ರಾಮನಗರ ಜಿಲ್ಲೆಯ ಹಾರೋಹಳ್ಳಿ ತಾಲೂಕಿನ ಮರಳವಾಡಿ ಹೋಬಳಿಯ ವಿವಿಧ ಗ್ರಾಮಗಳಲ್ಲಿ ಸರಕಾರಿ ಕೆರೆ, ಹಳ್ಳ ಮತ್ತು ಗೋಕಟ್ಟೆಗಳನ್ನು ಪ್ರಭಾವಿ ಶಿಕ್ಷಣ ಸಂಸ್ಥೆಗಳು ಹಾಗೂ ಆಸ್ಪತ್ರೆಗಳು ಅಕ್ರಮವಾಗಿ ಒತ್ತುವರಿ ಮಾಡಿಕೊಂಡಿರುವ ಗಂಭೀರ ಪ್ರಕರಣಗಳು ಬೆಳಕಿಗೆ ಬಂದಿವೆ. ಸಾರ್ವಜನಿಕ ಆಸ್ತಿಗಳನ್ನು ಉಳಿಸಬೇಕಾದ ಅಧಿಕಾರಿಗಳು ಮೌನಕ್ಕೆ ಶರಣಾಗಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.
ಯಡುವನಹಳ್ಳಿ ಗ್ರಾಮದ ಬಳಿ ಇರುವ ಜೈನ್ ಶಿಕ್ಷಣ ಸಂಸ್ಥೆಯು ತಾನು ಖರೀದಿಸಿದ ಭೂಮಿಗಿಂತಲೂ ಹೆಚ್ಚುವರಿಯಾಗಿ ಸುಮಾರು 12ರಿಂದ 15 ಎಕರೆ ಸರ್ಕಾರಿ ಜಮೀನನ್ನು ಅಕ್ರಮವಾಗಿ ಅವರಿಸಿಕೊಂಡಿದೆ ಎಂದು ಸಾಮಾಜಿಕ ಹೋರಾಟಗಾರ ಸ್ವಾಮಿ ಹೆಚ್ ಎಸ್ ದೂರಿದ್ದಾರೆ.
ಪ್ರಮುಖವಾಗಿ ಎಂಜಿನಿಯರಿಂಗ್ ಬ್ಲಾಕ್ ನಿರ್ಮಿಸುವಾಗ ನೈಸರ್ಗಿಕ ಹಳ್ಳವನ್ನೇ ಮುಚ್ಚಲಾಗಿದ್ದು, ಇದರಿಂದ ಮಳೆಗಾಲದಲ್ಲಿ ರೈತರ ಹೊಲಗಳಿಗೆ ನೀರು ನುಗ್ಗಿ ಬೆಳೆ ನಾಶವಾಗುತ್ತಿದೆ. ಈ ಬಗ್ಗೆ ಪ್ರಾದೇಶಿಕ ಆಯುಕ್ತರ ಕಚೇರಿಯಿಂದ ತನಿಖೆಗೆ ಆದೇಶವಾಗಿದ್ದರೂ, ಸ್ಥಳೀಯ ಮಟ್ಟದಲ್ಲಿ ಪ್ರಭಾವಿಗಳ ಒತ್ತಡಕ್ಕೆ ಮಣಿದು ಸರ್ವೆ ಕಾರ್ಯ ವಿಳಂಬವಾಗುತ್ತಿದೆ ಎಂಬ ದೂರು ಕೇಳಿಬಂದಿದೆ.

ದೇವಕಗ್ಗಲಹಳ್ಳಿ ಗ್ರಾಮದ ಸರ್ವೆ ನಂಬರ್ 74/1ರಲ್ಲಿ ಸಾರ್ವಜನಿಕ ಉಪಯೋಗಕ್ಕೆ ಮೀಸಲಾಗಿದ್ದ ಗೋಕಟ್ಟೆಯನ್ನು ಚಂದ್ರಮ್ಮ ದಯಾನಂದ ಸಾಗರ್ ಆಸ್ಪತ್ರೆಯ ನಿರ್ಮಾಣದ ವೇಳೆ ಸಂಪೂರ್ಣವಾಗಿ ಮುಚ್ಚಲಾಗಿದೆ. ಅಷ್ಟೇ ಅಲ್ಲದೆ, ಸರ್ವೆ ನಂಬರ್ 65ರಲ್ಲಿನ 5 ಎಕರೆ 6 ಕುಂಟೆ ‘ಬಿ’ ಖರಾಬು ಜಮೀನು ಹಾಗೂ ಸರ್ವೆ ನಂಬರ್ 76, 74, 75, 77/1 ರಲ್ಲಿ ಹರಿಯುತ್ತಿದ್ದ ಸರ್ಕಾರಿ ಹಳ್ಳಗಳನ್ನು ಸಿಕಾನ್ ಎಂಬ ಖಾಸಗಿ ಸಂಸ್ಥೆ ಮತ್ತು ಆಸ್ಪತ್ರೆ ಮಾಲೀಕರು ಅಕ್ರಮವಾಗಿ ಒತ್ತುವರಿ ಮಾಡಿ ಬೃಹತ್ ಕಟ್ಟಡಗಳನ್ನು ನಿರ್ಮಿಸಿದ್ದಾರೆ.
