ಘಟನೆ ಖಂಡಿಸಿ ಅರಣ್ಯ ಇಲಾಖೆ ವಿರುದ್ಧ ಆಕ್ರೋಶ ವ್ಯಕ್ತಪಡಿಸಿ ಪ್ರತಿಭಟಿಸಿದರು. ಸ್ಥಳಕ್ಕೆ ಪೊಲೀಸರು ಬಂದು ಪರಿಸ್ಥಿತಿ ನಿಯಂತ್ರಿಸಿದರು. ಇಲಾಖೆಯ ಹಿರಿಯ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿದರು. ಬಳಿಕ, ಕುಟುಂಬದವರಿಗೆ ಸಮಾಧಾನಪಡಿಸಿ, ಶವವನ್ನು ಆಸ್ಪತ್ರೆಗೆ ಸಾಗಿಸಿದ್ದಾರೆ.
ಈ ಸುದ್ದಿ ಓದಿದ್ದೀರಾ? ಬೆಂ.ಗ್ರಾ | ಕನಿಷ್ಠ ಬೆಂಬಲ ಬೆಲೆ ಯೋಜನೆಯಡಿ ರೈತರಿಂದ ರಾಗಿ ಖರೀದಿ: ನೋಂದಣಿ ಕೇಂದ್ರಗಳು ಎಲ್ಲಿವೆ?
ರಾಜ್ಯದಲ್ಲಿ ಕಾಡಾನೆಗಳ ಹಾವಳಿ ತೀವ್ರಗೊಂಡಿದ್ದು, ಇತ್ತೀಚಿನ ದಿನಗಳಲ್ಲಿ ಹಲವು ಜಿಲ್ಲೆಗಳಲ್ಲಿ ಇಂತಹ ಘಟನೆಗಳು ವರದಿಯಾಗುತ್ತಿವೆ. ಇತ್ತೀಚೆಗೆ ಬಸವನ ಬೆಟ್ಟ ಅರಣ್ಯ ಪ್ರದೇಶದಿಂದ ಆಗಮಿಸಿದ ಕಾಡಾನೆಗಳ ಹಿಂಡು ಮಂಡ್ಯ ಜಿಲ್ಲೆಯ ಹಲಗೂರು ಪಟ್ಟಣದ ರೈತರ ರಾಗಿ, ಅವರೆ, ತೆಂಗು ಮತ್ತು ಭತ್ತದ ಫಸಲನ್ನು ತಿಂದು, ತುಳಿದು ಹಾನಿ ಮಾಡಿರುವ ಘಟನೆ ನಡೆದಿತ್ತು. ಇಂತಹ ವೇಳೆ ಮನುಷ್ಯರು ಎದುರು ಸಿಕ್ಕರೆ ಗಾಬರಿಗೊಳ್ಳುವ ಪ್ರಾಣಿಗಳು ಹಠಾತ್ ದಾಳಿ ಮಾಡುವ ಸಾಧ್ಯತೆ ಹೆಚ್ಚಾಗಿರುತ್ತದೆ. ಈ ಹಿನ್ನೆಲೆಯಲ್ಲಿ ಮಾನವ-ವನ್ಯಜೀವಿ ಸಂಘರ್ಷಕ್ಕೆ ಶಾಶ್ವತ ಪರಿಹಾರ ಕಂಡುಕೊಳ್ಳುವ ಅಗತ್ಯತೆ ಹೆಚ್ಚಾಗಿದೆ.