ಜೈನ್ ಶಾಲೆಯ ಆಡಳಿತ ಮಂಡಳಿಯವರು ಜಕ್ಕಸಂದ್ರ ಗ್ರಾಮದ ಸರ್ವೆ ನಂಬರ್ 109/4 ಮತ್ತು 109/5ರಲ್ಲಿರುವ ಸರ್ಕಾರಿ ಕೆರೆಯನ್ನು ಮಣ್ಣು ಹಾಕಿ ಮುಚ್ಚಿರುವುದು ಕಂಡುಬಂದಿದೆ. ಕೆರೆಯ ಜಾಗವನ್ನು ಶಾಲೆಯ ಆವರಣಕ್ಕೆ ಸೇರಿಸಿಕೊಂಡು ಸುತ್ತಲೂ ಕಾಂಪೌಂಡ್ ನಿರ್ಮಿಸಲಾಗಿದೆ. ಇದು ಕೇವಲ ಒತ್ತುವರಿಯಲ್ಲದೆ, ಪ್ರಾಣಿ-ಪಕ್ಷಿಗಳ ಕುಡಿಯುವ ನೀರಿನ ಹಕ್ಕನ್ನು ಕಸಿದುಕೊಂಡಂತಾಗಿದೆ. ಇಲ್ಲಿನ ಹಳ್ಳ ಹಾಗೂ ರಾಜಕಾಲುವೆಗಳೂ ಕೂಡ ಪ್ರಭಾವಿಗಳ ಪಾಲಾಗಿವೆ.
ಕನಕಪುರ ಯೋಜನಾ ಪ್ರಾಧಿಕಾರದ ನಿಯಮಗಳ ಪ್ರಕಾರ ಸರ್ಕಾರಿ ಹಳ್ಳಗಳ ಪಕ್ಕದಲ್ಲಿ ಬಫರ್ ಜ಼ೋನ್ ಬಿಡಬೇಕೆಂಬ ನಿಯಮವಿದೆ. ಆದರೆ ಇಲ್ಲಿ ಹಳ್ಳಗಳ ಮೇಲೆಯೇ ಕಟ್ಟಡ ಎಬ್ಬಿಸಲಾಗಿದೆ. ಇನ್ನು ಜಕ್ಕಸಂದ್ರದಲ್ಲಿ ಹೈಟೆನ್ಷನ್ ವಿದ್ಯುತ್ ಕಂಬಗಳ ಕೆಳಗೆ ವಿದ್ಯಾರ್ಥಿಗಳ ಆಟದ ಮೈದಾನ ನಿರ್ಮಿಸಿರುವುದು ವಿದ್ಯಾರ್ಥಿಗಳ ಜೀವದ ಜತೆ ಚೆಲ್ಲಾಟವಾಡಿದಂತಿದೆ. ಇದು ಕರ್ನಾಟಕ ಭೂಕಬಳಿಕೆ ಕಾಯ್ದೆ(KLR Act) ಮತ್ತು ಕೆರೆಗಳ ಸಂರಕ್ಷಣಾ ಪ್ರಾಧಿಕಾರ ಅಧಿನಿಯಮಗಳ ನೇರ ಉಲ್ಲಂಘನೆಯಾಗಿದೆ.
ಈ ಸುದ್ದಿ ಓದಿದ್ದೀರಾ? ಅದಾನಿ, ಅಂಬಾನಿಗಳನ್ನು ಗ್ರಾಮ ಪಂಚಾಯಿತಿಗೂ ತರುವ ಹುನ್ನಾರ ನಡೆದಿದೆ: ಸಚಿವ ಆರ್ ಬಿ ತಿಮ್ಮಾಪುರ್
ಸರ್ಕಾರಿ ಆಸ್ತಿಗಳು ಸಾರ್ವಜನಿಕರ ಸ್ವತ್ತು. ಪ್ರಭಾವಿಗಳು ಕೋಟಿಗಟ್ಟಲೆ ಬೆಲೆಬಾಳುವ ಭೂಮಿಯನ್ನು ನುಂಗುತ್ತಿದ್ದರೂ ತಹಶೀಲ್ದಾರ್, ಬಿಡಿಒ ಅಥವಾ ಯೋಜನಾ ಪ್ರಾಧಿಕಾರದ ಅಧಿಕಾರಿಗಳು ಕ್ರಮ ಕೈಗೊಳ್ಳುತ್ತಿಲ್ಲ. ಕೂಡಲೇ ವಿಶೇಷ ತನಿಖಾ ತಂಡ ರಚಿಸಿ ಒತ್ತುವರಿ ತೆರವುಗೊಳಿಸದಿದ್ದರೆ ಜಿಲ್ಲಾಧಿಕಾರಿಗಳ ಕಚೇರಿ ಮುಂದೆ ಪ್ರತಿಭಟನೆ ನಡೆಸಲಾಗುವುದು ಎಂದು ದೂರುದಾರ ಸ್ವಾಮಿ ಹೆಚ್ ಎಸ್ ಎಚ್ಚರಿಸಿದ್ದಾರೆ.
ಈ ಅಕ್ರಮಗಳ ವಿರುದ್ಧ ಈಗಾಗಲೇ ಚೀಲೂರು ಗ್ರಾಮ ಪಂಚಾಯಿತಿ, ಹಾರೋಹಳ್ಳಿ ತಹಶೀಲ್ದಾರ್ ಮತ್ತು ಕನಕಪುರ ಯೋಜನಾ ಪ್ರಾಧಿಕಾರಕ್ಕೆ ದೂರು ನೀಡಲಾಗಿದ್ದು, ಇಡೀ ಜಿಲ್ಲೆಯ ಜನತೆ ಈಗ ಅಧಿಕಾರಿಗಳ ಮುಂದಿನ ಕ್ರಮದತ್ತ ಕಣ್ಣು ನೆಟ್ಟಿದ್ದಾರೆ.
ವರದಿ : ಜಗದೀಶ್ ನಗರಕೆರೆ





